ಹೊರೆಯಾಗದಿರಲಿ ವರಲಕ್ಷ್ಮಿ ವ್ರತ, ಲಡ್ಡು ಇಟ್ಟು ಕೈಮುಗಿದು ಕುಳಿತರೆ ಲಡ್ಡು ದುಡ್ಡಾಗುತ್ಯೇ? -ವೀರಕಪುತ್ರ ಶ್ರೀನಿವಾಸ ಬರಹ
ದುಡಿಮೆಯೇ ದೇವರು. ಇದು ದೇವರೂ ಮೆಚ್ಚುವ ಮಾತು. ಅದನ್ನು ಮರೆತು ಅಲಂಕಾರ ಮಾಡಿ, ಲಡ್ಡು ಇಟ್ಟು ಕೈಮುಗಿದು ಕುಳಿತರೆ ಲಡ್ಡು ದುಡ್ಡಾಗುತ್ಯೇ! ದೇವರು, ಧರ್ಮ, ಪೂಜೆ, ವ್ರತ, ಧ್ಯಾನ ಎಲ್ಲವೂ ಇರುವುದು ನಮ್ಮ ನೆಮ್ಮದಿಗಾಗಿ. ಅವುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ನೆಮ್ಮದಿ ಹರಣಕ್ಕೆ ಮೂಲವಾಗಿಸಿಕೊಂಡರೆ ಹೇಗೆ?
ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಶ್ರಾವಣ ಮಾಸದ 2ನೇ ಶುಕ್ರವಾರವಾದ ಆಗಸ್ಟ್ 16 ರಂದು ವರಮಹಾಲಕ್ಷ್ಮೀ ವ್ರತವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬದ ಕುರಿತು ಮಾತುಕತೆ ನಡೆಸುವ ಹಿರಿಯರು, 'ನಮ್ಮ ಕಾಲದಲ್ಲಿ ಈ ಹಬ್ಬವೇ ಇರಲಿಲ್ಲ' ಎನ್ನುವುದು ಹಲವೆಡೆ ಕೇಳಿ ಬರುತ್ತದೆ. ಇಂಥ ಮಾತುಗಳಿಗೆ ಪುಷ್ಟಿಕೊಡುವ ಪೋಸ್ಟ್ ಒಂದನ್ನು ಪುಸ್ತಕ ಪ್ರಕಾಶಕ ಮತ್ತು ಉದ್ಯಮಿ ವೀರಕಪುತ್ರ ಶ್ರೀನಿವಾಸ್ ಹಂಚಿಕೊಂಡಿದ್ದಾರೆ. ಅವರ ಫೇಸ್‌ಬುಕ್ ಪೋಸ್ಟ್ ವೈರಲ್ ಆಗಿದ್ದು ನೂರಾರು ಮಂದಿ ಈ ಅಭಿಪ್ರಾಯವನ್ನು ಪುಷ್ಟೀಕರಿಸಿದ್ದಾರೆ. ಕೆಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ.
ಉಳ್ಳವರ ಹಬ್ಬವಾಗಿದ್ದ ವರಲಕ್ಷ್ಮಿ ವ್ರತ ಈಗ ಎಲ್ಲರ ಹಬ್ಬ
ವೀರಕಪುತ್ರ ಶ್ರೀನಿವಾಸ ಅವರ ಫೇಸ್‌ಬುಕ್ ಪೋಸ್ಟ್ ಹೀಗಿದೆ. "ಇಂತಹದೊಂದು ಹಬ್ಬ ಇದೆ ಎನ್ನುವುದು ಸುಷ್ಮಾ ಸ್ವರಾಜ್ ಅವರು ಬಳ್ಳಾರಿಗೆ ಬಂದು ಹೋಗುವ ತನಕ ನನಗೆ ಗೊತ್ತಿರಲಿಲ್ಲ! ಹಾಗೆ ಉಳ್ಳವರ ಹಬ್ಬವಾಗಿದ್ದ ವರಲಕ್ಷ್ಮಿ ವ್ರತ ಈಗ ಎಲ್ಲರ ಹಬ್ಬವಾಗುತ್ತಿದೆ. ಇದೇ ಮೊದಲನೇ ಸಲ ಈ ಹಬ್ಬಕ್ಕೆ ನಮ್ಮ ಸಿಬ್ಬಂದಿ ಅಡ್ವಾನ್ಸ್ ಕೇಳುತ್ತಿದ್ದಾರೆ. ಅಂದರೆ ಇದು ಹೊಸತೊಂದು ಖರ್ಚಿನ ಬಾಬ್ತು ಆಗುತ್ತಿದೆ. ಈ ಬೆಳವಣಿಗೆಯೇ ನಾಲ್ಕು ಸಾಲು ಬರೆಯುವಂತೆ ಮಾಡಿತು.
"ನಾವು ಸಾಲ ಮಾಡಿ ಸಂಭ್ರಮಿಸ್ತಿದ್ದೀವಾ ಅಥವಾ ಸಾಲ ಮಾಡಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀವಾ? ಅರ್ಥೈಸಿಕೊಳ್ಳುವುದು ಕಷ್ಟವಾಗುತ್ತಿದೆ. ಹಬ್ಬವೆಂದರೆ ಸುಮ್ನೆ ಆಗುತ್ತಾ? ತಿಂಡಿಗಳು, ಪೂಜೆ ಸಾಮಾನು, ದೇವಿ ಅಲಂಕಾರ, ತಟ್ಟೆಯಲ್ಲಿಡಲು ಕಾಸು, ಒಂದಷ್ಟು ಮಹಿಳೆಯರಿಗೆ ಉಡುಗೊರೆ ಸಹಿತ ಅರಿಶಿನ ಕುಂಕುಮ! ಇದೆಲ್ಲವೂ ದುಡಿಯುವ ಗಂಡಸಿಗೆ ಹೊರೆಯಾಗುತ್ತದೆ.
"ದುಡಿಮೆಯೇ ದೇವರು. ಇದು ದೇವರೂ ಮೆಚ್ಚುವ ಮಾತು. ಅದನ್ನು ಮರೆತು ಅಲಂಕಾರ ಮಾಡಿ, ಲಡ್ಡು ಇಟ್ಟು ಕೈಮುಗಿದು ಕುಳಿತರೆ ಲಡ್ಡು ದುಡ್ಡಾಗುತ್ಯೇ! ದೇವರು, ಧರ್ಮ, ಪೂಜೆ, ವ್ರತ, ಧ್ಯಾನ ಎಲ್ಲವೂ ಇರುವುದು ನಮ್ಮ ನೆಮ್ಮದಿಗಾಗಿ. ಅವುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ನೆಮ್ಮದಿ ಹರಣಕ್ಕೆ ಮೂಲವಾಗಿಸಿಕೊಂಡರೆ ಹೇಗೆ? ಹಾಗಾದರೆ ಹಬ್ಬ ಮಾಡುವುದು ಬೇಡವಾ?
"ನನ್ನ ಉದ್ದೇಶ ಅದಲ್ಲ. ಸಾಲ ಮಾಡಿ ಹಬ್ಬ ಮಾಡುವುದು ಅಥವಾ ಇನ್ಯಾರೋ ಮಾಡ್ತಾರೆ ಅಂತ ನಾವೂ ಹೇಗೋ ಹೊಂದಿಸಿಕೊಂಡು ಮಾಡುವುದು ಬೇಡ. ಶುದ್ಧ ಭಕುತಿಗೆ ಒಲಿಯದ ದೈವ ಯಾವುದು ಹೇಳಿ? ಅನ್ನೋದಷ್ಟೇ ಉದ್ದೇಶ. ಶ್ರದ್ಧೆಯಿಂದ ದುಡಿಯೋಣ, ನಂಬಿಕೆ ಇಟ್ಟು ನಡೆಯೋಣ. ವರಲಕ್ಷ್ಮಿ ಒಳ್ಳೆಯದನ್ನೇ ಮಾಡ್ತಾಳೆ" ಎಂದು ಅವರು ತಮ್ಮ ಬರಹವನ್ನು ಮುಗಿಸಿದ್ದಾರೆ.
ಇದು ಹೊಸ ಆಚರಣೆ ಅಲ್ಲ
ವೀರಕಪುತ್ರ ಶ್ರೀನಿವಾಸ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಯೋಗಾನಂದ ಶಾಂತಮೂರ್ತಿ, 'ಶ್ರಾವಣ ಮಾಸ ಶುರುವೆಂದರೆ ಹಬ್ಬಗಳ ಸಾಲೇ. ಮೊದಲು ಬರುವುದೇ ವರಮಹಾಲಕ್ಷ್ಮೀ ಹಬ್ಬ. ಇದೇನೂ ಹೊಸ ಆಚರಣೆಯಲ್ಲ. ಹಿರಿಯರ ಕಾಲದಿಂದಲೂ ನಡೆದು ಬಂದಿದೆ. ಭಕ್ತಿಯ ಜೊತೆಗೆ ವೈಭವ ಸೇರಿಕೊಂಡಿದೆ ಅಷ್ಟೇ' ಎಂದು ಹೇಳಿದ್ದಾರೆ.
ಹಬ್ಬಗಳು ವೈಯಕ್ತಿಕ
ಜೆಸುನ ಜಿ.ಎಸ್.ನಾರಾಯಣ ರಾವ್ ಅವರು ಪ್ರತಿಕ್ರಿಯಿಸಿ, 'ಹಿಂದುಗಳು ಯಾವುದೇ ಹಬ್ಬವನ್ನು ಕಡ್ಡಾಯವಾಗಿ ಮಾಡಲೇಬೇಕೆಂಬ ನಿಯಮವೇನೂ ಇಲ್ಲ. ಹಬ್ಬದ ದಿನ ಸೂರ್ಯನಿಗೆ ಕೈ ಮುಗಿದರೂ ಇಲ್ಲದಿದ್ದರೂ ಸರಿ. ಇದು ತೀರಾ ವೈಯಕ್ತಿಕ. ಹಿಂದು ಪರಂಪರೆಗೆ ಸೇರಿದವರಿಗೆ ಸ್ವಾತಂತ್ರ್ಯ ಇದೆ. ಬಹುತೇಕ ಹಿಂದು ಹಬ್ಬಗಳು ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆಯೇ ಆಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಖರ್ಚುವೆಚ್ಚದಲ್ಲಿ ಕಾಂಪಿಟಿಷನ್
'ಶ್ರೀಮಂತರ ಮನೆಯ ಹಬ್ಬವಾಗಿದ್ದ ವರ ಮಹಾಲಕ್ಷ್ಮಿ ಕೆಲವು ಮಹಿಳೆಯರ ಸಿರಿವಂತಿಕೆ ಪ್ರದರ್ಶನದ ಹಬ್ಬವಾಗಿದೆ. ಇದ್ರಲ್ಲಿ ಅಲಂಕಾರ -ಖರ್ಚು ವೆಚ್ಚದಲ್ಲಿ ಕಾಂಪಿಟೇಷನ್ ಬೇರೆ. ಇದೇ ಕಾಳಜಿ ಮುಂದಿನ ಹಬ್ಬಗಳಿಗೆ ಇರಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.