ಕನ್ನಡ ಸುದ್ದಿ  /  Lifestyle  /  Weight Loss Fitness Tips Flexitarian Diet 10 Reasons Why You Should Consider Following A Flexitarian Diet Rst

Flexitarian Diet: ತೂಕ ಇಳಿಸುವವರಿಗೆ ಬೆಸ್ಟ್‌ ಫ್ಲೆಕ್ಸಿಟೇರಿಯನ್ ಡಯೆಟ್; ಇದನ್ನು ಪಾಲಿಸುವುದರಿಂದಾಗುವ 10 ಪ್ರಯೋಜನಗಳಿವು

ಇತ್ತೀಚೆಗೆ ಹಲವರ ಮುಂದಿರುವ ಸವಾಲು ತೂಕ ಇಳಿಸೋದು ಹೇಗೆ ಎನ್ನುವುದು. ಅದಕ್ಕಾಗಿ ಹೊಸ ಹೊಸ ವೈಟ್‌ಲಾಸ್‌-ಡಯೆಟ್‌ ಕ್ರಮಗಳು ಟ್ರೆಂಡ್‌ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ಫ್ಲೆಕ್ಸಿಟೇರಿಯನ್‌ ಡಯೆಟ್‌ ಸಖತ್ ಟ್ರೆಂಡ್‌ ಆಗ್ತಿದೆ. ಇದನ್ನು ಪಾಲಿಸುವುದರಿಂದ ತೂಕ ಇಳಿಕೆಯ ಜೊತೆಗೆ ಹತ್ತಾರು ಆರೋಗ್ಯ ಪ್ರಯೋಜನಗಳೂ ಇವೆ. ತೂಕ ಇಳಿಸುವ ಯೋಚನೆ ನಿಮಗೂ ಇದ್ರೆ ಮುಂದೆ ಓದಿ.

ತೂಕ ಇಳಿಸುವವರಿಗೆ ಬೆಸ್ಟ್‌ ಫ್ಲೆಕ್ಸಿಟೇರಿಯನ್ ಡಯಟ್
ತೂಕ ಇಳಿಸುವವರಿಗೆ ಬೆಸ್ಟ್‌ ಫ್ಲೆಕ್ಸಿಟೇರಿಯನ್ ಡಯಟ್

ಎಷ್ಟೇ ವರ್ಕೌಟ್‌ ಮಾಡಿದ್ರು, ಡಯೆಟ್‌ ಮಾಡಿದ್ರು ತೂಕ ಕಡಿಮೆ ಆಗ್ತಿಲ್ಲ ಅನ್ನೋ ಚಿಂತೆ ಮಾಡೋರು ಬೇರೆ ಬೇರೆ ರೀತಿಯ ಡಯೆಟ್‌ ಕ್ರಮಗಳನ್ನು ಪಾಲಿಸುತ್ತಾರೆ. ಸದ್ಯ ಫ್ಲೆಕ್ಸಿಟೇರಿಯನ್‌ ಡಯೆಟ್‌ ಟ್ರೆಂಡ್‌ ಆಗುತ್ತಿದೆ. ಸಸ್ಯಹಾರಿಗಳಿಗೆ ಇದು ಹೆಚ್ಚು ಸೂಕ್ತ ಅನ್ನಿಸಿದ್ರೂ ಮಾಂಸಾಹಾರಿಗಳೂ ಪಾಲಿಸಲು ಅಡ್ಡಿಯಿಲ್ಲ. ಅದಕ್ಕೆ ಕಾರಣ ಇದರಲ್ಲಿ ಸಸ್ಯಹಾರಗಳ ಸೇವನೆಯ ಮೇಲೆ ಹೆಚ್ಚು ಗಮನ ಹರಿಸಿದರೂ ಆಗಾಗ ಮಾಂಸಾಹಾರ ಸೇವನೆಗೂ ಅವಕಾಶವಿದೆ. ಖ್ಯಾತ ಡಯಟಿಷಿಯನ್‌ ಡಾನ್‌ ಜಾಕ್ಸನ್‌ ಬ್ಲಾಟ್ನರ್‌ ಈ ಡಯೆಟ್‌ ಕ್ರಮವನ್ನು ಪರಿಚಯಿಸಿದ್ದಾರೆ. ಸಸ್ಯಾಹಾರದ ಆರೋಗ್ಯ ಪ್ರಯೋಜನಗಳನ್ನು ತಿಳಿಸಲು ಅವರು ಇದನ್ನು ಅಭಿವೃದ್ಧಿ ಪಡಿಸಿದ್ದರು. ಸಸ್ಯಾಹಾರ ಸೇವನೆಯೇ ಈ ಡಯೆಟ್‌ ಕ್ರಮದ ಪ್ರಮುಖ ಉದ್ದೇಶವಾದರೂ ಆಗಾಗ ಡೇರಿ ಉತ್ಪನ್ನಗಳು, ಮೀನು ಹಾಗೂ ಮಾಂಸವನ್ನೂ ಕೂಡ ಸೇವಿಸಬಹುದು ಎಂದು ಅವರು ಹೇಳುತ್ತಾರೆ.

ಫ್ಲೆಕ್ಸಿಟೇರಿಯನ್‌ ಡಯೆಟ್‌ ಮುಖ್ಯವಾಗಿ ಮಾಂಸ, ಪ್ರಾಣಿ ಉತ್ಪನ್ನಗಳನ್ನು ತಿನ್ನುವುದನ್ನು ಮಿತಗೊಳಿಸುವಂತೆ ಹಾಗೂ ಸಸ್ಯಜನ್ಯ ಉತ್ಪನ್ನಗಳನ್ನು ತಿನ್ನಲು ಪ್ರೋತ್ಸಾಹಿಸುವ ಡಯೆಟ್‌ ಕ್ರಮವಾಗಿದೆ. ಇದು ಕಟ್ಟುನಿಟ್ಟಾಗಿ ಸಸ್ಯಾಹಾರ ಸೇವಿಸುವವರಿಗೆ ಹೆಚ್ಚು ಹೊಂದುತ್ತದೆ.

ಹಾಗಂತ ಮಾಂಸಾಹಾರಿಗಳು ಬೇಸರ ಮಾಡುವ ಅಗತ್ಯವಿಲ್ಲ. ಮಾಂಸವನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಈ ಡಯೆಟ್‌ ಕ್ರಮದಲ್ಲಿ ಹೇಳುತ್ತಿಲ್ಲ. ನೀವು ಈ ಹೊಸ ಟ್ರೆಂಡ್‌ನ ಡಯೆಟ್‌ ಕ್ರಮವನ್ನು ಪಾಲಿಸುವ ಮುನ್ನ ಇದರ ಪ್ರಯೋಜನಗಳನ್ನು ತಿಳಿಯಿರಿ.

ಫ್ಲೆಕ್ಸಿಟೇರಿಯನ್‌ ಡಯೆಟ್‌ ಕ್ರಮ ಪಾಲಿಸುವುದರಿಂದಾಗುವ 10 ಪ್ರಯೋಜನಗಳು

ತೂಕ ನಿರ್ವಹಣೆ

ಫ್ಲೆಕ್ಸಿಟೇರಿಯನ್‌ ಆಹಾರವು ಸಸ್ಯ ಆಧಾರಿತ ಆಹಾರ ಸೇವನೆಯ ಮೇಲೆ ಕೇಂದ್ರೀಕರಿಸುತ್ತದೆ. ಈ ಆಹಾರಗಳಲ್ಲಿ ಸಾಮಾನ್ಯವಾಗಿ ಕ್ಯಾಲೊರಿ ಅಂಶ ಕಡಿಮೆ ಇರುತ್ತದೆ. ಪ್ರಾಣಿಜನ್ಯ ಉತ್ಪನ್ನಗಳಿಗಿಂತ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದು ಹೊಟ್ಟೆ ತುಂಬಿರುತ್ತದೆ. ಕ್ಯಾಲೊರಿ ಕಡಿಮೆ ಸೇವನೆಯ ಕಾರಣ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ ಸುಧಾರಿಸುತ್ತದೆ

ಫ್ಲೆಕ್ಸಿಟೇರಿಯನ್‌ ಡಯೆಟ್‌ ಕ್ರಮವು ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ. ಆಂಟಿಆಕ್ಸಿಡೆಂಟ್‌, ನಾರಿನಾಂಶ ಹಾಗೂ ಆರೋಗ್ಯಕರ ಕೊಬ್ಬಿನಾಂಶ ಇದರಲ್ಲಿ ಸಮೃದ್ಧವಾಗಿರುವ ಕಾರಣ ಹೃದ್ರೋಗದ ಅಪಾಯವನ್ನೂ ಕಡಿಮೆ ಮಾಡುತ್ತದೆ.

ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ

ಫ್ಲೆಕ್ಸಿಟೇರಿಯನ್‌ ಆಹಾರದಲ್ಲಿ ಸಸ್ಯಜನ್ಯ ಆಹಾರಗಳ ಸೇವನೆಯ ಪ್ರಮಾಣ ಹೆಚ್ಚಿರುವ ಕಾರಣದಿಂದ ಇದರಲ್ಲಿನ ನಾರಿನಾಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುವ ಮೂಲಕ ಮತ್ತು ಕರುಳಿನ ಬ್ಯಾಕ್ಟೀರಿಯಾದ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ.

ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ

ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಪೋಷಕಾಂಶ ದಟ್ಟವಾದ ಸಸ್ಯಜನ್ಯ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಮಧುಮೇಹ, ಕ್ಯಾನ್ಸರ್‌ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ

ಸಸ್ಯಜನ್ಯ ಆಹಾರಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಅದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ದಿನವಿಡೀ ದೇಹ ಚೈತನ್ಯದಿಂದ ಇರುವಂತೆ ಮಾಡುತ್ತದೆ. ಅಲ್ಲದೇ ಒಟ್ಟಾರೆ ದೈಹಿಕ ಯೋಗಕ್ಷೇಮ ವೃದ್ಧಿಯಾಗಲೂ ಸಹಕಾರಿ.

ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ

ಸಸ್ಯ ಆಧಾರಿತ ಆಹಾರಗಳಲ್ಲಿ ಕಂಡುಬರುವ ಪೋಷಕಾಂಶಗಳು ಮೆದುಳಿನ ಆರೋಗ್ಯಕ್ಕೆ ಅವಶ್ಯಕ. ಅರಿವಿನ ಕಾರ್ಯ ಸುಧಾರಣೆ, ಮನಸ್ಥಿತಿ ಮತ್ತು ಒಟ್ಟಾರೆ ಮಾನಸಿಕ ಯೋಗಕ್ಷೇಮ ಸುಧಾರಣೆಗೆ ಇದು ಸಹಾಯ ಮಾಡುತ್ತದೆ.

ಪ್ರತಿರಕ್ಷಣಾ ಕಾರ್ಯವನ್ನು ಸುಧಾರಿಸುತ್ತದೆ

ಸಸ್ಯ ಆಧಾರಿತ ಆಹಾರಗಳಲ್ಲಿನ ಉತ್ಕರ್ಷಣ ನಿರೋಧಕಗಳು ಹಾಗೂ ವಿಟಮಿನ್‌ ಅಂಶಗಳು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತವೆ. ಅಲ್ಲದೇ ದೇಹವನ್ನು ಸೋಂಕು ಹಾಗೂ ಅನಾರೋಗ್ಯದ ವಿರುದ್ಧ ಹೋರಾಡಲು ನೆರವಾಗುತ್ತದೆ.

ಉರಿಯೂತ ನಿವಾರಣೆ

ಸಸ್ಯ ಆಧಾರಿತ ಆಹಾರಗಳು ಉರಿಯೂತ ಗುಣಲಕ್ಷಣಗಳನ್ನು ಹೊಂದಿವೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ದೀರ್ಘಕಾಲದ ಕಾಯಿಲೆಗಳ ನಿವಾರಣೆಗೂ ಇದು ಉತ್ತಮ.

ಚರ್ಮದ ಆರೋಗ್ಯ ಸುಧಾರಣೆ

ಸಸ್ಯ-ಆಧಾರಿತ ಆಹಾರಗಳಲ್ಲಿ ಸಮೃದ್ಧವಾಗಿರುವ ಆಹಾರವು ಅಗತ್ಯವಾದ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಸಾಕಷ್ಟು ನೀರಿನಾಂಶವನ್ನು ಒದಗಿಸುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರ ಮೈಬಣ್ಣವನ್ನು ಉತ್ತೇಜಿಸುತ್ತದೆ. ಚರ್ಮದಲ್ಲಿ ವಯಸ್ಸಾದ ಲಕ್ಷಣಗಳು ಕಂಡು ಬಂದರೆ ಅದನ್ನು ಸುಧಾರಿಸಲು ಸಹಕಾರಿ.

ದೀರ್ಘಾಯುಷ್ಯ

ಸಸ್ಯ-ಆಧಾರಿತ ಆಹಾರಗಳಲ್ಲಿ ಸಮೃದ್ಧವಾಗಿರುವ ಫ್ಲೆಕ್ಸಿಟೇರಿಯನ್ ಆಹಾರವನ್ನು ಅನುಸರಿಸುವುದರಿಂದ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವ ಮೂಲಕ ಮತ್ತು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಯತ್ತದೆ. ಆ ಮೂಲಕ ಜೀವಿತಾವಧಿ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಹೆಚ್ಚಿಸಬಹುದು ಎಂದು ಸಂಶೋಧನೆ ತೋರಿಸಿದೆ.

ಫ್ಲೆಕ್ಸಿಟೇರಿಯನ್ ಡಯೆಟ್‌ ಕ್ರಮವು ತೂಕ ಕಳೆದುಕೊಳ್ಳಲು ಸಹಾಯ ಮಾಡುವುದು ಮಾತ್ರವಲ್ಲ, ಮಧುಮೇಹ, ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಪೌಷ್ಠಿಕಾಂಶದ ಕೊರತೆಯನ್ನು ತಪ್ಪಿಸಲು ಮತ್ತು ನಿಮ್ಮ ಆರೋಗ್ಯ ಪ್ರಯೋಜನಗಳನ್ನು ಹೆಚ್ಚಿಸಿಕೊಳ್ಳಲು ನಿಮ್ಮ ಫ್ಲೆಕ್ಸಿಟೇರಿಯನ್ ಡಯೆಟ್‌ ಕ್ರಮವನ್ನು ಪಾಲಿಸುವುದು ಉತ್ತಮ.

(This copy first appeared in Hindustan Times Kannada website. To read more like this please logon to kannada.hindustantimes.com)