ಕನ್ನಡ ಸುದ್ದಿ  /  Lifestyle  /  Vara Mahalakshmi Vratam History And Significance Of Lakshmi Puja

Varamahalakshmi Vratam: ಲಕ್ಷ್ಮಿ ಎಂದರೆ ಹಣ ಮಾತ್ರಾನಾ...ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಇನ್ನು ನಾವು ಮಾಡುವ ಪತ್ರಿ ಹಬ್ಬದ ಹಿಂದೆ ಒಂದು ಕಥೆ ಹಾಗೂ ಹಿನ್ನೆಲೆ ಇರುತ್ತದೆ. ಹಾಗೇ ವರಮಹಾಲಕ್ಷ್ಮಿ ಹಬ್ಬದ ಹಿಂದೆ ಕೂಡಾ ಒಂದು ಹಿನ್ನೆಲೆ ಇದೆ. ಈ ಕಥೆಯನ್ನು ಸಾಕ್ಷಾತ್ ಶಿವ, ಪಾರ್ವತಿಗೆ ಹೇಳಿದ್ದು ಎಂಬ ನಂಬಿಕೆ ಇದೆ.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ

ಸಂಪತ್ತಿನ ಅಧಿದೇವತೆ ವರಮಹಾಲಕ್ಷ್ಮಿ ಹಬ್ಬದ ಸಡಗರ ಸಂಭ್ರಮ ಜೋರಾಗಿದೆ. ನಾಳಿನ ಹಬ್ಬಕ್ಕೆ ಎಲ್ಲರೂ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಹೆಂಗಳೆಯರು ಈ ಒಂದು ವ್ರತಕ್ಕಾಗಿ ಪ್ರತಿ ಬಾರಿ ಕಾಯುತ್ತಾರೆ. ಲಕ್ಷ್ಮಿ ಅಲಂಕಾರ, ಪೂಜೆ, ಪುನಸ್ಕಾರ, ಮುತ್ತೈದೆಯರನ್ನು ಕರೆದು ಅರಿಶಿನ, ಕುಂಕುಮ ಪ್ರಸಾದ ನೀಡುವುದು ಎಲ್ಲವನ್ನೂ ಬಹಲ ಖುಷಿಯಿಂದ ಮಾಡುತ್ತಾರೆ.

ಪ್ರತಿವರ್ಷ ಶ್ರಾವಣ ಮಾಸದ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರ ಈ ವ್ರತವನ್ನು ಆಚರಿಸಲಾಗುತ್ತದೆ. ಆದರೆ ಆಗಸ್ಟ್ 5 ರಂದು ಶ್ರಾವಣ ಮಾಸ, ಶುಕ್ಲ ಪಕ್ಷದ ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ ಇದೆ. ಆದ್ದರಿಂದ ಈ ದಿನ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುದು ಸೂಕ್ತ. ಹಾಗೇ ಶುಕ್ರವಾರ ಬೆಳಗ್ಗೆ ಬೆಳಗ್ಗೆ 6.53 ರಿಂದ 8.27 ನಿಮಿಷದವರೆಗೂ ಶುಭ ಗಳಿಗೆ ಇದ್ದು ಈ ಸಮಯದಲ್ಲಿ ಲಕ್ಷ್ಮಿಯನ್ನು ಪೂಜಿಸಿದರೆ ಒಳಿತು. ಇನ್ನು ಲಕ್ಷ್ಮಿ ಎಂದರೆ ದುಡ್ಡು ಮಾತ್ರ ಎಂದು ಕೆಲವರು ತಿಳಿದಿರುತ್ತಾರೆ. ಆದರೆ ಲಕ್ಷ್ಮಿ ಧನ , ಧಾನ್ಯ, ಸಂಪತ್ತು, ಕೀರ್ತಿ, ಯಶಸ್ಸು, ಅಭಿವೃದ್ಧಿ ಎಲ್ಲವನ್ನೂ ನೀಡುವ ಅಧಿದೇವತೆ. ಆಕೆಯನ್ನು ಭಕ್ತಿಯಿಂದ ಪೂಜಿಸಿದರೆ ನಿಮ್ಮ ಇಷ್ಟಾರ್ಥ ನೆರವೇರುವುದು ಖಂಡಿತ.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ

ಇನ್ನು ನಾವು ಮಾಡುವ ಪತ್ರಿ ಹಬ್ಬದ ಹಿಂದೆ ಒಂದು ಕಥೆ ಹಾಗೂ ಹಿನ್ನೆಲೆ ಇರುತ್ತದೆ. ಹಾಗೇ ವರಮಹಾಲಕ್ಷ್ಮಿ ಹಬ್ಬದ ಹಿಂದೆ ಕೂಡಾ ಒಂದು ಹಿನ್ನೆಲೆ ಇದೆ. ಈ ಕಥೆಯನ್ನು ಸಾಕ್ಷಾತ್ ಶಿವ, ಪಾರ್ವತಿಗೆ ಹೇಳಿದ್ದು ಎಂಬ ನಂಬಿಕೆ ಇದೆ. ಮಗಧ ರಾಜ್ಯದ ಚಾರುಮತಿ ಎಂಬ ದೈವಭಕ್ತೆ ನಿಸ್ವಾರ್ಥದಿಂದ ತನ್ನ ಪತಿ ಹಾಗೂ ಮನೆಯವರ ಸೇವೆ ಮಾಡುತ್ತಿರುತ್ತಾಳೆ. ಈಕೆಯ ಒಳ್ಳೆಯ ಮನಸ್ಸು ಹಾಗೂ ಭಕ್ತಿಯನ್ನು ಮೆಚ್ಚಿ ಒಮ್ಮೆ ಲಕ್ಷ್ಮಿಯು ಕನಸ್ಸಿನಲ್ಲಿ ಬಂದು ಶ್ರಾವಣ ಮಾಸದ ಹುಣ್ಣಿಮೆ ನಂತರದ ಶುಕ್ರವಾರ ತನ್ನನ್ನು ಪೂಜಿಸಿದರೆ ಆಕೆ ಬೇಡುವ ಎಲ್ಲಾ ವರವನ್ನು ನೀಡುತ್ತೇನೆ ಎಂದು ವಾಗ್ದಾನ ನೀಡುತ್ತಾಳೆ. ಸಾಕ್ಷಾತ್ ಲಕ್ಷ್ಮಿದೇವಿಯೇ ತನ್ನ ಕನಸಿನಲ್ಲಿ ಬಂದು ಹೀಗೆ ಹೇಳಿದ ಪರಿಣಾಮ ಸಂತೋಷಗೊಂಡ ಚಾರುಮತಿ, ತನ್ನ ಮನೆಯವರಿಗೆ ವಿಚಾರ ತಿಳಿಸಿ, ನೆರೆಹೊರೆಯ ಮುತ್ತೈದೆಯರನ್ನು ಕರೆದು ಲಕ್ಷ್ಮಿ ಪೂಜೆ ಮಾಡುತ್ತಾಳೆ. ಪೂಜೆ ಸಮಾಪ್ತಿಯಾಗುತ್ತಿದ್ದಂತೆ ಅಲ್ಲಿ ನೆರೆದಿದ್ದವರಿಗೆ ಲಕ್ಷ್ಮಿ ಸಂಪತ್ತನ್ನು ಕರುಣಿಸುತ್ತಾಳೆ. ಹಾಗೇ ಅವರೆಲ್ಲಾ ತಮ್ಮ ಜೀವನದುದ್ದಕ್ಕೂ ಸುಖ ಸಂತೋಷದಿಂದ ನೆಲೆಸುತ್ತಾರೆ. ಆದ್ದರಿಂದಲೇ ಪ್ರತಿ ವರ್ಷ ಶ್ರಾವಣ ಮಾಸದಂದು ಎಲ್ಲಾ ಹೆಣ್ಣು ಮಕ್ಕಳು ಲಕ್ಷ್ಮಿಯನ್ನು ಪೂಜಿಸಿ ಸಕಲ ಸಂಪತ್ತನ್ನು ಪಡೆಯುವ ಮೂಲಕ ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತಾರೆ.

ಹಾಗೆಯೇ ರಾಕ್ಷಸರು ಹಾಗೂ ದೇವತೆಗಳು ಅಮೃತಕ್ಕಾಗಿ ಸಮುದ್ರ ಮಂಥನ ಮಾಡುವಾಗ ಕ್ಷೀರಸಾಗರದಲ್ಲಿ ಶ್ವೇತವರ್ಣದ ಮಹಾಲಕ್ಷ್ಮಿ ಉದ್ಭವಿಸುತ್ತಾಳೆ ಆದ್ದರಿಂದ ವರಮಹಾಲಕ್ಷ್ಮಿ ಹಬ್ಬದಂದು ಬಹಳ ಕಡೆ ಆ ದೇವಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುತ್ತಾರೆ.

ವರಮಹಾಲಕ್ಷ್ಮಿ ವ್ರತದ ಆಚರಣೆಯ ಮಹತ್ವ ಹಾಗೂ ಆಚರಣೆ ವಿಧಾನ

ಹಿಂದೂ ಪುರಾಣಗಳಲ್ಲಿ ಲಕ್ಷ್ಮಿಯನ್ನು ಸಂಪತ್ತು, ಸಮೃದ್ಧಿ, ಶಕ್ತಿ ಮತ್ತು ಅದೃಷ್ಟದ ದೇವತೆ ಎನ್ನಲಾಗುತ್ತದೆ. ಹಣ ಮಾತ್ರವಲ್ಲದೆ, ಮುತ್ತೈದೆಯರು ಈ ದಿನ ತಮ್ಮ ಪತಿ ಹಾಗೂ ಕುಟುಂಬದವರ ನೆಮ್ಮದಿ, ಸಂಪತ್ತು, ಕೀರ್ತಿ, ದೀರ್ಘಾಯುಷ್ಯ, ಆರೋಗ್ಯ ಮತ್ತು ಸಂತತಿ, ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಅವಿವಾಹಿತ ಯುವತಿಯರು ಈ ವ್ರತವನ್ನು ಆಚರಿಸುವುದರಿಂದ ಅವರಿಗೆ ಕೂಡಾ ಶುಭ ಫಲಗಳು ಕೂಡಾ ದೊರೆಯುತ್ತದೆ.

ಕೆಲವೊಂದು ಮನೆಗಳಲ್ಲಿ ವರಮಹಾಲಕ್ಷ್ಮಿ ವ್ರತದಂದು ಮನೆಗೆ ಅರಿಶಿನ ಕುಂಕುಮಕ್ಕಾಗಿ ಬರುವವರಿಗೆ ವರಮಹಾಲಕ್ಷ್ಮಿ ವ್ರತದ ಕಥೆ ಪುಸ್ತಕಗಳನ್ನು ನೀಡುವ ವಾಡಿಕೆ ಇದೆ. ಈ ಪುಸ್ತಕದಲ್ಲಿ ಇರುವಂತೆ ಪೂಜೆ, ಪುನಸ್ಕಾರ ಮಾಡಿದರೆ ಖಂಡಿತ ವರಮಹಾಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆ ಇದೆ.

ಬೆಳಗ್ಗೆ ಎದ್ದ ಕೂಡಲೇ ಮನೆ ಸ್ವಚ್ಛಗೊಳಿಸಿ ಮಡಿಯುಟ್ಟು, ರಂಗೋಲಿ ಇಟ್ಟು, ಲಕ್ಷ್ಮಿ ಪೂಜೆಗೆ ಬೇಕಾದ ಸಕಲ ತಯಾರಿ ಮಾಡಿಕೊಳ್ಳಿ. ಅದ್ಧೂರಿಯಾಗಿ ಸಾಧ್ಯವಾಗದಿದ್ದರೆ ಸರಳವಾಗಿ ನಿಮಗೆ ಶಕ್ತಿಯಿದ್ದಷ್ಟು ದೇವಿಯನ್ನು ಪೂಜಿಸಿ. ಆಕೆಗೆ ಇಷ್ಟವಾದ ಹೂವು, ಹಣ್ಣು, ತಿಂಡಿಗಳನ್ನು ವೈವೇದ್ಯಕ್ಕೆ ಇರಿಸಿ. ಕಥೆಯನ್ನು ಓದಿ, ಮುತ್ತೈದೆಯರನ್ನು ಕರೆದು ಅರಿಶಿನ, ಕುಂಕುಮ ನೀಡಿ. ಅರ್ಚಕರ ಬಳಿ ಕೇಳಿ ಯಾವ ಸಮಯಕ್ಕೆ ಲಕ್ಷ್ಮಿಯನ್ನು ಕದಲಿಸಬೇಕು ಎಂಬುದನ್ನು ತಿಳಿದು ಅದರಂತೆ ನಿಯಮ ಪಾಲಿಸಿ ಲಕ್ಷ್ಮಿ ಕೃಪಾಕಟಾಕ್ಷಕ್ಕೆ ಪಾತ್ರರಾಗಿ.

ವಿಭಾಗ