ಕನ್ನಡ ಸುದ್ದಿ  /  ಜೀವನಶೈಲಿ  /  Viral News: 16000 ಅಡಿ ಎತ್ತರದಲ್ಲಿ ಹಾರುತ್ತಿದ್ದ ಅಲಾಸ್ಕಾ ಏರ್‌ಲೈನ್ಸ್‌ ವಿಮಾನದಿಂದ ಬಿದ್ದ ಐಫೋನ್‌ಗೆ ಏನೂ ಆಗಿಲ್ವಂತೆ

Viral News: 16000 ಅಡಿ ಎತ್ತರದಲ್ಲಿ ಹಾರುತ್ತಿದ್ದ ಅಲಾಸ್ಕಾ ಏರ್‌ಲೈನ್ಸ್‌ ವಿಮಾನದಿಂದ ಬಿದ್ದ ಐಫೋನ್‌ಗೆ ಏನೂ ಆಗಿಲ್ವಂತೆ

ಕಿಚನ್ ಟೇಬಲ್‌ನಿಂದ ಕೆಳಕ್ಕೆ ಬಿದ್ದ ಐಫೋನ್ ಹುಡಿಯಾಗುತ್ತೆ. ಆದರೆ 16,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದಿಂದ ಬಿದ್ದ ಐಫೋನ್‌ಗೆ ಏನೂ ಆಗಿಲ್ಲ… ಇದು ಹೇಗೆ ಸಾಧ್ಯ? ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಭಾರಿ ಚರ್ಚೆ ನಡೆಯುತ್ತಿದೆ.

 ಅಲಾಸ್ಕಾ ವಿಮಾನದಿಂದ ಕೆಳಕ್ಕೆ ಬಿದ್ದದ್ದು ಎನ್ನಲಾದ ಐಫೋನ್‌
ಅಲಾಸ್ಕಾ ವಿಮಾನದಿಂದ ಕೆಳಕ್ಕೆ ಬಿದ್ದದ್ದು ಎನ್ನಲಾದ ಐಫೋನ್‌ (X/@Seanathan Bates)

ಅತ್ಯಂತ ಸಂಕಷ್ಟದ ಸಮಯದಲ್ಲಿ ಕೆಲವೊಂದು ವಿಚಾರಗಳು ಗಮನವನ್ನು ಬೇರೆಡೆ ಸೆಳೆದುಬಿಡುತ್ತವೆ. ಹೊಸ ಆಲೋಚನೆ, ಹೊಸ ಸಾಧ್ಯತೆಗಳ ಕಡೆಗೂ ಆಲೋಚನೆಗಳನ್ನು ಹೊರಳಿಸಿಬಿಡುತ್ತವೆ. ಈ ಪೀಠಿಕೆ ಯಾಕೆ ಎಂದರೆ, ಎಲ್ಲರೂ ಸ್ಮಾರ್ಟ್‌ಫೋನ್, ಐಫೋನ್ ಬಳಸುತ್ತಿರುವ ಕಾಲಘಟ್ಟವಿದು. ಇಂತಹ ಉಪಕರಣಗಳು ನೆಲಕ್ಕೆ ಬಿದ್ದರೆ ಹಾಳಾಗಿ ಬಿಡುತ್ತವೆ. ಅಂಥದ್ದರಲ್ಲಿ 16000 ಅಡಿ ಎತ್ತರದಿಂದ ಐಫೋನ್ ಬಿದ್ದರೆ ಹೇಗಿದ್ದೀತು?

ಟ್ರೆಂಡಿಂಗ್​ ಸುದ್ದಿ

ಪುಡಿಪುಡಿಯಾಗಿರಬಹುದು ಎಂಬ ಉತ್ತರ ಸಹಜವಾಗಿಯೆ ಸಿಕ್ಕೀತು. ಆದರೆ ವಿಶೇಷ ಎಂದರೆ 16000 ಅಡಿ ಎತ್ತರದಿಂದ ಬಿದ್ದ ಐಫೋನ್‌ ಪುಡಿಪುಡಿಯಾಗಿರಲಿಲ್ಲ. ಅದರಲ್ಲಿ ಅರ್ಧ ಚಾರ್ಜ್ ಇತ್ತು. ಈ ವಿಚಾರವನ್ನು ಪೋರ್ಟ್‌ಲ್ಯಾಂಡ್‌ ನಿವಾಸಿ ಸೀನಾಥನ್‌ ಬೇಟ್ಸ್‌ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಐಫೋನ್ 16000 ಅಡಿ ಎತ್ತರಿಂದ ಬಿದ್ದದ್ದು ಹೇಗೆ?: ಅಲಾಸ್ಕಾ ಏರ್‌ಲೈನ್ಸ್ ಬೋಯಿಂಗ್ 737 ವಿಮಾನದ ಕಿಟಕಿ ದಿಢೀರ್ ತೆರೆದುಕೊಂಡು ಕಿತ್ತು ಹೋದ ಕಾರಣ ಅದರ ಪ್ರಯಾಣಿಕರು ಆಘಾತಕ್ಕೆ ಒಳಗಾದ ಘಟನೆ ಜನವರಿ 6ರಂದು ವರದಿಯಾಗಿತ್ತು. ಈ ವಿಮಾನವು ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಿಂದ ಕ್ಯಾಲಿಫೋರ್ನಿಯಾದ ಒಂಟಾರಿಯೋಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿತ್ತು.

ವಿಮಾನದೊಳಗೆ ಆಕಾಶದ ತ್ಯಾಜ್ಯ ಮತ್ತು ಮೈ ನಡುಗಿಸುವ ಕುಳಿರ್‌ಗಾಳಿ ಪ್ರವೇಶಿಸಿದ್ದರಿಂದ ಪ್ರಯಾಣಿಕರು ತತ್ತರಿಸಿ ಹೋಗಿದ್ದರು. ಇದೇ ವೇಳೆ, ವಿಮಾನದೊಳಗೆ ಇದ್ದ ಪ್ರಯಾಣಿಕರ ವಸ್ತುಗಳು ಹೊರಕ್ಕೆ ಜಾರಿದ್ದವು. ಈ ಪೈಕಿ ಒಂದು ಐಫೋನ್‌ ಪೋರ್ಟ್‌ಲ್ಯಾಂಡ್‌ ನಿವಾಸಿ ಸೀನಾಥನ್‌ ಬೇಟ್ಸ್‌ಗೆ ಸಿಕ್ಕಿದೆ.

ಅವರು ಆ ಐಫೋನ್‌ನ ಫೋಟೋ ತೆಗೆದು ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ರಸ್ತೆ ಬದಿಯಲ್ಲಿ ಒಂದು ಐಫೋನ್ ಸಿಕ್ಕಿತು. ಇನ್ನೂ ಅರ್ಧ ಬ್ಯಾಟರಿ ಚಾರ್ಜ್‌ ಇದ್ದು, ಏರೋಪ್ಲೇನ್ ಮೋಡ್‌ನಲ್ಲಿದೆ. AlaskaAirlines ASA1282 ಗಾಗಿ ಬ್ಯಾಗೇಜ್ ಕ್ಲೈಮ್‌ಗೆ ಮುಕ್ತವಾಗಿದೆ ಎಂಬ ಸಂದೇಶವೂ ಇದೆ. ಇದು 16,000 ಅಡಿ ಎತ್ತರದಿಂದ ಬಿದ್ದರೂ ಹಾಗೆಯೇ ಇದೆ!” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸೀನಾಥನ್‌ ಬೇಟ್ಸ್‌ ಅವರು ಎಕ್ಸ್‌ನಲ್ಲಿ ಜನವರಿ 8ರಂದು ಮುಂಜಾನೆ 4.58ಕ್ಕೆ ಈ ಪೋಸ್ಟ್ ಶೇರ್ ಮಾಡಿದ್ದರು. ಕೆಲವೇ ಗಂಟೆಗಳಲ್ಲಿ ಇದಕ್ಕೆ ಭಾರಿ ಸ್ಪಂದನೆ ಸಿಕ್ಕಿದೆ. ಈಗ 80 ಸಾವಿರಕ್ಕೂ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ. 17.1 ಮಿಲಿಯನ್ ವೀಕ್ಷಣೆ ಮತ್ತು 1200ಕ್ಕೂ ಹೆಚ್ಚು ಕಾಮೆಂಟ್ ಗಿಟ್ಟಿಸಿಕೊಂಡಿದೆ. ಐಫೋನ್ ಅಷ್ಟು ಎತ್ತರದಿಂದ ಬಿದ್ದರೂ ಇನ್ನೂ ಸುಸ್ಥಿತಿಯಲ್ಲಿ ಉಳಿದಿರುವುದರ ಬಗ್ಗೆ ಅನೇಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಒಬ್ಬರಂತೂ, “ಅದು ಏರ್‌ಪ್ಲೇನ್‌ ಮೋಡ್‌ನಲ್ಲಿತ್ತಲ್ಲ? ಸಹಜವಾಗಿಯೇ ಅದು ಬಚಾವ್ ಆಗಿದೆ.. ಬೀಳುವಾಗ ಏರ್‌ಪ್ಲೇನ್ ಮೋಡ್ ಅಲ್ದೇ ಬೇರೇನಾದರೂ ಮೋಡ್ ಇದೆಯಾ ಬಚಾವ್ ಆಗೋದಕ್ಕೆ?” ಎಂದು ಹಾಸ್ಯ ಪ್ರಜ್ಞೆ ಮೆರೆದಿದ್ದಾರೆ.

ನನಗೆ ಗೊತ್ತಾಗಬೇಕಾಗಿರೋದು ಇಷ್ಟೆ - ಐಫೋನ್‌ನ ಕೇಸ್ ಮತ್ತು ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಯಾವ ಬ್ರಾಂಡ್‌ನದ್ದು?! ಎಂದು ಇನ್ನೊಬ್ಬರು ಕೇಳಿದ್ದಾರೆ.

ಅರೆ ಇದು ಹೇಗೆ ಸಾಧ್ಯ? ನನ್ನ ಐಫೋನ್ ಕಿಚನ್‌ ಟೇಬಲ್‌ ಮೇಲಿಂದ ಕೆಳಕ್ಕೆ ಬಿದ್ದಿತ್ತು. ಆದರೆ ಆಗ ಅದು ಉಳಿದಿರಲಿಲ್ಲ! ಎಂದು ಮತ್ತೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅದರಲ್ಲಿ ಚಾರ್ಜಿಂಗ್ ಕಾರ್ಡ್‌ನ ತುಂಡು ಇರುವುದನ್ನು ನೋಡಿದೆ ಎಂದು ಇನ್ನೂ ಒಬ್ಬರು ಕಾಮೆಂಟ್ ಮಾಡಿದ್ದಾರೆ.