ಕನ್ನಡ ಸುದ್ದಿ  /  ಜೀವನಶೈಲಿ  /  ದಿನಾ ಸಾದಾ ದೋಸೆ ತಿಂದು ಸಾಕಾದ್ರೆ ನಾಳೆ ಸೌತೆಕಾಯಿ ದೋಸೆ ಟ್ರೈ ಮಾಡಿ; ಮಕ್ಕಳಿಗೂ ಇಷ್ಟ ಆಗುತ್ತೆ

ದಿನಾ ಸಾದಾ ದೋಸೆ ತಿಂದು ಸಾಕಾದ್ರೆ ನಾಳೆ ಸೌತೆಕಾಯಿ ದೋಸೆ ಟ್ರೈ ಮಾಡಿ; ಮಕ್ಕಳಿಗೂ ಇಷ್ಟ ಆಗುತ್ತೆ

Cucumber Dosa: ಸೌತೆಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಳೆಗಾಲದಲ್ಲಿ ಸೌತೆಕಾಯಿಯನ್ನು ದೋಸೆಯ ರೂಪದಲ್ಲಿ ಸೇವಿಸಬಹುದು. ಇದರಲ್ಲಿ ನೀರಿನಂಶ ಹೆಚ್ಚಿರುವುದರಿಂದ ಮಳೆಗಾಲಕ್ಕೆ ಬೇಯಿಸಿ ಬೇರೆ ವಿಧಾನದಲ್ಲಿ ಸೌತೆಕಾಯಿಯನ್ನು ಹೊಟ್ಟೆಗೆ ಸೇರಿಸುವುದು ಉತ್ತಮ.

ದಿನಾ ಸಾದಾ ದೋಸೆ ತಿಂದು ಸಾಕಾದ್ರೆ ನಾಳೆ ಸೌತೆಕಾಯಿ ದೋಸೆ ಟ್ರೈ ಮಾಡಿ
ದಿನಾ ಸಾದಾ ದೋಸೆ ತಿಂದು ಸಾಕಾದ್ರೆ ನಾಳೆ ಸೌತೆಕಾಯಿ ದೋಸೆ ಟ್ರೈ ಮಾಡಿ

ಪ್ರತಿನಿತ್ಯ ಬೆಳಗ್ಗೆ ಎದ್ದಾಗ, ಚಹಾ ಜೊತೆಗೆ ಸವಿಯಲು ಇವತ್ತೇನು ಬ್ರೇಕ್‌ ಫಾಸ್ಟ್‌ ಮಾಡೋದು ಎಂಬುದೇ ಗೃಹಿಣಿಯರ ಚಿಂತೆ. ಈಗಿನ ಮಕ್ಕಳ ಬಾಯಿ ಮೆಚ್ಚಿಸಿ ಹೊಟ್ಟೆ ತುಂಬೋ ಹಾಗೆ ಮಾಡಲು ಪೋಷಕರು ಪಡಬೇಕಾದ ಕಷ್ಟ ಅಷ್ಟಿಷ್ಟಲ್ಲ. ಮಕ್ಕಳಿಗೆ ಮಾಡಿಕೊಡೋ ಉಪಾಹಾರ ಬಾಯಿಗೆ ರುಚಿಯಾಗೋದು ಮಾತ್ರವಲ್ಲದೆ ನೋಡೋಕೂ ಕಲರ್‌ಫುಲ್‌ ಆಗಿ ಕಾಣಬೇಕು. ಈ ನಡುವೆ ದಿನಕ್ಕೊಂದು ವೆರೈಟಿ ಮಾಡಬೇಕು ಎಂಬ ಆಸೆ ಅಮ್ಮಂದಿರಿಗಿರುತ್ತದೆ. ಇದಕ್ಕಾಗಿ ಇಂದು ಒಂದು ಬಗೆಯ ದೋಸೆ ರೆಸಿಪಿಯನ್ನು ನಾವು ನಿಮಗೆ ಹೇಳಿಕೊಡುತ್ತೇವೆ. ಸೌತೆಕಾಯಿ ದೋಸೆಯನ್ನು ಬೆಳಗ್ಗಿನ ಉಪಾಹಾರ ಮಾತ್ರವಲ್ಲದೆ ಸಂಜೆ ಚಹಾ ಜೊತೆಗೂ ಸವಿಯಬಹುದು.

ಮನೆಯಲ್ಲಿ ನೀವು ಹಲವು ಬಗೆಯ ದೋಸೆಗಳನ್ನು ಮಾಡಿ ಸವಿದಿರಬಹುದು. ವಿವಿಧ ತರಕಾರಿಗಳನ್ನು ಬಳಸಿ ಕೆಲವು ಗೃಹಿಣಿಯರು ಭಿನ್ನ ದೋಸೆಗಳನ್ನು ಮಾಡಿ ಮನೆಯವರಿಗೆ ಬಡಿಸುತ್ತಾರೆ. ಇಂಥದರಲ್ಲಿ ನೀವೊಮ್ಮೆ ಸೌತೆಕಾಯಿ ದೋಸೆಯನ್ನು ಮಾಡಿ ರುಚಿ ನೋಡಬೇಕು. ಇದು ರುಚಿ ಅನ್ನೋದಕ್ಕಿಂತ ಹೆಚ್ಚಾಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೋಡಲು ಕೂಡಾ ಕಣ್ಣಿಗೆ ಹಿತವಾಗುವ ಹದವಾದ ಬಣ್ಣ ಇರುತ್ತದೆ. ಒಮ್ಮೆ ಮಾಡಿ ಸವಿದರೆ ಮತ್ತೆ ಮತ್ತೆ ಮಾಡಿ ತಿನ್ನಬೇಕೆನಿಸುತ್ತದೆ.

ದಿನಕ್ಕೊಂದು ಬಗೆಯ ಹೊಸ ಅಡುಗೆ ಪ್ರಯತ್ನಿಸಲು ಬಯಸುವವರಿಗೆ ಇದು ಅತ್ಯುತ್ತಮ ಹಾಗೂ ಸರಳ ಪಾಕವಿಧಾನವಾಗಿದೆ. ಇದನ್ನು ಮಾಡಲು ಹೆಚ್ಚು ಸಮಯವೂ ಬೇಕಿಲ್ಲ. ಹೀಗಾಗಿ ನೀವೂ ಒಮ್ಮೆ ಈ ಸುಲಭ ದೋಸೆ ಮನೆಯಲ್ಲೇ ಮಾಡಿ ನೋಡಿ.

ಟ್ರೆಂಡಿಂಗ್​ ಸುದ್ದಿ

ಸೌತೆಕಾಯಿ ದೋಸೆಗೆ ಬೇಕಾಗುವ ಸಾಮಾಗ್ರಿಗಳು

 • ಅಕ್ಕಿ - ಒಂದು ಕಪ್
 • ಸೌತೆಕಾಯಿ - ಒಂದು ಕಪ್
 • ತೆಂಗಿನ ತುರಿ - ಅರ್ಧ ಕಪ್
 • ಉಪ್ಪು ಮತ್ತು ಸ್ವಲ್ಪ 

ಇದನ್ನೂ ಓದಿ | Sambar History: ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ಸಾಂಬಾರ್‌ ಮೊದಲು ತಯಾರಾಗಿದ್ದು ಈ ರಾಜ್ಯದಲ್ಲಿ, ಸಾಂಬಾರ್‌ ಇತಿಹಾಸ ಹೀಗಿದೆ

ಸೌತೆಕಾಯಿ ದೋಸೆ ಮಾಡುವ ವಿಧಾನ

 • ಅಕ್ಕಿಯನ್ನು ಎರಡು ಗಂಟೆಗಳ ಕಾಲ ಮೊದಲೇ ನೆನೆಸಿಡಿ.
 • ಸೌತೆಕಾಯಿ ಸಣ್ಣ ತುಂಡುಗಳಾಗಿ ಕತ್ತರಿಸಿ.
 • ಮಿಕ್ಸಿ ಜಾರ್‌ಗೆ ಸೌತೆಕಾಯಿ ಹಾಗೂ ತೆಂಗಿನ ತುರಿ ಸೇರಿಸಿ ರುಬ್ಬಿ, ಆ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ.
 • ಈಗ ಅದೇ ಮಿಕ್ಸಿ ಜಾರ್‌ಗೆ ನೆನೆಸಿಟ್ಟ ಅಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.‌ (ಹೆಚ್ಚು ನೀಡು ಸೇರಿಸಬೇಡಿ)
 • ಅಕ್ಕಿ ಹಿಟ್ಟನ್ನು ಸೌತೆಕಾಯಿ ಪೇಸ್ಟ್‌ ಜೊತೆಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ದೋಸೆ ಹಿಟ್ಟಿನ ಹದಕ್ಕೆ ಬೇಕಾದ ಮಿಶ್ರಣ ಮಾಡಿಕೊಳ್ಳಿ. ಅಗತ್ಯವಿದ್ದರೆ ಮಾತ್ರ ನೀರು ಸೇರಿಸಿ.
 • ಒಲೆಯ ಮೇಲೆ ಪ್ಯಾನ್‌ ಇಟ್ಟು ಸ್ವಲ್ಪ ಹಾಕಿ ಎಣ್ಣೆ ಹಚ್ಚಿ.
 • ದೋಸೆ ಹಿಟ್ಟನ್ನು ಎಣ್ಣೆಯ ಮೇಲೆ ದೋಸೆಯಂತೆ ಹರಡಿ ಮತ್ತು ಎರಡೂ ಬದಿಗಳಲ್ಲಿ ಫ್ರೈ ಮಾಡಿ.
 • ಗರಿಗರಿ ದೋಸೆಯನ್ನು ತೆಂಗಿನಕಾಯಿ ಚಟ್ನಿ ಜೊತೆಗೆ ಸವಿಯಲು ರುಚಿಯಾಗುತ್ತದೆ.

ಸೌತೆಕಾಯಿ ದೋಸೆ ಆರೋಗ್ಯ ಪ್ರಯೋಜನ

ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ 90 ಪ್ರತಿಶತದಷ್ಟು ನೀರು ಇರುತ್ತದೆ. ಬೇಸಿಗೆಯಲ್ಲಿ ಸೌತೆಕಾಯಿ ತುಂಬಾ ಒಳ್ಳೆಯದು. ಹೀಗಾಗಿ ಮಳೆಗಾಲದಲ್ಲಿ ಅದನ್ನು ದೋಸೆಯ ರೂಪದಲ್ಲಿ ಹೊಟ್ಟೆ ಸೇರಿಸಬಹುದು. ಸೌತೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದರೊಂದಿಗೆ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.