Amla Juice: ನೆಲ್ಲಿಕಾಯಿ ಕಹಿ ಅಂತ ಮೂಗು ಮುರಿಬೇಡಿ, ತೂಕ ಇಳಿಸೋಕೆ ನೆಲ್ಲಿಕಾಯಿ ರಸಕ್ಕಿಂತ ಬೆಸ್ಟ್ ಇನ್ನೊಂದಿಲ್ಲ ಮರಿಬೇಡಿ
ಹಿಂದೂ ಪುರಾಣಗಳ ಪ್ರಕಾರ, ಒಮ್ಮೆ ಬ್ರಹ್ಮನು ವಿಷ್ಣುವಿನ ಧ್ಯಾನದಲ್ಲಿ ಮಗ್ನನಾಗಿದ್ದಾಗ, ಅವನ ಕಣ್ಣುಗಳಲ್ಲಿ ಕಣ್ಣೀರು ಹರಿಯಲು ಪ್ರಾರಂಭಿಸಿತು. ಈ ಕಣ್ಣೀರು ನೆಲದ ಮೇಲೆ ಬಿದ್ದಾಗ, ನೆಲ್ಲಿಕಾಯಿ ಗಿಡವು ಮೊಳಕೆಯೊಡೆಯಿತು ಎಂಬ ನಂಬಿಕೆಯಿದೆ. ಸ್ವಲ್ಪ ಹುಳಿ ರುಚಿಯನ್ನು ಹೊಂದಿರುವ ನೆಲ್ಲಿಕಾಯಿಯ ಆರೋಗ್ಯ ಪ್ರಯೋಜನದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.

ನೀವು ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರೆ ನೆಲ್ಲಿಕಾಯಿಗೂ ನಿಮಗೂ ಅಗಾಧ ನಂಟಿನ ಕಥೆ ಇರಬಹುದು. ಶಾಲೆ ಮುಗಿಸಿ ಬರುವಾಗ ಬೆಟ್ಟದಲ್ಲಿರುವ ನೆಲ್ಲಿಕಾಯಿ ಗಿಡದ ಹತ್ತಿರ ಓಡೋಡಿ ಹೋಗಿ ಸ್ನೇಹಿತರೆಲ್ಲಾ ಜೊತೆಗೂಡಿ ಕೊಯ್ದು ತಿನ್ನುವುದು, ಹೆಚ್ಚಾದರೆ ಮನೆಗೆ ತಂದು ಅಮ್ಮನಿಗೆ ಕೊಟ್ಟು ಉಪ್ಪಿನಕಾಯಿ ಹಾಕಿಸುವುದು ಇಂಥದ್ದನ್ನೆಲ್ಲಾ ನೀವು ಮಾಡಿರಬಹುದು. ಗಾತ್ರದಲ್ಲಿ ಚಿಕ್ಕದಾಗಿರುವ ನೆಲ್ಲಿಕಾಯಿಯು 20 ಕಿತ್ತಳೆಗಳಷ್ಟು ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ತಿನ್ನಲು ಸ್ವಲ್ಪ ಹುಳಿಯಾಗಿದ್ದರೂ ರುಚಿ ಮಾತ್ರ ಅಗಾಧ. ಬಹಳ ಪುರಾತನವಾದ ಸೂಪರ್ ಫ್ರೂಟ್ ಅಂತಾನೇ ಹೇಳಲಾಗುವ ಈ ನೆಲ್ಲಿಕಾಯಿಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು.
ನೆಲ್ಲಿಕಾಯಿಯಲ್ಲಿ ಅಗಾಧ ಪೋಷಕಾಂಶಗಳಿರುವುದರಿಂದ, ಎಲ್ಲಾ ಸಮಯದಲ್ಲೂ ಇದು ಸಿಗದಿರುವುದರಿಂದ ಇದನ್ನು ಪುಡಿ ಮಾಡಿ ಇಡಲಾಗುತ್ತದೆ. ಇದನ್ನು ಪಾನೀಯಕ್ಕೂ ಬಳಸಬಹುದಾಗಿದೆ. ನೆಲ್ಲಿಕಾಯಿ ಜ್ಯೂಸ್ ಪೌಷ್ಟಿಕಾಂಶಗಳಿಂದ ಸಮೃದ್ದವಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು ಮತ್ತು ತಲೆಗೂದಲಿನ ಬೆಳವಣಿಗೆಗೂ ಪೂರಕವಾಗಿದೆ. ಇದು ಜೀರ್ಣಕಾರಿಗೂ ಉತ್ತಮವಾಗಿದೆ ಹಾಗೂ ಮೂತ್ರಪಿಂಡ, ಯಕೃತ್ತು ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ತೂಕ ನಷ್ಟಕ್ಕೂ ಪ್ರಯೋಜನಕಾರಿಯಾಗಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ತೂಕ ನಷ್ಟಕ್ಕೆ ಸಹಕಾರಿ ನೆಲ್ಲಿಕಾಯಿ ಜ್ಯೂಸ್
ನೆಲ್ಲಿಕಾಯಿ ಒಂದು ಸೂಪರ್‌ಫ್ರೂಟ್ ಆಗಿದ್ದು, ಇದು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿದ್ದು, ಹೆಚ್ಚಿನ ವಿಟಮಿನ್ ಸಿ ಮಟ್ಟವನ್ನು ಹೊಂದಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ನೆಲ್ಲಿಕಾಯಿ ಜ್ಯೂಸ್‌ನ ಪ್ರಬಲವಾದ ಉತ್ಕರ್ಷಣ ನಿರೋಧಕ ಅಂಶ ಮತ್ತು ದೇಹದಿಂದ ಟಾಕ್ಸಿನ್ ತೆಗೆದುಹಾಕುತ್ತದೆ. ಇದರಿದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ನೀವು ತಿನ್ನುವ ಆಹಾರದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಅನುಮತಿಸುತ್ತದೆ.
ನೆಲ್ಲಿಕಾಯಿ ಜ್ಯೂಸ್ ಚಯಾಪಚಯವನ್ನು ವೇಗಗೊಳಿಸಲು ಮತ್ತು ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇವೆರಡೂ ತೂಕವನ್ನು ಕಡಿಮೆ ಮಾಡಲು ಸಹಾಯಕವಾಗಿವೆ. ತೂಕ ಇಳಿಸಲು ಪ್ರಯತ್ನಿಸುವವರಿಗೆ ಇದು ಉತ್ತಮ ಆಯ್ಕೆ.
ತೂಕ ನಷ್ಟಕ್ಕೆ ಇದು ಹೇಗೆ ಸಹಕಾರಿ?
ನೆಲ್ಲಿಕಾಯಿ ಜ್ಯೂಸ್ ಸೇವನೆಯಿಂದ ಚಯಾಪಚಯವನ್ನು ಹೆಚ್ಚಿಸುತ್ತದೆ: ತೂಕ ಹೆಚ್ಚಾಗಲು ಒಂದು ಪ್ರಮುಖ ಕಾರಣವೆಂದರೆ ನಿಧಾನವಾದ ದೇಹದ ಚಯಾಪಚಯ ಕ್ರಿಯೆ. ನೆಲ್ಲಿಕಾಯಿ ಜ್ಯೂಸ್‌ನ ನಿಯಮಿತ ಸೇವನೆಯು ಅಸಮರ್ಪಕ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ದೇಹದಲ್ಲಿನ ಟಾಕ್ಸಿನ್ ಅಂಶವನ್ನು ಹೊರಹಾಕಲು ಮತ್ತು ಫ್ಯಾಟ್ ಬರ್ನ್ ಮಾಡುವಲ್ಲಿ ಸಹಕಾರಿಯಾಗಿದೆ.
ಪ್ರೊಟೀನ್‌ನ ಸಮೃದ್ಧ ಮೂಲ: ಪ್ರೊಟೀನ್ ಅಂಶ ಕಡಿಮೆಯಿರುವ ಆಹಾರವನ್ನು ಸೇವಿಸುವುದರಿಂದ ದೇಹದ ಚಯಾಪಚಯ ಕ್ರಿಯೆಯನ್ನು ಕಡಿಮೆ ಮಾಡುತ್ತದೆ. ನೆಲ್ಲಿಕಾಯಿಯಲ್ಲಿ ಹೆಚ್ಚಿನ ಪ್ರೊಟೀನ್ ಅಂಶವಿದೆ. ಹೀಗಾಗಿ ನೆಲ್ಲಿಕಾಯಿ ಜ್ಯೂಸ್‌ನ ದೈನಂದಿನ ಸೇವನೆಯು ನಿಮ್ಮ ದೇಹದಲ್ಲಿ ಪ್ರೊಟೀನ್ ಅಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಟಾಕ್ಸಿನ್‌ಗಳನ್ನು ತೆಗೆದುಹಾಕುವಲ್ಲಿ ಸಹಕಾರಿ: ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಗೆ ಮುಖ್ಯ ಕಾರಣ ದೇಹದಲ್ಲಿ ಸೇರಿಕೊಂಡಿರುವ ಅತಿಯಾದ ಟಾಕ್ಸಿನ್‌ಗಳು. ನೆಲ್ಲಿಕಾಯಿ ಜ್ಯೂಸ್‌ನ ನಿಯಮಿತ ಸೇವನೆಯಿಂದ ಈ ಹಾನಿಕಾರಕ ವಿಷಯುಕ್ತ ಅಂಶವನ್ನು ತೆಗೆದುಹಾಕುತ್ತದೆ ಮತ್ತು ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಪಾನೀಯ ಸೇವನೆಯಿಂದ ನಿಮ್ಮ ದೇಹದ ಜೀರ್ಣಕ್ರಿಯೆಯ ಪ್ರಮಾಣವನ್ನು ಹೆಚ್ಚಿಸಬಹುದು.
ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ: ನೆಲ್ಲಿಕಾಯಿ ಜ್ಯೂಸ್‌ನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ಅತಿಯಾಗಿ ತಿನ್ನುವುದನ್ನು ಅಡ್ಡಿಪಡಿಸುತ್ತದೆ. ಇದರಲ್ಲಿರುವ ಕಾರ್ಬೋಹೈಡ್ರೇಟ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ, ಇದು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ.
ಶಕ್ತಿಯುತವಾಗಿರಿಸುತ್ತದೆ: ನೆಲ್ಲಿಕಾಯಿ ಜ್ಯೂಸ್ ಅನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇಡೀ ದಿನ ನಿಮ್ಮ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಅಲ್ಲದೆ, ನಿಮ್ಮನ್ನು ದಿನವಿಡೀ ಚಟುವಟಿಕೆಯಿಂದ ಮತ್ತು ಚೈತನ್ಯದಿಂದ ಇಡುತ್ತದೆ.
ಬರಹ: ಪ್ರಿಯಾಂಕ ಗೌಡ
