ವರನಿಗೆ ಡಾನ್ಸ್ ಬರೊಲ್ಲ, ಆದ್ರೂ ವಧು ಬಿಡ್ತಿಲ್ಲ; ಮಂಟಪ ಏರೋಕೆ ಹುಡುಗಿ ತಯಾರೇ ಇಲ್ಲ; ಮದುವೆ ಮನೇಲಿ ಹಿಂಗೂ ಆಗುತ್ತೆ; ವಿಡಿಯೊ ವೈರಲ್
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ಮನೆಯ ವಿಡಿಯೊಗಳು ಹೆಚ್ಚು ಹರಿದಾಡುತ್ತಿವೆ. ಇದನ್ನ ನೋಡಿದಾಗ ಒಮ್ಮೊಮ್ಮೆ ನಗು ಬಂದ್ರು, ಕೆಲವೊಮ್ಮೆ ಇದೇನಪ್ಪಾ ಇದು ಹಿಂಗಾಯ್ತು ಅಂತ ಅನ್ನಿಸದೇ ಇರದು. ಇಲ್ಲಿ ಅಂತಹದ್ದೇ ಎರಡು ವಿಡಿಯೊಗಳಿವೆ. ಒಂದ್ರಲ್ಲಿ ವರನ ಅವಾಂತರವಾದ್ರೆ, ಇನ್ನೊಂದ್ರಲ್ಲಿ ಹುಡುಗಿ ಮಾಡಿದ್ದೇ ಬೇರೆ, ಏನಿದು ಕಥೆ ನೋಡಿ.

ಭಾರತದಲ್ಲಿ ಮದುವೆ ಎಂದರೆ ಸಂಭ್ರಮ, ಮೂರ್ನಾಲ್ಕು ದಿನಗಳ ಕಾಲ ನಡೆಯುವ ಕಾರ್ಯಕ್ರಮ. ತಮ್ಮ ಮದುವೆಯ ಬಗ್ಗೆ ಹಲವರು ಕನಸು ಕಾಣುವುದು ಸಹಜ. ಮದುವೆಯ ದಿನ ಯಾವ ಬಟ್ಟೆ ಧರಿಸಬೇಕು, ಯಾವ ರೀತಿ ಮೇಕಪ್ ಮಾಡಿಕೊಳ್ಳಬೇಕು ಎನ್ನುವುದರಿಂದ ಹಿಡಿದು ಯಾವ ಹಾಡಿಗೆ ಡಾನ್ಸ್ ಮಾಡಬೇಕು ಎನ್ನುವವರೆಗೆ ಮುಂಚೆಯೇ ಎಲ್ಲವನ್ನೂ ಪ್ಲಾನ್ ಮಾಡುತ್ತಿರುತ್ತಾರೆ. ಇಷ್ಟೇ ಅಲ್ಲ ಮದುವೆ ದಿನ ತಮ್ಮ ಸಂಗಾತಿಯೂ ತಮ್ಮೊಂದಿಗೆ ಹೆಜ್ಜೆ ಹಾಕಬೇಕು ಅಂತ ಬಯಸ್ತಾರೆ. ಆದ್ರೆ ಏನ್ ಮಾಡೋದು ಗುರು, ನಾವು ಬಯಸಿದ್ದೆಲ್ಲಾ ನಮಗೆ ಸಿಗುತ್ತಾ, ಖಂಡಿತ ಇಲ್ಲ. ಹಂಗೆ ಮದುವೆ ಮನೇಲೀ ನಿಮ್ ಜೊತೆಗೆ ನಿಮ್ ಜೋಡಿನು ಡಾನ್ಸ್ ಮಾಡ್ಬೇಕು ಅಂದ್ರೆ ಕೆಲವೊಮ್ಮೆ ಇದು ಆಗ್ದೇನೂ ಇರ್ಬಹುದು. ಆಗ ನಿರಾಸೆ ಜೊತೆಗೆ ಕೋಪ ಕೂಡ ಜೊತೆಯಾಗುತ್ತೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮದುವೆ ಮನೆಯ ವಿಡಿಯೊಗಳು ಸಾಕಷ್ಟು ಹರಿದಾಡುತ್ತವೆ, ಇದನ್ನು ನೋಡಿದಾಗ ಆ ಜೋಡಿಗಳ ಬಗ್ಗೆ ಅಯ್ಯೋ ಅನ್ನಿಸೋದು ಮಾತ್ರವಲ್ಲ, ಬಿದ್ದು ಬಿದ್ದು ನಗು ಕೂಡ ಬರುತ್ತೆ. ಕೆಲವೊಮ್ಮೆ ಇಂತಹ ವಿಡಿಯೊಗಳು ನಮ್ಮನ್ನು ಬೆಚ್ಚಿ ಬೀಳಿಸುವಂತೆ ಮಾಡೋದು ಕೂಡ ಉಂಟು.
ಇತ್ತೀಚೆಗೆ ವೈರಲ್ ಆದ ಎರಡು ಮದುವೆ ವಿಡಿಯೊಗಳನ್ನು ನೋಡಿದಾಗ ನಿಮಗೆ ಇದೇನಪ್ಪಾ ಇದು ಹೀಗಾಯ್ತಲ್ಲ ಅಂತ ಅನ್ನಿಸದೇ ಇರದು. ಅಲ್ದೆ ಇದೆಲ್ಲಾ ರೀಲ್ಸ್ ಮಹಿಮೆನಾ ಗುರು ಅಂತಾನೂ ಫೀಲ್ ಆಗುತ್ತೆ.
ವರನ ಕೈ ಹಿಡಿದಿದೆಳೆದ ವಧು
ಎಕ್ಸ್‌ನಲ್ಲಿ ಇತ್ತೀಚಿಗೆ ವೈರಲ್ ಆದ ವಿಡಿಯೊವೊಂದು ಮದುವೆಯ ಪಜೀತಿಯನ್ನು ತೋರಿಸಿದೆ. ಅದರಲ್ಲಿ ವೇದಿಕೆಯ ಮೇಲಿರುವ ವರ, ಕೆಳಗಿರುವ ವಧುವನ್ನು ಕೈಹಿಡಿದು ಮೇಲಕ್ಕೆ ಎಳೆಯುತ್ತಾನೆ. ಆದರೆ ಅದೇನಾಯ್ತೋ ಏನೋ ಕಾಣೆ, ಆಕೆ ಕೋಪದಿಂದ ವರನ ಕೈಯನ್ನು ಹಿಡಿದು ಎಳೆದು ಬಿಡುತ್ತಾಳೆ. ಆ ರಭಸಕ್ಕೆ ವರ ವೇದಿಕೆಯಿಂದ ಕೆಳಗೆ ಬೀಳುತ್ತಾನೆ. ಮತ್ತೆ ವೇದಿಕೆ ಏರುವ ಹುಡುಗ ಹುಡುಗಿಯನ್ನು ಕೈ ಹಿಡಿದು ವೇದಿಕೆಗೆ ಕರೆಯುತ್ತಾನೆ. ಆದ್ರೆ ಬರಲೊಪ್ಪದ ಹುಡುಗಿ ಮದುವೆಯಿಂದ ಹಿಂದಿರುಗಿ ನಡೆದು ಬಿಡುತ್ತಾಳೆ. ಅಷ್ಟಕ್ಕೆ ಈ ವಿಡಿಯೊ ಮುಕ್ತಾಯವಾಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದು ಖಂಡಿತ ಅರ್ಥವಾಗುತ್ತಿಲ್ಲ.
ಈ ವಿಡಿಯೊವನ್ನು ಘರ್ ಕೇ ಕಾಲೇಶ್ ಎನ್ನುವ ಎಕ್ಸ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಫೆ. 14 ರಂದು ಮಾಡಿದ ಈ ಪೋಸ್ಟ್ ಅನ್ನು 3.5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ಲೈಕ್ ಕಾಮೆಂಟ್ ಮಾಡಿದ್ದಾರೆ.
ಡಾನ್ಸ್ ಬರೋಲ್ಲ ಅಂದ್ರು ಬಿಡದ ವಧುವಿಗೆ ವರ ಮಾಡಿದ್ದೇನು
ಮದುವೆ ಮನೆಯ ಇನ್ನೊಂದು ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ವಧು-ವರ ಸೇರಿದಂತೆ ಒಂದಿಷ್ಟು ಮಂದಿ ವೇದಿಕೆಯಲ್ಲಿ ಇರುತ್ತಾರೆ. ವಧು ತನ್ನ ಜೊತೆಗಿದ್ದವರ ಜೊತೆ ಡಾನ್ಸ್ ಮಾಡುತ್ತಿರುತ್ತಾಳೆ. ಅಲ್ಲದೇ ವರನ ಬಳಿಯೂ ಡಾನ್ಸ್ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಅವನು ನನಗೆ ಡಾನ್ಸ್ ಬರುವುದಿಲ್ಲ ಎಂದು ಹಿಂದೆ ಸರಿಯುತ್ತಾನೆ, ಆದರೂ ಬಿಡದ ಆಕೆ ಅವನಿಗೆ ಡಾನ್ಸ್ ಮಾಡುವಂತೆ ಒತ್ತಾಯ ಮಾಡುತ್ತಾಳೆ. ಇದರಿಂದ ಸಿಟ್ಟಿಗೇಳುವ ವರ ಮಾಡಿದ್ದನ್ನು ನೋಡಿದ್ರೆ ನೀವು ನಗದೇ ಇರುವುದಿಲ್ಲ. ಈ ವಿಡಿಯೊವನ್ನು @HasnaZaruriHai ಎಂಬ ಎಕ್ಸ್ ಖಾತೆ ಹೊಂದಿರುವ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಫೆ. 19 ರಂದು ಪೋಸ್ಟ್ ಮಾಡಿರುವ ಈ ವಿಡಿಯೊವನ್ನು ಈಗಾಗಲೇ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕ ಹುಡುಗ ತಪ್ಪಿಲ್ಲ ಬಿಡಿ, ಎಲ್ಲಾ ರೀಲ್ಸ್ ಮಹಿಮೆ ಎಂದು ಕಾಮೆಂಟ್ ಮಾಡಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)
