ಕನ್ನಡ ಸುದ್ದಿ  /  Lifestyle  /  Weekend Marriage: What Is This Weekend Marriage? Know Its Pros And Cons

Weekend marriage: ಏನಿದು ವೀಕೆಂಡ್‌ ಮ್ಯಾರೇಜ್‌? ಇದರ ಸಾಧಕ- ಬಾಧಕಗಳೇನು?

ಇಬ್ಬರು ವ್ಯಕ್ತಿಗಳು ಆಳವಾಗಿ ಪ್ರೀತಿಸುತ್ತಿದ್ದು, ಸಾಮಾಜಿಕ ಕಾರಣಗಳು, ವೈಯಕ್ತಿಕ ಕಾರಣಗಳಿಂದ ವಾರಾಂತ್ಯದ ಮದುವೆ ಒಂಬ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಟ್ರೆಂಡ್‌ ಸದ್ಯ ಜಪಾನ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಇದನ್ನು ಪ್ರತ್ಯೇಕಗೊಳ್ಳುವ ವಿವಾಹ ಎಂದೂ ಕರೆಯುತ್ತಾರೆ. ವಾರಾಂತ್ಯದಲ್ಲಿ ಮಾತ್ರ ದಂಪತಿಗಳಂತೆ ಇರುವ ಜೋಡಿಗಳು ವಾರದ ದಿನಗಳಲ್ಲಿ ದೂರವಾಗಿರುತ್ತಾರೆ.

ಸಂಬಂಧ
ಸಂಬಂಧ

ಮಿಲೇನಿಯಲ್‌ ಯುಗದ ಹುಡುಗ-ಹುಡುಗಿಯರಿಗೆ ಮದುವೆ ಎಂದರೆ ಅಲರ್ಜಿ. ಕೆಲವರು ಮದುವೆಯಾಗುವುದೇ ಬೇಡ ಎಂದು ನಿರ್ಧಾರ ಮಾಡಿದರೆ, ಇನ್ನೂ ಕೆಲವರು ತಡವಾಗಿ ಮದುವೆಯಾಗುತ್ತೇವೆ ಎನ್ನುತ್ತಾರೆ. ಆದರೆ ಮದುವೆ ಬೇಡ ಎನ್ನುವುದಕ್ಕೆ ಕಾರಣ ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಭಯ. ಆ ಕಾರಣಕ್ಕೆ ಪ್ರೀತಿ ಬೇಕು, ಮದುವೆ ಬೇಡ ಎಂಬ ನಿರ್ಧಾರಕ್ಕೆ ಬರುತ್ತಾರೆ. ಮದುವೆಯ ನಂತರ ಒಬ್ಬರಿಗೊಬ್ಬರು ಹೊಂದಿಕೊಳ್ಳದೇ ದೂರವಾಗಬಹುದು ಎಂಬ ಭಯವೂ ಅವರನ್ನು ಕಾಡುವ ಸಾಧ್ಯತೆ ಇದೆ. ಇಬ್ಬರು ವ್ಯಕ್ತಿಗಳು ಆಳವಾಗಿ ಪ್ರೀತಿಸುತ್ತಿದ್ದು, ಸಾಮಾಜಿಕ ಕಾರಣಗಳು, ವೈಯಕ್ತಿಕ ಕಾರಣಗಳಿಂದ ವಾರಾಂತ್ಯದ ಮದುವೆ ಒಂಬ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಟ್ರೆಂಡ್‌ ಸದ್ಯ ಜಪಾನ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಇದನ್ನು ಪ್ರತ್ಯೇಕಗೊಳ್ಳುವ ವಿವಾಹ ಎಂದೂ ಕರೆಯುತ್ತಾರೆ. ವಾರಾಂತ್ಯದಲ್ಲಿ ಮಾತ್ರ ದಂಪತಿಗಳಂತೆ ಇರುವ ಜೋಡಿಗಳು ವಾರದ ದಿನಗಳಲ್ಲಿ ದೂರವಾಗಿರುತ್ತಾರೆ. ಅವರು ಕುಟುಂಬದ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಾರೆ, ಆದರೆ ಒಂದೇ ಮನೆಯಲ್ಲಿ ವಾಸಿಸುವುದಿಲ್ಲ.

ವೀಕೆಂಡ್‌ ಮ್ಯಾರೇಜ್‌ ಎಂದರೆ?

ಇದು ದಂಪತಿಗಳು ವಾರದ ದಿನಗಳಲ್ಲಿ ತಮ್ಮ ಪಾಡಿಗೆ ತಾವಿದ್ದು, ವಾರಾಂತ್ಯದಲ್ಲಿ ಒಟ್ಟಿಗೆ ಜೀವಿಸುವ ಕ್ರಮ. ಈ ಟ್ರೆಂಡ್‌ ವಾರದ ದಿನಗಳಲ್ಲಿ ಅವರಿಗೆ ಸ್ವಾತಂತ್ರ್ಯ ನೀಡುತ್ತದೆ ಮಾತ್ರವಲ್ಲದೇ ಸ್ವತಂತ್ರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎನ್ನುತ್ತಾರೆ ಗೇಟ್‌ ವೇ ಆಫ್‌ ಹೀಲಿಂಗ್‌ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಚಾಂದಿನಿ ತುಗ್ನೈಟ್‌.

ಇಂದು ಜನರು ಸ್ವತಂತ್ರರಾಗಿರುವುದು ಅಥವಾ ವೈಯಕ್ತಿಕ ಜೀವನವನ್ನು ಹೆಚ್ಚು ಪ್ರೀತಿಸುತ್ತಾರೆ. ಅಲ್ಲದೇ ತಮ್ಮ ವೈಯಕ್ತಿಕ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಕೂಡ ಅವರು ಬಯಸುವುದಿಲ್ಲ. ಆದರೆ ವ್ಯಕ್ತಿಯೊಬ್ಬ ಸಂಬಂಧದ ಬಂಧನದಲ್ಲಿದ್ದಾಗ ವೈಯಕ್ತಿಕ ಬದುಕಿನ ಮೇಲೆ ನಿರ್ಬಂಧಗಳಿರುತ್ತವೆ. ವಾರಾಂತ್ಯದ ಮದುವೆ ಪರಿಕಲ್ಪನೆಯಲ್ಲಿ ನೀವು ಆ ವ್ಯಕ್ತಿಯನ್ನು ಅಂದರೆ ನಿಮ್ಮ ಪ್ರೇಮಿಯನ್ನು ಪ್ರತಿದಿನ ಭೇಟಿ ಮಾಡಬೇಕು ಎಂಬುದಿಲ್ಲ, ಅದರೊಂದಿಗೆ ಸಮಯ ಕಳೆಯಬೇಕು ಎಂಬುದಿಲ್ಲ.

ʼಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಪರಸ್ಪರ ಒಬ್ಬರಿಗೊಬ್ಬರು ಸಮಯ ನೀಡುವುದು ಕಷ್ಟ ಸಾಧ್ಯವೇ ಸರಿ, ಆ ಕಾರಣಕ್ಕೆ ವೀಕೆಂಡ್‌ ಮದುವೆ ಪರಿಕಲ್ಪನೆ ಬೆಸ್ಟ್‌ʼ ಎನ್ನುತ್ತಾರೆ ಖಾಸಗಿ ಕಂಪನಿಯೊಂದರ ಉದ್ಯೋಗಿ ಶೀತಲ್‌ ಶರ್ಮಾ.

ವೀಕೆಂಡ್‌ ಮದುವೆ ಹಿಂದೆ ಬಿದ್ದಿರುವುದೇಕೆ ಯುವಜನ?

ಸ್ವತಂತ್ರ ಜೀವನ

ಮಿಲೇನಿಯಲ್‌ ಹುಡುಗ-ಹುಡುಗಿಯರು ಹಲವು ಕಾರಣಗಳಿಂದ ಈ ರೀತಿ ಒಪ್ಪಂದಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ವಾರದಲ್ಲಿ ದಿನಗಳಲ್ಲಿ ಯಾವುದೇ ಒಂಟಿತನವನ್ನು ಅನುಭವಿಸದೇ ಸ್ವತಂತ್ರವಾಗಿ ಜೀವಿಸುವುದು. ವೈಯಕ್ತಿಕ ಕೆಲಸ, ಮನೆ ಹೀಗೆ ಪ್ರತಿ ವಿಷಯದಲ್ಲೂ ಸ್ವಾತಂತ್ರ್ಯ ಬಯಸುವ ಕಾರಣ ಈ ಪರಿಕಲ್ಪನೆಯನ್ನು ಮೆಚ್ಚುತ್ತಿದ್ದಾರೆ.

ʼವಾರದ ದಿನಗಳಲ್ಲಿ ಹವ್ಯಾಸ, ಆಸಕ್ತಿಗೆ ಯಾವುದೇ ಭಂಗ ಬರದಂತೆ ಬದುಕುಬಹುದು. ಜೊತೆಗೆ ವೈಯಕ್ತಿಕ ಜಾಗ, ಸಮಯವನ್ನು ಬಯಸುವವರಿಗೂ ಇದು ಬೆಸ್ಟ್‌ʼ ಎನ್ನುತ್ತಾರೆ ತಜ್ಞರು.

ವಾರಾಂತ್ಯದಲ್ಲಿ ಒಂದಾಗಿರುವ ಖುಷಿ

ವಾರಾಂತ್ಯದ ಮದುವೆಯನ್ನು ಸಂಗಾತಿಗಳು ಮೆಚ್ಚಲು ಇರುವ ಇನ್ನೊಂದು ಕಾರಣ ವಾರದ ದಿನಗಳ ಕೆಲಸದ ಜಂಜಾಟ, ಟ್ರಾಫಿಕ್‌ ಕಿರಿಕಿರಿ, ಬಾಸ್‌ನ ಒತ್ತಡ, ಕಚೇರಿ ಕೆಲಸ ಈ ಎಲ್ಲಾ ಕಿರಿಕಿರಿಗಳಿಂದ ದೂರವಿದ್ದು, ಸಂಗಾತಿಯೊಂದಿಗೆ ಸಂತಸದಿಂದ ಸಮಯ ಕಳೆಯಲು ವಾರಾಂತ್ಯ ಬೆಸ್ಟ್‌. ವಾರಾಂತ್ಯದಲ್ಲಿ ಅವರ ಖುಷಿಗೆ ಅಡ್ಡಿಪಡುವ ಯಾವ ಅಂಶಗೂ ಇರುವುದಿಲ್ಲ. ವಾರಾಂತ್ಯದಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವುದು, ಪಿಕ್ನಿಕ್‌ ಹೋಗುವುದು, ಸಿನಿಮಾಕ್ಕೆ ಹೋಗುವುದು, ತಮ್ಮ ಇಷ್ಟದ ಚಟುವಟಿಕೆಗಳನ್ನು ಒಟ್ಟಾಗಿ ಮಾಡುವುದು ಮಾಡಬಹುದು. ಇದರಿಂದ ಇಬ್ಬರ ನಡುವೆ ಸಂಬಂಧದ ಬಂಧ ಗಟ್ಟಿಯಾಗುತ್ತದೆ. ಇದರಿಂದ ಒಬ್ಬರ ಮೇಲೆ ತೀರಾ ಭಾವನಾತ್ಮಕವಾಗಿ ಅವಲಂಬಿತರಾಗುವುದನ್ನು ತಪ್ಪಿಸಿ, ಸ್ವತಂತ್ರರಾಗಿ ಭವಿಷ್ಯವನ್ನು ಮುನ್ನೆಡಸಲು ಧೈರ್ಯ ಮೂಡುತ್ತದೆ ಎನ್ನುತ್ತಾರೆ ಚಾಂದಿನಿ.

ದಂಪತಿ
ದಂಪತಿ

ವೃತ್ತಿಯ ಮೇಲೆ ಗಮನ ಹರಿಸಲು ಅವಕಾಶ

ಅಧಿಕ ಕೆಲಸದ ಅವಧಿ, ಶಿಫ್ಟ್‌ ವರ್ಕ್‌ ಮಾಡುವವರಿಗೆ ಕೆಲಸ ಹಾಗೂ ಕುಟುಂಬ ಎರಡೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಕಷ್ಟವಾಗಬಹುದು. ಅಲ್ಲದೇ ಎರಡಕ್ಕೂ ನ್ಯಾಯ ಸಿಗದೆ ಒದ್ದಾಡುವಂತಾಗಬಹುದು. ಅಂತಹ ಸಂದರ್ಭದಲ್ಲಿ ವೀಕೆಂಡ್‌ ಮದುವೆ ಬೆಸ್ಟ್‌ ಎನ್ನಿಸಿಕೊಳ್ಳುತ್ತದೆ. ವಾರಾಂತ್ಯದಲ್ಲಿ ಕೆಲಸದ ಒತ್ತಡ ಇಲ್ಲದೆ, ನೆಮ್ಮದಿ ಇರುವ ಕಾರಣ ಸಂಗಾತಿಯೊಂದಿಗೆ ಆರಾಮವಾಗಿ ಸಮಯ ಕಳೆಯಲು ಸಾಧ್ಯವಾಗುತ್ತದೆ.

ಹಣಕಾಸಿನ ಬಲ

ವಿಕೇಂಡ್‌ ಮದುವೆ ಎಂದರೆ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ. ಇದರಿಂದ ವೈಯಕ್ತಿಕವಾಗಿ ಹಣ ಉಳಿತಾಯ ಮಾಡುವ ಸಾಧ್ಯತೆ ಹೆಚ್ಚು. ವಾರದ ದಿನಗಳಲ್ಲಿ ಒಬ್ಬರೇ ಬದುಕುವ ಕಾರಣ ಹಣ ಖರ್ಚಿನ ಸಂಭವವೂ ಕಡಿಮೆ.

ವಿಕೆಂಡ್‌ ಮದುವೆ ಸಾಧಕ-ಬಾಧಕಗಳೇನು

ಈ ಪರಿಕಲ್ಪನೆ ತಮ್ಮ ಒತ್ತಡದ ವೇಳಾಪಟ್ಟಿಗಳ ನಡುವೆ ಯಶಸ್ವಿ ದಾಂಪತ್ಯವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿರುವ ದಂಪತಿಗಳಿಗೆ ಆದ್ಯತೆಯ ಪರಿಹಾರವಾಗಿದೆ ಎನ್ನುತ್ತಾರೆ ಚಾಂದಿನಿ.

ಆದರೂ ಇದರಲ್ಲಿ ಕೆಲವೊಂದು ಸಾಧಕ- ಬಾಧಕಗಳೂ ಇವೆ.

ವಾರಾಂತ್ಯದ ಮದುವೆಯ ಸಾಧಕಗಳು

1. ಇದು ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಬದುಕಿಗೆ ಸ್ಥಿರತೆಯನ್ನು ಒದಗಿಸುತ್ತದೆ. ಸ್ವಂತ ಆಸಕ್ತಿ ಹಾಗೂ ಕೆಲಸಗಳ ಮೇಲೆ ಗಮನ ಹರಿಸಲು ಅನುವು ಮಾಡಿಕೊಡುತ್ತದೆ. ನಮ್ಮ ವೈಯಕ್ತಿಕ ಬದುಕಿನ ಮೇಲೆ ಹೆಚ್ಚು ಗಮನ ಕೊಡಲು ಹಾಗೂ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ.

2. ಇದರಿಂದ ಉತ್ತಮ ಹಣಕಾಸಿನ ಹಾಗೂ ಬಂಡವಾಳದ ಯೋಜನೆಯನ್ನು ರೂಪಿಸಲು ದಂಪತಿಗೆ ನೆರವಾಗುತ್ತದೆ. ಸಹಜ ಮದುವೆಯಲ್ಲಿ ಮನೆ, ಸಂಸಾರ ಎಂದುಕೊಂಡು ಖರ್ಚು ಅಧಿಕ, ಆದರೆ ಇದರಲ್ಲಿ ಹಾಗಿಲ್ಲ. ಭವಿಷ್ಯದ ಯೋಜನೆಯನ್ನು ತಲೆಯಲ್ಲಿ ಇರಿಸಿಕೊಂಡು ಇಬ್ಬರು ಜೊತೆಯಾಗಿ ಬಂಡವಾಳ ಹೂಡಲು ಇದರಿಂದ ಸಾಧ್ಯ.

3. ಮಾನಸಿಕ ಬೆಂಬಲ ಸಿಗುತ್ತದೆ. ಇಬ್ಬರಿಗೂ ತಮ್ಮದೇ ಆದ ವೈಯಕ್ತಿಕ ಸಮಯ ಸಿಗುತ್ತದೆ. ಇದು ಇಬ್ಬರ ನಡುವಿನ ಸಂವಹನದ ಅಂತರವನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಒಬ್ಬರಿಗೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೀವನದ ಯಾವುದೇ ಬಂಧನಗಳಿಲ್ಲದೇ ಇಬ್ಬರು ಜೊತೆಯಾಗಿ ತಮ್ಮ ಗುರಿ ಸಾಧನೆಯತ್ತ ಗಮನ ಹರಿಸಲು ನೆರವಾಗುತ್ತದೆ.

ಬಾಧಕಗಳೇನು?

1. ಭಾರತದಲ್ಲಿ ಇಂತಹ ವ್ಯವಸ್ಥೆಗಳ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನದ ಕೊರತೆ ಇರುವ ಕಾರಣ ಇದನ್ನು ವ್ಯಾಪಕವಾಗಿ ಅಂಗೀಕರಿಸುವುದು ಅನುಮಾನ.

2. ಭಾರತ ಶಾಸ್ತ್ರ, ಸಂಪ್ರದಾಯಕ್ಕೆ ಹೆಚ್ಚು ಪ್ರಾಮುಖ್ಯ ಕೊಡುವ ಕಾರಣ ಮದುವೆಯಾದವರು ತಮ್ಮೊಂದಿಗೆ ತಮ್ಮ ಮನೆಯಲ್ಲೇ ಇರಬೇಕು ಎಂದು ಬಯಸುತ್ತಾರೆ. ಇಂತಹ ಮದುವೆಯನ್ನು ಹಾಗೂ ದೂರವಾಗಿ ಇರುವುದನ್ನು ಭಾರತೀಯರು ಒಪ್ಪುವುದೂ ಕಷ್ಟ. ವಾರಾಂತ್ಯದ ಮದುವೆಯ ರೀತಿಯ ಬೇರ್ಪಡಿಕೆಗೆ ಹೊಂದಿಕೊಳ್ಳಲು ದಂಪತಿಗಳಿಗೆ ಕಷ್ಟವಾಗಬಹುದು ಮತ್ತು ನಿರೀಕ್ಷೆಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಹೆಚ್ಚಿನ ಉದ್ವೇಗಕ್ಕೆ ಕಾರಣವಾಗಬಹುದು.

3. ಪ್ರತಿ ವಾರಾಂತ್ಯದಲ್ಲಿ ದಂಪತಿಗಳು ಒಂದೇ ಸ್ಥಳದಲ್ಲಿ ಒಟ್ಟಿಗೆ ಇರಲು ಸಾಧ್ಯವಾಗದಿದ್ದಲ್ಲಿ ಪ್ರಯಾಣದ ವೆಚ್ಚಗಳಂತಹ ಸಂಭಾವ್ಯ ಹಣಕಾಸಿನ ಅಡೆತಡೆಗಳನ್ನೂ ಅನುಭವಿಸುವ ಸಾಧ್ಯತೆ ಹೆಚ್ಚು.

ಭಾರತದಲ್ಲಿ ವೀಕೆಂಡ್‌ ಮದುವೆ ಪರಿಕಲ್ಪನೆ ಸಾಧ್ಯವೇ?

ಭಾರತದಲ್ಲಿ ಇಂತಹ ಪರಿಕಲ್ಪನೆಗಳನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟವೇ, ಆದರೆ ಮುಂದೆ ಇದು ಭಾರತದಲ್ಲೂ ಅನ್ವಯವಾಗಬಾರದು ಎಂದಿಲ್ಲ. ಭಾರತವು ಕುಟುಂಬ ಸಹಭಾಗಿತ್ವವನ್ನು ಮೆಚ್ಚುವ ದೇಶ. ನಮ್ಮ ಕುಟುಂಬ, ಸಂಪ್ರದಾಯಕ್ಕೆ ಬೆಲೆ ಕೊಡುವ ಉದ್ದೇಶದಿಂದ ಮದುವೆಯಾದ ಮೇಲೆ ಜೊತೆಯಾಗಿಯೇ ಇರಲು ಬಯಸುತ್ತಾರೆ. ಆದರೆ ಇಂದಿನ ಜಮಾನದ ಜೋಡಿಗಳಿಗೆ ವೈಯಕ್ತಿಕ ಬದುಕು ಹಾಗೂ ಸ್ವತಂತ್ರ ಜೀವನದ ಮೇಲೆ ಹೆಚ್ಚಿರುವ ಕಾರಣ ಮುಂದಿನ ದಿನಗಳಲ್ಲಿ ಇಂತಹ ಪರಿಕಲ್ಪನೆ ಭಾರತದಲ್ಲೂ ಕಾಣಬಹುದು.

ವಿಭಾಗ