ಕನ್ನಡ ಸುದ್ದಿ  /  Lifestyle  /  Viral News Food Rainbow Panipuri From A Street Vendor In Gujarat For Chats Lovers Social Media Viral Bgy

ಗುಜರಾತ್‌ನ ಬೀದಿಬದಿ ವ್ಯಾಪಾರಿ ತಯಾರಿಸಿದ್ರು ಡಿಫ್ರೆಂಟ್‌ ಪಾನಿಪುರಿ: ರೈನ್‌ಬೋ ಪಾನಿಪುರಿಗೆ ಮನಸೋತ ಚಾಟ್ಸ್ ಪ್ರಿಯರು

ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ಕಾಮನಬಿಲ್ಲಿನ ಬಣ್ಣದ ಪಾನಿಪುರಿಗಳನ್ನು ನೀವು ನೋಡಿದ್ದೀರಾ? ಟೇಸ್ಟ್‌ ಮಾಡಿದ್ದೀರಾ.? ಗುಜರಾತ್‌ನಲ್ಲಿ ಮೊದಲ ಬಾರಿಗೆ ಪ್ರಾರಂಭವಾಗಿರುವ ಈ ʼರೈನ್‌ಬೋ ಪಾನಿಪುರಿʼ ಕೆಮಿಕಲ್‌ ಮುಕ್ತವಾಗಿ ಬರಿಯ ಹಣ್ಣು ತರಕಾರಿಗಳ ರಸದಿಂದ ತಯಾರಾಗಿದ್ದು, ದೇಶ ತುಂಬಾ ಚಾಟ್ಸ್‌ ಪ್ರಿಯರ ನಿದ್ದೆ ಕೆಡಿಸಿದೆ.

ಗುಜರಾತ್‌ನ ಬೀದಿಬದಿ ವ್ಯಾಪಾರಿ ತಯಾರಿಸಿದ್ರು ಡಿಫ್ರೆಂಟ್‌ ಪಾನಿಪುರಿ
ಗುಜರಾತ್‌ನ ಬೀದಿಬದಿ ವ್ಯಾಪಾರಿ ತಯಾರಿಸಿದ್ರು ಡಿಫ್ರೆಂಟ್‌ ಪಾನಿಪುರಿ ( Instagram /wander_eater_)

ಪಾನಿಪುರಿ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಳೆಗಾಲ, ಚಳಿಗಾಲ ಇಲ್ಲವೇ ಬೇಸಿಗೆ ಕಾಲದಲ್ಲೂ ಸಹ ಸಂಜೆಯಾಗುತ್ತಲೇ ಆಹಾರಪ್ರಿಯರು ಚಾಟ್ಸ್‌ ಸೆಂಟರ್‌ಗಳತ್ತ ಪಾನಿಪುರಿಗಾಗಿ ಹೋಗುವುದಂತೂ ಖಚಿತ. ಒಂದೇ ಜಾಗದಲ್ಲಿ ಹಲವು ರುಚಿಯ ಪಾನಿಪುರಿ ಸಿಗುವ ಈ ಕಾಲದಲ್ಲಂತೂ ರಾಜ್ಯಗಳ ಗಡಿ ದಾಟಿದರೆ ಕೇಳಬೇಕೆ, ಬಾಯಿಯಲ್ಲಿ ನೀರು ತರಿಸುವಷ್ಟು ವೈವಿಧ್ಯಮಯ ಪಾರಿಪುರಿಗಳು ಚಾಟ್ಸ್‌ ಪ್ರಿಯರಿಗೆ ಲಭ್ಯವಾಗುತ್ತದೆ.

ಭಾರತದ ಉತ್ತರ ಭಾಗದಲ್ಲಿ ಪಾನಿಪುರಿಗೆ ಹೆಚ್ಚಿನ ಬೇಡಿಕೆಯಿದೆ. ಈ ಕಾರಣಕ್ಕಾಗಿಯೇ ವ್ಯಾಪಾರಿಗಳು ಪಾನಿಪುರಿಯಲ್ಲಿ ಹೊಸತನಗಳನ್ನು ತರುವ ಯತ್ನವನ್ನು ಆಗಾಗ ಮಾಡುತ್ತಲೇ ಇರುತ್ತಾರೆ. ಅಂತಹ ಪ್ರಯತ್ನಗಳಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಬೀದಿ ವ್ಯಾಪಾರಿಯೊಬ್ಬರು ಯಶಸ್ಸು ಕಂಡಿದ್ದಾರೆ. ಇವರು ಮಾಡಿರುವ ʼಕಾಮನಬಿಲ್ಲಿನ ಪಾನಿಪುರಿʼ ಸದ್ಯ ಭಾರೀ ಬೇಡಿಕೆಯನ್ನು ಹೊಂದಿದೆ. Instagram ನಲ್ಲಿ @wander_eater_ ಎಂಬ ಖಾತೆಯಲ್ಲಿ ʼಕಾಮನಬಿಲ್ಲಿನ ಪಾನಿಪುರಿʼಯ ಬಗೆಗಿನ ವಿಡಿಯೊ ಪೋಸ್ಟ್‌ ಆಗಿದ್ದು, ಸಾಕಷ್ಟು ವೈರಲ್‌ ಆಗಿದೆ.

ಕಾಮನಬಿಲ್ಲಿನ ಪಾನಿಪುರಿಯಲ್ಲಿದೆ ನೈಸರ್ಗಿಕ ಬಣ್ಣಗಳು

ಸಾಮಾನ್ಯ ಪಾನಿಪುರಿಯ ಬಣ್ಣಕ್ಕಿಂತ ವಿಭಿನ್ನವಾಗಿ ಗುಲಾಬಿ, ನೇರಳೆ, ಹಳದಿ ಸೇರಿದಂತೆ ಕಾಮನಬಿಲ್ಲಿನ ಏಳು ಬಣ್ಣಗಳ ಪಾನಿಪುರಿಗಳು ರುಚಿಕರವಾದ ಟೇಸ್ಟ್‌ನಲ್ಲಿ ಚಾಟ್ಸ್‌ ಪ್ರಿಯರಿಗಾಗಿ ಲಭ್ಯವಿದ್ದು, ವಿಡಿಯೊ ನೋಡಿದ ಎಲ್ಲರನ್ನೂ ಬೆರಗಾಗುವಂತೆ ಮಾಡಿದೆ. ಬಣ್ಣಗಳಲ್ಲಿ ಪಾನಿಪುರಿ ಲಭ್ಯವಿದೆಯೆಂದರೆ, ವಿಷಕಾರಿ ಬಣ್ಣಗಳ ಬಳಕೆ ಮಾಡಲಾಗಿದೆಯೇ ಎಂದು ನೀವು ಚಿಂತಿಸಬೇಕಿಲ್ಲ. ಯಾಕೆಂದರೆ ಯಾವುದೇ ಕೆಮಿಕಲ್‌ ಇಲ್ಲವೇ ವಿಷಕಾರಿ ಬಣ್ಣಗಳ ಬಳಕೆ ಮಾಡದೆಯೇ ಈ ಕಾಮನಬಿಲ್ಲಿನ ಪಾನಿಪುರಿಗಳನ್ನು ತಯಾರಿಸಲಾಗುತ್ತಿದ್ದು, ಬಣ್ಣಗಳನ್ನು ನೀಡುವುದಕ್ಕಾಗಿ ಬೀಟ್ರೂಟ್‌, ಅರಿಶಿನ, ಬ್ಲ್ಯಾಕ್‌ಬೆರಿ ಸೇರಿ ಅನೇಕ ಹಣ್ಣು ತರಕಾರಿಗಳನ್ನು ಬಳಕೆ ಮಾಡಿರುವುದಾಗಿ ವಿಡಿಯೊದಲ್ಲಿ ಖುದ್ದು ವ್ಯಾಪಾರಿ ಹೇಳಿಕೊಂಡಿದ್ದಾರೆ.

ಪಾನಿಯ ರುಚಿ ಹೆಚ್ಚಿಸುವ ಪುದಿನಾ, ಪಾಲಕ್‌ ಪ್ಯೂರಿ

ಪಾನಿಪುರಿಯ ರುಚಿಯನ್ನು ಮತ್ತಷ್ಟು ಹೆಚ್ಚಿಗೆ ಮಾಡುವಲ್ಲಿ ಪಾನಿಯ ಪಾತ್ರವೂ ಮಹತ್ವದ್ದೇ ಆಗಿದೆ. ನಾಲಿಗೆ ಚುರ್‌ ಎನ್ನುವ ಖಾರ ಖಾರವಾದ ಪಾನಿ ಪಾತ್ರವಲ್ಲದೇ ಸಾಕಪ್ಪಾ ತಿನ್ನೋದಿಕ್ಕೆ ಕಷ್ಟವಾಗುತ್ತಿದೆ ಎನ್ನುವವರಿಗಾಗಿ ಸಿಹಿ ರುಚಿಯ ಪಾನಿಯೂ ಇಲ್ಲಿ ಸಿಗುತ್ತದೆ. ಪಾಲಕ್‌ ಹಾಗೂ ಪುದಿನಾ ಪ್ಯೂರಿಯನ್ನು ಪಾನಿಯಲ್ಲಿ ಬಳಕೆ ಮಾಡಿದ್ದು, ಅದರ ರುಚಿಗೆ ಸಾಟಿಯೇ ಇಲ್ಲ.

ಗುಜರಾತ್‌ನಲ್ಲಿ ʻರೈನ್‌ಬೋ ಪಾನಿಪುರಿʼ ಸಿಗುವುದೆಲ್ಲಿ?

ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸರ್ದಾರ್ ಚೌಕ್‌ನ ಬೀದಿಗಳಲ್ಲಿ ಹಾಗೇ ಒಮ್ಮೆ ಸುತ್ತಾಡಿದರೆ ಸಾಕು, ರೈನ್‌ಬೋ ಪಾನಿಪುರಿ ಸ್ಟಾಲ್‌ ನಮ್ಮನ್ನ ಕೈಬೀಸಿ ಕರೆಯುತ್ತದೆ. ಆದರೆ ಬರಿಯ ಶನಿವಾರ ಮತ್ತು ಭಾನುವಾರದಂದು ಸಂಜೆ 4 ರಿಂದ 8 ರವರೆಗೆ ಮಾತ್ರ ಈ ವಿಶೇಷ ಬಗೆಯ ಪಾನಿಪುರಯನ್ನು ಇಲ್ಲಿ ನೀವು ಟೇಸ್ಟ್‌ ಮಾಡಬಹುದು. ಪ್ಲೇಟ್‌ನಲ್ಲಿ ತುಂಬಿಕೊಂಡ ಏಳು ಬಣ್ಣಗಳ ಪಾನಿಪುರಿಗಾಗಿ ಎಷ್ಟು ಹಣ ಕೇಳ್ತಾರೋ ಅಂತ ಚಿಂತಿಸಬೇಕಾಗಿಯೂ ಇಲ್ಲ. ಯಾಕೆಂದರೆ ಪ್ಲೇಟ್‌ ಒಂದಕ್ಕೆ ಬರೀ 20 ರೂಪಾಯಿಗಳಿದ್ದು, ರುಚಿಕರ ಹಾಗೂ ಬಣ್ಣಗಳಿಂದ ಕೂಡಿದ ಕಾಮನಬಿಲ್ಲಿನ ಪಾನಿಪುರಿಗಳು ನಿಮ್ಮ ಹೊಟ್ಟೆ ಸೇರಲಿವೆ.

ಇದೀಗ ಕಾಮನಬಿಲ್ಲಿನ ಪಾನಿಪುರಿಯ ಕುರಿತಾದ ಈ ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ವರ್ಣರಂಜಿತ ಪಾನಿಪುರಿಗಳ ನೋಡಿ, ʼಇದೊಂದು ವಿಶಿಷ್ಟ ಪರಿಕಲ್ಪನೆʼ ಎಂಬುದಾಗಿ ಹಾಡಿ ಹೊಗಳಿದ್ದಾರೆ. ಇನ್ನೂ ಕೆಲವರಂತೂ ʼಪಾನಿ ಪುರಿಯನ್ನು ಸರಳವಾಗಿ ಇರಿಸಿ. ಇಷ್ಟೆಲ್ಲಾ ವೈವಿಧ್ಯಗಳನ್ನು ತರಬೇಡಿʼ ಎಂದು ಸಾಂಪ್ರದಾಯಿಕ ಪಾನಿಪುರಿಗೆ ಆದ್ಯತೆ ನೀಡುವುದಾಗಿ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಗುಜರಾತ್‌ನಲ್ಲಿ ಬಹು ಬೇಡಿಕೆಯನ್ನು ಹೊಂದಿರುವ ಕಾಮನಬಿಲ್ಲಿನ ಬಣ್ಣಗಳ ಪಾನಿಪುರಿಗಳಂತೂ ದೇಶದೆಲ್ಲೆಡೆ ಸದ್ಯ ಎಲ್ಲರ ಗಮನ ಸೆಳೆದಿದೆ. ಬೀದಿಬದಿಯ ಗಾಡಿಗಳಲ್ಲೋ, ಇನ್ಯಾವುದೋ ಅಂಗಡಿಗಳಲ್ಲಿ ಕುಳಿತು ಪಾನಿಪುರಿಯನ್ನು ಸವಿಯಲು ಬೇಸರ ಅಂತ ಮನೆಯಲ್ಲೇ ಪಾನಿಪುರಿ ಮಾಡುವ ಮಂದಿ ಸಿಂಪಲ್‌ ಹಾಗೂ ಹೆಲ್ದಿಯಾಗಿರುವ ಈ ಕಲರ್‌ ಫುಲ್‌ ಪಾನಿಪುರಿಯನ್ನೂ ಒಮ್ಮೆ ತಯಾರಿಸಿ ನೋಡಿ..ಖಂಡಿತವಾಗ್ಲೂ ವಿಭಿನ್ನ ರುಚಿಯನ್ನು ನೀಡುವುದರ ಜೊತೆಗೆ ನಾರ್ಮಲ್‌ ಪಾನಿಪುರಿಯನ್ನೇ ಮರೆಸುವಂತೆ ಮಾಡಲೂಬಹುದು. ಏನಂತೀರಾ ?