Wednesday Motivation: ಸ್ನೇಹಿತರು, ಸಂಬಂಧಿಕರನ್ನಲ್ಲ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ; ತಾಯಿ ಹಕ್ಕಿ , ಮರಿಗಳಿಗೆ ಹೇಳಿದ ಈ ಕಥೆ ಕೇಳಿ-wednesday motivation inspirational story for 27th march 2024 wednesday motivational story in kannada rsm ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Wednesday Motivation: ಸ್ನೇಹಿತರು, ಸಂಬಂಧಿಕರನ್ನಲ್ಲ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ; ತಾಯಿ ಹಕ್ಕಿ , ಮರಿಗಳಿಗೆ ಹೇಳಿದ ಈ ಕಥೆ ಕೇಳಿ

Wednesday Motivation: ಸ್ನೇಹಿತರು, ಸಂಬಂಧಿಕರನ್ನಲ್ಲ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ; ತಾಯಿ ಹಕ್ಕಿ , ಮರಿಗಳಿಗೆ ಹೇಳಿದ ಈ ಕಥೆ ಕೇಳಿ

Wednesday Motivation: ನಂಬಿಕೆ ಎಂಬ ಪದ ಬಹಳ ಅಮೂಲ್ಯವಾದದ್ದು. ಆದರೆ ಜೀವನದಲ್ಲಿ ಸ್ನೇಹಿತರನ್ನಾಗಲೀ ಸಂಬಂಧಿಕರನ್ನಾಗಲೀ, ಅವರನ್ನೆಲ್ಲಾ ನಂಬುವ ಬದಲಿಗೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು. ಆಗಲೇ ಏನನ್ನಾದರೂ ಸಾಧಿಸಲು ಸಾಧ್ಯ, ಆಗ ಮಾತ್ರ ನಿಮ್ಮ ಕೆಲಸಗಳು ಯಶಸ್ಸು ಗಳಿಸಲು ಸಾಧ್ಯ.

ಜೀವನಕ್ಕೊಂದು ಸ್ಫೂರ್ತಿಮಾತು
ಜೀವನಕ್ಕೊಂದು ಸ್ಫೂರ್ತಿಮಾತು (PC: Unsplash)

ಬುಧವಾರದ ಸ್ಫೂರ್ತಿಮಾತು: ಜೀವನದಲ್ಲಿ ನಂಬಿಕೆ ಇರಬೇಕು, ಅದರೆ ಆ ನಂಬಿಕೆ ಕುರುಡಾಗಬಾರದು. ಕೆಲವರು ಮತ್ತೊಬ್ಬರನ್ನು ಅತಿಯಾಗಿ ನಂಬುತ್ತಾರೆ. ಕೊನೆಗೆ ಆ ನಂಬಿಕೆ ಅವರಿಗೇ ಮುಳುವಾಗುತ್ತದೆ. ಆದರೆ ನಿಮ್ಮ ಮೇಲಿನ ನಂಬಿಕೆ ನಿಮಗೆ ಎಂದಿಗೂ ಮೋಸ ಮಾಡುವುದಿಲ್ಲ. ಅದರಿಂದ ನಿಮಗೆ ಪ್ರತಿ ಹೆಜ್ಜೆಯಲ್ಲೂ ಯಶಸ್ಸು ದೊರೆಯುತ್ತದೆಯೇ ಹೊರತು, ಸೋಲು ಬರುವುದಿಲ್ಲ. ಇದರ ಕುರಿತಾಗಿ ಒಂದು ಪುಟ್ಟ ಕಥೆ ಇದೆ.

ಪಕ್ಷಿಯೊಂದು ಹೊಲದಲ್ಲಿ ಗೂಡುಕಟ್ಟಿ ತನ್ನ ಮರಿಗಳೊಂದಿಗೆ ಆರಾಮವಾಗಿ ಬದುಕುತ್ತಿತ್ತು. ಸ್ವಲ್ಪ ದಿನಗಳ ನಂತರ, ಕೊಯ್ಲು ಬಂತು. ಆದರೆ ಹಕ್ಕಿ ಮತ್ತು ಅದರ ಮರಿಗಳು ಯಾವುದೇ ಕ್ಷಣದಲ್ಲಿ ಜಾಗ ಬಿಡಲು ಸಿದ್ಧವಿರಬೇಕಿತ್ತು. ಒಂದು ದಿನ ತಾಯಿ ಹಕ್ಕಿ, ಆಹಾರಕ್ಕಾಗಿ ಗೂಡಿನಿಂದ ಹೊರಗೆ ಹೋಯ್ತು. ಆ ಸಮಯದಲ್ಲಿ ಮರಿಗಳಷ್ಟೇ ಗೂಡಿನಲ್ಲಿದ್ದವು. ನಾಳೆ ಬಂದು ಕಟಾವು ಮುಗಿಸಬೇಕು ಎಂದು ಮಾತನಾಡುತ್ತಿದ್ದ ರೈತರ ಮಾತುಗಳನ್ನು ಹಕ್ಕಿ ಮರಿಗಳು ಕೇಳಿಸಿಕೊಂಡವು. ಅಮ್ಮ ಮನೆಗೆ ವಾಪಸ್‌ ಬಂದಾಗ ಮರಿಗಳು ಅಮ್ಮನ ಬಳಿ ರೈತರು ಆಡುತ್ತಿದ್ದ ಮಾತುಗಳನ್ನು ಹೇಳಿ 'ಅಮ್ಮ ಇಲ್ಲಿಂದ ಇವತ್ತು ಹೊರಡಬೇಕು. ನಾಳೆ ಬೆಳಿಗ್ಗೆ ರೈತ ತನ್ನ ಸ್ನೇಹಿತನೊಂದಿಗೆ ಬಂದು ಬೆಳೆ ತೆಗೆಯುತ್ತಾನೆ ಎಂದವು. ಮಕ್ಕಳ ಮಾತನ್ನು ಕೇಳಿ ತಾಯಿ ಹಕ್ಕಿ ಮರಿಗಳನ್ನು ಸಮಾಧಾನ ಮಾಡಿತು. ಭಯ ಬೇಡ. ನಾವು ನಾಳೆ ಇಲ್ಲೇ ಇರುತ್ತೇವೆ ಎಂದಿತು.

ಆ ಹಕ್ಕಿ ಹೇಳಿದಂತೆ ಮರುದಿನ ರೈತ ತನ್ನ ಬೆಳೆಯನ್ನು ಕಟಾವು ಮಾಡಲಿಲ್ಲ. ಆ ದಿನ ಮತ್ತೆ ಹಕ್ಕಿ ಆಹಾರಕ್ಕಾಗಿ ಹೊರಗೆ ಹೋಯ್ತು. ಮತ್ತೆ ರೈತನು ಬಂದು ಈ ಸ್ನೇಹಿತರಿಂದ ಏನೂ ಕೆಲಸ ಆಗಲಿಲ್ಲ, ನನ್ನ ಸಂಬಂಧಿಕರನ್ನು ಕರೆ ತಂದು ಕೆಲಸ ಮಾಡಿಸಿಬೇಕು ಎನ್ನುತ್ತಾನೆ. ಮತ್ತೆ ಈ ಮಾತನ್ನು ಮರಿಗಳು ಅಮ್ಮನಿಗೆ ಹೇಳುತ್ತವೆ. ಆಗಲೂ ಅಮ್ಮ ಹಕ್ಕಿ, ನಾಳೆಯೂ ಏನೂ ಆಗುವುದಿಲ್ಲ ನಿಶ್ಚಿಂತೆಯಿಂದ ಇರಿ ಎನ್ನುತ್ತದೆ. ಹೇಳಿದಂತೆ ಮರುದಿನ ಕೂಡಾ ರೈತನ ಭೂಮಿಯಲ್ಲಿ ಕಟಾವಿನ ಕೆಲಸ ನಡೆಯಲಿಲ್ಲ.

ಹಾಗೇ ಮೂರನೇ ದಿನ, ರೈತರ ಹೊಲಕ್ಕೆ ಬಂದು ಸ್ನೇಹಿತರು, ಬಂಧುಗಳನ್ನು ನಂಬಿದೆ, ಆದರೆ ಕೆಲಸ ಆಗುತ್ತಿಲ್ಲ, ಅವರನ್ನು ಅವಲಂಬಿಸದೆ ಈ ಬಾರಿ ನಾನೇ ಸಾಧ್ಯವಾದಷ್ಟು ಕಟಾವು ಮಾಡಬೇಕು ಎನ್ನುತ್ತಾನೆ. ಮರಿಗಳ ಬಾಯಿಂದ ಈ ಮಾತು ಕೇಳಿದ ಪಕ್ಷಿ, ಓಹೋ ಹಾಗಿದ್ರೆ ಇಲ್ಲಿಂದ ಹೊರಡುವ ಸಮಯ ಬಂದಿದೆ. ಸಿದ್ಧರಾಗಿ ಇಲ್ಲಿಂದ ಹೊರಡೋಣ, ರಾತ್ರಿಯೇ ಹೊಸ ಗೂಡು ಕಟ್ಟೋಣ ಎಂದು ಮರಿಗಳಿಗೆ ಹೇಳಿತು. ಅಮ್ಮನ ಮಾತನ್ನು ಕೇಳಿ ಮರಿಗಳು ಆಶ್ಚರ್ಯ ವ್ಯಕ್ತಪಡಿಸಿದವು. ಮೊದಲು 2 ದಿನಗಳು ನೀವು ಹೇಳಿದಂತೆ ಇಲ್ಲಿ ರೈತ ಏನೂ ಕೆಲಸ ಮಾಡಲಿಲ್ಲ. ಆದರೆ ಈಗ ಆತ ಕೆಲಸ ಮಾಡುತ್ತಾನೆ ಎಂದು ಹೇಗೆ ನಂಬಿದೆ ಎಂದು ಕೇಳುತ್ತವೆ.

ಮರಿಗಳ ಪ್ರಶ್ನೆಗೆ ಉತ್ತರಿಸುವ ತಾಯಿ ಹಕ್ಕಿ, ರೈತನು ಇದಕ್ಕೂ ಮುನ್ನ ತನ್ನ ಕೆಲಸಕ್ಕೆ ಇತರರನ್ನು ಅವಲಂಬಿಸಿದ್ದನು. ಆದರೆ ಅದರಿಂದ ಆತನ ಕೆಲಸಗಳು ಸಫಲವಾಗಲಿಲ್ಲ. ಆದರೆ ಈಗ ಆತ ತಾನೊಬ್ಬನೇ ಕೆಲಸ ಮಾಡಲು ಮುಂದಾಗಿದ್ದಾನೆ. ತನ್ನ ಕೆಲಸದ ಮೇಲೆ ಆತ ನಂಬಿಕೆ ಇಟ್ಟಿದ್ದಾನೆ. ನಾಳೆ ಅವನು ಖಂಡಿತವಾಗಿಯೂ ಫಸಲು ಕೊಯ್ಯುತ್ತಾನೆ. ಇತರರನ್ನು ಅವಲಂಬಿಸಿರುವ ವ್ಯಕ್ತಿಯು ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಅವನ ಮೇಲೆ ನಂಬಿಕೆಯಿದ್ದರೆ ಅವನು ಕೆಲಸ ಮಾಡಬಹುದು. ಅಲ್ಲದೆ, ಇತರರ ಸಹಾಯವನ್ನು ಅವಲಂಬಿಸಿದರೆ ಯಶಸ್ಸು ಸಾಧಿಸಲಾಗುವುದಿಲ್ಲ. ನಮ್ಮನ್ನು ನಾವು ನಂಬಿ ಮುನ್ನಡೆಯಬಹುದು. ನೀವೂ ಅಷ್ಟೇ, ನಿಮ್ಮ ಮೇಲೆ ನಂಬಿಕೆ ಇಡಿ. ಇತರರನ್ನು ನಂಬಿ ತಪ್ಪು ನಿರ್ಧಾರ ಕೈಗೊಳ್ಳಬೇಡಿ ಎಂದು ಬುದ್ಧಿ ಹೇಳುತ್ತದೆ.

ಈ ಮಾತು ಆ ರೈತ, ಹಕ್ಕಿಗಳಿಗೆ ಮಾತ್ರವಲ್ಲ ಎಲ್ಲರಿಗೂ ಅನ್ವಯಿಸುತ್ತದೆ. ನಿಮ್ಮ ಕೆಲಸಕ್ಕೆ ಮತ್ತೊಬ್ಬರನ್ನು ನಂಬುವ ಬದಲು, ನಿಮ್ಮನ್ನು ನಂಬಿ ಮುನ್ನಡೆಯಿರಿ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿರುತ್ತದೆ. ಇತರರ ಸಹಾಯದಿಂದ ಸಾಧಿಸಿದ ಯಶಸ್ಸಿಗಿಂತ ನಿಮ್ಮನ್ನು ನಂಬುವ ಮೂಲಕ ಸಾಧಿಸಿದ ಯಶಸ್ಸು ಸಿಹಿಯಾದ ಗುರುತಾಗಿ ಉಳಿಯುತ್ತದೆ.

mysore-dasara_Entry_Point