Valentines Week 2025: ರೋಸ್ ಡೇ, ಕಿಸ್ ಡೇ, ಹಗ್ ಡೇ; ಪ್ರೇಮದ ಕಂಪು ಪಸರಿಸುವ ಸಪ್ತ ದಿನಗಳಲ್ಲಿ ಯಾವ ದಿನ ಏನು ವಿಶೇಷ, ಇಲ್ಲಿದೆ ವಿವರ
ಪ್ರೇಮಿಗಳ ದಿನಾಚರಣೆಗೆ ದಿನಗಣನೆ ಆರಂಭವಾಗಿದೆ. ಪ್ರೇಮಿಗಳ ದಿನ ಎಂದರೆ ಫೆಬ್ರುವರಿ 14ರ ವ್ಯಾಲೆಂಟೈನ್ಸ್ ಡೇ ಮಾತ್ರವಲ್ಲ, ಇದನ್ನು ಸಪ್ತದಿನಗಳ ಕಾಲ ಪ್ರೇಮದ ಕಂಪು ಪಸರಿಸುವ ಪ್ರೀತಿಯ ಹಬ್ಬ ಅಂತಲೇ ಹೇಳಬಹುದು. ರೋಸ್ ಡೇಯಿಂದ ಹಗ್ ಡೇವರೆಗೆ 7ನೇ ದಿನಗಳ ಕಾಲ ನಡೆಯುವ ಈ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಯಾವ ದಿನ ಏನು ವಿಶೇಷ ಎಂಬ ವಿವರ ಇಲ್ಲಿದೆ.

Valentine's Week calendar 2025: ಪ್ರಪಂಚದಾದ್ಯಂತ ಪ್ರೇಮಿಗಳ ದಿನಾಚರಣೆಗೆ ಸಿದ್ಧತೆ ಶುರುವಾಗಿದೆ. ಪ್ರತಿ ವರ್ಷ ಫೆಬ್ರುವರಿ ತಿಂಗಳು ಬಂತೆಂದರೆ ಪ್ರೀತಿಸುತ್ತಿರುವವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ ಬಹಳ ವಿಶೇಷ. ಪ್ರೀತಿಯಲ್ಲಿ ಬಿದ್ದವರು ತಮ್ಮ ಮನದ ಭಾವನೆಗಳನ್ನು ಪ್ರೀತಿಸಿದ ವ್ಯಕ್ತಿಯ ಮುಂದೆ ಹೇಳಿಕೊಳ್ಳಲು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ಪ್ರೇಮಿಗಳು ಪ್ರೇಮ ವ್ಯಾಖ್ಯಾನಕ್ಕೆ ಹೊಸ ಅರ್ಥ ಕೊಡಲು ವ್ಯಾಲೆಂಟೈನ್ಸ್ ಡೇಗಾಗಿ ಕಾಯುತ್ತಾರೆ.
ಪ್ರೇಮಿಗಳ ದಿನ ಎಂದರೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ, ಪ್ರೀತಿ ಮಾಡುವವರಿಗೆ ಪ್ರತಿ ದಿನವೂ ಪ್ರೇಮಿಗಳ ದಿನ ಅಂತೆಲ್ಲಾ ಹೇಳುವವರಲ್ಲೂ ಕೂಡ ಪ್ರೇಮಿಗಳ ದಿನ ಬಂದಾಗ ವಿಶೇಷ ಭಾವನೆಗಳು ಮೂಡುವುದು ಸುಳ್ಳಲ್ಲ. ಪ್ರೇಮಿಗಳ ದಿನವನ್ನು ಕೇವಲ 1 ದಿನ ಮಾತ್ರವಲ್ಲ, ಒಟ್ಟು 7 ದಿನಗಳ ಕಾಲ ಆಚರಿಸಲಾಗುತ್ತದೆ. ಫೆಬ್ರುವರಿ 7 ರಿಂದ ಆರಂಭವಾಗುವ ಪ್ರೇಮಿಗಳ ದಿನ ಫೆಬ್ರುವರಿ 14ರವರೆಗೆ ಮುಂದುವರಿಯುತ್ತದೆ.
ಪ್ರೇಮಿಗಳ ದಿನದ ಸಂದರ್ಭ ಒಂದು ದಿನಕ್ಕೂ ಒಂದೊಂದು ಹೆಸರು ಇದೆ ಹಾಗೂ ಒಂದೊಂದು ದಿನದ ಆಚರಣೆಯೂ ವಿಭಿನ್ನವಾಗಿದೆ. ಹಾಗಾದರೆ ಪ್ರೇಮದ ಕಂಪು ಪಸರಿಸುವ 7 ದಿನಗಳಲ್ಲಿ ಯಾವ ದಿನ ಏನು ವಿಶೇಷ ಎಂಬುದನ್ನು ಇಲ್ಲಿ ನೋಡೋಣ.
ರೋಸ್ ಡೇ, ಫೆಬ್ರುವರಿ 7
ಪ್ರೇಮಿಗಳ ದಿನದ ಆರಂಭವಾಗುವುದು ಫೆಬ್ರುವರಿ 7ರ ರೋಸ್ ಡೇಯಿಂದ. ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಗುಲಾಬಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಪ್ರೇಮಿಗಳ ದಿನ ಹಾಗೂ ವಾರದ ಆರಂಭಕ್ಕೆ ಮುನ್ನುಡಿ ಬರೆಯುತ್ತಾರೆ. ಗುಲಾಬಿ ಹೂ ಪ್ರೀತಿ, ಉತ್ಸಾಹ ಮತ್ತು ಪ್ರಣಯದ ಶಾಶ್ವತ ಸಂಕೇತವಾಗಿದೆ. ರೋಸ್ ಡೇಯಂದು ಗುಲಾಬಿಗಳನ್ನು ಉಡುಗೊರೆಯಾಗಿ ನೀಡುವುದು ಪ್ರೀತಿ ಮತ್ತು ವಾತ್ಸಲ್ಯದ ಆಳವಾದ ಭಾವನೆಗಳನ್ನು ಪ್ರತಿನಿಧಿಸುತ್ತದೆ. ಗುಲಾಬಿ ಹೂಗಳಲ್ಲಿ ಹಲವು ಬಣ್ಣಗಳಿವೆ. ಈ ಪ್ರತಿ ಬಣ್ಣಕ್ಕೂ ಒಂದೊಂದು ಅರ್ಥವಿದೆ. ಕೆಂಪು ಗುಲಾಬಿಗಳು ಪ್ರೀತಿ ಮತ್ತು ಉತ್ಸಾಹವನ್ನು ಸಂಕೇತಿಸುತ್ತವೆ. ಗುಲಾಬಿ ಅಥವಾ ಪಿಂಕ್ ಗುಲಾಬಿಗಳು ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ಪ್ರತಿನಿಧಿಸುತ್ತವೆ, ಬಿಳಿ ಗುಲಾಬಿಗಳು ಶುದ್ಧತೆ ಮತ್ತು ಮುಗ್ಧತೆಯನ್ನು ಸೂಚಿಸುತ್ತವೆ, ಹಳದಿ ಗುಲಾಬಿಗಳು ಸ್ನೇಹ ಮತ್ತು ಸಂತೋಷವನ್ನು ವ್ಯಕ್ತಪಡಿಸುತ್ತವೆ.
ಪ್ರಪೋಸ್ ಡೇ, ಫೆಬ್ರುವರಿ 8
ವ್ಯಾಲೈಂಟೈನ್ಸ್ ವೀಕ್‌ನ 2ನೇ ದಿನ ಪ್ರಪೋಸ್ ಡೇ. ಈ ದಿನ ನಿಮ್ಮ ಪ್ರೀತಿಪಾತ್ರರ ಮುಂದೆ ಪ್ರೇಮ ನಿವೇದನೆ ಮಾಡುವ ಅಥವಾ ಪ್ರಪೋಸ್ ಮಾಡಿದವರ ಪ್ರೇಮವನ್ನು ಒಪ್ಪಿಕೊಳ್ಳುವ ದಿನ. ಪ್ರಪೋಸ್ ಡೇ ಎನ್ನುವುದು ಸಂಗಾತಿಯ ಮೇಲಿನ ನಿಮ್ಮ ಪ್ರೀತಿ ಮತ್ತು ಬದ್ಧತೆಯನ್ನು ವ್ಯಕ್ತಪಡಿಸಲು ಮತ್ತು ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಜೀವಮಾನದ ನೆನಪುಗಳನ್ನು ಸೃಷ್ಟಿಸಲು ಒಂದು ವಿಶೇಷ ದಿನವಾಗಿದೆ.
ಚಾಕೊಲೇಟ್ ಡೇ, ಫೆಬ್ರುವರಿ 9
ವ್ಯಾಲೆಂಟೈನ್ಸ್ ವೀಕ್‌ನ ಮೂರನೇ ದಿನ ಚಾಕೊಲೇಟ್ ಡೇ. ಇದು ಚಾಕೊಲೇಟ್‌ಗಳ ವಿನಿಮಯದೊಂದಿಗೆ ಪ್ರೀತಿಯ ಮಾಧುರ್ಯವನ್ನು ಅನುಭವಿಸುವ ದಿನ. ಚಾಕೊಲೇಟ್ ದಿನವು ಪ್ರೇಮಿಗಳ ವಾರದಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಆಚರಿಸಲು ಒಂದು ವಿಶಿಷ್ಠ ಮಾರ್ಗವಾಗಿದೆ. ಚಾಕೊಲೇಟ್‌ಗಳು ಪ್ರೀತಿ ಮತ್ತು ವಾತ್ಸಲ್ಯದ ಶ್ರೇಷ್ಠ ಸಂಕೇತವಾಗಿದೆ. ಪ್ರೇಮಿಗೆ ಚಾಕೊಲೇಟ್‌ನ ಸಿಹಿ ತಿನಿಸುವ ಮೂಲಕ ಮುಂದಿನ ಜೀವನಕ್ಕೆ ಹೆಜ್ಜೆ ಇಡುವ ಖುಷಿಯನ್ನು ಸಂಭ್ರಮಿಸಬಹುದು.
ಟೆಡ್ಡಿ ಡೇ, ಫೆಬ್ರುವರಿ 10
ಟೆಡ್ಡಿ ಡೇ ಎಂದರೆ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಲು ಮುದ್ದಾದ ಟೆಡ್ಡಿ ಬೇರ್‌ಗಳನ್ನು ಉಡುಗೊರೆಯಾಗಿ ನೀಡುವುದು. ಇದು ಪ್ರೇಮಿಗಳ ವಾರದ ನಾಲ್ಕನೇ ದಿನ. ಟೆಡ್ಡಿ ಬೇರ್‌ಗಳು ಬಾಲ್ಯದ ನೆನಪುಗಳು ಮತ್ತು ನಾಸ್ಟಾಲ್ಜಿಯಾವನ್ನು ಹುಟ್ಟುಹಾಕುತ್ತವೆ. ನಿಮ್ಮ ಸಂಗಾತಿಗೆ ಮುದ್ದಾದ ಟೆಡ್ಡಿ ಬೇರ್ ಅನ್ನು ಕೊಟ್ಟು ಸರ್ಪ್ರೈಸ್ ನೀಡುವ ಮೂಲಕ ಪ್ರೇಮಿಗಳ ವಾರವನ್ನು ವಿಶೇಷವನ್ನಾಗಿಸಬಹುದು.
ಪ್ರಾಮೀಸ್ ಡೇ, ಫೆಬ್ರುವರಿ 11
ಪ್ರಾಮಿಸ್ ಡೇ ಸಂಬಂಧದಲ್ಲಿ ಬದ್ಧತೆ ಮತ್ತು ನಿಷ್ಠೆಯ ಮಹತ್ವವನ್ನು ಒತ್ತಿಹೇಳುತ್ತದೆ. ಪ್ರಾಮಿಸ್ ಡೇ ಪ್ರೇಮಿಗಳ ವಾರದ ಐದನೇ ದಿನ. ಇದು ಸಂಬಂಧದಲ್ಲಿ ಬದ್ಧತೆ ಮತ್ತು ನಿಷ್ಠೆಯನ್ನು ಸೂಚಿಸುವ ಅರ್ಥಪೂರ್ಣ ಆಚರಣೆ. ಈ ದಿನವು ಸಂಗಾತಿಗಳ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ. ಒಬ್ಬರಿಗೊಬ್ಬರು ಸದಾ ಜೊತೆಯಾಗಿ ಇರುತ್ತೇವೆ ಎಂದು ಪ್ರಮಾಣ ಮಾಡುವ ದಿನವಿದು.
ಹಗ್ ಡೇ, ಫೆಬ್ರುವರಿ 11
ಹಗ್ ಡೇ ಪ್ರೇಮಿಗಳ ವಾರದ ಆರನೇ ದಿನ. ಇದು ದೈಹಿಕ ವಾತ್ಸಲ್ಯ ಮತ್ತು ಪ್ರೀತಿಯ ಹೃದಯಸ್ಪರ್ಶಿ ಆಚರಣೆಯಾಗಿದೆ. ಅಪ್ಪುಗೆಯು ದೈಹಿಕ ಸ್ಪರ್ಶವನ್ನು ಪ್ರತಿನಿಧಿಸುತ್ತವೆ, ಇದು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.
ಕಿಸ್ ಡೇ ಫೆಬ್ರುವರಿ 13
ಕಿಸ್ ಡೇ ಎನ್ನುವುದು ಉತ್ಸಾಹ ಮತ್ತು ಪ್ರಣಯವನ್ನು ಚುಂಬನಗಳೊಂದಿಗೆ ಆಚರಿಸುವ ಸಮಯ. ಕಿಸ್ ಡೇ ಪ್ರೇಮಿಗಳ ವಾರದ ಏಳನೇ ದಿನ. ಪ್ರೀತಿ ಮತ್ತು ವಾತ್ಸಲ್ಯದ ಮಧುರ ಆಚರಣೆಯಾಗಿದೆ. ಅಲ್ಲಿ ಸಂಗಾತಿ ತಮ್ಮ ಭಾವನೆಗಳನ್ನು ಚುಂಬನದ ಮೂಲಕ ವ್ಯಕ್ತಪಡಿಸುತ್ತಾರೆ. ಚುಂಬನವು ಪ್ರೀತಿ, ವಾತ್ಸಲ್ಯ ಮತ್ತು ಅನ್ಯೋನ್ಯತೆಯ ಸಾರ್ವತ್ರಿಕ ಸಂಕೇತವಾಗಿದೆ.
ಫೆಬ್ರುವರಿ 14 ಪ್ರೇಮಿಗಳ ದಿನ
ಪ್ರೇಮಿಗಳ ವಾರ ಅಥವಾ ವ್ಯಾಲೆಂಟೈನ್ಸ್ ವೀಕ್‌ನ ಕೊನೆಯ ದಿನ ಪ್ರೇಮಿಗಳ ದಿನ. ಪರಸ್ಪರ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುವ ಅದ್ಧೂರಿ ಅಂತಿಮ ಹಂತವಾಗಿದೆ. ಫೆಬ್ರವರಿ 14 ರಂದು ಆಚರಿಸಲಾಗುವ ಪ್ರೇಮಿಗಳ ದಿನವು ಪ್ರೀತಿ, ಪ್ರಣಯ ಮತ್ತು ಸಂಬಂಧಗಳನ್ನು ಗೌರವಿಸುವ ದಿನವಾಗಿದೆ. ಪ್ರೀತಿ ಮತ್ತು ಭಕ್ತಿಯನ್ನು ಸಂಕೇತಿಸಿದ ಹುತಾತ್ಮ ಸಂತ ವ್ಯಾಲೆಂಟೈನ್ ಪ್ರೇಮಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ದಿನ ಇದಾಗಿದೆ.

ವಿಭಾಗ