Viral: ಬಿಲ್ ಆಗಿದ್ದು 2 ಸಾವಿರ, ವೈಟರ್‌ಗೆ ಸಿಕ್ಕಿದ್ದು ಮಾತ್ರ ಬರೋಬ್ಬರಿ 8 ಲಕ್ಷ ಟಿಪ್ಸ್; ಏನಿದು ಕಥೆ ನೋಡಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಸುದ್ದಿಯನ್ನು ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳಿಡೋದು ಖಂಡಿತ. ಅಮೆರಿಕದ ಕೆಫೆಯೊಂದರಲ್ಲಿ ಗ್ರಾಹಕರೊಬ್ಬರು ವೈಟರ್‌ಗೆ ಬರೋಬ್ಬರಿ 8 ಲಕ್ಷ ಟಿಪ್ಸ್ ನೀಡಿದ್ದಾರೆ. ಅಂದ ಹಾಗೆ ಅವರ ಬಿಲ್ ಆಗಿದ್ದು ಕೇವಲ 2 ಸಾವಿರ. ಆದ್ರೆ ಇದ್ರಿಂದ ಏನೂ ಅರಿಯವ ವೈಟರ್ ಕೆಲಸ ಕಳೆದುಕೊಂಡಿದ್ದು ಮಾತ್ರ ಬೇಸರ ಸಂಗತಿ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸುದ್ದಿಗಳು ಕೆಲವೊಮ್ಮೆ ನಮ್ಮ ಮೂಗಿನ ಮೇಲೆ ಬೆರಳಿಡುವಂತೆ ಮಾಡುವುದು ಸುಳ್ಳಲ್ಲ. ಪ್ರಪಂಚದ ಮೂಲೆ ಮೂಲೆಯಲ್ಲಿ ವೈರಲ್ ಆಗುವ ಸಂಗತಿಗಳನ್ನು ನಾವು ಸಾಮಾಜಿಕ ಜಾಲತಾಣಗಳ ಮೂಲಕ ಮನೆಯಲ್ಲೇ ಕುಳಿತು ನೋಡಬಹುದು. ಇದೀಗ ಅಮೆರಿಕದಲ್ಲಿ ನಡೆದ ಇಂತಹದ್ದೇ ಘಟನೆಯೊಂದು ಸಾಕಷ್ಟು ಚರ್ಚೆಗೆ ಒಳಗಾಗಿದೆ. ಅಮೆರಿಕದ ಕೆಫೆಯೊಂದರಲ್ಲಿ ನಡೆದ ಈ ಘಟನೆಯು ಜನರ ಮೆದುಳಿಗೆ ಹುಳ ಬಿಟ್ಟಿರುವುದು ನಿಜ.
ಸಾಮಾನ್ಯವಾಗಿ ನಾವು ಹೋಟೆಲ್‌ಗಳಲ್ಲಿ ಊಟ ತಿಂಡಿ ಮಾಡಿದ ಮೇಲೆ ಟಿಪ್ಸ್ ನೀಡುತ್ತೇವೆ. ಆದರೆ ಇಲ್ಲೊಬ್ಬ ಅಸಾಮಿ ಕೆಫೆ ವೈಟರ್‌ಗೆ ಬರೋಬ್ಬರಿ 8ಲಕ್ಷ ಟಿಪ್ಸ್ ನೀಡಿದ್ದಾರೆ. ಈತನ ಬಿಲ್ ಆಗಿದ್ದು ಕೇವಲ 2 ಸಾವಿರ ರೂಪಾಯಿ. ಆದ್ರೆ ಈತ ಅಷ್ಟೊಂದು ಟಿಪ್ಸ್ ಯಾಕೆ ನೀಡಿದ ಎಂದು ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅಮೆರಿಕದ ದಕ್ಷಿಣ ಮಿಚಿಗನ್ ಬೆಂಟನ್ ಹಾರ್ಬರ್‌ನಲ್ಲಿರುವ ಈ ಕೆಫೆಯಲ್ಲಿ ಘಟನೆ ನಡೆದಿದೆ. ಭಾರಿ ಮೊತ್ತದ ಟಿಪ್ಸ್ ನೋಡಿದ ಹೋಟೆಲ್ ಸಿಬ್ಬಂದಿ ಗಾಬರಿಯಾಗಿದ್ದರು. ಅಲ್ಲದೇ ಅಷ್ಟೊಂದು ಹಣವನ್ನು ನೀಡಿರುವ ಗ್ರಾಹಕನಿಗೆ ಧನ್ಯವಾದ ಸಲ್ಲಿಸುವ ಸಲುವಾಗಿ ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯ ಬಗ್ಗೆ ಹಂಚಿಕೊಂಡಿದೆ ಕೆಫೆ.
ಅವರು ಹಾಕಿರುವ ಪೋಸ್ಟ್‌ನಲ್ಲಿ ಹೀಗಿತ್ತು. ʼನಮ್ಮ ಕೆಫೆಯ ಗ್ರಾಹಕರಿಗೆ ಇದು ಜೀವನ ಬದಲಾವಣೆಯ ಕ್ಷಣವಾಗಿತ್ತು. 8ಲಕ್ಷ ಟಿಪ್ಸ್ ಅನ್ನು ನಮ್ಮ ಕೆಫೆಯಲ್ಲಿರುವ 9 ಮಂದಿಗೆ ಸಮವಾಗಿ ಹಂಚಲಾಗಿದೆ. ಪ್ರತಿಯೊಬ್ಬರಿಗೂ ತಲಾ 91 ಸಾವಿರ ಹಣ ಸಿಕ್ಕಿದೆ. ಆ ಗ್ರಾಹಕನ ಬಿಲ್ ಆಗಿದ್ದು ಕೇವಲ 2000, ಆದ್ರೆ ಇವರು ಟಿಪ್ಸ್ ನೀಡಿದ್ದು ಮಾತ್ರ 8 ಲಕ್ಷʼ ಎಂದು ಬರೆದುಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಿದೆ ಕೆಫೆ.
ಇಲ್ಲಿನ ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಇತ್ತೀಚೆಗೆ ಅಗಲಿದ ತಮ್ಮ ಸ್ನೇಹಿತನ ಸ್ಮರಣಾರ್ಥ ಆ ವ್ಯಕ್ತಿ ಈ ಹಣವನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಆ ವ್ಯಕ್ತಿಯ ಈ ನಡೆಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.
ಮೇಸನ್ ಜಾರ್ ಕೆಫೆ ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ಘಟನೆಯ ಬಗ್ಗೆ ಹಂಚಿಕೊಂಡಿತ್ತು. ʼನಾನು ಅಳುತ್ತಿದ್ದೇನೆ, ನೀವು ಅಳುತ್ತಿದ್ದೀರಿ, ನಾವೆಲ್ಲರೂ ಅಳುತ್ತಿದ್ದೇವೆ. ನಿನ್ನೆ ಒಬ್ಬ ಗ್ರಾಹಕ ನಮ್ಮ ಕೆಫೆ ಬಂದಿದ್ದರು. ಅವರು ಹೋಗುವಾಗ ನಮ್ಮ ವೈಟರ್ ಒಬ್ಬನಿಗೆ ಬರೋಬ್ಬರಿ 8 ಲಕ್ಷ ಟಿಪ್ಸ್ ನೀಡಿ ಹೋಗಿದ್ದಾರೆ. ನಾವು ಅವರ ಪ್ರೀತಿಯನ್ನು ಎಲ್ಲರಿಗೂ ಹಂಚುವ ಉದ್ದೇಶದಿಂದ ನಮ್ಮ ಕೆಫೆಯಲ್ಲಿರುವ ಎಲ್ಲಾ ಸಿಬ್ಬಂದಿಗೂ ಆ ಹಣವನ್ನು ಸಮನಾಗಿ ಹಂಚಿದ್ದೇವೆ ಎಂದು ಬರೆದುಕೊಂಡಿದೆ.
ಕಳೆದೊಂದು ವಾರದ ಹಿಂದೆ ಈ ಪೋಸ್ಟ್ ಹಂಚಿಕೊಂಡಿದೆ ಮಾಸನ್ ಜಾರ್ ಕೆಫೆ. ಈಗಾಗಲೇ ಹಲವರು ಈ ಪೋಸ್ಟ್ ವೀಕ್ಷಣೆ ಮಾಡಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ʼಅಡುಗೆಯವರಿಗೂ ಈ ಹಣದಲ್ಲಿ ಪಾಲು ಸಿಕ್ಕಿದೆ ಎಂದು ಭಾವಿಸುತ್ತೇನೆ. ಯಾವುದೇ ರೆಸ್ಟೋರೆಂಟ್‌ನಲ್ಲಿ ಅಡುಗೆಯವರಿಲ್ಲದೇ ಏನೂ ಇಲ್ಲ. ಅವರಿಗೂ ವೈಟರ್‌ಗಳಂತೆ ಹಣ ಸಲ್ಲಬೇಕುʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಇದು ನಿಜಕ್ಕೂ ಅದ್ಭುತ, ಈ ಜಾಗ ನನಗೆ ತುಂಬಾ ಇಷ್ಟ ಆಯ್ತುʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಇದನ್ನು ಕೇಳಿ ಖುಷಿಯಾಯ್ತು, ವೈಟರ್‌ಗಳಿಗೆ ಸಲ್ಲಬೇಕಾದ ಹಣವಿದುʼ ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
ಆದರೆ ಇದಾಗಿ ಸ್ವಲ್ಪ ದಿನಗಳ ನಂತರದಲ್ಲೇ ಈ ಕೆಫೆ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಕೆಫೆ ಒಳ್ಳೆಯ ಕಾರಣಕ್ಕೆ ಸುದ್ದಿ ಮಾಡಿಲ್ಲ, ಇದು ನಿಜಕ್ಕೂ ಒಂಥರಾ ಅಹಿತಕರ ಘಟನೆ. ಅದೇನೆಂದರೆ ಈ ಕೆಫೆಯು ಟಿಪ್ಸ್ ಪಡೆದ ವೈಟರ್ ಅನ್ನು ಕೆಲಸದಿಂದ ವಜಾಗೊಳಿಸಿದೆ ಕೆಫೆ. ಸಿಬ್ಬಂದಿಯನ್ನು ವಜಾಗೊಳಿಸಿರುವುದಕ್ಕೆ ತನ್ನದೇ ಕಾರಣ ನೀಡಿರುವ ಕೆಫೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ ನೆಟ್ಟಿಗರು.

ವಿಭಾಗ