ಗಡ್ಡ ಬೇಕಾ, ಪ್ರೀತಿ ಬೇಕಾ ಸ್ಲೋಗನ್ ಹಿಡಿದು ಹೋರಾಟಕ್ಕೆ ಇಳಿದ ಯುವತಿಯರು; ಗಡ್ಡಪ್ರಿಯರಿಗೆ ಇದೊಳ್ಳೆ ಪಜೀತಿ; ವಿಡಿಯೊ ವೈರಲ್
ಗಂಡುಮಕ್ಕಳೇ, ಸ್ಟೈಲಾಗಿ ಗಡ್ಡ ಬಿಡೋದು ಇಷ್ಟನಾ, ಹಾಗಾದ್ರೆ ನಿಮಗೆ ಖಂಡಿತ ಹುಡುಗಿ ಸಿಗೋಲ್ಲ. ಇದೇನಪ್ಪಾ ಇದು ಹುಡುಗಿಗೂ ಗಡ್ಡಕ್ಕೂ ಏನು ಸಂಬಂಧ ಅಂತ ಕೇಳ್ತೀರಾ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೊವೊಂದು ಈ ಸಂದೇಶವನ್ನು ಹೇಳ್ತಿದೆ. ಇದರಲ್ಲಿ ಹುಡುಗಿಯರು ಕ್ಲೀನ್ ಶೇವ್ ಮಾಡಿದ ಹುಡುಗರಿಗಾಗಿ ಸ್ಲೋಗನ್ ಹಿಡಿದು ರ‍್ಯಾಲಿ ಮಾಡೋದು ಕಾಣಬಹುದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೊವೊಂದು ಈಗ ಎಲ್ಲರ ಮುಖದಲ್ಲೂ ನಗು ತರಿಸಿದೆ. ಆದರೆ ಈ ವಿಡಿಯೊ ನೋಡಿದ್ರೆ ಗಂಡುಮಕ್ಕಳು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳೋದು ಖಂಡಿತ. ಅದರಲ್ಲೂ ನೀವು ಗಡ್ಡ ಪ್ರೇಮಿಯಾದ್ರೆ ಖಂಡಿತ ‘ಅಯ್ಯೋಯ್ಯೋ ಇದೇನಪ್ಪಾ ಇದು, ಹೀಗೆ, ನಮ್ ಕಥೆ ಹೇಗೆ‘ ಅಂತ ನಿಮಗೆ ಅನ್ನಿಸದೇ ಇರುವುದಿಲ್ಲ. ಹಾಗಾದರೆ ಆ ವಿಡಿಯೊದಲ್ಲಿ ಅಂಥದ್ದೇನಿದೆ ಅಂತೀರಾ. ಮುಂದೆ ಓದಿ.
ಇಂದೋರ್‌ನ ಹುಡುಗಿಯರು ಕ್ಲೀನ್ ಶೇವ್ ಮಾಡಿದ ಹುಡುಗರಿಗಾಗಿ ಡಿಮಾಂಡ್ ಮಾಡುತ್ತಿದ್ದಾರೆ. ಗಡ್ಡ ತೆಗೆಯಿರಿ, ಪ್ರೀತಿ ಉಳಿಸಿಕೊಳ್ಳಿ ಎಂಬ ಸ್ಲೋಗನ್ ಹಿಡಿದು ಬೀದಿಗಳಲ್ಲಿ ರ‍್ಯಾಲಿ ಮಾಡುತ್ತಿದ್ದಾರೆ. ಪ್ರಿ ಪ್ರೆಸ್ ಜರ್ನಲ್ ಈ ರ‍್ಯಾಲಿಯ ಬಗ್ಗೆ ವರದಿ ಮಾಡಿದೆ. ಈ ರ‍್ಯಾಲಿಯಲ್ಲಿ ಹುಡುಗಿಯರು ‘ಗಡ್ಡ ಬೇಕಾ, ಹುಡುಗಿ ಬೇಕಾ ಆಯ್ಕೆ ನಿಮ್ಮದು‘ ಎಂದೆಲ್ಲಾ ಬರೆದಿರುವ ಸ್ಲೋಗನ್ ಹಿಡಿದುಕೊಂಡು ರ‍್ಯಾಲಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಡ್ಡ ಗಂಡುಮಕ್ಕಳ ಹಾಟ್ ಫೇವರಿಟ್ ಫ್ಯಾಷನ್ ಆಗಿದ್ದು, ಈ ರ‍್ಯಾಲಿ ಅವರಿಗೆ ಒಳ್ಳೆ ಫಜೀತಿ ತಂದು ಬಿಟ್ಟಿದೆ. ಈ ರ‍್ಯಾಲಿ ವಿಡಿಯೊ ನೋಡಿದ ನೆಟ್ಟಿಗರು ಕೆಲವರು ನಕ್ಕು ಸುಮ್ಮನಾದರೆ ಕೆಲವರು ಇದೇನಪ್ಪಾ ಪ್ರಚಾರದ ಹುಚ್ಚು ಎಂದು ಕೋಪ ತೋರಿಸುತ್ತಿದ್ದಾರೆ. ಆದರೆ ಈ ಅಭಿಯಾನ ಯಾಕೆ ನಡೆಯುತ್ತಿದೆ, ಇದರ ಉದ್ದೇಶ ಏನು ಎಂಬುದು ಮಾತ್ರ ನಿಗೂಢವಾಗಿದೆ. ಇದು ಮುಂಬರುವ ಯಾವುದೋ ಪ್ರಾಡಕ್ಟ್ ಅಥವಾ ಸರ್ವೀಸ್‌ನ ಪ್ರಚಾರ ಅಭಿಯಾನವಾಗಿರಬಹುದು ಎಂದು ಜನರು ಸಂಶಯ ಪಡುತ್ತಿದ್ದಾರೆ.
Ghar Ke Kalesh ಎನ್ನುವ ಎಕ್ಸ್ ಪುಟ ನಿರ್ವಹಣೆ ಮಾಡುವ ವ್ಯಕ್ತಿಯೊಬ್ಬರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈಗಾಗಲೇ 8 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೊವನ್ನು ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ‘ಇದೊಂಥರಾ ಮಜವಾಗಿದೆ. ಗ್ರೂಮಿಂಗ್ ಕೂಡ ಇಂತಹ ಚರ್ಚೆ ಹುಟ್ಟು ಹಾಕುತ್ತೆ ಅಂದ್ರೆ ಆಶ್ವರ್ಯ ಪಡಬೇಕು‘ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಈಗ ನಾವು ಗಡ್ಡಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ, ಹಾಗಾದರೆ ಮುಂದೇನು?‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ‘ಇದ್ಯಾಕೋ ಗಮನ ಸೆಳೆಯಲು ಮಾಡಿದ ಪ್ರಯತ್ನ ಎನ್ನಿಸುತ್ತಿದೆ‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ‘ಪ್ರತಿಯೊಬ್ಬರಿಗೂ ಆದ್ಯತೆಗಳಿವೆ! ಅವರು ಅದನ್ನು ವ್ಯಕ್ತಪಡಿಸಲಿ‘ ಎಂದು ಕಾಮೆಂಟ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಅಭಿಯಾನದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಮುಂದೇನು ಮೀಸೆಯ ವಿರುದ್ಧವಾಗಿ ರ‍್ಯಾಲಿ ನಡೆಯುತ್ತಾ ಅಂತ ಇನ್ನೊಬ್ಬರು ಕಾಮೆಂಟ್ ಮೂಲಕ ಕೇಳಿದ್ದಾರೆ. ‘ಅಂದಕ್ಕಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡಿ‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡುವ ಮೂಲಕ ಹೇಳಿದ್ದಾರೆ. ‘ಈ ಟ್ರೆಂಡ್ ಇತ್ತೀಚಿನ ಯುವಕರಲ್ಲಿ ಗಡ್ಡ ಬಿಡಬೇಕೋ ಬೇಡವೋ ಎನ್ನುವ ಗೊಂದಲ ಹುಟ್ಟು ಹಾಕುತ್ತಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡುವ ಮೂಲಕ ಹೇಳಿದ್ದಾರೆ.