ಕನ್ನಡ ಸುದ್ದಿ  /  Lifestyle  /  Video Editing Application Reels Video Edit Can Be Done With These Apps Including Canva In Shots Arc

Video Editing Apps: ಕ್ಯಾನ್ವಾದಿಂದ ಫಿಲ್ಮೋರಾವರೆಗೆ; ರೀಲ್ಸ್‌, ವೀಡಿಯೊ ಎಡಿಟ್‌ ಮಾಡೋರಿಗೆ ಬೆಸ್ಟ್‌ ಆಪ್‌ಗಳು, ಸಹಾಯವಾಗಬಹುದು ನೋಡಿ

Video Editing Apps: ವೀಡಿಯೊಗಳನ್ನು ಕೇವಲ ಚಿತ್ರೀಕರಿಸಿ ಅದನ್ನು ಹಾಗೆಯೇ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡರೆ ಅದು ಅಷ್ಟೊಂದು ಆಕರ್ಷಕವಾಗಿ ಕಾಣಿಸುವುದಿಲ್ಲ. ಅದರ ಬದಲು ಸ್ವಲ್ಪ ಎಡಿಟ್‌ ಮಾಡಿದರೆ ಆಗ ನೋಡುಗರಿಗೆ ಇಷ್ಟವಾಗುತ್ತದೆ. ನೀವೂ ರೀಲ್ಸ್‌, ವೀಡಿಯೋ ಮಾಡುತ್ತಿದ್ದರೆ ಈ ವೀಡಿಯೊ ಎಡಿಟಿಂಗ್‌ ಆಪ್‌ಗಳ ಬಗ್ಗೆ ತಿಳಿದುಕೊಳ್ಳಿ.

ಬೆಸ್ಟ್‌ ವಿಡಿಯೋ ಎಡಿಟಿಂಗ್‌ ಆಪ್‌ಗಳು
ಬೆಸ್ಟ್‌ ವಿಡಿಯೋ ಎಡಿಟಿಂಗ್‌ ಆಪ್‌ಗಳು (PC: Unsplash)

Video Editing App:ಈಗೇನಿದ್ದರೂ ವೀಡಿಯೊ, ರೀಲ್‌ಗಳದ್ದೇ ಕಾರುಬಾರು. ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮೆಚ್ಚುಗೆ ಗಳಿಸುವುದು ಇತ್ತೀಚಿಗಿನ ಟ್ರೆಂಡ್‌. ಪ್ರವಾಸ, ಪಾರ್ಟಿ, ಮದುವೆ, ಅಡುಗೆ, ನೃತ್ಯ, ಸಂಗೀತ ಹೀಗೆ ಎಲ್ಲಾ ವಿಷಯಗಳ ಮೇಲೂ ಜನರು ವೀಡಿಯೊ ಮಾಡಲು ಮುಂದಾಗುತ್ತಾರೆ. ಇಷ್ಟೇ ರೀಲ್ಸ್‌ ಅಂತೂ ಹೊಸ ಲೋಕವನ್ನೇ ಸೃಷ್ಟಿಸಿದೆ.

ರೀಲ್ಸ್‌ ಮಾಡುವವರೂ ಹೊಸ ಹೊಸ ಕಂಟೆಂಟ್‌ಗಳನ್ನು ಹುಡುಕಿ ತೆಗೆಯುತ್ತಿದ್ದಾರೆ. ವೀಕ್ಷಕರು ಸಹ ಸೋಷಿಯಲ್‌ ಮೀಡಿಯಾದಲ್ಲಿರುವ ರಾಶಿ ರಾಶಿ ರೀಲ್ಸ್‌ಗಳನ್ನು ನೋಡುವುದನ್ನು ಎಂಜಾಯ್‌ ಕೂಡಾ ಮಾಡುತ್ತಿದ್ದಾರೆ. ಸುಮಾರು ಶೇಕಡಾ 91 ರಷ್ಟು ವೀಕ್ಷಕರು ಉತ್ತಮ ವೀಡಿಯೋಗಳನ್ನು ನೋಡುವುದನ್ನೇ ಇಷ್ಟ ಪಡುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ. ಇದರರ್ಥ ಉತ್ತಮ ವೀಡಿಯೊಗಳಿಗೆ ಬಹಳ ಬೇಡಿಕೆಯಿದೆ ಎಂಬುದಾಗಿದೆ. ವೀಡಿಯೊ ಮಾಡಿದರೆ ಸಾಕಾಗುವುದಿಲ್ಲ, ಅದನ್ನು ಎಡಿಟ್‌ ಮಾಡಿ ನೋಡುಗರ ಮೇಲೆ ಪ್ರಭಾವ ಬೀರುವಂತೆ ಮಾಡುವುದು ಬಹಳ ಮುಖ್ಯವಾಗಿದೆ. ರೀಲ್‌ಗಳನ್ನು ಆಕರ್ಷಕವಾಗಿಸುವುದು, ಧ್ವನಿ, ಹಿನ್ನೆಲೆ ಸಂಗೀತ ಸೇರಿಸುವುದು, ಸ್ಪೆಷಲ್‌ ಎಫೆಕ್ಟ್‌ ಕೊಡುವುದು ಇವೆಲ್ಲವೂ ರೀಲ್‌ ಅಥವಾ ವೀಡಿಯೊದ ಭಾಗವೇ ಆಗಿದೆ. ಇವೆಲ್ಲವನ್ನು ಸರಿಯಾದ ಕ್ರಮದಲ್ಲಿ ಮಾಡಿದಾಗ ಮಾತ್ರ ಅದು ಆಕರ್ಷಕವಾಗಿ ಕಂಡು ಮೆಚ್ಚುಗೆ ಗಳಿಸುತ್ತದೆ.

ನೀವೂ ರೀಲ್ಸ್‌, ವೀಡಿಯೊ ಮಾಡಬೇಕೆಂದಿದ್ದರೆ ಅದಕ್ಕೆ ಪೂರಕವಾಗಿ ಎಡಿಟಿಂಗ್‌ ಆಪ್‌ಗಳು ಅವಶ್ಯಕ. ಅವು ನೀವು ಮಾಡಿದ ವೀಡಿಯೋಗಳನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು, ವೈಶಿಷ್ಟ್ಯಗಳನ್ನು ಸೇರಿಸಲು ನಿಮಗೆ ಸಹಾಯ ಮಾಡುತ್ತವೆ. ಕೆಲವು ಎಡಿಟಿಂಗ್‌ ಆಪ್‌ಗಳು ಬಹಳ ಗೊಂದಲದಿಂದ ಕೂಡಿರುತ್ತವೆ. ಇನ್ನು ಕೆಲವು ಜಾಸ್ತಿ ಸ್ಟೊರೇಜ್‌ ತೆಗೆದುಕೊಳ್ಳುತ್ತವೆ. ಹಾಗಾದರೆ ಯಾವ ಆಪ್‌ಗಳನ್ನು ಆಯ್ದುಕೊಂಡರೆ ಬೆಸ್ಟ್‌ ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ನೋಡಿ ನಿಮಗೆ ಸಹಾಯ ಮಾಡುವ 6 ಆಪ್‌ಗಳು.

1) ಕ್ಯಾನ್ವಾ

ಇದು ವೆಬ್‌ ಬೇಸ್ಡ್‌ ಪ್ಲಾಟ್‌ಫಾರ್ಮ್‌ ಆಗಿದೆ. ನೀವು ಇಮೇಜ್‌ ಅಥವಾ ವೀಡಿಯೋಗಳನ್ನು ಡಿಸೈನ್‌ ಮಾಡಬೇಕೆಂದರೆ ಕ್ಯಾನ್ವಾದಷ್ಟು ಉತ್ತಮ ಆಪ್‌ ನಿಮಗೆ ಬೇರೆ ಸಿಗುವುದಿಲ್ಲ. ಇದು ಬಳಕೆದಾರ ಸ್ನೇಹಿ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಆಗಿದೆ. ಇದರಲ್ಲಿ ಯಾರು ಬೇಕಾದರೂ ಸುಲಭವಾಗಿ ಅಕೌಂಟ್‌ ತೆರೆಯಬಹುದು. ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳಿಂದ ಹಿಡಿದು ಡಿಜಿಟಲ್‌ ಮಾರ್ಕೆಟಿಂಗ್‌ವರೆಗಿನ ಕಂಟೆಂಟ್‌ಗಳನ್ನು ಇದರಲ್ಲಿ ರಚಿಸಬಹುದು. ಇಲ್ಲಿರುವ ಟೆಂಪ್ಲೇಟ್‌ಗಳು ಹೊಸಬರಿಗೂ ಸಹ ಫ್ರೆಂಡ್ಲೀ ಆಗಿದೆ. ಇದರಲ್ಲಿ ಹಲವಾರು ಉಚಿತ ವೈಶಿಷ್ಟ್ಯಗಳಿವೆ. ನಿಮ್ಮ ವೀಡಿಯೊ ಎಡಿಟ್‌ ಮಾಡಲು ಇನ್ನಷ್ಟು ಆಪ್ಷನ್‌ಗಳು ಬೇಕೆಂದಾಗ ಅದನ್ನು ದುಡ್ಡು ಕೊಟ್ಟು ಖರೀದಿಸಲೂಬಹುದು.

2) ಮೂವಾವಿ ವೀಡಿಯೋ ಎಡಿಟರ್‌

ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ ಮೂವಾವಿ ವೀಡಿಯೊ ಎಡಿಟರ್‌ನಲ್ಲಿ ಗಮನ ಸೆಳೆಯುವ ವಿನ್ಯಾಸಗಳನ್ನು ಸುಲಭವಾಗಿ ರಚಿಸಬಹುದು. ಸೋಷಿಯಲ್‌ ಮೀಡಿಯಾ ಕಂಟೆಂಟ್‌ ಕ್ರಿಯೇಟರ್‌ಗಳಿಗೆ, ಸುದೀರ್ಘ ವೀಡಿಯೊ ರಚನಾಕಾರರಿಗೆ, ರೆಕಾರ್ಡಿಂಗ್‌ ಮಾಡಲು ಇದು ಉತ್ತಮವಾಗಿದೆ. ಇಲ್ಲಿ ಟೆಂಪ್ಲೇಟ್‌ಗಳು, ಅನಿಮೇಷನ್‌ಗಳು, ಫಿಲ್ಟರ್‌ ಮುಂತಾದ ಹಲವಾರು ವೈಶಿಷ್ಟ್ಯಗಳನ್ನು ಬಳಸಿಕೊಂಡು ವೀಡಿಯೋ ಎಡಿಟ್‌ ಮಾಡಬಹುದಾಗಿದೆ. ಇಲ್ಲಿ ನಿಮ್ಮ ಸ್ಟೋರಿಗಳನ್ನು ಸುಲಭವಾಗಿ ಕಂಫ್ರೆಸ್‌ ಮಾಡಬಹುದು.

3) ಇನ್‌ಶಾಟ್‌

ಇದು ಆಂಡ್ರಾಯ್ಡ್ ಮತ್ತು ಐಓಎಸ್‌ ಬಳಕೆದಾರರ ಜನಪ್ರಿಯ ವೀಡಿಯೊ ಎಡಿಟಿಂಗ್ ಆಪ್‌ ಆಗಿದೆ. ಇದನ್ನು ವಿಶೇಷವಾಗಿ ರೀಲ್‌ ಮತ್ತು ಟಿಕ್‌ಟಾಕ್‌ ನಂತಹ ಸೋಷಿಯಲ್ ಮೀಡಿಯಾ ಕಂಟೆಂಟ್‌ಗಳನ್ನು ಎಡಿಟ್‌ ಮಾಡಲು ಬಳಸಲಾಗುತ್ತದೆ. ಇದರಲ್ಲಿ ಬಳಕೆದಾರು ಅವರ ವೀಡಿಯೊಗಳನ್ನು ಸುಲಭವಾಗಿ ಟ್ರಿಮ್‌ ಮಾಡುವುದು ಮತ್ತು ಬೇರ್ಪಡಿಸಬಹುದು. ಜೊತೆಗೆ ಕ್ಲಿಪಿಂಗ್‌ಗಳನ್ನು ಮರ್ಜ್‌ ಮಾಡಿ ಟ್ರಾನ್ಸಿಷನ್‌ ನೀಡಬಹುದು. ಜೊತೆಗೆ ಕ್ಲಿಪಿಂಗ್‌ಗಳು ಎಷ್ಟು ವೇಗ (ಸ್ಪೀಡ್‌) ಹೊಂದಿರಬೇಕು ಎಂಬುದನ್ನು ಎಡಿಟ್‌ ಮಾಡಬಹುದು. ಇದರಲ್ಲಿ ಸೌಂಡ್‌ ಟ್ರ್ಯಾಕ್‌ ಮತ್ತು ಸ್ಟಿಕರ್‌ಗಳನ್ನು ಸೇರಿಸಿಕೊಳ್ಳಬಹುದು. ಈ ಆಪ್‌ ಬಳಕೆದಾರರಿಗೆ ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಸುಲಭವಾಗಿ ನೀಡಬಲ್ಲದು.

4) ಪಿಕ್ಸ್‌ಆರ್ಟ್‌

ಯೂಸರ್‌ ಫ್ರೆಂಡ್ಲೀ ಆಪ್‌ ಆಗಿರುವ ಪಿಕ್ಸ್‌ಆರ್ಟ್‌ ಬಳಕೆದಾರರು ಸುಲಭವಾಗಿ ವೀಡಿಯೊ, ರೀಲ್‌ಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ನಿರ್ದಿಷ್ಟ ಟೆಂಪ್ಲೇಟ್‌ಗಳು ಇದರಲ್ಲಿರುವುದರಿಂದ ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗಳಿಗೆ ಸರಿ ಹೊಂದುವಂತಹ ರೀಲ್‌ಗಳನ್ನು ರಚಿಸಬಹುದು. ಗ್ರಾಫಿಕ್ಸ್‌ ವಿನ್ಯಾಸದ ಜೊತೆಗೆ ಎಲ್ಲಾ ರೀತಿಯ ಎಡಿಟಿಂಗ್‌ ಟೂಲ್‌ಗಳು ಇದರಲ್ಲಿವೆ. ಬ್ಯಾಗ್ರೌಂಡ್‌ ರೀಮೂವ್‌ ಮಾಡಬಹುದಾದ ವೈಶಿಷ್ಟ್ಯವಿದ್ದು, ಟ್ರಾನ್ಸಿಷನ್‌ ಅನ್ನು ನೀಡಬಹುದಾಗಿದೆ. ಮೀಡಿಯಾ ಲೈಬ್ರರಿ ಇರುವುದರಿಂದ ರಚನಾಕಾರರು ಮೋಜಿನ ಸ್ಟಿಕ್ಕರ್‌ಗಳನ್ನು (ಎಮೋಜಿ) ಬಳಸಿಕೊಳ್ಳಬಹುದಾಗಿದೆ.

5) ಎನಿಮೊಟೊ

ಇದನ್ನು ವೀಡಿಯೊ ಎಡಿಟಿಂಗ್‌ ಹಬ್‌ ಎಂದು ಕರೆಯಲಾಗುತ್ತದೆ. ಇದರಲ್ಲಿ ಅತಿ ವೇಗದಲ್ಲಿ ವಿಡಿಯೋಗಳನ್ನು ವಿನ್ಯಾಸ ಮಾಡಬಹುದಾಗಿದೆ. ಇದರಿಂದಾಗಿ ಸಮಯ ಉಳಿಸಬಹುದಾಗಿದೆ. ಎನಿಮೊಟೊ ಎಲ್ಲಾ ರೀತಿಯ ವೀಡಿಯೊ ಎಡಿಟಿಂಗ್‌ ಮಾಡಲು ಅವಶ್ಯಕವಿರುವ ಟೂಲ್‌ಗಳನ್ನು ಒಳಗೊಂಡಿದೆ. ಟ್ರಾನ್ಸಿಷನ್‌, ವೈಸ್‌ಓವರ್‌ನಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ಸುಲಭವಾಗಿ ಬಳಸಬಹುದಾಗಿದೆ. ಡಿಸೈನ್‌ ಮತ್ತು ವೀಡಿಯೊ ಸ್ಟೈಲಿಂಗ್‌ಗೆ ಡ್ರಾಗ್‌ ಆಂಡ್‌ ಡ್ರಾಪ್‌ ಸೌಲಭ್ಯವಿದೆ. ವೀಡಿಯೊವನ್ನು ನಿಮ್ಮಿಷ್ಟದ ಪ್ರಕಾರ ಕ್ರಾಪ್‌ ಮತ್ತು ಟ್ರಿಮ್‌ ಮಾಡಲು ಅವಕಾಶ ನೀಡುತ್ತದೆ. ಇದು ವೆಬ್‌ ಬೇಸ್ಡ್‌ ಪ್ಲಾಟ್‌ಫಾರ್ಮ್‌ ಆಗಿರುವುದರಿಂದ ಎಡಿಟಿಂಗ್‌ಗೆ ಸುಲಭವಾಗಿದೆ.

6) ಫಿಲ್ಮೋರಾ

ಈ ವೀಡಿಯೊ ಎಡಿಟಿಂಗ್‌ ಆಪ್‌ ಸೋಷಿಯಲ್‌ ಮೀಡಿಯಾಕ್ಕೆ ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದರಲ್ಲಿ ಆಕರ್ಷಕ ಟೆಂಪ್ಲೇಟ್‌ಗಳಿದ್ದು ರೀಲ್‌ ಅಥವಾ ವೀಡಿಯೊಗಳಿಗೆ ತಕ್ಕಂತೆ ಹೊಂದಿಸಿಕೊಳ್ಳಬಹುದಾಗಿದೆ. ಇದರಲ್ಲಿ ಆಟೋಮೆಟಿಕ್‌ ಎಡಿಟಿಂಗ್‌ ವೈಶಿಷ್ಟ್ಯಗಳು, ಎಐ ತಂತ್ರಜ್ಞಾನಗಳನ್ನು ಬೆಂಬಲಿಸುತ್ತದೆ. ಉತ್ತಮ ಸಂಗೀತ ಮತ್ತು ಪ್ರೀ ಸ್ಟಾಕ್‌ ಇಮೇಜ್‌ಗಳನ್ನು ಇದರಲ್ಲಿ ಕಾಣಬಹುದಾಗಿದೆ.