ಕನ್ನಡ ಸುದ್ದಿ  /  ಜೀವನಶೈಲಿ  /  ದೋಸೆ, ಇಡ್ಲಿ ಮಾತ್ರವಲ್ಲ; ಅಕ್ಕಿ ಹಿಟ್ಟಿನಿಂದ ತಯಾರಿಸಬಹುದಾದ ಬಗೆಬಗೆಯ ತಿನಿಸುಗಳ ವಿವರ ಇಲ್ಲಿದೆ ನೋಡಿ

ದೋಸೆ, ಇಡ್ಲಿ ಮಾತ್ರವಲ್ಲ; ಅಕ್ಕಿ ಹಿಟ್ಟಿನಿಂದ ತಯಾರಿಸಬಹುದಾದ ಬಗೆಬಗೆಯ ತಿನಿಸುಗಳ ವಿವರ ಇಲ್ಲಿದೆ ನೋಡಿ

ದಕ್ಷಿಣ ಭಾರತದಲ್ಲಿ ಬೆಳಗ್ಗಿನ ಉಪಾಹಾರಕ್ಕೆ ಅಕ್ಕಿ ಹಿಟ್ಟು ಬಳಕೆ ಮಾಡುತ್ತೇವೆ. ಆದರೆ ಅಕ್ಕಿಹಿಟ್ಟಿನಿಂದ ಎಷ್ಟೆಲ್ಲ ಬಗೆಯ ತಿನಿಸುಗಳನ್ನು ತಯಾರಿಸಬಹುದು ಗೊತ್ತೇ? ದಕ್ಷಿಣ ಭಾರತದ ಪ್ರಮುಖ ತಿನಿಸುಗಳ ವಿವರ ಇಲ್ಲಿದೆ.

ಅಕ್ಕಿ ಹಿಟ್ಟಿನಿಂದ ತಯಾರಿಸಬಹುದಾದ ಬಗೆಬಗೆಯ ತಿನಿಸುಗಳ ವಿವರ ಇಲ್ಲಿದೆ ನೋಡಿ
ಅಕ್ಕಿ ಹಿಟ್ಟಿನಿಂದ ತಯಾರಿಸಬಹುದಾದ ಬಗೆಬಗೆಯ ತಿನಿಸುಗಳ ವಿವರ ಇಲ್ಲಿದೆ ನೋಡಿ

ಬೆಳಗ್ಗಿನ ಉಪಹಾರಕ್ಕೆ ದೋಸೆ, ಇಡ್ಲಿ ಮಾಡಬೇಕು ಎಂದರೆ ಅಕ್ಕಿ ಹಿಟ್ಟನ್ನು ತಯಾರಿಸುವುದು ಅನಿವಾರ್ಯ. ಗ್ಲುಟಿನ್ ಮುಕ್ತವಾದ ಅಕ್ಕಿ ಹಿಟ್ಟಿನಿಂದ ತಯಾರಿಸಿದ ಆಹಾರವು ಆರೋಗ್ಯಕ್ಕೆ ಒಳ್ಳೆಯದು ಕೂಡ. ಅಕ್ಕಿ ಹಿಟ್ಟು ಕಾರ್ಬೋಹೈಡ್ರೇಟ್‌ನ ಉತ್ತಮ ಮೂಲವಾಗಿದ್ದು ಮನುಷ್ಯನ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಅಲ್ಲದೆ ಇದು ಸುಲಭವಾಗಿ ಜೀರ್ಣವಾಗುತ್ತದೆ ಕೂಡ. ಆದರೆ ಪ್ರತಿ ದಿನ ದೋಸೆ, ಇಡ್ಲಿ ತಿಂದು ತಿಂದು ಬೋರಾಗಿದ್ದರೆ ಇದೇ ಅಕ್ಕಿ ಹಿಟ್ಟನ್ನು ಬಳಕೆ ಮಾಡಿ ಇನ್ನೂ ಯಾವ್ಯಾವ ರೀತಿಯಲ್ಲಿ ತಿನಿಸುಗಳನ್ನು ತಯಾರಿಸಬಹುದು ಎಂಬ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

  1. ಖಿಚು

ಇದು ಗುಜರಾತಿನ ಸಾಂಪ್ರದಾಯಿಕ ತಿನಿಸು. ಇದು ಮಸಾಲೆಯುಕ್ತ ರುಚಿ ಹೊಂದಿರುತ್ತದೆ. ಉಪಾಹಾರ ಹಾಗೂ ಸಂಜೆಯ ಚಹಾ ಸಮಯಕ್ಕೂ ಇದು ಸೂಕ್ತ ಆಹಾರ. ಖಿಚುವನ್ನು ತಯಾರಿಸಲು ಅಕ್ಕಿ ಹಿಟ್ಟು, ನೀರು, ಉಪ್ಪು, ಜೀರಿಗೆ ಹಾಗೂ ಹಸಿರು ಮೆಣಸುನ್ನು ಮಿಶ್ರಣ ಮಾಡಿ ಬಳಿಕ ಇದನ್ನು ಬೇಯಿಸಲಾಗುತ್ತದೆ. ಮೃದುವಾದ ಈ ತಿನಿಸು ಬೆಳಗ್ಗಿನ ಉಪಾಹಾರಕ್ಕೆ ಚೆನ್ನಾಗಿರುತ್ತದೆ.

2. ಪುಟ್ಟು

ಇದು ಕೇರಳದ ಜನಪ್ರಿಯ ಖಾದ್ಯವಾಗಿದೆ. ಅಕ್ಕಿ ಹಿಟ್ಟು ಹಾಗೂ ತುರಿದ ತೆಂಗಿನಕಾಯಿಯನ್ನು ಬಳಸಿ ಇದನ್ನು ಬೇಯಿಸಲಾಗುತ್ತದೆ. ತುರಿದ ತೆಂಗಿನಕಾಯಿ ಘಮವಂತೂ ಬಾಯಿಯಲ್ಲಿ ನೀರೂರಿಸದೆ ಇರದು. ಸಿಲಿಂಡರ್ ಆಕಾರದಲ್ಲಿ ಪುಟ್ಟನ್ನು ಅಕ್ಕಿ ಹಿಟ್ಟು ಹಾಗೂ ತೆಂಗಿನ ತುರಿಯನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ತುಂಬಾ ರುಚಿಕರವಾದ ಈ ತಿನಿಸು ಮತ್ತೆ ಮತ್ತೆ ತಿನ್ನಬೇಕು ಎನ್ನುವಷ್ಟರ ಮಟ್ಟಿಗೆ ರುಚಿಯಾಗಿದೆ.

3. ಅಕ್ಕಿ ತಾಲಿಪಟ್ಟು

ಇದು ಒಂದು ರೀತಿಯಲ್ಲಿ ರೊಟ್ಟಿಯ ರೀತಿಯೇ ಇರಲಿದ್ದು ಮಸಾಲಾ ಪದಾರ್ಥಗಳನ್ನು ಒಳಗೊಂಡಿರುತ್ತದೆ. ಅಕ್ಕಿ ಹಿಟ್ಟಿಗೆ ನೀರು, ಶುಂಠಿ, ಹಸಿ ಮೆಣಸು, ಸಣ್ಣದಾಗಿ ಕತ್ತರಿಸಿದ ವಿವಿಧ ತರಕಾರಿಗಳು, ಉಪ್ಪು ಹಾಗೂ ಜೀರಿಗೆಯನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಇದನ್ನು ಬಳಿಕ ಲಟ್ಟಿಸಿ ಹೆಂಚಿನಲ್ಲಿ ಬೇಯಿಸಿಕೊಂಡು ಮೊಸರು ಅಥವಾ ತುಪ್ಪದೊಂದಿಗೆ ಸವಿಯಲು ನೀಡಿ.

ಇದನ್ನೂ ಓದಿ | Weight Loss Recipe: ತೂಕ ಇಳಿಕೆಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಬೇಕೆ? ರುಚಿಕರ ಚಿಕನ್‌ ಬ್ರೆಸ್ಟ್‌ ಸ್ಯಾಂಡ್‌ವಿಚ್‌ ಹೀಗೆ ಮಾಡಿ

4. ನೀರ್ ದೋಸೆ

ಕರ್ನಾಟಕ ಕರಾವಳಿ ಭಾಗದ ಅತ್ಯಂತ ಪ್ರಸಿದ್ಧ ಹಾಗೂ ಸಾಂಪ್ರದಾಯಿಕ ತಿನಿಸುಗಳಲ್ಲಿ ನೀರ್ ದೋಸೆಗೆ ಅಗ್ರಸ್ಥಾನ. ಅಕ್ಕಿ ಹಿಟ್ಟು ಹಾಗೂ ತೆಂಗಿನ ತುರಿ (ಆಯ್ಕೆ) ಬಳಸಿ ಅತ್ಯಂತ ಸರಳವಾಗಿ ತಯಾರಿಸಬಹುದಾದ ದೋಸೆ ಇದಾಗಿದೆ. ಅತ್ಯಂತ ತೆಳು ಹಾಗೂ ಮೃದುವಾದ ದೋಸೆಯು ಕಾಯಿ ಚಟ್ನಿ, ಚಿಕನ್ ಸುಕ್ಕಾದ ಜೊತೆಯಲ್ಲಿ ಸವಿಯುವುದೇ ಸ್ವರ್ಗ.

5. ಮಾಲ್ವಾಣಿ ಅಂಬೋಲಿ

ಇದು ಮಹಾರಾಷ್ಟ್ರ ಭಾಗದ ಅತ್ಯಂತ ಜನಪ್ರಿಯ ತಿನಿಸಾಗಿದೆ. ಇದೊಂದು ರೀತಿಯಲ್ಲಿ ಪ್ಯಾನ್‌ ಕೇಕ್‌ ರೀತಿಯಲ್ಲೇ ಇರುತ್ತದೆ. ನಮ್ಮಲ್ಲಿ ಉದ್ದು ಹಾಗೂ ಅಕ್ಕಿಯಿಂದ ಮಾಡುವ ಸೆಟ್ ದೋಸೆ ರೀತಿಯಲ್ಲಿಯೇ ಅಂಬೋಲಿ ಇರುತ್ತದೆ. ಇದನ್ನು ತಯಾರಿಸುವುದು ಸಹ ಬಲು ಸುಲಭ. ಉದ್ದಿನ ಬೇಳೆ ಹಾಗೂ ಅಕ್ಕಿಯನ್ನು ಮೊದಲು ನೆನೆಸಿಕೊಳ್ಳಿ. ಬಳಿಕ ಇದನ್ನು ರುಬ್ಬಿ ರಾತ್ರಿಯಿಡೀ ಹಿಟ್ಟನ್ನು ಹಾಗೆಯೇ ಬಿಡಿ. ಬೆಳಗ್ಗೆ ಇದನ್ನು ಪ್ಯಾನ್‌ಕೇಕ್‌ ಆಕಾರದಲ್ಲಿ ಹೆಂಚಿನ ಮೇಲೆ ಹಾಕಿ ಬೇಯಿಸಿ.

6. ಅಕ್ಕಿ ರೊಟ್ಟಿ

ಇದು ಕೂಡ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸಾಗಿದೆ. ಅಕ್ಕಿ ಹಿಟ್ಟಿಗೆ, ನೀರು, ಉಪ್ಪು, ಈರುಳ್ಳಿ ಸೇರಿದಂತೆ ವಿವಿಧ ಮಸಾಲೆ ಪದಾರ್ಥಗಳನ್ನು ಸೇರಿಸಿ ಬಳಿಕ ಹಿಟ್ಟನ್ನು ಮಿಶ್ರಣ ಮಾಡಬೇಕು. ಈ ಹಿಟ್ಟನ್ನು ಉಂಡೆಯಾಕಾರದಲ್ಲಿ ಮಾಡಿಕೊಂಡು ಬಳಿಕ ಅದನ್ನು ಲಟ್ಟಿಸಿಕೊಂಡು ಕಂದು ಬಣ್ಣಕ್ಕೆ ಬರುವವರೆಗೂ ಬೇಯಿಸಿಕೊಳ್ಳಬೇಕು .

7. ಪಂಕಿ

ಗುಜರಾತ್‌ನ ಮತ್ತೊಂದು ಜನಪ್ರಿಯ ತಿನಿಸುಗಳಲ್ಲಿ ಇದು ಕೂಡ ಒಂದು. ನಿಂಬೆ ರಸ, ಅರಿಶಿಣ ಹಾಗೂ ಕೊತ್ತಂಬರಿ ಸೊಪ್ಪನ್ನು ಅಕ್ಕಿ ಹಿಟ್ಟಿಗೆ ಸೇರಿಸುವ ಮೂಲಕ ತೆಳುವಾದ, ಮೃದುವಾದ ವಿನ್ಯಾಸದ ಪಾಂಕಿಗಳನ್ನು ತಯಾರಿಸಲಾಗುತ್ತದೆ. ಇದೊಂದು ರೀತಿಯ ಆಮ್ಲೀಯ ಸುವಾಸನೆಯನ್ನು ಹೊಂದಿರುವ ಭಕ್ಷ್ಯವಾಗಿದೆ. ರುಚಿಕರವಾಗಿ ಇರುವ ಪಂಕಿಯು ಆರೋಗ್ಯಕ್ಕೂ ಒಳ್ಳೆಯದು.

8. ಒತ್ತು ಶ್ಯಾವಿಗೆ

ದಕ್ಷಿಣ ಭಾರತದ, ಅದರಲ್ಲೂ ಕರ್ನಾಟಕದ ಕರಾವಳಿ ಭಾಗದಲ್ಲಿ ಉನ್ನತ ಸ್ಥಾನಮಾನ ಪಡೆದಿರುವ ಮತ್ತೊಂದು ಸವಿಯಾದ ಆಹಾರ ಒತ್ತು ಶ್ಯಾವಿಗೆ. ಇದು ಕೇರಳ ಹಾಗೂ ತಮಿಳುನಾಡು ಭಾಗಗಳಲ್ಲಿ ಇಡಿಯಪ್ಪಂ ಎಂದೇ ಜನಪ್ರಿಯ. ಕರಾವಳಿ ಆಡುಭಾಶೆಯಲ್ಲಿ ಶೇಮಿಗೆ ಎಂದೂ ಕರೆಯಲಾಗುತ್ತದೆ. ಮೊದಲಿಗೆ ಅಕ್ಕಿ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ ಹಬೆಯಲ್ಲಿ ಬೇಯಿಸಲಾಗುತ್ತದೆ. ಬಳಿಕ ಶ್ಯಾವಿಗೆ ಯಂತ್ರದಲ್ಲಿ ಇದನ್ನು ಹಾಕಿ ಒತ್ತಿ ತಯಾರಿಸಲಾಗುತ್ತದೆ. ಕಾಯಿ ಹಾಲು ಅಥವಾ ನಾಟಿ ಕೋಳಿ ಸಾರಿನೊಂದಿಗೆ ಸವಿಯಲು ಭಾರಿ ರುಚಿಕರ.

ವಿಭಾಗ