ಸುದ್ದಿ ಪತ್ರಿಕೆಯಲ್ಲ ಇದು ಆಮಂತ್ರಣ ಪತ್ರಿಕೆ, ಹೇಗಿದೆ ನೋಡಿ ಮದುವೆಯ ಮಮತೆಯ ಕರೆಯೋಲೆ, ವೈರಲ್ ಸ್ಟೋರಿ
ಇತ್ತೀಚಿನ ದಿನಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆಗಳು ಸಖತ್ ಡಿಫ್ರೆಂಟ್ ಆಗಿರುತ್ತವೆ. ಕೆಲವೊಂದು ಇನ್ವಿಟೇಷನ್‌ಗಳನ್ನು ನೋಡಿದಾಗ ಹೀಗೂ ಮಾಡಿಸೋಕೆ ಸಾಧ್ಯನಾ ಅಂತ ಅನ್ನಿಸುತ್ತೆ, ಅಂತಹ ಒಂದು ವೈರಲ್ ಮದುವೆ ಇನ್ವಿಟೇಷನ್ ಇಲ್ಲಿದೆ ನೋಡಿ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವೊಂದು ವಿಚಾರಗಳನ್ನು ನೋಡಿದಾಗ ಅಚ್ಚರಿ ಆಗೋದು ಖಂಡಿತ. ಈಗ ಮದುವೆ ಇನ್ವೀಟೇಷನ್ ಕಾರ್ಡ್‌ವೊಂದು ವೈರಲ್ ಆಗಿದೆ. ಈ ಮದುವೆ ಕಾಗದ ನೋಡಿದ ಕೂಡಲೇ ಈ ಇದ್ಯಾರೋ ನ್ಯೂಸ್ ಪೇಪರ್ ಅಲ್ಲಿ ಕೆಲಸ ಮಾಡೋರು ಇರಬಹುದು ಅನ್ಸುತ್ತೆ, ಇದ್ಯಾಕೆ ಹೀಗಂತಿದಾರೆ ಅಂತೀರಾ. ಇವರು ತಮ್ಮ ಮದುವೆ ಕಾಗದವನ್ನು ಪಕ್ಕಾ ನ್ಯೂಸ್ ಪೇಪರ್ ಶೈಲಿಯಲ್ಲೇ ಪ್ರಿಂಟ್ ಮಾಡಿದ್ದಾರೆ. ಈ ಮದುವೆ ಆಮಂತ್ರಣ ಪತ್ರಿಕೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಹೀಗೂ ಒಂದು ಆಮಂತ್ರಣ ಪತ್ರಿಕೆ ಮಾಡಿಸೋಕೆ ಸಾಧ್ಯನಾ ಅಂತ ಜನ ಮೂಗಿನ ಮೇಲೆ ಬೆರಳಿಡುತ್ತಾರೆ.
ಸುದ್ದಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇರುವವರಂತು ನನ್ ಮದುವೆ ಕಾಗದ ಹೀಗೆ ಮಾಡಿಸಬೇಕು ಅಂದುಕೊಳ್ತಾ ಇದ್ರೆ, ಈಗಾಗಲೇ ಮದುವೆ ಆದೋರೋ ಛೇ ನಾನು ಇದೇ ಥರ ಕಾರ್ಡ್ ಮಾಡಿಸಿಬೇಕಿತ್ತು, ನಂಗೆ ಇದೆಲ್ಲಾ ಹೊಳಿಲೇ ಇಲ್ಲ ಅಂತ ಪಶ್ಚಾತ್ತಾಪ ಪಡ್ತಾ ಇರಬಹುದು. ಅದೇನೆ ಇರ್ಲಿ, ಈ ಮದುವೆ ಕಾಗದದಲ್ಲಿ ಮಾಸ್ಟ್‌ಹೆಡ್, ಡೇಟ್‌ಲೈನ್, ಫೋಟೊಗಳು, ಸುದ್ದಿ, ಬಾಕ್ಸ್ ಐಟಂ ಅಷ್ಟೇ ಯಾಕೆ ಜಾಹೀರಾತು ಕೂಡ ಇದೆ.
ಪತ್ರಿಕೆಯ ಮುಖ ಪುಟ ಹಾಗೂ ಕೊನೆಯ ಪುಟವನ್ನು ನೀವು ನೀವಿಲ್ಲಿ ನೋಡಬಹುದು. ಈ ಸುದ್ದಿ ಪತ್ರಿಕೆ ಸ್ವರೂಪದ ಮದುವೆ ಇನ್ವಿಟೇಷನ್ ಕಾರ್ಡ್‌ನಲ್ಲಿ ತಮ್ಮ ಮದುವೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಬರೆದು ಮದುವೆಗೆ ಆಹ್ವಾನಿಸಿದ್ದಾರೆ ಜಯಶ್ರೀ ಹಾಗೂ ಸಂದೇಶ್. ಇವರು ತಮ್ಮ ಮದುವೆ ಆಹ್ವಾನ ಪತ್ರಿಕೆಗೆ ವಿವಾಹವಾಣಿ ಎಂದು ಮಾಸ್ಟ್ ಹೆಡ್ ಹಾಕಿಸಿದ್ದು, ಕಲ್ಯಾಣದ ಕರೆಯೋಲೆ ಎಂಬ ಟ್ಯಾಗ್‌ಲೈನ್ ಕೂಡ ನೀಡಿದ್ದಾರೆ. ಒಟ್ಟು 4 ಪುಟಗಳ ವಿವಾಹ ಆಮಂತ್ರಣ ಇದಾಗಿದೆ.
ಜಯಶ್ರೀ ಬದುಕ ಹೊಸ ಅಧ್ಯಾಯ ಎನ್ನುವುದು ಮೊದಲ ಪುಟದ ಸುದ್ದಿಯ ಹೆಡ್‌ಲೈನ್. ಮೇ 19 ರಂದು ಸಂದೇಶ ಜೊತೆಗೆ ಸಪ್ತಪದಿ ಅನ್ನೋದು ಸುದ್ದಿಗೆ ಕಿಕ್ಕರ್. ಈ ಸುದ್ದಿಯಲ್ಲಿ ಮದುವೆಯ ವಿವರದ ಜೊತೆಗೆ ಬಾಕ್ಸ್ ಐಟಂ ಕೂಡ ಇದೆ. ಬಾಕ್ಸ್ ಐಟಂನಲ್ಲಿ ಆರತಕ್ಷತೆ ಬಗ್ಗೆ ಮಾಹಿತಿ ನೀಡಲಾಗಿದೆ.
ವಿವಾಹ ಆಮಂತ್ರಣ ಪತ್ರಿಕೆಯ ಇಂಗ್ಲಿಷ್ ಸ್ವರೂಪವನ್ನು ಜಾಹೀರಾತಿನ ರೂಪದಲ್ಲಿ ಪ್ರಕಟಿಸಲಾಗಿದೆ. ವಿವಾಹವಾಣಿಯ ಕೊನೆಯ ಪುಟದಂತೆ ಕಾಣುವ ಎಡಗಡೆಯ ಪುಟದಲ್ಲಿ ಮದುವೆಗೆ ಆಮಂತ್ರಿಸುತ್ತಿರುವ ಕುಟುಂಬದವರ ಹೆಸರುಗಳನ್ನು ಬರೆಯಲಾಗಿದೆ. ವಿವಾಹ ಜೊತೆಗೆ ಮೆಹಂದಿ ಕಾರ್ಯಕ್ರಮ, ದಿಬ್ಬಣ ಹೊರಡುವ ಸಮಯ, ದಿನಾಂಕದ ಬಗ್ಗೆಯೂ ಇದರಲ್ಲಿ ಮಾಹಿತಿ ಇದೆ. ಆಮಂತ್ರಣ ಪತ್ರಿಕೆಯ ಎಡಭಾಗದಲ್ಲಿ ವಿವಾಹ ಮಂಟಪದ ಚಿತ್ರ ಇದೆ. ಈ ಆಮಂತ್ರಣ ಪತ್ರಿಕೆಯಲ್ಲಿ ಇಷ್ಟೇ ಅಲ್ಲ, ಸ್ಮೈಲ್ ಪ್ಲೀಸ್ ಅಂತ ಶೀರ್ಷಿಕೆ ಕೊಟ್ಟು ಅದರಡಿಯಲ್ಲಿ ಒಂದಿಷ್ಟು ನಗೆಹನಿಗಳನ್ನು ಕೂಡ ಬರೆಯಲಾಗಿದೆ.
ತಮ್ಮ ತಮ್ಮ ಆಡು ಭಾಷೆಗಳಲ್ಲಿ ಡಿಫ್ರೆಂಟ್ ಆಗಿ ಮದುವೆ ಇನ್ವಿಟೇಷನ್ ಮಾಡಿಸುವುದನ್ನು ನೀವು ನೋಡಿರಬಹುದು. ಇನ್ನೂ ಕೆಲವರು ಬಹಳ ಸುಂದರವಾದ ಡಿಸೈನ್ ಮಾಡಿಸುವ ಮೂಲಕ ಗಮನ ಸೆಳೆಯುತ್ತಾರೆ. ಆದರೆ ನ್ಯೂಸ್ ಪೇಪರ್ ವಿವಾಹ ಆಮಂತ್ರಣ ಪತ್ರಿಕೆ ಪ್ರಕಟ ಮಾಡಿದ್ದು ಬಹುಶಃ ಇದೇ ಮೊದಲು ಅನ್ನಿಸುತ್ತೆ. ಥಟ್ ಅಂತ ನೋಡಿದ್ರೆ ಖಂಡಿತ ಯಾರಾದ್ರೂ ಇದ್ಯಾವುದೋ ಹೊಸ ಪೇಪರ್ ಶುರುವಾಗಿದೆ ಅಂತ ಎನ್ನಿಸಬಹುದು, ಆದರೂ ಈ ಇನ್ವಿಟೇಷನ್ ಕಾರ್ಡ್ ಮಾತ್ರ ಸಖತ್ ಡಿಫ್ರೆಂಟ್ ಆಗಿ ಮಜವಾಗಿದೆ ಅಲ್ವಾ.
ಅಶಿತ್ ಕಲ್ಲಾಜೆ ಎನ್ನುವವರು ಈ ನ್ಯೂಸ್ ಪೇಪರ್ ಶೈಲಿಯ ವಿವಾಹ ಆಮಂತ್ರಣ ಪತ್ರಿಕೆಯನ್ನು ತಮ್ಮ ಪೇಸ್‌ಬುಕ್ ಪೋಸ್ಟ್ ಮಾಡಿ, ಜಯಶ್ರೀ ಅವರಿಗೆ ಶುಭಾಶಯ ಕೋರಿದ್ದಾರೆ.