ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್‌ಗೆ ವಿಡಿಯೊ ಕಾಲ್ ಮಾಡಿ ಅಭಿನಂದಿಸಿದ ತಾಲಿಬಾನ್ ಮಿನಿಸ್ಟರ್, ವಿಡಿಯೊ ವೈರಲ್
ಟಿ 20 ವರ್ಲ್ಡ್ ಕಪ್‌ನಲ್ಲಿ ಇತಿಹಾಸ ಬರೆದ ಅಫ್ಘಾನಿಸ್ತಾನ ತಂಡಕ್ಕೆ ಅಭಿನಂದನೆ ಸಲ್ಲಿಸುವ ಸಲುವಾಗಿ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅಘ್ಗಾನ್ ತಂಡದ ನಾಯಕ ರಶೀದ್ ಖಾನ್ ಅವರಿಗೆ ವಿಡಿಯೊ ಕಾಲ್ ಮಾಡಿದ್ದರು. ಇದೀಗ ಅವರು ವಿಡಿಯೊ ಕಾಲ್ ಮಾಡಿ ಮಾತನಾಡಿರುವ ವಿಡಿಯೊ ಭಾರಿ ವೈರಲ್ ಆಗಿದೆ.

ಈ ಬಾರಿಯ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಿತು. ಇದಕ್ಕೆ ಕಾರಣ ವಿಶ್ವಕಪ್ ಇತಿಹಾಸದಲ್ಲೇ ಅಫ್ಘನ್ ತಂಡ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದು. ಇದು ಕ್ರಿಕೆಟ್ ತಾಲಿಬಾನ್ ಆಡಳಿತವಿರುವ ದೇಶದ ಕ್ರಿಕೆಟ್ ಅಭಿಮಾನಗಳ ಪಾಲಿಗೆ ಬಹಳ ವಿಶೇಷವಾಗಿತ್ತು. ಇದು ತಾಲಿಬಾನಿಗಳು ವಿಶೇಷ ದಿನ ಎನ್ನಿಸಿದ್ದು ಸುಳ್ಳಲ್ಲ. ಅದಕ್ಕೆ ಪ್ರತೀಕವಾಗಿ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವರಿಗೆ ವಿಡಿಯೊ ಕರೆ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಮುತ್ತಕಿ ಹಾಗೂ ರಶೀದ್ ನಡುವಿನ ವಿಡಿಯೊ ಕಾಲ್ ಸಂಭಾಷಣೆಯ ವಿಡಿಯೊ ಇದೀಗ ಭಾರಿ ವೈರಲ್ ಆಗುತ್ತಿದೆ. ಜೂನ್ 25ರಂದು ನಡೆದ ಮ್ಯಾಚ್‌ನಲ್ಲಿ ಬಾಂಗ್ಲಾದೇಶ ಮಣಿಸಿದ ಅಫ್ಘನ್ ತಂಡ ಸೆಮಿಪೈನಲ್ ಪ್ರವೇಶಿಸಿ, ಇತಿಹಾಸ ಬರೆದಿತ್ತು.
ಕಿಂಗ್‌ಸ್ಟೌನ್‌ನ ಸೇಂಟ್ ವಿನ್ಸೆಂಟ್‌ನ ಆರ್ನೋವ್ ವೇಲ್ ಗ್ರೌಂಡ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಕೊನೆಯ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ರೋಚಕ ಜಯ ಸಾಧಿಸಿತು. ಪಂದ್ಯದ ಬಳಿಕ ರಶೀದ್ ಖಾನ್‌ಗೆ ಕರೆ ಮುತ್ತಿಕಿ ಮಾಡಿದ್ದರು. “ಮುಬಾರಕ್” ಎನ್ನುವ ಮೂಲಕ ಸಂಭಾಷಣೆ ಆರಂಭಿಸಿದ್ದರು.
ಈ ಮ್ಯಾಚ್‌ನಲ್ಲಿ ಅಫ್ಘಾನಿಸ್ತಾನ ತಂಡವು ಅವಿಸ್ಮರಣೀಯ ಗೆಲುವು ಸಾಧಿಸಿತ್ತು. ಮೊದಲ ಬಾರಿಗೆ ಪುರುಷರ ಐಸಿಸಿ ವಿಶ್ವಕಪ್‌ನಲ್ಲಿ ಅಫ್ಘನ್ ಸೆಮಿಫೈನಲ್ ತಲುಪಿತ್ತು. ಸೂಪರ್ 8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಂವೇದನಾಶೀಲ ಗೆಲುವು ಸಾಧಿಸಿದ ತಂಡವು, ಆ ಬಳಿಕ ಬಾಂಗ್ಲಾದೇಶವನ್ನು ರೋಚಕವಾಗಿ ಮಣಿಸಿದೆ. ಅದಕ್ಕೂ ಮುನ್ನ ಗುಂಪು ಹಂತದಲ್ಲಿ ಮಾಜಿ ಫೈನಲಿಸ್ಟ್‌ಗಳಾದ ನ್ಯೂಜಿಲೆಂಡ್ ತಂಡವನ್ನು ಕೂಡಾ ಸೋಲಿಸಿತ್ತು.
ಬಾಂಗ್ಲಾದೇಶ ವಿರುದ್ಧದ ರೋಚಕ ಪಂದ್ಯದ ನಂತರ ಮೈದಾನದಲ್ಲಿದ್ದ ರಶೀದ್ ಖಾನ್ ಅವರೊಂದಿಗೆ ತಾಲಿಬಾನ್ ವಿದೇಶಾಂಗ ಸಚಿವರು ಮಾತನಾಡಿರುವ ವಿಡಿಯೋವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಹಂಚಿಕೊಂಡಿದೆ. ಬಾಂಗ್ಲಾದೇಶದ ವಿರುದ್ಧದ ಗೆಲುವಿಗಾಗಿ ತಂಡವನ್ನು ಅಭಿನಂದಿಸುತ್ತಾ, ಮುತ್ತಕಿ ಅವರು ತಂಡಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದರು.
ಅಘ್ಘಾನಿಸ್ತಾನ ತಂಡವು ಈ ಮ್ಯಾಚ್ ಗೆಲುವನ್ನು ಅದ್ಧೂರಿಯಾಗಿ ಸಂಭ್ರಮಿಸಿದ್ದರು. ವಿಜಯೋತ್ಸವದ ಮೆರವಣಿಗೆಯಲ್ಲಿ ಆಟಗಾರರು ಮುಖ್ಯ ಕೋಚ್ ಜೊನಾಥನ್ ಟ್ರಾಟ್ ಅವರನ್ನು ಭುಜದ ಮೇಲೆ ಎತ್ತಿಕೊಂಡು ಮೆರವಣಿಗೆ ಮಾಡಿದ್ದರು. ಮೈದಾನದಲ್ಲಿ ಆಟಗಾರರು ಭಾವುಕರಾಗಿದ್ದರು. ಅಫ್ಘಾನಿಸ್ತಾನದ ಆಟಗಾರರು ತಂಡದ ಬಸ್‌ನಲ್ಲಿ ತಮ್ಮ ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಅವರೊಂದಿಗೆ ಬಸ್‌ನಲ್ಲೂ ನೃತ್ಯ ಮಾಡಿ ಸಂಭ್ರಮಿಸಿರುವ ವಿಡಿಯೊಗಳು ವೈರಲ್ ಆಗಿದ್ದವು.
ಸೆಮಿಫೈನಲ್ ಪ್ರವೇಶಿಸಿದ ಅಫ್ಘಾನಿಸ್ತಾನದ ತಂಡದ ಐತಿಹಾಸಿಕ ಗೆಲುವಿನ ನಂತರ ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದ ಬೀದಿಗಳು ಆಟಗಾರರನ್ನು ಸಂಭ್ರಮದಿಂದ ಸ್ವಾಗತಿಸಿದರು.
ಅಫ್ಘಾನಿಸ್ತಾನ ಸೆಮೀಸ್ ಪ್ರವೇಶಿಸಿದರೂ, ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿತು. ಆ ಮೂಲಕ ತಂಡದ ಫೈನಲ್ ಕನಸು ನನಸಾಗಲಿಲ್ಲ. ಆದರೂ, ಇತ್ತೀಚಿನ ವರ್ಷಗಳಲ್ಲಿ ಅಫ್ಘನ್ನರ ಕ್ರಿಕೆಟ್ ಸಾಧನೆಯನ್ನು ದಿಗ್ಗಜರು ಸೇರಿದಂತೆ ಕ್ರಿಕೆಟ್ ಲೋಕದ ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
