Valentines day 2025: ಪ್ರೇಮಿಗಳ ದಿನ ಯಾವಾಗ? ಈ ಆಚರಣೆಯ ಹಿಂದಿನ ಇತಿಹಾಸ, ವ್ಯಾಲೆಂಟೈನ್ಸ್ ಡೇ ಹೆಸರು ಬರಲು ಕಾರಣ ಹೀಗಿದೆ
ಫೆಬ್ರುವರಿ ತಿಂಗಳು ಬಂತೆಂದರೆ ಎಲ್ಲೆಲ್ಲೂ ಅರಳಿ ನಿಂತ ಕೆಂಗುಲಾಬಿಗಳು, ಬಗೆ ಬಗೆಯ ಚಾಕೋಲೇಟ್‌ಗಳು, ಸುಂದರ ಗೀಟ್ರಿಂಗ್ ಕಾರ್ಡ್‌ಗಳು ಕಾಣ ಸಿಗುತ್ತವೆ. ಇದಕ್ಕೆ ಕಾರಣ ಪ್ರೇಮಿಗಳ ದಿನ. ಹಾಗಾದರೆ ಪ್ರೇಮಿಗಳ ದಿನ ಯಾವಾಗ, ಇದನ್ನು ಆಚರಿಸುವ ಉದ್ದೇಶವೇನು, ಪ್ರೇಮಿಗಳ ದಿನಾಚರಣೆಯ ಹಿಂದಿನ ಇತಿಹಾಸ, ಮಹತ್ವ ತಿಳಿಯಿರಿ.

ಈ ಜಗತ್ತಿನ ಅತಿ ಸುಂದರ ಸಂಬಂಧ ಎಂದರೆ ಅದು ಪ್ರೇಮ ಸಂಬಂಧ. ರಾಧಾ–ಕೃಷ್ಣ, ದೇವದಾಸ್–ಪಾರು, ಲೈಲಾ ಮಜ್ನು ಹೀಗೆ ಪ್ರೀತಿಯನ್ನೇ ಬದುಕು ಎಂದುಕೊಂಡು ಪ್ರೀತಿಯನ್ನೇ ಉಸಿರನ್ನಾಗಿಸಿಕೊಂಡಿದ್ದ ಅದೆಷ್ಟೋ ಪ್ರೇಮಕಥೆಗಳನ್ನು ನಾವು ಕೇಳಿದ್ದೇವೆ. ಪ್ರೀತಿಗೆ ಎಲ್ಲವನ್ನೂ ಕೊನೆಗೆ ಜಗತ್ತನ್ನೂ ಸೋಲಿಸುವ ಶಕ್ತಿ ಇದೆ. ಇಂತಹ ಸುಂದರ ಪ್ರೇಮವನ್ನು ಸಂಭ್ರಮಿಸುವ ಒಂದು ದಿನ ಇದೆ. ಅದುವೇ ಪ್ರೇಮಿಗಳ ದಿನ.
ಫೆಬ್ರುವರಿ ತಿಂಗಳು ಬಂತೆಂದರೆ ಪ್ರೇಮಿಗಳ ದಿನದ ಸಂಭ್ರಮ ಶುರುವಾಗುತ್ತದೆ. ಎಲ್ಲೆಲ್ಲೂ ಅರಳಿ ನಗುವ ಕೆಂಗುಲಾಬಿಗಳು ಪ್ರೇಮಿಗಳ ಕೈ ಸೇರಲು ತವಕಿಸುತ್ತವೆ. ಚಾಕೊಲೇಟ್‌ನ ಘಮದೊಂದಿಗೆ ಗ್ರೀಟಿಂಗ್ ಕಾರ್ಡ್‌ನಲ್ಲಿನ ಸುಂದರ ಪ್ರೇಮ ಕವಿತೆಗಳು ಜೊತೆಯಾಗುತ್ತದೆ. ಫೆಬ್ರುವರಿ ತಿಂಗಳು ಪ್ರೇಮಿಗಳಿಗೆ ಬಹಳ ವಿಶೇಷ. ಹಲವರು ತಮ್ಮ ಮನದ ಭಾವನೆಯನ್ನು ಹಂಚಿಕೊಳ್ಳಲು ಪ್ರೇಮಿಗಳ ದಿನಕ್ಕಾಗಿ ಕಾಯುತ್ತಿರುತ್ತಾರೆ. ಹಾಗಾದರೆ ಪ್ರೇಮಿಗಳ ದಿನ ಯಾವಾಗ, ಈ ದಿನದ ಆಚರಣೆ ಹೇಗೆ ಶುರುವಾಯ್ತು, ಇದರ ಹಿಂದಿನ ಇತಿಹಾಸವೇನು ಎಂಬ ವಿವರ ಇಲ್ಲಿದೆ.
ಪ್ರೇಮಿಗಳ ದಿನ ಯಾವಾಗ?
ಪ್ರತಿ ವರ್ಷ ಫೆಬ್ರುವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಆದರೆ ಈ ಪ್ರೇಮಿಗಳ ದಿನ ಸಂಭ್ರಮ ಆರಂಭವಾಗುವುದು ಫೆಬ್ರುವರಿ 7ರಿಂದ. ಒಟ್ಟು ಒಂದು ವಾರಗಳ ಕಾಲ ಹಗ್ ಡೇ, ಕಿಸ್ ಡೇ, ರೋಸ್ ಡೇ ಹೀಗೆ ಪ್ರತಿದಿನವೂ ಪ್ರೇಮಿಗಳ ದಿನದ ಸಂಭ್ರಮ ಇರುತ್ತದೆ. ಆದರೆ ಪ್ರೇಮಿಗಳ ದಿನಾಚರಣೆಯ ಹಿಂದೆ ಇರೋದು ಕರಾಳ ಇತಿಹಾಸ ಅನ್ನೋದು ಹಲವರಿಗೆ ತಿಳಿದಿಲ್ಲ.
ಪ್ರೇಮಿಗಳ ದಿನದ ಇತಿಹಾಸ
ಪ್ರೇಮಿಗಳ ದಿನದ ಆಚರಣೆಯ ಹಿಂದೆ ಹಲವು ಕಥೆಗಳಿವೆ. ಈ ದಿನದ ಆಚರಣೆಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಕಥೆಗಳನ್ನು ಹೇಳುತ್ತಾರೆ. ಅದರಲ್ಲಿ ಒಂದು ಹಿಂದಿನ ಕಾಲದಲ್ಲಿ ರೋಮನ್ನರು ಫೆಬ್ರವರಿ 13 ರಿಂದ ಫೆಬ್ರವರಿ 15 ರವರೆಗೆ ಲುಪರ್ಕಾಲಿಯಾ ಹಬ್ಬವನ್ನು ಆಚರಿಸುತ್ತಿದ್ದರು. ಆ ಸಮಯದಲ್ಲಿ ಪುರುಷರು ನಾಯಿ ಮತ್ತು ಮೇಕೆಯನ್ನು ಬಲಿ ಕೊಡುತ್ತಿದ್ದರು. ನಂತರ ಕೊಂದ ಪ್ರಾಣಿಗಳ ಚರ್ಮವನ್ನು ಪುರುಷರು ಮಹಿಳೆಯರಿಗೆ ಚಾಟಿಯೇಟು ನೀಡಲು ಬಳಸುತ್ತಿದ್ದರು. ವಾಸ್ತವವಾಗಿ, ಯುವತಿಯರು ಪುರುಷರಿಂದ ಚಾಟಿಯೇಟು ಪಡೆಯಲು ಸಾಲಾಗಿ ನಿಲ್ಲುತ್ತಿದ್ದರು, ಏಕೆಂದರೆ ಇದರಿಂದ ಅವರಲ್ಲಿ ಫಲವಂತಿಕೆ ಹೆಚ್ಚುತ್ತದೆ ಎಂದು ಅವರು ನಂಬಿದ್ದರು.
ಆಚರಣೆಯ ಸಮಯದಲ್ಲಿ, ಮದುವೆ ಲಾಟರಿ ಕೂಡ ನಡೆಯುತ್ತಿತ್ತು. ಪುರುಷರು ಹಬ್ಬದ ಸಮಯದಲ್ಲಿ ಒಂದು ಪೆಟ್ಟಿಗೆಯಿಂದ ಮಹಿಳೆಯರ ಹೆಸರುಗಳನ್ನು ಆರಿಸಿ ಆ ಮಹಿಳೆಯರಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಇದು ಕೆಲವೊಮ್ಮೆ ಮದುವೆಯಲ್ಲಿಯೂ ಕೊನೆಗೊಳ್ಳುತ್ತಿತ್ತು.
ಆದರೆ 5ನೇ ಶತಮಾನದ ಅಂತ್ಯದ ವೇಳೆಗೆ ಪೋಪ್ ಗೆಲಾಸಿಯಸ್ ಅವರು ಲುಪರ್ಕಾಲಿಯಾ ಹಬ್ಬವನ್ನು ಸೇಂಟ್ ವ್ಯಾಲೆಂಟೈನ್ಸ್ ಡೇ ಎಂದು ಬದಲಿಸಿದರು. ಇದು ಪ್ರೇಮಿಗಳ ದಿನವನ್ನು ಪ್ರಣಯ ಮತ್ತು ಪ್ರೀತಿಯ ಆರಂಭದೊಂದಿಗೆ ಸಂಯೋಜಿಸಲು ಕಾರಣವಾಯಿತು ಎಂದು ಒಂದು ಕಥೆ ಹೇಳುತ್ತದೆ. ಇನ್ನೊಂದು ಕಥೆಯ ಪ್ರಕಾರ ಇದು ಪ್ರೇಮಿಗಳನ್ನು ಒಂದು ಮಾಡಲು ಹೋಗಿ ದುರಂತ ಅಂತ್ಯ ಕಂಡ ವ್ಯಾಲೆಂಟೈನ್ ಅವರ ಬದುಕಿನ ಕಥೆಯನ್ನು ಹೇಳುತ್ತದೆ.
ವ್ಯಾಲೆಂಟೈನ್ಸ್ ಡೇ ಹೆಸರಿನ ಇತಿಹಾಸ ಹೀಗಿದೆ
ರೋಮನ್ ಚಕ್ರವರ್ತಿ ಕ್ಲಾಡಿಯಸ್ II ತನ್ನ ಸೈನಿಕರಿಗೆ ಮದುವೆಯಾಗಲು ಬಿಡುತ್ತಿರಲಿಲ್ಲ. ಮದುವೆಯಾದರೆ ಅಥವಾ ಪ್ರೀತಿಯಲ್ಲಿ ಬಿದ್ದರೆ ಸೈನಿಕರು ಸೇನಾಕಾರ್ಯಗಳತ್ತ ಗಮನ ಕೊಡುವುದಿಲ್ಲ ಎಂಬುದು ಆತನ ದುರಾಲೋಚನೆಯಾಗಿತ್ತು. ಆದರೆ ರೋಮನ್ ಪಾದ್ರಿಯಾಗಿದ್ದ ಸೈಂಟ್ ವ್ಯಾಲೆಂಟೈನ್ ಕ್ಲಾಡಿಯಸ್‌ನನ್ನು ಎದುರು ಹಾಕಿಕೊಂಡು ಅವನಿಗೆ ತಿಳಿಯದಂತೆ ಸೈನಿಕರಿಗೆ ಗುಟ್ಟಾಗಿ ಮದುವೆ ಮಾಡುತ್ತಿದ್ದರು, ಅಲ್ಲದೇ ಸೈನಿಕರ ಪ್ರೀತಿ ಉಳಿಯಲು ಕಾರಣವಾಗುತ್ತಿದ್ದರು.
ಸೈನಿಕರಿಗೆ ಗುಟ್ಟಾಗಿ ಮದುವೆ ಮಾಡುವ ಮೂಲಕ ಅವರ ಪ್ರೀತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದ ಸೇಂಟ್ ವ್ಯಾಲೆಂಟೈನ್ ಅವರ ಬಗ್ಗೆ ತಿಳಿದ ಕ್ಲಾಡಿಯಸ್ ಅವರ ಶಿರಚ್ಛೇದ ಮಾಡುತ್ತಾನೆ. ಶಿರಚ್ಛೇದ ಮಾಡುವ ಮುನ್ನ ಜೈಲ್ಲಿನಲ್ಲಿದ್ದ ವ್ಯಾಲೆಂಟೈನ್ ತನ್ನ ಜೊತೆ ಇದ್ದ ಖೈದಿಗಳು ಹಾಗೂ ಜೈಲರ್‌ನ ಕುರುಡು ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಜೈಲರ್‌ನ ಮಗಳ ದೃಷ್ಟಿದೋಷವನ್ನು ನಿವಾರಣೆ ಮಾಡಿದ್ದ ವ್ಯಾಲೆಂಟೈನ್, ಅವಳಿಗೆ ಪ್ರೇಮಸಂದೇಶವೊಂದನ್ನು ಬರೆದಿದ್ದ, ಅದನ್ನು ಅವಳು ಓದುವಂತೆ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ್ದ ಎಂದು ಹೇಳಲಾಗುತ್ತದೆ. ಕ್ರಿ.ಶ. 270ರ ಫೆಬ್ರವರಿ 14 ರಂದು ವ್ಯಾಲೆಂಟೈನ್‌ನನ್ನು ಗಲ್ಲಿಗೇರಿಸಲಾಯಿತು.
ಇದಾಗಿ 200 ವರ್ಷಗಳ ನಂತರವೇ ಫೆಬ್ರವರಿ 14 ಅನ್ನು ಸೇಂಟ್ ವ್ಯಾಲೆಂಟೈನ್ಸ್ ಡೇ ಎಂದು ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಫೆಬ್ರುವರಿ 14 ಪ್ರೇಮಿಗಳ ದಿನ ಎಂದು ಆಚರಿಸಲ್ಪಟಿತು. ಹೀಗೆ ಪ್ರೇಮಕ್ಕಾಗಿ, ಪ್ರೇಮಿಗಳಿಗಾಗಿ ಹೋರಾಡಿ ತನ್ನ ಜೀವನವನ್ನೇ ಪಣಕ್ಕಿಟ್ಟ ಪಾದ್ರಿ ಸೇಂಟ್ ವ್ಯಾಲೆಂಟೈನ್ ಅವರ ಸ್ಮರಣಾರ್ಥ ಪ್ರೇಮಿಗಳ ದಿನದ ಆಚರಣೆಯನ್ನು ಜಾರಿಗೊಳಿಸಲಾಯಿತು ಎಂದು ದಂತಕಥೆಗಳು ಹೇಳುತ್ತವೆ.

ವಿಭಾಗ