ಏನು ಆಲೂಗಡ್ಡೆ ಹಲ್ವಾನಾ? ಖಂಡಿತಾ ಹೌದು; ನವರಾತ್ರಿ ಹಬ್ಬದಡುಗೆಗೆ ಸಿಹಿ ರೆಸಿಪಿ ನಿಮಗಾಗಿ -Aloo Halwa
ಕನ್ನಡ ಸುದ್ದಿ  /  ಜೀವನಶೈಲಿ  /  ಏನು ಆಲೂಗಡ್ಡೆ ಹಲ್ವಾನಾ? ಖಂಡಿತಾ ಹೌದು; ನವರಾತ್ರಿ ಹಬ್ಬದಡುಗೆಗೆ ಸಿಹಿ ರೆಸಿಪಿ ನಿಮಗಾಗಿ -Aloo Halwa

ಏನು ಆಲೂಗಡ್ಡೆ ಹಲ್ವಾನಾ? ಖಂಡಿತಾ ಹೌದು; ನವರಾತ್ರಿ ಹಬ್ಬದಡುಗೆಗೆ ಸಿಹಿ ರೆಸಿಪಿ ನಿಮಗಾಗಿ -Aloo Halwa

Aloo Halwa Recipe: ಆಲೂಗಡ್ಡೆಯಿಂದ ಸ್ವೀಟ್‌ ಮಾಡಬಹುದು. ಸಾಮಾನ್ಯ ತರಕಾರಿಯಿಂದ ಹಲ್ವಾ ಮಾಡಬಹುದಾ ಎಂದು ನೀವು ಯೋಚಿಸಬಹುದು. ಹಬ್ಬಕ್ಕೆ ಈ ಭಿನ್ನ ಅಡುಗೆಯನ್ನು ನೀವು ಕೂಡಾ ಟ್ರೈ ಮಾಡಬಹುದು. ಸುಲಭ ರೆಸಿಪಿ ಇಲ್ಲಿದೆ ನೋಡಿ.

ಏನು ಆಲೂಗಡ್ಡೆ ಹಲ್ವಾನಾ? ಖಂಡಿತಾ ಹೌದು; ನವರಾತ್ರಿ ಹಬ್ಬದಡುಗೆಗೆ ಸಿಹಿ ರೆಸಿಪಿ ನಿಮಗಾಗಿ
ಏನು ಆಲೂಗಡ್ಡೆ ಹಲ್ವಾನಾ? ಖಂಡಿತಾ ಹೌದು; ನವರಾತ್ರಿ ಹಬ್ಬದಡುಗೆಗೆ ಸಿಹಿ ರೆಸಿಪಿ ನಿಮಗಾಗಿ

ನವರಾತ್ರಿ ಸಮಯದಲ್ಲಿ ಹಬ್ಬದಡುಗೆ ಸಾಮಾನ್ಯ. ಒಂಬತ್ತು ದಿನಗಳ ಕಾಲ ಹಬ್ಬದ ವಾತಾವರಣ ಇರುವಾಗ ಮನೆಯಲ್ಲಿ ವಿಶೇಷ ಭಕ್ಷ್ಯಗಳು ತಯಾರಾಗುತ್ತವೆ. ಈ ಬಾರಿ ಸಾಮಾನ್ಯ ಲಡ್ಡು, ಪಾಯಸ, ಹೋಳಿಗೆ ಮಾಡುವ ಬದಲು ಹೊಸ ಅಡುಗೆಯೊಂದನ್ನು ಪ್ರಯತ್ನಿಸಿ ನೋಡಿ. ನವರಾತ್ರಿ ಸಮಯದಲ್ಲಿ ಹೆಚ್ಚಿನವರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಸೀಮಿತ ಆಹಾರ ಸೇವನೆ ಸಹಜ. ಪೂಜೆ ಎಲ್ಲಾ ಮುಗಿಸಿದ ನಂತರ ಆರೋಗ್ಯ ಹಾಗೂ ಬಾಯಿಗೆ ರುಚಿಯಾಗುವ ಭಿನ್ನ ಅಡುಗೆ ಮಾಡಿ ಸೇವಿಸಿ. ಇವತ್ತು ನಾವು ಸಾಮಾನ್ಯ ಹಲ್ವಕ್ಕಿಂತ ಭಿನ್ನವಾಗಿ ತರಕಾರಿಯೊಂದರ ಹಲ್ವಾ ರೆಸಿಪಿ ಹೇಳಿಕೊಡುತ್ತೇವೆ. ಇದು ನಿಮಗೆ ಇಷ್ಟವಾಗಬಹುದು. ಇದುವೇ ಆಲೂಗಡ್ಡೆ ಹಲ್ವಾ.

ಆಲೂಗಡ್ಡೆಯನ್ನು ಸಾಮಾನ್ಯವಾಗಿ ಸಿಹಿ ಅಡುಗೆಗಳಿಗೆ ಬಳಸುವುದು ಕಡಿಮೆ. ಇನ್ನು ಇದರಿಂದ ಹಲ್ವಾ ಮಾಡಬಹುದಾ ಎಂದು ನೀವು ಯೋಚಿಸಬಹುದು. ಖಂಡಿತಾ ಸಾಧ್ಯವಿದೆ. ಶೆಫ್ ಕುನಾಲ್ ಕಪೂರ್ ಅವರು ಈ ಭಿನ್ನ ರೆಸಿಪಿಯನ್ನು ಹಂಚಿಕೊಂಡಿದ್ದಾರೆ. ಹಾಗಿದ್ರೆ ಆಲೂ ಹಲ್ವಾ ಮಾಡೋಣ ಬನ್ನಿ.

ಆಲೂ ಹಲ್ವಾ ಮಾಡಲು ಬೇಕಾದ ಪದಾರ್ಥಗಳು

  • ಆಲೂಗಡ್ಡೆ -750 ಗ್ರಾಂ
  • ಬಾದಾಮಿ ಚೂರು -2 tbsp
  • ಪಿಸ್ತಾ ಚೂರು -2 tbsp
  • ಗೋಡಂಬಿ ಚೂರು -2 tbsp
  • ವಾಲ್ನಟ್ ಚೂರು -2 ಟೀಸ್ಪೂನ್
  • ತುಪ್ಪ -6 tbsp
  • ಹಾಲು -500 ಮಿಲೀ ಅಥವಾ 2 ಕಪ್
  • ಏಲಕ್ಕಿ ಪುಡಿ -¾ ಟೀಸ್ಪೂನ್
  • ಜಾಯಿಕಾಯಿ ಪುಡಿ -¼ ಟೀಸ್ಪೂನ್
  • ತುರಿದ ಬೆಲ್ಲ -1 ಕಪ್ ಅಥವಾ 200 ಗ್ರಾಂ

ಮಾಡುವ ವಿಧಾನ

ಮೊದಲಿಗೆ ಆಲೂಗಡ್ಡೆಯನ್ನು ತೊಳೆದು ಸ್ವಚ್ಛಗೊಳಿಸಿ ಮತ್ತು ಅವುಗಳನ್ನು ಪ್ರೆಶರ್ ಕುಕ್ಕರ್‌ಗೆ ಹಾಕಿ. ನೀರು ಬೆರೆಸಿ ಆಲೂಗಡ್ಡೆ ಮೃದುವಾಗುವವರೆಗೆ ಬೇಯಿಸಿ. ಬೇಯಿಸಿದ ನಂತರ ನೀರನ್ನು ಸೋಸಿ ಆಲೂಗಡ್ಡೆ ಸಿಪ್ಪೆ ಸುಲಿದು ಚೆನ್ನಾಗಿ ಮ್ಯಾಶ್ ಮಾಡಿ. ಮ್ಯಾಶ್‌ ಆದ ಆಲೂಗಡ್ಡೆಯಲ್ಲಿ ಗಂಟುಗಳು ಇಲ್ಲದಂತೆ ನೋಡಿಕೊಳ್ಳಿ. ಸಂಪೂರ್ಣ ಜಜ್ಜಿದ ಆಲೂಗಡ್ಡೆಯನ್ನು ಪಕ್ಕಕ್ಕೆ ಇಡಿ.

ಈಗ ಒಂದು ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ 2 ಟೀಸ್ಪೂನ್ ತುಪ್ಪ ಹಾಕಿ. ಕತ್ತರಿಸಿದ‌ ಎಲ್ಲಾ ಡ್ರೈಫ್ರುಟ್ಸ್ ಅಥವಾ ನಟ್ಸ್‌ ಹಾಕಿ. ಅವು ತುಸು ಬಣ್ಣ ಬದಲಾಗುವವರೆಗೆ ಹುರಿದು ತುಪ್ಪದಿಂದ ತೆಗೆದು ಒಂದು ಪ್ಲೇಟ್‌ಗೆ ಹಾಕಿಕೊಳ್ಳಿ. ಪ್ಯಾನ್‌ನಲ್ಲಿ ಉಳಿದ ತುಪ್ಪಕ್ಕೆ ಎಲ್ಲಾ ತುಪ್ಪವನ್ನು ಸೇರಿಸಿ. ಅದು ಬಿಸಿಯಾದ ನಂತರ ಜಜ್ಜಿ ಇಟ್ಟುಕೊಟ್ಟಿದ್ದ ಆಲೂಗಡ್ಡೆಯನ್ನು ಸೇರಿಸಿ. ಆಲೂಗಡ್ಡೆಯನ್ನು ಮಧ್ಯಮ ಉರಿಯಲ್ಲಿ ತುಪ್ಪದಲ್ಲಿ ಹುರಿಯಿರಿ. ಆಗಾಗ ಸೌಟಿನಿಂದ ತಿರುವಿ. ಮಿಶ್ರಣ ತುಸು ಕಂದು ಬಣ್ಣ ಬರುವವರೆಗೂ ಬೇಯಿಸಿ.

ಆಲೂಗಡ್ಡೆ ತಿಳಿ ಕಂದು ಬಣ್ಣಕ್ಕೆ ತಿರುಗಿದ ನಂತರ ಅದರಲ್ಲಿ ತುಪ್ಪ ಬಿಡಲು ಆರಂಭವಾಗುತ್ತದೆ. ಈ ಹಂತದಲ್ಲಿ ಅದಕ್ಕೆ ಹಾಲು ಸೇರಿಸಿ ಅದು ಕುದಿಯುವವರೆಗೆ ಕಲಕುತ್ತಲೇ ಇರಿ. ಒಂದು ವೇಳೆ ಈ ಹಂತದಲ್ಲಿ ಮಿಶ್ರಣ ಉಂಡೆಕಟ್ಟಿದರೆ ಅದನ್ನು ಚಮಚದ ಹಿಂಭಾಗದಿಂದ ಮ್ಯಾಶ್ ಮಾಡಿ. ಹಾಲು ಕುದಿ ಬಂದಾಗ ಅದಕ್ಕೆ ಏಲಕ್ಕಿ ಮತ್ತು ಜಾಯಿಕಾಯಿ ಪುಡಿಯನ್ನು ಸೇರಿಸಿ. ಹಾಲು ಆರಿದ ನಂತರ ಬೆಲ್ಲ ಸೇರಿಸಿ ಮಿಶ್ರಣ ಮಾಡಿ. ಹಲ್ವಾ ಬಾಣಲೆಯ ಬದಿ ಬಿಡುವವರೆಗೂ ಚೆನ್ನಾಗಿ ಬೇಯಿಸಿ. ಕೊನೆಯಲ್ಲಿ ತುಪ್ಪದಲ್ಲಿ ಫ್ರೈ ಮಾಡಿದ ಡ್ರೈಫ್ರುಟ್ಸ್‌ ಸೇರಿಸಿ. ಹಬ್ಬಕ್ಕೆ ವಿಶೇಷ ಆಲೂಗಡ್ಡೆ ಹಲ್ವಾ ಸವಿಯಲು ಸಿದ್ಧ.

Whats_app_banner