ಚಾಟ್‌ಜಿಪಿಟಿ ಅಲ್ಲ ಇದು ಚಾಯ್‌ಜಿಪಿಟಿ; ಇಲ್ಲಿ ಎಐ ಟೀ ಕೂಡ ಸಿಗುತ್ತೆ ಅಂದ್ರೆ ನಂಬಲೇಬೇಕು; ವೈರಲ್ ಆದ ಟೀ ಅಂಗಡಿ ವೈಶಿಷ್ಟ್ಯವಿದು
ಭಾರತದಲ್ಲಿ ಟ್ಯಾಲೆಂಟ್‌ಗಳಿಗೆ ಕೊರತೆ ಇಲ್ಲ ಎಂಬ ಮಾತಿದೆ. ಕಳೆದ ಕೆಲ ದಿನಗಳ ಹಿಂದೆ ಟೀ ಅಂಗಡಿಯೊಂದರ ಬೋರ್ಡ್‌ನ ಫೋಟೊ ಹರಿದಾಡಿದ್ದು, ಅದೀಗ ಮತ್ತೆ ವೈರಲ್ ಆಗಿದೆ. ಚಾಟ್‌ಪಿಜಿಟಿ, ಎಐ ತಂತ್ರಜ್ಞಾನದ ಕಾಲದಲ್ಲಿ ತನ್ನ ಟೀ ಅಂಗಡಿಗೆ ಕ್ರಿಯೇಟಿವ್ ಆಗಿ ‘ಚಾಯ್‌ಜಿಪಿಟಿ‘ ಎಂದು ಹೆಸರಿಟ್ಟಿದ್ದಾರೆ ಚಾಯ್‌ವಾಲ. ಈ ಟೀ ಸ್ಟಾಲ್‌ನಲ್ಲಿ ಎಐ ಟೀ ಕೂಡ ಸಿಗುತ್ತೆ ಅನ್ನೋದು ವಿಶೇಷ.
ಸದ್ಯ ಚಾಟ್‌ಜಿಪಿಟಿ, ಎಐ ತಂತ್ರಜ್ಞಾನಗಳು ಟ್ರೆಂಡ್‌ನಲ್ಲಿರುವ ಕಾಲ. ಇದು ಮನುಷ್ಯ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವಂತೆ ಮಾಡಿರುವುದು, ಮನುಷ್ಯನ ಬದುಕನ್ನೇ ಅಚ್ಚರಿಗೆ ತಳ್ಳಿರುವುದು ಸುಳ್ಳಲ್ಲ. ಯಾಕೆಂದರೆ ಇವು ಮನುಷ್ಯನ ಬುದ್ಧಿವಂತಿಕೆಯನ್ನೂ ಮೀರಿದಂಥವು. ಆದರೆ ನಮ್ಮ ಭಾರತೀಯರ ಬುದ್ಧಿವಂತಿಕೆಯನ್ನು ಮೀರಲು ಸಾಧ್ಯವೇ, ಖಂಡಿತ ಇಲ್ಲ. ನಮ್ಮಲ್ಲಿ ಟ್ಯಾಲೆಂಟ್‌ಗಳಿಗೆ ಬರವಿಲ್ಲ.
ಇಲ್ಲೊಬ್ಬ ಟೀ ಮಾರಾಟಗಾರ ತನ್ನ ಟೀ ಅಂಗಡಿಗೂ ಚಾಟ್‌ಜಿಪಿಟಿ, ಎಐಯನ್ನು ತಂದಿದ್ದಾನೆ. ಇದೇನಪ್ಪಾ ಇದು, ಟೀ ಅಂಗಡಿಗೂ ಚಾಟ್‌ಜಿಪಿಟಿಗೂ ಏನು ಸಂಬಂಧ ಅಂತ ಅಚ್ಚರಿಗೊಳ್ಳಬೇಡಿ. ಈ ಚಾಯ್‌ವಾಲ್ ತನ್ನ ಟೀ ಅಂಗಡಿಗೆ ಚಾಯ್‌ಜಿಪಿಟಿ ಎಂದು ಹೆಸರಿಸಿದ್ದಾನೆ. ಇಲ್ಲಿ ಪಕ್ಕಾ, ಪರಿಶುದ್ಧ ಟೀ ಸಿಗುತ್ತೆ ಅನ್ನೋ ಟ್ಯಾಗ್ ಲೈನ್ ಕೂಡ ಸೇರಿಸಿದ್ದಾನೆ. ಮಾತ್ರವಲ್ಲ ಈ ಚಾಯ್‌ಜಿಪಿಟಿ ಟೀ ಅಂಗಡಿಯಲ್ಲಿ ಇನ್ನೊಂದು ವಿಶೇಷವಿದೆ. ಅದೇನೆಂದರೆ ನಿಮಗೆ ಇಲ್ಲಿ ಎಐ ಟೀ ಕೂಡ ಸಿಗುತ್ತೆ. ಟೀ ಮಾರಾಟ ಮಾಡುವವನ ಈ ಕ್ರಿಯೇಟಿವಿಗೆ ನೆಟ್ಟಿಗರು ಮನ ಸೋತಿದ್ದಾರೆ. ಕೆಲವು ದಿನಗಳ ಹಿಂದೆ ವೈರಲ್ ಆಗಿ ಸಂಚಲನ ಮೂಡಿಸಿದ್ದ ಈ ಚಾಯ್‌ಜಿಟಿಪಿ ಬ್ಯಾನರ್ ಇದೀಗ ಮತ್ತೆ ವೈರಲ್ ಆಗುತ್ತಿದೆ.
ಚಾಯ್‌ಜಿಪಿಟಿ ಅರ್ಥ ಏನಿರಬಹುದು ಎಂದು ನೀವು ಯೋಚಿಸಿದರೆ ಖಂಡಿತ ಅದಕ್ಕೂ ಸೂಕ್ತ ಅರ್ಥವಿದೆ. ಚಾಯ್‌ಜಿಪಿಟಿಯಲ್ಲಿ ಜಿಪಿಟಿ ಎಂದರೆ ಜೆನ್ಯೂನ್ ಪ್ಯೂರ್ ಟೀ (ಅಂದರೆ ಪಕ್ಕಾ ಪರಿಶುದ್ಧ ಟೀ) ಎಂಬುದಾಗಿದೆ. ಇದನ್ನು ನೋಡಿದಾಗ ಇಂತಹ ಬುದ್ಧಿವಂತಿಕೆ ಭಾರತದಲ್ಲಿ ಬಿಟ್ರೆ ಬೇರೆಲ್ಲೂ ಹುಡುಕಲು ಸಾಧ್ಯವಿಲ್ಲ ಎಂದೆನ್ನಿಸುವುದು ಸುಳ್ಳಲ್ಲ.
ಏನಿದು ಎಐ ಚಹಾ?
ಈ ಅಂಗಡಿಯಲ್ಲಿ ಎಐ ಚಹಾ ಕೂಡ ಸಿಗುತ್ತೆ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ. ಹಾಗಾದರೆ ಏನಿದು ಎಐ ಚಹಾ ಅಂತ ನಿಮಗೆ ಅನ್ನಿಸಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಎಐ ಚಹಾ ಎಂದರೆ ಅದರಕ್, ಇಲಾಚಿ ಚಹಾ ಎಂದರ್ಥ. ಹಿಂದಿಯಲ್ಲಿ ಅದರಕ್ ಎಂದರೆ ಶುಂಠಿ, ಇಲಾಚಿ ಎಂದರೆ ಏಲಕ್ಕಿ. ಎಐ ಚಹಾ ಎಂದರೆ ಶುಂಠಿ, ಏಲಕ್ಕಿ ಚಹಾ ಎಂದು ಅರ್ಥ. ಭಾರತದಲ್ಲಿ ಟೀಗೆ ಈ ಎರಡು ಸಾಮಗ್ರಿ ಸೇರಿಸುವ ಮೂಲಕ ಟೀಯ ಸ್ವಾದ ಘಮ ಹೆಚ್ಚುವಂತೆ ಮಾಡಲಾಗುತ್ತದೆ.
ಈ ಟೀ ಶಾಪ್‌ನ ಬ್ಯಾನರ್ ಫೋಟೊ ಸಖತ್ ವೈರಲ್ ಆಗಿದ್ದು, ಟೀ ಅಂಗಡಿಯವನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ ನೆಟ್ಟಿಗರು. ಚಹಾ ಚೆನ್ನಾಗಿ ಮಾಡೋದು ಗೊತ್ತಿದ್ದರೆ ಸಾಲದು, ಈ ರೀತಿ ಕ್ರಿಯೇಟಿವ್ ಆಗಿ ಬೋರ್ಡ್ ಬರೆಸಲು ತುಂಬಾನೇ ಬುದ್ಧಿವಂತಿಕೆಯೂ ಬೇಕು ಎಂದು ಚಾಯ್‌ವಾಲಾನನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಈ ಟೀ ಅಂಗಡಿ ಬ್ಯಾನರ್ ನೋಡಿದ ಮೇಲೆ ನಿಮಗೂ ಇವರ ಕ್ರಿಯೆಟಿವಿಟಿ ಇಷ್ಟ ಆಗಿರಬೇಕಲ್ಲ.
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.