ಹಬ್ಬಕ್ಕೆ ಇವತ್ತೇನು ಸ್ವೀಟ್ ಮಾಡ್ಲಿ ಅಂತ ಯೋಚಿಸ್ಬೇಡಿ; ಡ್ರೈ ಫ್ರೂಟ್ ಖೋವಾ ಲಡ್ಡು ರೆಸಿಪಿ ಇಲ್ಲಿದೆ, ಸಿಂಪಲ್ ಆಗಿ ಮಾಡಿ
Dry Fruit Khoya Laddu: ಹಬ್ಬಕ್ಕೆ ಸಿಹಿ ತಿಂಡಿ ಏನ್ ಮಾಡೋದು ಎಂಬ ಯೋಚನೆ ನಿಮ್ಮದಾಗಿದ್ದರೆ, ಖೋವಾ ಡ್ರೈ ಫ್ರೂಟ್ ಲಡ್ಡು ಟ್ರೈ ಮಾಡಬಹುದು. ಹೆಚ್ಚು ಪದಾರ್ಥಗಳು ಕೂಡಾ ಬೇಕಿಲ್ಲ. ದಿಢೀರ್ ಆಗಿ ಸಿಂಪಲ್ ರೆಸಿಪಿ ನಾವು ಹೇಳಿಕೊಡುತ್ತೇವೆ ನೋಡಿ.
ನವರಾತ್ರಿ ಹಬ್ಬದ 9 ದಿನಗಳಿಗೆ ಹೆಚ್ಚಿನ ಮನೆಗಳಲ್ಲಿ ಹಬ್ಬದ ಅಡುಗೆ ಮಾಡಲಾಗುತ್ತದೆ. ನಿತ್ಯ ಒಂದೊಂದು ಬಗೆಯ ಸಿಹಿ ಅಡುಗೆ ಮಾಡಿ ಹಬ್ಬದ ಸಂಭ್ರಮ ಹೆಚ್ಚಿಸಬಹುದು. ಮನೆಯಲ್ಲಿ ಮಕ್ಕಳಿದ್ದರೆ ಹೊಸ ಹೊಸ ತಿಂಡಿಗೆ ಬೇಡಿಕೆ ಇಡುತ್ತಾರೆ. ದಿನಕ್ಕೊಂದು ಅಡುಗೆ ಮಾಡಿ ಬಡಿಸುವುದು ನಿಮಗೂ ಕಷ್ಟವಾಗಬಹುದು. ಹಾಗಿದ್ರೆ ಇವತ್ತು ಏನ್ ಸಿಹಿ ಮಾಡಲಿ ಎಂಬ ಯೋಚನೆ ನಿಮಗಿದ್ರೆ, ಡ್ರೈಫ್ರುಟ್ಸ್ ಖೋವಾ ಲಾಡು ಮಾಡಿ. ಮಕ್ಕಳಿಗೆ ಹೊರಗಿನಿಂದ ಸಿಹಿ ತಂದುಕೊಡುವ ಬದಲು ಮನೆಯಲ್ಲೇ ಶುಚಿರುಚಿಯಾಗಿ ತಯಾರಿಸಿ ಕೊಟ್ರೆ ಒಳ್ಳೆಯದಲ್ವೇ? ಅದಕ್ಕಾಗಿ ಈ ಸುಲಭ ರೆಸಿಪಿ ನಿಮಗಾಗಿ.
ಖೋವಾ ಡ್ರೈ ಫ್ರೂಟ್ ಲಡ್ಡು ರೆಸಿಪಿಯನ್ನು ಶೆಫ್ ಸಂಜೀವ್ ಕಪೂರ್ ಅವರು ಹಿಂದೂಸ್ತಾನ್ ಟೈಮ್ಸ್ ಜೊತೆಗೆ ಹಂಚಿಕೊಂಡಿದ್ದಾರೆ. ಇದನ್ನು ನೀವೂ ಕೂಡಾ ಟ್ರೈ ಮಾಡಿ ನೋಡಬಹುದು. ಬೇಕಾಗುವ ಸಾಮಗ್ರಿಗಳು ಹಾಗೂ ಸುಲಭ ಪಾಕ ವಿಧಾನ ಹೀಗಿದೆ ನೋಡಿ.
ಬೇಕಾಗುವ ಪದಾರ್ಥಗಳು
- ಸಣ್ಣದಾಗಿ ಕೊಚ್ಚಿದ ಬಾದಾಮಿ -¼ ಕಪ್
- ಚಿಕ್ಕದಾಗಿ ಕತ್ತರಿಸಿದ ವಾಲ್‌ನಟ್ಸ್ -ಸ್ವಲ್ಪ
- ಚಿಕ್ಕದಾಗಿ ಕತ್ತರಿಸಿದ ಅಂಜೂರ -½ ಕಪ್
- ಖೋವಾ ಅಥವಾ ಮಾವಾ -1 ಕಪ್ (ಸಿಹಿ ಅಲ್ಲ)
- ಸಕ್ಕರೆ -5 ಟೇಬಲ್ ಸ್ಪೂನ್
- ಹಸಿರು ಏಲಕ್ಕಿ ಪುಡಿ -1 ಟೀಚಮಚ
- ಕೇಸರಿ ದಳ + ಸ್ವಲ್ಪ
- ತುಪ್ಪ
- ಬಾದಾಮಿ ಪುಡಿ -ಲೇಪನಕ್ಕೆ ಬೇಕಾದಷ್ಟು
ಮಾಡುವ ವಿಧಾನ
ನಾನ್ ಸ್ಟಿಕ್ ಪ್ಯಾನ್‌ನಲ್ಲಿ ಖೋವಾವನ್ನು ಬಿಸಿ ಮಾಡಿ. ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಕರಗುವ ತನಕ ಬೇಯಿಸಿ. ಇದಕ್ಕೆ ಅರ್ಧ ಟೀಚಮಚ ಏಲಕ್ಕಿ ಪುಡಿ ಮತ್ತು ಕೇಸರಿ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದನ್ನು ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ.
ಅತ್ತ ಅಂಜೂರವನ್ನು ರುಬ್ಬಿ ಒಂದು ಬಟ್ಟಲಿಗೆ ವರ್ಗಾಯಿಸಿ. ಅದಕ್ಕೆ ಬಾದಾಮಿ, ವಾಲ್‌ನಟ್ಸ್ ಮತ್ತು ಉಳಿದ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಒಣ ಹಣ್ಣಿನ ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ.
ಅಂಗೈಗೆ ತುಪ್ಪ ಸವರಿಕೊಂಡು ಖೋವಾ ಮಿಶ್ರಣದಿಂದ ಸ್ವಲ್ಪವೇ ಭಾಗವನ್ನು ಲಡ್ಡಿನ ಸಣ್ಣಗಾತ್ರಕ್ಕೆ ಅರ್ಧ ಉಂಡೆ ಮಾಡಿಕೊಳ್ಳಿ. ಅದಕ್ಕೆ ಒಂದು ಕುಳಿಯನ್ನು ರಚಿಸಿ ಮತ್ತು ಒಣ ಹಣ್ಣಿನ ಮಿಶ್ರಣದ ಭಾಗವನ್ನು ಅದಕ್ಕೆ ತುಂಬಿಸಿ ಲಡ್ಡೂ ಆಕಾರ ಕೊಡಿ. ತಯಾರಾದ ಲಡ್ಡೂಗಳನ್ನು ಬಾದಾಮಿ ಪುಡಿಯ ಮೇಲೆ ಹೊರಳಾಡಿಸಿ. ಕೊನೆಗೆ ಬಾದಾಮಿ ಮತ್ತು ಕೇಸರಿ ಎಳೆಗಳಿಂದ ಅಗತ್ಯಕ್ಕೆ ತಕ್ಕೆಂತೆ ಅಲಂಕರಿಸಿ. ನವರಾತ್ರಿ ಹಬ್ಬಕ್ಕೆ ಸಿಹಿ ಲಡ್ಡು ಸವಿಯಲು ಸಿದ್ದ.
ಇನ್ನಷ್ಟು ರೆಸಿಪಿಗಳಿಗೆ ಇಲ್ಲಿ ಕ್ಲಿಕ್ ಮಾಡಿ