Weight Loss: ವರ್ಕೌಟ್ ಮಾಡದೇ ವೈಟ್‌ಲಾಸ್ ಆಗ್ಬೇಕಾ; ಬೇಸಿಗೆಯಲ್ಲಿ ಬೆವರು ಹರಿಯದೇ ತೂಕ ಇಳಿಸಿಕೊಳ್ಳಲು ಇಲ್ಲಿದೆ 8 ಸರಳ ಸಲಹೆ
ಬಿರು ಬೇಸಿಗೆಯಲ್ಲಿ ಅತಿಯಾದ ಸೆಖೆಯ ನಡುವೆ ತೂಕ ಇಳಿಸುವುದು ನಿಜಕ್ಕೂ ಸವಾಲು. ತಾಪಮಾನ ಹೆಚ್ಚಾದಂತೆ ವರ್ಕೌಟ್ ಮಾಡುವುದು ಕಷ್ಟ ಸಾಧ್ಯವಾಗುತ್ತದೆ. ಬೇಸಿಗೆಯಲ್ಲಿ ವರ್ಕೌಟ್ ಮಾಡದೇ, ಬೆವರು ಹರಿಸದೇ ದೇಹತೂಕ ಇಳಿಸಿಕೊಳ್ಳಲು ಇಲ್ಲಿದೆ 8 ಸರಳ ಉಪಾಯ.
ಹೀಟ್‌ವೇವ್ ಕಾರಣದಿಂದ ನಮ್ಮ ದೈನಂದಿನ ದಿನಚರಿ ಹಳಿ ತಪ್ಪಿದೆ. ಅತಿಯಾದ ಬಿಸಿ, ಸೆಖೆಯಿಂದ ನಾವು ಬಳಲಿ, ಬೆಂಡಾಗಿ ಹೋಗಿದ್ದೇವೆ. ತೀವ್ರವಾದ ಶಾಖ ಹಾಗೂ ಇತರ ಅನಿವಾರ್ಯ ಕಾರಣಗಳಿಂದಾಗಿ ವ್ಯಾಯಾಮಕ್ಕೆ ಸಾಕಷ್ಟು ಸಮಯ ನೀಡಲು ನಿಮಗೆ ಸಾಧ್ಯವಾಗದೇ ಇರಬಹುದು. ವಾಕಿಂಗ್, ಜಾಗಿಂಗ್ ಕೂಡ ಹೋಗಲು ಸಾಧ್ಯವಾಗದೇ ಇರಬಹುದು. ಇದರಿಂದ ದೇಹ ತೂಕ ಹೆಚ್ಚಬಹುದು ಎಂಬ ಚಿಂತೆ ಹಲವರನ್ನು ಕಾಡಬಹುದು. ಹಾಗಂತ ಚಿಂತಿಸುವ ಅಗತ್ಯವಿಲ್ಲ, ವ್ಯಾಯಾಮವಿಲ್ಲದೇ ತೂಕ ಇಳಿಸಿಕೊಳ್ಳಲು ತಜ್ಞರು ಸಲಹೆ ನೀಡುತ್ತಾರೆ. ಬೇಸಿಗೆಯಲ್ಲಿ ವ್ಯಾಯಾಮವಿಲ್ಲದ ಜಡಜೀವನಶೈಲಿ ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಬಹುದು. ನೀವು ಜಿಮ್, ವಾಕಿಂಗ್ ಎರಡೂ ನಿಲ್ಲಿಸಿದ್ದು ತೂಕ ಇಳಿಸಿಕೊಳ್ಳೋದು ಹೇಗೆ ಎನ್ನುವ ಚಿಂತೆ ಹಲವರನ್ನು ಕಾಡುತ್ತಿದೆ.
ಒತ್ತಡ ಅಥವಾ ನಿದ್ದೆಯ ಕೊರತೆಯಿಂದಾಗಿ ಹಲವರಿಗೆ ತೂಕ ಹೆಚ್ಚಳವಾಗುತ್ತಿದೆ. ಈ ಎರಡೂ ಅಂಶಗಳನ್ನು ನಿರ್ವಹಿಸುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. ಪ್ರೊಟೀನ್ ಮತ್ತು ನಾರಿನಾಂಶ ಸಮೃದ್ಧ ಆಹಾರ ಸೇವನೆಯಿಂದ ತೂಕ ಇಳಿಸಿಕೊಳ್ಳಬಹುದು. ಏಕೆಂದರೆ ಇದು ಆಹಾರದ ಕಡುಬಯಕೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚು ಕಾಲ ಹೊಟ್ಟೆ ತುಂಬಿದಂತಿರಲು ಸಹಾಯ ಮಾಡುತ್ತದೆ. ದಿನಕ್ಕೆ 7 ರಿಂದ 8 ಗ್ಲಾಸ್ ನೀರು ಕುಡಿಯವುದು ಕೂಡ ಮುಖ್ಯವಾಗುತ್ತದೆ. ಇದರಿಂದ ನಿಮ್ಮ ಚಯಾಪಚಯ ಸುಧಾರಿಸುತ್ತದೆ. ತಾಲೀಮು ಇಲ್ಲದೆ ತೂಕವನ್ನು ಕಳೆದುಕೊಳ್ಳಲು ಸಿಹಿ ಅಂಶ ಇರುವ ಆಹಾರಗಳು ಹಾಗೂ ಪಾನೀಯವನ್ನು ಸೇವಿಸದೇ ಇರುವುದು ಉತ್ತಮ.
ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಟಿಪ್ಸ್
ಗುರುಗ್ರಾಮದ ಮಾರೆಂಗೋ ಏಷ್ಯಾ ಆಸ್ಪತ್ರೆಗಳಲ್ಲಿ ನ್ಯೂಟ್ರಿಷನ್ ಸಲಹೆಗಾರ್ತಿ ಆಗಿರುವ ಡಾ.ನೀತಿ ಶರ್ಮಾ ಬೇಸಿಗೆಯಲ್ಲಿ ವರ್ಕೌಟ್ ಇಲ್ಲದೇ ಸ್ಲಿಮ್ ಆಗಲು ಸಹಾಯ ಮಾಡಲು ಸಲಹೆ ನೀಡಿದ್ದಾರೆ.
ಸಾಕಷ್ಟು ನೀರು ಕುಡಿಯಿರಿ: ಬೇಸಿಗೆಯಲ್ಲಿ ಬಾಯಾರಿಕೆಯಾಗುವುದು ಸಹಜ. ಆದರೆ ಸಾಕಷ್ಟು ನೀರು ಕುಡಿಯುವುದು ಬಾಯಾರಿಕೆಗೆ ಮಾತ್ರವಲ್ಲ, ದೇಹ ತೂಕ ಇಳಿಯಲು ಸಹಾಯ ಮಾಡುತ್ತದೆ. ಸಾಕಷ್ಟು ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದಂತಿರುತ್ತದೆ. ಇದರಿಂದ ಬೇಕಾಬಿಟ್ಟಿ ತಿನ್ನುವುದನ್ನು ನಿಗ್ರಹಿಸಬಹುದು. ಇದರಿಂದ ಚಯಾಪಚಯ ವೃದ್ಧಿಯಾಗುತ್ತದೆ. ದೇಹದಲ್ಲಿ ನೀರಿನಾಂಶ ಹೆಚ್ಚಲು ನೀರು ಕುಡಿಯುವ ಜೊತೆಗೆ ಸೌತೆಕಾಯಿ, ಕಲ್ಲಂಗಡಿ, ಟೊಮೆಟೊದಂತಹ ನೀರಿನಾಂಶ ಹೆಚ್ಚಿರುವ ಹಣ್ಣು, ತರಕಾರಿಯನ್ನೂ ಸೇವಿಸಬೇಕು.
ತಿನ್ನುವ ಆಹಾರದಲ್ಲಿ ನಿಯಂತ್ರಣ: ತೂಕ ನಿರ್ವಹಣೆಗೆ ಗಮನವಿಟ್ಟು ತಿನ್ನುವುದು ಮುಖ್ಯವಾಗುತ್ತದೆ. ನೀವು ಎಷ್ಟು ತಿನ್ನುತ್ತೀರಿ ಎನ್ನುವುದರ ಮೇಲೆ ನಿಗಾ ವಹಿಸಬೇಕು. ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ಮೆದುಳನ್ನು ಕಡಿಮೆ ಆಹಾರದಿಂದ ತೃಪ್ತಿಗೊಳಿಸಲು ಚಿಕ್ಕ ಪ್ಲೇಟ್ ಬಳಸಿ.
ಪ್ರೊಟೀನ್‌ಗೆ ಆದ್ಯತೆ ನೀಡಿ: ಸ್ನಾಯುಗಳ ಸಂರಕ್ಷಣೆಯನ್ನು ಉತ್ತೇಜಿಸಲು ನಿಮ್ಮ ಊಟದಲ್ಲಿ ಲೀನ್ ಪ್ರೊಟೀನ್ ಮೂಲಗಳನ್ನು ಸೇರಿಸಿ. ಗ್ರಿಲ್ಡ್ ಚಿಕನ್, ಮೀನು, ತೋಪು ಮತ್ತು ಮಸೂರದಂತಹ ಆಹಾರಗಳು ಅತ್ಯುತ್ತಮವಾದ ಆಯ್ಕೆಗಳಾಗಿವೆ. ಇದು ದೀರ್ಘಕಾಲದವರೆಗೆ ನಿಮಗೆ ಹೊಟ್ಟೆ ತುಂಬಿದಂತಿಡುತ್ತದೆ.
ಹಣ್ಣು ತರಕಾರಿಗಳನ್ನು ಹೆಚ್ಚು ಸೇವಿಸಿ: ಕಡಿಮೆ ಕ್ಯಾಲೊರಿ ಹೊಂದಿರುವ ಹಾಗೂ ಅಗತ್ಯ ಪೋಷಕಾಂಶಗಳೊಂದಿಗೆ ಸಮೃದ್ಧವಾಗಿರುವ ಕಾಲೋಚಿತ ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚು ಸೇವಿಸಿ. ಈ ನಾರಿನಾಂಶ ಸಮೃದ್ಧ ಆಹಾರಗಳು ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮಾತ್ರವಲ್ಲ, ಅತಿಯಾಗಿ ತಿನ್ನುವುದಕ್ಕೂ ಕಡಿವಾಣ ಹಾಕುತ್ತದೆ. ಇದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದಂತಿರುತ್ತದೆ.
ಸಕ್ಕರೆ ಪಾನೀಯಗಳನ್ನು ಮಿತಗೊಳಿಸಿ: ಸೋಡಾ, ಹಣ್ಣಿನ ರಸಗಳು ಮತ್ತು ಸಿಹಿಯಾದ ಐಸ್ಡ್ ಟೀ, ಕೋಲ್ಡ್‌ಡ್ರಿಂಕ್ಸ್‌ನಂತಹ ಸಿಹಿ ಅಂಶ ಹೆಚ್ಚಿರುವ ಪಾನೀಯಗಳು ಅನಗತ್ಯ ತೂಕ ಹೆಚ್ಚಲು ಕಾರಣವಾಗಬಹುದು. ಇವುಗಳ ಬದಲು ಗಿಡಮೂಲಿಕೆ ಚಹಾ, ಗ್ರೀನ್ ಟೀ ಆಯ್ಕೆ ಉತ್ತಮ.
ಸ್ನಾಕ್ಸ್ ಹೀಗಿರಲಿ: ಒಣಹಣ್ಣು, ಬೀಜಗಳು, ಪಾಪ್‌ಕಾರ್ನ್‌ನಂತಹ ಆಹಾರಗಳನ್ನು ಹೆಚ್ಚು ಸೇವಿಸಿ. ಸಂಸ್ಕರಿಸಿದ ತಿಂಡಿಗಳ ಸೇವನೆಗೆ ಕಡಿವಾಣ ಹಾಕಿ.
ಸಾಕಷ್ಟು ನಿದ್ರೆ ಮಾಡಿ: ಹಸಿವಿನ ಹಾರ್ಮೋನುಗಳನ್ನು ನಿಯಂತ್ರಿಸುವ ಮತ್ತು ಒಟ್ಟಾರೆ ಮೆಟಬಾಲಿಕ್ ಆರೋಗ್ಯವನ್ನು ಬೆಂಬಲಿಸುವ ಕಾರಣ ತೂಕ ನಿರ್ವಹಣೆಗೆ ಗುಣಮಟ್ಟದ ನಿದ್ರೆಯು ನಿರ್ಣಾಯಕವಾಗಿದೆ. ತೂಕ ನಷ್ಟದ ಪ್ರಯತ್ನಗಳನ್ನು ಅತ್ಯುತ್ತಮವಾಗಿಸಲು ಪ್ರತಿ ರಾತ್ರಿ 7-9 ಗಂಟೆಗಳ ನಿರಂತರ ನಿದ್ರೆಗಾಗಿ ಗುರಿಮಾಡಿ.
ಒತ್ತಡವನ್ನು ನಿರ್ವಹಿಸಿ: ದೀರ್ಘಕಾಲದ ಒತ್ತಡವು ದೇಹದಲ್ಲಿ ಭಾವನಾತ್ಮಕವಾಗಿ ಹೆಚ್ಚು ಆಹಾರ ಸೇವಿಸುವಂತೆ ಮಾಡಬಹುದು ಮತ್ತು ಕೊಬ್ಬಿನ ಶೇಖರಣೆಯನ್ನು ಉತ್ತೇಜಿಸುವ ಮೂಲಕ ತೂಕ ನಷ್ಟದ ಪ್ರಯತ್ನಗಳನ್ನು ಹಾಳು ಮಾಡುತ್ತದೆ. ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮಗಳು ಅಥವಾ ವಿಶ್ರಾಂತಿಯನ್ನು ಉತ್ತೇಜಿಸಲು ಮತ್ತು ತೂಕ ನಷ್ಟ ಗುರಿಗಳನ್ನು ಬೆಂಬಲಿಸಲು ಹವ್ಯಾಸಗಳಲ್ಲಿ ತೊಡಗಿರುವಂತಹ ಒತ್ತಡ-ಕಡಿಮೆಗೊಳಿಸುವ ತಂತ್ರಗಳನ್ನು ಅಭ್ಯಾಸ ಮಾಡಿ.
ಈ ಸರಳ ಮತ್ತು ಪರಿಣಾಮಕಾರಿ ತಂತ್ರಗಳನ್ನು ಕಾರ್ಯಗತಗೊಳಿಸುವ ಮೂಲಕ, ಕಠಿಣ ವ್ಯಾಯಾಮದ ಅಗತ್ಯವಿಲ್ಲದೆಯೇ ನಿಮ್ಮ ತೂಕ ನಷ್ಟ ಗುರಿಗಳನ್ನು ನೀವು ಸಾಧಿಸಬಹುದು. ನೆನಪಿಡಿ, ಸ್ಥಿರತೆ ಕೀಲಿಯಾಗಿದೆ, ಮತ್ತು ಸುಸ್ಥಿರ ಜೀವನಶೈಲಿ ಬದಲಾವಣೆಗಳನ್ನು ಮಾಡುವುದು ದೀರ್ಘಾವಧಿಯ ಫಲಿತಾಂಶಗಳನ್ನು ನೀಡುತ್ತದೆ.