ಕನ್ನಡ ಸುದ್ದಿ  /  Lifestyle  /  Weight Gain Life Style Health And Fitness Add These 8 Fruits In Your Daily Diet To Gain Weight Fitness Tips Bgy

Weight Gain: ಎಷ್ಟೇ ತಿಂದ್ರು ತೂಕ ಹೆಚ್ಚುತ್ತಿಲ್ಲ ಅನ್ನೋ ಬೇಸರನಾ? ಹಾಗಿದ್ರೆ ಈ ಹಣ್ಣುಗಳನ್ನು ಸೇವಿಸಿ ನೋಡಿ

ಅಧಿಕ ತೂಕದ ಸಮಸ್ಯೆಯಿಂದಾಗಿ ತೂಕ ಇಳಿಸಿ ಆರೋಗ್ಯವಾಗಿರಲು ಬಯಸುವ ಮಂದಿ ಒಂದೆಡೆಯಾದರೆ, ದೇಹದ ತೂಕ ಹೆಚ್ಚಿಸಿಕೊಳ್ಳುವುದರ ಜೊತೆಗೆ ಸ್ನಾಯುಗಳನ್ನು ಬಲಪಡಿಸಲು ಬಯಸುವವರು ಅನೇಕರಿದ್ದಾರೆ. ಅಂಥವರು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದಾದ ಪ್ರೊಟೀನ್‌ಯುಕ್ತ ಹಣ್ಣುಗಳ ಮಾಹಿತಿ ಇಲ್ಲಿದೆ. (ಲೇಖನ: ಭಾಗ್ಯ ದಿವಾಣ)

ತೂಕ ಹೆಚ್ಚಲು ಈ ಹಣ್ಣುಗಳನ್ನು ಸೇವಿಸಿ
ತೂಕ ಹೆಚ್ಚಲು ಈ ಹಣ್ಣುಗಳನ್ನು ಸೇವಿಸಿ

ಸಾಮಾನ್ಯವಾಗಿ ಅಧಿಕ ತೂಕವುಳ್ಳವರು ಆಹಾರ ಕ್ರಮದಲ್ಲಿ ಶಿಸ್ತುಬದ್ಧರಾಗಿದ್ದು, ದೇಹಕ್ಕೆ ಅಗತ್ಯವಿರುವಷ್ಟು ವ್ಯಾಯಾಮ ಮಾಡುವ ಮೂಲಕ ತೂಕವನ್ನು ಇಳಿಸಿಕೊಳ್ಳಬಹುದು. ಇಲ್ಲವೇ ತೂಕ ಏರಿಕೆಯಾಗದಂತೆ ನೋಡಿಕೊಳ್ಳಬಹುದು. ಆದರೆ ಆರೋಗ್ಯಕರವಾಗಿಯೇ ದೇಹದ ತೂಕವನ್ನು ವೃದ್ಧಿಸಿಕೊಂಡು ಸ್ನಾಯುಗಳನ್ನೂ ಬಲಪಡಿಸಿಕೊಳ್ಳುವುದು ಕಷ್ಟಕರ ಕೆಲಸ. ತೂಕವನ್ನು ಹೆಚ್ಚಿಸಿಕೊಳ್ಳಲು ಸಾಮಾನ್ಯವಾಗಿರುವುದಕ್ಕಿಂತಲೂ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸುವ ಅಗತ್ಯವಿರುತ್ತದೆ. ಅದರಲ್ಲೂ ನಿಮ್ಮ ಆಹಾರದಲ್ಲಿ ಹೆಚ್ಚಿನ ಕ್ಯಾಲೋರಿ ಇರುವ ಹಣ್ಣುಗಳನ್ನು ಸೇರಿಸಿದರೆ, ಆರೋಗ್ಯಕರವಾಗಿಯೇ ನಿಮ್ಮ ದೇಹದ ಹೆಚ್ಚಿಸಿಕೊಳ್ಳಬಹುದು.

ನೊರಿಶ್ ನ್ಯಾಚುರಲಿ ಸಂಸ್ಥೆಯ ಮುಖ್ಯಸ್ಥೆ ಹಾಗೂ ಆಹಾರತಜ್ಞೆ ರೂಪಾಲಿ ಮಾಥುರ್ ಸೂಚಿಸುವಂತೆ, ಅಧಿಕ ಕ್ಯಾಲೊರಿಯ ಜೊತೆಗೆ ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳಿವು

ತೂಕ ವೃದ್ಧಿಸಲು ಸಹಕಾರಿ ಬಾಳೆಹಣ್ಣು

ದೇಹದ ತೂಕವನ್ನು ಆರೋಗ್ಯಕರವಾಗಿ ಹೆಚ್ಚಿಸಲು ಪ್ರಮುಖವಾಗಿ ನಾವು ದಿನಕ್ಕೆ ಎರಡು ಬಾಳೆಹಣ್ಣುಗಳನ್ನು ತಿನ್ನುವ ರೂಢಿಯನ್ನು ಮಾಡಿಕೊಳ್ಳಬಹುದು. ಯಾಕೆಂದರೆ ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌, ಫೈಬರ್, ವಿಟಮಿನ್ B6, ಮೆಗ್ನೀಸಿಯಮ್‌ ಮತ್ತು ಪೊಟ್ಯಾಶಿಯಂ ಇದ್ದು, ಬಾಳೆಹಣ್ಣು ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಇದರಲ್ಲಿ ಅಧಿಕ ಕ್ಯಾಲರಿ ಹಾಗೂ ಕಾರ್ಬ್ಸ್ ಇರುವ ಕಾರಣದಿಂದಾಗಿ ಇದು ತೂಕ ವೃದ್ಧಿಸಲು ಸಹಕಾರಿ.

ದುಬಾರಿಯಾದರೂ ಬಲು ಬೇಡಿಕೆಯ ಆವಕಾಡೊ

ಅವಕಾಡೊ ಅಷ್ಟಾಗಿ ಎಲ್ಲರಿಗೂ ರುಚಿಸುವುದಿಲ್ಲ. ಅಲ್ಲದೆ ದುಬಾರಿ ಹಣ್ಣೂ ಹೌದು. ಆದರೂ ಆರೋಗ್ಯಕ್ಕೆ ಉತ್ತಮವೆಂಬ ಕಾರಣಕ್ಕಾಗಿ ಅನೇಕ ಮಂದಿ ತಮ್ಮ ಆಹಾರದಲ್ಲಿ ಅದನ್ನು ಬಳಕೆ ಮಾಡುತ್ತಾರೆ. ಆರೋಗ್ಯಕರ ಕೊಬ್ಬು, ವಿಟಮಿನ್ ಕೆ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಹಲವು ಪೋಷಕಾಂಶಗಳು ಅವಕಾಡೋ ಸೇವನೆಯಿಂದ ನಮ್ಮ ದೇಹಕ್ಕೆ ಲಭ್ಯವಾಗುತ್ತದೆ. ಇದು ತೂಕ ವೃದ್ಧಿಸಲು ಸಹಕಾರಿಯಾಗಿದೆ.

ಆರೋಗ್ಯಕರ ಕೊಬ್ಬಿನ ಮೂಲ ಎಳನೀರಿನ ತಿರುಳು

ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತಿರುವ ಎಳನೀರು ಎಲ್ಲಾ ಕಾಲಕ್ಕೂ ಸಾಕಷ್ಟು ಬೇಡಿಕೆಯನ್ನು ಹೊಂದಿದೆ. ಎಳನೀರು ರುಚಿಕರ ಮಾತ್ರವಲ್ಲದೆ ಆರೋಗ್ಯಕರವೂ ಆಗಿರುವಂತೆ, ಎಳನೀರಿನ ತಿರುಳೂ ಸಹ ರುಚಿಯ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಯನ್ನು ಹೊಂದಿದೆ. ಇದರ ತಿರುಳನ್ನು ತಿಂದರೆ ಅದು ಹಲವಾರು ರೀತಿಯ ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ. ಹೆಚ್ಚುವರಿಯಾಗಿ, ಎಳನೀರಿನ ತಿರುಳಿನಲ್ಲಿ ಆರೋಗ್ಯಕರ ಕೊಬ್ಬು, ರಂಜಕ ಮತ್ತು ತಾಮ್ರದಂತಹ ಅಗತ್ಯ ಖನಿಜಗಳು ತುಂಬಿಕೊಂಡಿರುತ್ತದೆ.

ಅಧಿಕ ಕ್ಯಾಲೊರಿಯ ಮಾವಿನಹಣ್ಣು

ಹಣ್ಣುಗಳ ರಾಜನೆಂಬ ಖ್ಯಾತಿ ಪಡೆದಿರುವ ಮಾವಿನ ಹಣ್ಣುಗಳು ಬೇಸಿಗೆ ಕಾಲಕ್ಕೆ ಸೀಮಿತವಾದರೂ, ತೂಕ ವೃದ್ಧಿಸಲು ಬಲು ಸಹಕಾರಿಯಾಗಿದೆ. ಸಿಹಿ ಮತ್ತು ರಸಭರಿತವಾದ ಮಾವಿನ ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ವಿಟಮಿನ್ ಎ, ಸಿ, ಇ ಮತ್ತು ಅನೇಕ ಜೀವಸತ್ವಗಳನ್ನು ಲಭ್ಯವಾಗುತ್ತದೆ. ನಾರಿನ ಉತ್ತಮ ಮೂಲವಾಗಿರುವ ಮಾವು, ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.

ತೂಕ ಹೆಚ್ಚಿಸಲು ತಿನ್ನಲೇ ಬೇಕು ಖರ್ಜೂರ

ಮೂರ್ತಿ ಚಿಕ್ಕಾದಾದರೂ ಕೀರ್ತಿ ದೊಡ್ಡದು ಎಂಬಂತೆ ನೋಡುವುದಕ್ಕೆ ಬಲು ಚಿಕ್ಕ ಹಣ್ಣುಗಳಾದರೂ ಖರ್ಜೂರ ಹಣ್ಣು ಶಕ್ತಿಯ ಮೂಲವಾಗಿದೆ. ಮರುಭೂಮಿಯ ಹಣ್ಣುಗಳೆಂದೇ ಕರೆಸಿಕೊಳ್ಳುವ ಖರ್ಜೂರದ ಪ್ರತಿ 100 ಗ್ರಾಂನಲ್ಲಿ ಸುಮಾರು 282 ಕ್ಯಾಲೋರಿಗಳಿವೆ. ಇದು ಕಾರ್ಬೋಹೈಡ್ರೇಟ್‌ಗಳು, ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಖನಿಜಗಳಿಂದ ಸಮೃದ್ಧವಾಗಿದೆ.

ರುಚಿಯ ಜೊತೆಗೆ ಪೌಷ್ಟಿಕಾಂಶಗಳನ್ನು ಒದಗಿಸುವ ಒಣದ್ರಾಕ್ಷಿ

ಮನೆಯಲ್ಲಿ ಯಾವುದೇ ಸಿಹಿ ತಿಂಡಿ ಮಾಡುವಾಗಲೂ ಅದರ ರುಚಿ ಹೆಚ್ಚಿಸುವ ಸಲುವಾಗಿ ಒಣದ್ರಾಕ್ಷಿಯನ್ನು ಹಾಕುವುದು ರೂಢಿ. ಇದು ಕೇವಲ ತಮ್ಮ ರುಚಿಗೆ ಹೆಸರುವಾಸಿ ಅಲ್ಲದೆ, ಅನೇಕ ರೀತಿಯ ಪೌಷ್ಟಿಕಾಂಶ ಮತ್ತು ಆರೋಗ್ಯ ಪ್ರಯೋಜನಗಳನ್ನು ಸಹ ಇದು ಹೊಂದಿದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ದ್ರಾಕ್ಷಿಯಲ್ಲಿ ಅಧಿಕ ಕ್ಯಾಲೊರಿಯೂ ಇದೆ. ಪ್ರತಿ ಕಪ್‌ನಲ್ಲಿ ಸರಿಸುಮಾರು 240 ಕ್ಯಾಲೋರಿಗಳಿದ್ದು, ಫೈಬರ್‌ನ ಮೂಲವೂ ಇದಾಗಿದೆ. ಅಲ್ಲದೆ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒದಗಿಸುವುದರ ಜೊತೆಗೆ ವಿಟಮಿನ್ ಕೆ ಮತ್ತು ಎ ಯ ಉತ್ತಮ ಮೂಲವಾಗಿದೆ.

ಏಪ್ರಿಕಾಟ್‌ಗಳ ಮಹತ್ವವವನ್ನು ತಿಳಿಯಲೇಬೇಕು

ಏಪ್ರಿಕಾಟ್‌ಗಳು ಬಲು ದಾಬಾರಿ ಹಣ್ಣುಗಳಷ್ಟೇ ಅಲ್ಲ, ಜೀರ್ಣಾಂಗ ವ್ಯವಸ್ಥೆಯಿಂದ ಕಣ್ಣಿನ ಆರೋಗ್ಯದವರೆಗೆ ಹಲವು ವಿಧಗಳಲ್ಲಿ ಆರೋಗ್ಯಕರ ಪ್ರಯೋಜನವನ್ನು ನೀಡುತ್ತವೆ. ಪ್ರತಿ ಕಪ್‌ಗೆ ಸುಮಾರು 241 ಕ್ಯಾಲೊರಿಗಳನ್ನು ನಮ್ಮ ದೇಹಕ್ಕಿದು ಒದಗಿಸುತ್ತದೆ. ಅವುಗಳು ಬೀಟಾ-ಕ್ಯಾರೋಟಿನ್, ಲುಟೀನ್ ಮತ್ತು ಜಿಯಾಕ್ಸಾಂಥಿನ್‌ಗಳಿಂದ ಸಮೃದ್ಧವಾಗಿವೆ. ಏಪ್ರಿಕಾಟ್‌ಗಳು ಫೈಬರ್‌ನ ಉತ್ತಮ ಮೂಲವಾಗಿದೆ. ಏಪ್ರಿಕಾಟ್‌ನಲ್ಲಿರುವ ರೆಟಿನಾಲ್ ಕೊಬ್ಬನ್ನು ಕರಗಿಸುವುದರಿಂದ, ಹಣ್ಣುಗಳು ದೇಹದಲ್ಲಿ ಸುಲಭವಾಗಿ ಕರಗುತ್ತವೆ ಮತ್ತು ಪ್ರಮುಖ ಪೋಷಕಾಂಶಗಳು ವ್ಯವಸ್ಥೆಯಿಂದ ಸುಲಭವಾಗಿ ಹೀರಲ್ಪಡುತ್ತವೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ.

ನಾರಿನಾಂಶ ಸಮೃದ್ಧ ಒಣ ಅಂಜೂರ

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಬಯಸುವವರಿಗೆ ಅಂಜೂರ ಉತ್ತಮ ಆಯ್ಕೆಯಾಗಿವೆ. ಇದರಲ್ಲಿನ ನಾರಿನ ಅಂಶ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಅತಿಯಾದ ಹಸಿವನ್ನು ತಡೆಯುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ತಾಜಾ ಅಥವಾ ಒಣಗಿಸಿದ ಅಂಜೂರ ಹಣ್ಣು, ಪ್ರತಿ ಕಪ್‌ನಲ್ಲಿ ಸುಮಾರು 186 ಕ್ಯಾಲೊರಿಗಳಿವೆ. ಒಣಗಿದ ಅಂಜೂರದ ಹಣ್ಣುಗಳು ಫೈಬರ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.

ದೇಹಕ್ಕೆ ಅನಗತ್ಯವೆನ್ನಿಸುವ ಆಹಾರಗಳಿಂದ ದೂರವಿದ್ದು, ನಿತ್ಯವೂ ಇಂತಹ ಕ್ಯಾಲೊರಿಯುಕ್ತ ಹಣ್ಣುಗಳನ್ನು ಸೇವನೆ ಮಾಡುವುದರ ಮೂಲಕ ಆರೋಗ್ಯಕರವಾಗಿಯೇ ನಮ್ಮ ದೇಹದ ತೂಕವನ್ನು ಹೆಚ್ಚಿಸಬಹುದು.

ವಿಭಾಗ