Valentines Day Recipe: ನಿಮ್ಮ ಪ್ರೀತಿಗೆ ನೀಡಿ ಆಹಾರದ ಸ್ಪರ್ಶ, ಪ್ರೇಮಿಗಳ ದಿನದಂದು ತಯಾರಿಸಿ ಬೀಟ್ರೂಟ್ ರೋಸ್ ಮೊಮೊಸ್
ಕನ್ನಡ ಸುದ್ದಿ  /  ಜೀವನಶೈಲಿ  /  Valentines Day Recipe: ನಿಮ್ಮ ಪ್ರೀತಿಗೆ ನೀಡಿ ಆಹಾರದ ಸ್ಪರ್ಶ, ಪ್ರೇಮಿಗಳ ದಿನದಂದು ತಯಾರಿಸಿ ಬೀಟ್ರೂಟ್ ರೋಸ್ ಮೊಮೊಸ್

Valentines Day Recipe: ನಿಮ್ಮ ಪ್ರೀತಿಗೆ ನೀಡಿ ಆಹಾರದ ಸ್ಪರ್ಶ, ಪ್ರೇಮಿಗಳ ದಿನದಂದು ತಯಾರಿಸಿ ಬೀಟ್ರೂಟ್ ರೋಸ್ ಮೊಮೊಸ್

ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ನಿಮ್ಮ ಪ್ರೀತಿಪಾತ್ರರಿಗೆ ಆಕರ್ಷಕ ಉಡುಗೊರೆ ಅಥವಾ ವಿಸ್ಮಯಕಾರಿಯಾದಂತಹ ಏನನ್ನಾದರೂ ಕೊಡಲು ಬಯಸಬಹುದು. ಸಂಗಾತಿ ಆಹಾರ ಪ್ರಿಯರಾಗಿದ್ದರೆ ಅವರಿಗಾಗಿ ವಿಭಿನ್ನವಾಗಿ ಈ ರೆಸಿಪಿ ಮಾಡಿಕೊಡಬಹುದು. ಗೆಳೆಯ, ಗೆಳತಿ ಅಥವಾ ಸಂಗಾತಿಗಾಗಿ ತಯಾರಿಸಿ ಬೀಟ್ರೂಟ್ ಗುಲಾಬಿ ಮೊಮೊಸ್. ಇದನ್ನು ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ.

ಪ್ರೇಮಿಗಳ ದಿನದಂದು ತಯಾರಿಸಿ ಬೀಟ್ರೂಟ್ ರೋಸ್ ಮೊಮೊಸ್
ಪ್ರೇಮಿಗಳ ದಿನದಂದು ತಯಾರಿಸಿ ಬೀಟ್ರೂಟ್ ರೋಸ್ ಮೊಮೊಸ್ (PC: Canva)

ಪ್ರೇಮಿಗಳ ದಿನಾಚರಣೆ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿವೆ. ಪ್ರತಿಯೊಬ್ಬರೂ ತಮ್ಮ ಸಂಗಾತಿಯನ್ನು ವಿಭಿನ್ನ ರೀತಿಯಲ್ಲಿ ಮೆಚ್ಚಿಸಲು ಬಯಸುತ್ತಾರೆ. ಇದಕ್ಕಾಗಿ, ಉಡುಗೊರೆಗಳು, ಪ್ರವಾಸ ಇತ್ಯಾದಿ ಯೋಜಿಸುತ್ತಾರೆ. ನಿಮ್ಮ ಗೆಳೆಯ, ಗೆಳತಿ ಅಥವಾ ಸಂಗಾತಿ ಆಹಾರ ಪ್ರಿಯರಾಗಿದ್ದರೆ, ಈ ಖಾದ್ಯವನ್ನು ಮಾಡಿಕೊಡಬಹುದು. ಖಂಡಿತ ಸಂಗಾತಿ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಚಾಕೋಲೇಟ್, ಕೇಕ್ ಕೊಡುವುದು ಮಾಮೂಲಿ. ಪ್ರೀತಿ ಪಾತ್ರರಿಗಾಗಿ ರೋಸ್ ಮೊಮೊಸ್ ರೆಸಿಪಿ ಮಾಡಬಹುದು.

ಪ್ರೇಮಿಗಳ ದಿನಕ್ಕೆ ಗುಲಾಬಿ ಹೂವು ಕೊಡುವುದು ಸಾಮಾನ್ಯ. ಹೀಗಾಗಿ ಇದೇ ವಿಚಾರವನ್ನಿಟ್ಟುಕೊಂಡು ಮೊಮೊಸ್ ತಯಾರಿಸಬಹುದು. ಮೈದಾದಿಂದ ಮೊಮೊಸ್ ತಯಾರಿಸುವ ಬದಲು ಬೀಟ್ರೂಟ್‌ನಿಂದ ಆರೋಗ್ಯಕರ, ರುಚಿಕರವಾದ ಪಾಕವಿಧಾನ ಮಾಡಿ. ಬೀಟ್ರೂಟ್ ರೋಸ್/ಗುಲಾಬಿ ಮೊಮೊಸ್ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೀಟ್ರೂಟ್ ರೋಸ್ ಮೊಮೊಸ್ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಬೀಟ್ರೂಟ್- 1, ಗೋಧಿ ಹಿಟ್ಟು- 1 ಕಪ್, ರವೆ- 1/2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಪನೀರ್- ಅರ್ಧ ಕಪ್, ಕರಿಬೇವು ಎಲೆ- 1 ಹಿಡಿಯಷ್ಟು, ಈರುಳ್ಳಿ- 1, ಬೆಳ್ಳುಳ್ಳಿ ಎಸಳು- 4, ಕೊತ್ತಂಬರಿ ಸೊಪ್ಪು- 2 ಚಮಚ, ಶುಂಠಿ ತುಂಡು- 1 ಇಂಚು, ಹಸಿಮೆಣಸಿನಕಾಯಿಗಳು- 1.

ತಯಾರಿಸುವ ವಿಧಾನ: ಬೀಟ್ರೂಟ್ ಗುಲಾಬಿ ಮೊಮೊಸ್ ತಯಾರಿಸುವ ಮೊದಲು, ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಗೋಧಿ ಹಿಟ್ಟು ಮತ್ತು ರವೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೀಟ್ರೂಟ್‌ನ್ನು ರಸ ತೆಗೆದು ಹಿಟ್ಟಿನಲ್ಲಿ ಬೆರೆಸಿ ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು ಐದರಿಂದ ಹತ್ತು ನಿಮಿಷಗಳ ಕಾಲ ಮುಚ್ಚಳ ಮುಚ್ಚಿಡಿ.

ನಂತರ ಮತ್ತೊಂದು ಪಾತ್ರೆಯಲ್ಲಿ ತುರಿದ ಪನೀರ್, ನುಣ್ಣಗೆ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ.

ಈಗ ಹಿಟ್ಟನ್ನು ತೆಗೆದುಕೊಂಡು ಸಣ್ಣ ಉಂಡೆಗಳನ್ನಾಗಿ ಮಾಡಿ ಪಕ್ಕಕ್ಕೆ ಇಡಿ. ನಂತರ ಇದನ್ನು ಪೂರಿಯ ಹಾಗೆ ಒತ್ತಿ ಮಧ್ಯಕ್ಕೆ ಪನೀರ್ ಇತ್ಯಾದಿ ಪದಾರ್ಥಗಳ ಮಿಶ್ರಣವನ್ನು ಹಾಕಿ. ಇದನ್ನು ಗುಲಾಬಿ ಹೂವಿನ ದಳದಂತೆ ಬಹಳ ಎಚ್ಚರಿಕೆಯಿಂದ ಮಡಿಚಿ. ಎಲ್ಲವನ್ನೂ ಇದೇ ರೀತಿ ಹೂವಿನ ಆಕಾರಕ್ಕೆ ತನ್ನಿ.

ನಂತರ ಇಡ್ಲಿ ಪಾತ್ರೆಗೆ ನೀರು ಹಾಕಿ ಒಲೆ ಮೇಲಿಡಿ. ನಂತರ ಹೂವಿನ ದಳದಂತೆ ಮಾಡಿರುವ ಮೊಮೊಸ್ ಅನ್ನು ಇದರೊಳಗಿಟ್ಟು ಮುಚ್ಚಳ ಮುಚ್ಚಿ. 15 ರಿಂದ 20 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ಇಷ್ಟು ಮಾಡಿದರೆ ರುಚಿಕರ ಮತ್ತು ಆರೋಗ್ಯಕರ ಬೀಟ್ರೂಟ್ ಗುಲಾಬಿ ಮೊಮೊಸ್ ಸಿದ್ಧ.

ಈ ಭಕ್ಷ್ಯವನ್ನು ಸಾಸ್ ಅಥವಾ ಮೊಮೊಸ್ ಚಟ್ನಿಯೊಂದಿಗೆ ನಿಮ್ಮ ಪ್ರೀತಿಪಾತ್ರರಿಗೆ ಬಡಿಸಿ. ಖಂಡಿತ ನಿಮ್ಮ ಈ ಪ್ರಯತ್ನವನ್ನು ಮೆಚ್ಚಿಕೊಳ್ಳುವುದರಲ್ಲಿ ಸಂಶಯವಿಲ್ಲ. ಪ್ರೇಮಿಗಳಿಗೆ ಕೆಂಪು ಬಣ್ಣ ಅಂದ್ರೆ ಪ್ರಮುಖ ಆಕರ್ಷಣೆ. ಹೀಗಾಗಿ ಈ ಖಾದ್ಯವೂ ಕೆಂಬಣ್ಣದಲ್ಲಿರುವುದರಿಂದ ಸಂಗಾತಿ ಖಂಡಿತ ಇಷ್ಟಪಡುತ್ತಾರೆ. ಇದು ತಿನ್ನಲು ಕೂಡ ರುಚಿಕರವಾಗಿರುತ್ತದೆ. ಯಾವುದೇ ಆಹಾರ ಬಣ್ಣ ಹಾಕದೆ ಈ ರೆಸಿಪಿ ಮಾಡುವುದು ಮತ್ತೊಂದು ವಿಶೇಷ. ವ್ಯಾಲೆಂಟೈನ್ಸ್ ಡೇ ಸಂಜೆಗೆ ಈ ರೆಸಿಪಿ ಟ್ರೈ ಮಾಡಿ.

Whats_app_banner