Toxic Relationship: ವಿಷಕಾರಿ ಸಂಬಂಧವನ್ನು ಗುರುತಿಸಿ, ಅದರಿಂದ ಹೊರ ಬರುವುದು ಹೇಗೆ; ಪ್ರೇಮ ಜೀವನದಲ್ಲಿ ನೊಂದವರಿಗಿದು ಬದುಕಿನ ಪಾಠ
ಪ್ರೀತಿ ಅಂದರೆ ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಜೊತೆಯಾಗಿ ಜೀವನ ನಡೆಸುವುದು. ಆದರೆ,ವಿಷಕಾರಿ ಸಂಬಂಧವು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದನ್ನು ಗುರುತಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ.

ಪ್ರೇಮಿಗಳ ದಿನ ಬಹಳ ಹತ್ತಿರದಲ್ಲಿದೆ. ತಮ್ಮ ಪ್ರೀತಿ ಪಾತ್ರರಿಗಾಗಿ ಉಡುಗೊರೆ, ಸರ್ಪೈಸ್ ಇತ್ಯಾದಿ ಕೊಡಲು ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪ್ರೀತಿಸುತ್ತಿರುವವರಿಗೆ ವ್ಯಾಲೆಂಟೈನ್ಸ್ ಡೇ ಬಹಳ ವಿಶೇಷ ದಿನ. ಪ್ರೇಮಿಗಳಿಗೆಂದೇ ಆಚರಿಸುವ ಈ ದಿನವನ್ನು ಜಗತ್ತಿನಲ್ಲಿರುವ ಎಲ್ಲಾ ಪ್ರೇಮಿಗಳು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ, ಕೆಲವೊಬ್ಬರ ಪ್ರೀತಿಯು ಈ ದಿನವೇ ಕೊನೆಯಾಗಬಹುದು.
ಪ್ರೀತಿ ಅಂದರೆ ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಜೊತೆಯಾಗಿ ಜೀವನ ನಡೆಸುವುದು. ಆದರೆ, ಕೆಲವೊಮ್ಮೆ ಅತಿಯಾದ ಪ್ರೀತಿಯು ಸಂಗಾತಿಗೆ ದುಸ್ವಪ್ನವಾಗಿ ಪರಿಣಮಿಸಬಹುದು. ಈ ವಿಷಕಾರಿ ಅಥವಾ ಕೆಟ್ಟ ಸಂಬಂಧದಿಂದ ಹೊರಬರಲು ಕಷ್ಟವಾದರೂ, ಉತ್ತಮ ಜೀವನಕ್ಕಾಗಿ ಹೊರಬರಲೇಬೇಕು. ನೀವು ಈ ಪರಿಸ್ಥಿತಿಯೊಳಗಿದ್ದರೆ ವಿಲವಿಲನೆ ಒದ್ದಾಡದೆ ಅದರಿಂದಾಚೆ ಬನ್ನಿ. ಕೆಟ್ಟ ಸಂಬಂಧ ಅಂದ್ರೆ ಏನು, ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಕೆಟ್ಟ ಸಂಬಂಧ ಎಂದರೇನು?
ಮೊದ ಮೊದಲ ಪ್ರೀತಿ ತುಂಬಾ ಚೆನ್ನಾಗಿರುತ್ತದೆ. ಆದರೆ, ಬರುಬರುತ್ತಾ ಅದು ಮಾನಸಿಕ ಹಿಂಸೆಯಾಗಿ ಬದಲಾಗಬಹುದು. ಇದು ಪ್ರೀತಿಯಲ್ಲಿರಲಿ ಅಥವಾ ದಾಂಪತ್ಯದಲ್ಲಿದ್ದರೂ ಕೂಡ ಇಂತಹ ಸಮಸ್ಯೆ ಕಂಡುಬರುವುದು ಸಾಮಾನ್ಯ. ಪ್ರೇಮಿ ಅಥವಾ ಪತಿ/ಪತ್ನಿಯು ತಮ್ಮ ಸಂಗಾತಿಯನ್ನು ಮಾನಸಿಕವಾಗಿ ಇಕ್ಕಟ್ಟಿಗೆ ತಳ್ಳುತ್ತಾರೆ. ತಾನು ಹೇಳಿದಂತೆ ಕೇಳಬೇಕು ಎಂಬ ಧೋರಣೆ, ಸಂಗಾತಿಯ ಚಲನವಲನದ ಮೇಲೆ ನಿಗಾ ಇಡುವುದು, ಪ್ರತಿಯೊಂದು ವಿಚಾರದಲ್ಲಿ ತಪ್ಪು ಕಂಡುಹುಡುಕುವುದು, ಜಗಳ ಇತ್ಯಾದಿ. ಸಂಗಾತಿ ಎಲ್ಲೆ ಮೀರಿದರೆ ಆ ಸಂಬಂಧ ವಿಷ ಸರ್ಪದಂತೆ ಅಥವಾ ಕೆಟ್ಟ ಸಂಬಂಧವಾಗುತ್ತದೆ. ಇದು ಮಾನಸಿಕ ಕಿರಿಕಿರಿ, ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ನೀವು ಕೆಟ್ಟ ಸಂಬಂಧದಲ್ಲಿದ್ದೀರಿ ಎಂಬುದನ್ನು ಗುರುತಿಸುವುದು ಹೀಗೆ
ಗಾಜಿನ ಚೂರಿನ ಮೇಲೆ ನಡೆಯುವಂತಾಗುತ್ತದೆ: ನಿಮ್ಮ ಸಂಗಾತಿ ಅನಿರೀಕ್ಷಿತ ಮತ್ತು ಕ್ಷಣಾರ್ಧದಲ್ಲಿ ಅಸಮಾಧಾನಗೊಳ್ಳಬಹುದು. ನೀವು ಸಂಗಾತಿ ಬಳಿ ಏನಾದರೂ ಒಂದು ಮಾತು ಹೇಳಿದ್ದರೆ ಅದು ಅವರ ಅಸಮಾಧಾನಕ್ಕೆ ಕಾರಣವಾಗಿರಬಹುದು. ಆದರೆ, ಆ ಸಮಯದಲ್ಲಿ ಅದನ್ನು ಏನನ್ನೂ ಹೇಳದೆ, ಮುಂದೊಂದು ದಿನ ಯಾವುದೋ ವಿಚಾರ ಮಾತನಾಡುವಾಗ ಆ ವಿಚಾರ ಹೇಳಬಹದು. ಚುಚ್ಚಿ ಮಾತನಾಡುವುದು, ತಮ್ಮ ಪೋಷಕರ ಬಗ್ಗೆ ವ್ಯಂಗ್ಯ ಮಾತನಾಡುವುದು ಇತ್ಯಾದಿ ಮಾತುಗಳು ಗಾಜಿನ ಚೂರಿನ ಮೇಲೆ ನಡೆದಂತೆ ಜೀವನ ಸಾಗುತ್ತದೆ.
ಕಾಳಜಿ ತೋರದಿರುವುದು: ಸಂಸಾರವೆಂಬ ನೌಕೆಯನ್ನು ಇಬ್ಬರೂ ಸೇರಿ ನಡೆಸಿದರೆ ಮಾತ್ರ ಅದು ಯಶಸ್ವಿಯಾಗುತ್ತದೆ. ಒಬ್ಬರ ಮೇಲೆಯೇ ಭಾರ ಹಾಕುವುದು ಅಥವಾ ಅವರನ್ನೇ ಅವಲಂಬಿಸುವುದು ಕಷ್ಟಕರವಾಗಬಹುದು. ಅನಾರೋಗ್ಯವಾದಾಗ ಕಾಳಜಿ ತೋರಿಸದೆ ಇರುವುದು ಕೂಡ ಕೆಟ್ಟ ಸಂಬಂಧಕ್ಕೆ ಕಾರಣವಾಗುತ್ತದೆ.
ದ್ವೇಷ, ಅಸೂಯೆ ತೋರುವುದು: ಸಂಗಾತಿ ಪರಸ್ಪರರ ಯಶಸ್ಸನ್ನು ಸಂಭ್ರಮಿಸಿದರೆ ಅದು ಆದರ್ಶ ದಾಂಪತ್ಯವೆನಿಸುತ್ತದೆ. ಆದರೆ, ತನ್ನ ಸಂಗಾತಿಯ ಯಶಸ್ಸನ್ನು ದ್ವೇಷಿಸುವ, ಅಸೂಯೆ ತೋರಿಸುವ ಸಂಬಂಧವು ಯಾವತ್ತಿಗೂ ಅದು ಕೆಟ್ಟ ಸಂಬಂಧವೇ.
ನಿರಂತರ ಜಗಳ: ಪ್ರತಿಯೊಂದು ಸಂಬಂಧದಲ್ಲೂ ಜಗಳ ಇರುವುದರಿಂದ, ಯಾವುದು ಸಾಮಾನ್ಯ ಮತ್ತು ಯಾವುದು ವಿಷಕಾರಿ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಆದರೆ, ಈ ಜಗಳ ಅತಿರೇಕಕ್ಕೆ ಹೋದಾಗ, ಮೂದಲಿಸಿದಾಗ, ಸದಾ ಸಿಟ್ಟಿನಲ್ಲೇ ಮಾತನಾಡುವುದು ಇತ್ಯಾದಿಯು ಯಾವತ್ತೂ ಉತ್ತಮ ದಾಂಪತ್ಯ ಅಥವಾ ಉತ್ತಮ ಪ್ರೇಮವಾಗಿರುವುದಿಲ್ಲ
ಸಂಶಯ: ನೀವು ಎಲ್ಲಿಗಾದರೂ ಹೋದಾಗ ಸಂಗಾತಿಯೂ ನಿರಂತರವಾಗಿ ಕರೆ ಮಾಡುವುದು, ವಿಡಿಯೋ ಕರೆ ಮಾಡುವುದು ಇತ್ಯಾದಿ ಮಾಡುವುದರಿಂದ ಕಿರಿಕಿರಿಯೆನಿಸಬಹದು. ಸದಾ ಸಂಶಯದಲ್ಲೇ ನೋಡುವುದು, ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ಪರಿಶೀಲಿಸುವುದು, ಹಣಕಾಸು ನಿರ್ವಹಿಸುವುದು ಮತ್ತು ಸ್ನೇಹಿತ/ತೆಯರೊಂದಿಗೆ ಸುತ್ತಾಡುವುದನ್ನು ನಿರ್ಬಂಧಿಸುವುದು ಇತ್ಯಾದಿ ಮಾಡುವುದರಿಂದ ಇದು ಕೆಟ್ಟ ಸಂಬಂಧವಾಗಿ ಮಾರ್ಪಡಾಗುತ್ತದೆ.
ಸಂಗಾತಿಯ ವರ್ತನೆ: ಪ್ರೀತಿಯಲ್ಲಿ ತೊಡಗಿದಾಗಿನಿಂದ ಅಥವಾ ದಾಂಪತ್ಯ ಜೀವನ ಶುರು ಮಾಡಿದಾಗಿನಿಂದ ನಿಮ್ಮ ಸಂಗಾತಿ ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಕೀಳಾಗಿ ಕಾಣುವುದು, ಟೀಕಿಸುವುದು, ಅಗೌರವ ತೋರುವುದು, ನಿರ್ಲಕ್ಷ್ಯಿಸುವುದು ಇತ್ಯಾದಿಯು ಯಾವತ್ತೂ ಉತ್ತಮ ಸಂಬಂಧವಾಗಿರುವುದಿಲ್ಲ.
ಮಾನಸಿಕ ಆರೋಗ್ಯ: ಪ್ರತಿಯೊಂದು ಸಂಬಂಧದಲ್ಲೂ ಹಲವು ಸವಾಲುಗಳಿರುತ್ತದೆ. ಸವಾಲುಗಳನ್ನು ಇಬ್ಬರೂ ಸೇರಿ ಮೆಟ್ಟಿ ನಿಲ್ಲಬೇಕು. ಆದರೆ, ಸಂಗಾತಿಯ ಸಹಮತ ಇಲ್ಲದಿದ್ದರೆ ಅದು ಭಾವನಾತ್ಮಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆರೋಗ್ಯಕರ ಸಂಬಂಧ ಯಾವತ್ತೂ ನಿರಂತರ ಒತ್ತಡ ಮತ್ತು ಆತಂಕದ ಮೂಲವಾಗಿರಬಾರದು.
ಒಂಟಿತನ ಅನುಭವಿಸುತ್ತೀರಿ: ವಿಷಕಾರಿ ಸಂಬಂಧವು ವ್ಯಕ್ತಿಗಳನ್ನು ಪ್ರತ್ಯೇಕಿಸಬಹುದು. ಅಲ್ಲದೆ ಜೀವನವನ್ನು ನಡೆಸುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಹುದು. ಉದಾಹರಣೆಗೆ, ಸ್ನೇಹಿತರು ಮತ್ತು ಕುಟುಂಬದಿಂದ ನಿಮ್ಮನ್ನು ಬೇರ್ಪಡಿಸಿಲು ಪ್ರಯತ್ನಿಸುವುದು ಅಥವಾ ನಿಮ್ಮ ಜೀವನ, ಸಂತೋಷ ಎಲ್ಲವೂ ಸಂಗಾತಿಯೊಂದಿಗೆ ಕಳೆಯಬೇಕು ಎಂಬ ನಿರ್ಣಯವು ನಿಮ್ಮನ್ನು ಒಂಟಿತನದಲ್ಲಿಡಬಹುದು.
ವಿಷಕಾರಿ ಸಂಬಂಧವನ್ನು ಬಿಡುವುದು ಹೇಗೆ
ನೀವು ವಿಷಕಾರಿ ಸಂಬಂಧದಲ್ಲಿದ್ದೀರಿ ಎಂದು ಅರ್ಥಮಾಡಿಕೊಳ್ಳುವುದು ಮೊದಲ ಹೆಜ್ಜೆ. ಮುಂದಿನದು ಅದನ್ನು ಬಿಡುವುದು ಹೇಗೆ ಎಂಬುದು. ಇದಕ್ಕಾಗಿ ನಿಮ್ಮನ್ನು ನೀವು ಕೌನ್ಸಿಲಿಂಗ್ ಮಾಡಿಕೊಳ್ಳುವುದು ಮುಖ್ಯ. ವೃತ್ತಿಪರ ತಜ್ಞರ ಮಾರ್ಗದರ್ಶನ ಪಡೆಯುವ ಅಗತ್ಯವಿದೆ. ನಿಮ್ಮ ಪರಿಸ್ಥಿತಿಯ ಬಗ್ಗೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ತಿಳಿಸಿ. ಸಾಮಾಜಿಕ ಮತ್ತು ಭಾವನಾತ್ಮಕ ಬೆಂಬಲ ಪಡೆಯಲು ತಿಳಿಸಬೇಕಾದುದು ಅಗತ್ಯ. ನಿಮ್ಮ ಸಂಗಾತಿಯು ಹಿಂಸಾತ್ಮಕವಾಗಿ ವರ್ತಿಸಿದ್ದರೆ ಅಥವಾ ನಿಮಗೆ ಬೆದರಿಕೆ ಹಾಕಿದ್ದರೆ, ಪ್ರತಿಯೊಂದು ಪ್ರಕರಣದ ದಾಖಲೆಗಳನ್ನು ಇರಿಸಿ.
ವಿಷಕಾರಿ ಸಂಬಂಧದಿಂದ ಚೇತರಿಸಿಕೊಳ್ಳುವುದು ಹೇಗೆ
ವಿಷಕಾರಿ ಸಂಬಂಧವನ್ನು ತೊರೆದ ನಂತರ, ಮಾನಸಿಕವಾಗಿ ಕುಗ್ಗದೆ ಸ್ವಾಭಿಮಾನದ ಜೀವನ ನಡೆಸಬೇಕು. ನೀವು ಸಂತೋಷವಾಗಿರುವುದು ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ. ಉತ್ತಮ ಭವಿಷ್ಯವನ್ನು ಪಡೆಯಲು ಮುಂದಾಗಬೇಕು. ನಿಮ್ಮನ್ನು ಪ್ರೀತಿಸುವ, ಕಾಳಜಿ ತೋರಿಸುವವರೊಂದಿಗೆ ಸಮಯ ಕಳೆಯಿರಿ. ಇದು ಒಂಟಿತನವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ಆನಂದಿಸುವ ಯಾವುದಾದರೂ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಯಾಕೆಂದರೆ ಸಂಬಂಧದಿಂದ ಉಂಟಾದ ಹಾನಿಯಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಹೀಗಾಗಿ ಹಳೆಯ ಘಟನೆಗಳನ್ನು ಮರೆಯಲು ಬೇರೆ-ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
