Viral Video: ಚರಂಡಿಯಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಿಸಿದ ಮಕ್ಕಳು; ಮಾನವೀಯತೆ ಇಂದಿಗೂ ಜೀವಂತವಾಗಿದೆ ಎಂದ ನೆಟ್ಟಿಗರು; ವಿಡಿಯೊ ವೈರಲ್‌
ಕನ್ನಡ ಸುದ್ದಿ  /  ಜೀವನಶೈಲಿ  /  Viral Video: ಚರಂಡಿಯಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಿಸಿದ ಮಕ್ಕಳು; ಮಾನವೀಯತೆ ಇಂದಿಗೂ ಜೀವಂತವಾಗಿದೆ ಎಂದ ನೆಟ್ಟಿಗರು; ವಿಡಿಯೊ ವೈರಲ್‌

Viral Video: ಚರಂಡಿಯಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಿಸಿದ ಮಕ್ಕಳು; ಮಾನವೀಯತೆ ಇಂದಿಗೂ ಜೀವಂತವಾಗಿದೆ ಎಂದ ನೆಟ್ಟಿಗರು; ವಿಡಿಯೊ ವೈರಲ್‌

ಚರಂಡಿಯಲ್ಲಿ ಸಿಲುಕಿದ್ದ ನಾಯಿಯೊಂದನ್ನು ಮಕ್ಕಳಿಬ್ಬರು ರಕ್ಷಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ ಮಕ್ಕಳ ಈ ಮಾನವೀಯ ಗುಣಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ.

ಚರಂಡಿಯಲ್ಲಿ ಸಿಲುಕಿರುವ ನಾಯಿಯನ್ನು ರಕ್ಷಿಸುತ್ತಿರುವ ಮಕ್ಕಳು
ಚರಂಡಿಯಲ್ಲಿ ಸಿಲುಕಿರುವ ನಾಯಿಯನ್ನು ರಕ್ಷಿಸುತ್ತಿರುವ ಮಕ್ಕಳು

ಇತ್ತೀಚೆಗೆ ಮಾನವೀಯ, ಮನುಷ್ಯತ್ವ ಎನ್ನುವುದು ಮರೆಯಾಗುತ್ತಿರುವುದು ಸುಳ್ಳಲ್ಲ. ಜನರು ಮೃಗಗಳಂತೆ ವರ್ತಿಸುತ್ತಿದ್ದಾರೆ. ಇನ್ನು ಪ್ರಾಣಿಗಳ ವಿಚಾರದಲ್ಲಿ ಮನುಷ್ಯನ ವರ್ತನೆ ವಿಚಿತ್ರ ಎನ್ನಬಹುದು. ಒಂದಿಷ್ಟು ಮಂದಿ ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸಿದರೆ ಇನ್ನೊಂದಿಷ್ಟು ಮಂದಿ ಪ್ರಾಣಿಗಳಿಗೆ ಹಿಂಸೆ ನೀಡುವುದರಲ್ಲಿ ವಿಕೃತ ಸಂತೋಷ ಕಾಣುತ್ತಾರೆ. ನಾಯಿಗಳಿಗೆ ಕಂಡಲ್ಲಿ ಕಲ್ಲು ಹೊಡೆಯುವುದು, ಬೆಕ್ಕುಗಳಿಗೆ ನೋವು ಮಾಡುವುದು, ಪ್ರಾಣಿಗಳಿಗೆ ವಿಷ ಉಣಿಸುವುದು ಹೀಗೆ ವಿಚಿತ್ರ ವರ್ತನೆ ತೋರುವವರು ಇದ್ದಾರೆ. ಆನೆಗೆ ಆಹಾರದೊಂದಿಗೆ ಸಿಡಿಮದ್ದು ಇರಿಸಿದಂತಹ ವಿಕೃತ ಮನೋಭಾವದ ಜನರನ್ನು ನಾವು ನೋಡಿದ್ದೇವೆ.

ಆದರೆ ಅವೆಲ್ಲದರ ನಡುವೆ ಇಲ್ಲಿಬ್ಬರು ಮಕ್ಕಳು ಮಾನವೀಯತೆಯ ಪ್ರತಿರೂಪದಂತೆ ನಮಗೆ ಕಾಣಿಸುತ್ತಾರೆ. ಚರಂಡಿಯಲ್ಲಿ ಸಿಲುಕಿರುವ ನಾಯಿಯನ್ನು ರಕ್ಷಿಸುತ್ತಿರುವ ಈ ಮಕ್ಕಳ ವಿಡಿಯೊ ಈಗ ಟ್ವಿಟರ್‌ನಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಹರಿಯುತ್ತಿರುವ ಕೊಳಕು ನೀರಿನಲ್ಲೇ ನಾಯಿಯ ಬಳಿಗೆ ಸಾಗುವ ಮಕ್ಕಳು ಚರಂಡಿಯ ಸಂಧಿಯಲ್ಲಿ ಭಯದಿಂದ ಸಿಲುಕಿಕೊಂಡಿರುವ ನಾಯಿಯನ್ನು ತಬ್ಬಿ ಹಿಡಿದುಕೊಂಡು ಆಚೆ ತರುತ್ತಿರುವ ವಿಡಿಯೊ ಎಂತಹವರನ್ನೂ ಗಮನ ಸೆಳೆಯುವಂತಿದೆ.

ಈ ವಿಡಿಯೊವನ್ನು ನೇಹಾ ಯಾದವ್‌ ಎಂಬ ಟ್ವಿಟರ್‌ ಬಳಕೆದಾರರು ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ನೊಂದಿಗೆ ʼಮಾನವೀಯತೆ ಇಂದಿಗೂ ಜೀವಂತವಾಗಿದೆ. ಬಹುಶಃ ಇದನ್ನು ನಾವು ಪುಸ್ತಕಗಳಿಂದ ಪಡೆಯಲು ಸಾಧ್ಯವಿಲ್ಲ. ಈ ಮಕ್ಕಳು ಇದನ್ನು ನಮಗೆ ಕಲಿಸಿದ್ದಾರೆ. ಮಕ್ಕಳಿಗೆ ಇಂತಹ ಸಂಸ್ಕಾರ ಕಲಿಸಿದ ತಂದೆ ತಾಯಿಗಳು ನಿಜಕ್ಕೂ ಧನ್ಯರುʼ ಎಂದು ಬರೆದುಕೊಂಡಿದ್ದಾರೆ. ಈ ವೇಳೆ ಆಕೆ ತಮ್ಮ ಪೋಸ್ಟ್‌ ಜೊತೆಗೆ ಮಣಿಪುರ ಘಟನೆ, ಹರ್ಮತ್‌ ಪ್ರೀತ್‌ ಕೌರ್‌ ಅವರನ್ನೂ ಟ್ಯಾಗ್‌ ಮಾಡಿರುವುದನ್ನು ಗಮನಿಸಬಹುದಾಗಿದೆ.

ವಿಡಿಯೊದಲ್ಲಿ ಏನಿದೆ?

ವಿಡಿಯೊ ಆರಂಭದಲ್ಲಿ ನಾಯಿಯೊಂದು ಚರಂಡಿಯ ಇನ್ನೊಂದು ತುದಿಯ ಸಂಧಿಯಲ್ಲಿ ಸಿಕ್ಕಿಕೊಂಡು ಹೊರ ಬರಲಾಗದೇ ಒದ್ದಾಡುವುದನ್ನು ಗಮನಿಸಬಹುದು. ಇದನ್ನು ಗಮನಿಸಿದ ಇಬ್ಬರು ಚರಂಡಿಯ ಕೊಳಕು ನೀರನ್ನು ಗಮನಿಸಿದೇ ಆ ನೀರಿನಲ್ಲೇ ನಾಯಿಯ ಬಳಿಗೆ ಸಾಗಿ ನಾಯಿಯನ್ನು ಹಿಡಿದುಕೊಂಡು ಬಂದು ಈಚೆ ದಡಕ್ಕೆ ಬಿಡುತ್ತಾರೆ. ಇಬ್ಬರಲ್ಲಿ ಒಬ್ಬ ಹುಡುಗ ನಾಯಿಯನ್ನು ತಬ್ಬಿಕೊಂಡೇ ಬರುವುದನ್ನು ಗಮನಿಸಬಹುದಾಗಿದೆ.

ಇಂದು ಬೆಳಿಗ್ಗೆ (ಜುಲೈ 24) 10.13ಕ್ಕೆ ಈ ವಿಡಿಯೊವನ್ನು ನೇಹಾ ಯಾದವ್‌ ಪೋಸ್ಟ್‌ ಮಾಡಿದ್ದರು. ಈಗಾಗಲೇ 18 ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೊವನ್ನು ವೀಕ್ಷಿಸಿದ್ದಾರೆ. 120ಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದು 19 ಮಂದಿ ರೀ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ನೋಡಿ

Viral Video: ಕಂದಕದಿಂದ ರಕ್ಷಿಸಿದ ಸಿಬ್ಬಂದಿಗೆ ಮುದ್ದಾಗಿ ಧನ್ಯವಾದ ಹೇಳಿದ ಆನೆಮರಿ; ವೈರಲ್‌ ಆಯ್ತು ಹೃದಯಸ್ಪರ್ಶಿ ವಿಡಿಯೊ

ಪ್ರಾಣಿಗಳನ್ನು ಅದರಲ್ಲೂ ತೀರಾ ಅಪಾಯದಲ್ಲಿ ಸಿಲುಕಿರುವ ಪುಟ್ಟ ಪುಟ್ಟ ಪ್ರಾಣಿ, ಪಕ್ಷಿಗಳನ್ನು ರಕ್ಷಿಸುವ ವಿಡಿಯೊಗಳು, ಫೋಟೊಗಳನ್ನು ನೋಡಿದಾಗ ಹೃದಯ ಕಲುಕದೇ ಇರದು. ಇಂತಹ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನೋಡುತ್ತಿರುತ್ತೇವೆ. ಈಗ ಅಂತಹದ್ದೇ ವಿಡಿಯೊವೊಂದು ವೈರಲ್‌ ಆಗುತ್ತಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ನೋಡಿ ನಿಮ್ಮ ಮುಖದಲ್ಲಿ ನೆಮ್ಮದಿ ನಗು ಮೂಡುವುದರಲ್ಲಿ ಎರಡು ಮಾತಿಲ್ಲ. ಕಂದಕಕ್ಕೆ ಬಿದ್ದ ಮುದ್ದಾದ ಪುಟ್ಟ ಆನೆಯೊಂದು ತನ್ನನ್ನು ರಕ್ಷಿಸಿದ ಮೇಲೆ ಹೇಗೆ ಪ್ರತಿಕ್ರಯಿಸುತ್ತದೆ ಎಂಬುದನ್ನು ನೋಡಲು ನೀವು ಈ ವಿಡಿಯೊವನ್ನು ನೋಡಲೇಬೇಕು. ಆ ಆನೆ ಮರಿಯ ಪ್ರತಿಕ್ರಿಯೆ ನಿಜಕ್ಕೂ ಅದ್ಭುತ ಎನ್ನಿಸುವುದರಲ್ಲಿ ಎರಡು ಮಾತಿಲ್ಲ. ಇದು ನಿಮ್ಮ ಹೃದಯವನ್ನು ಅರಳುವಂತೆ ಮಾಡುತ್ತದೆ.

Whats_app_banner