ವೇಗವಾಗಿ ತೂಕ ಇಳಿಯುವ ಜತೆ, ದೇಹದ ಕೊಬ್ಬು ಕರಗಬೇಕಾ; ಪ್ರತಿದಿನ ಬೆಳಿಗ್ಗೆ ಎದ್ದಾಕ್ಷಣ ಈ 5 ಕೆಲಸಗಳನ್ನು ತಪ್ಪದೇ ಮಾಡಿ
ಜಿಮ್ನಲ್ಲಿ ವರ್ಕೌಟ್, ಕಟ್ಟುನಿಟ್ಟಿನ ಡಯೆಟ್ ಪಾಲಿಸಿದ್ರೂ ತೂಕ ಕಡಿಮೆ ಆಗ್ತಿಲ್ಲ ಅಂದ್ರೆ ಬೆಳಿಗ್ಗೆ ಎದ್ದಾಕ್ಷಣ ತಪ್ಪದೇ ಈ 5 ಕೆಲಸಗಳನ್ನು ಮಾಡಬೇಕು. ಪರಿಣಾಮಕಾರಿಯಾಗಿ ಕೊಬ್ಬು ಕಡಿಮೆ ಮಾಡಲು ಇದು ಸಹಕಾರಿ.

ತೂಕ ಇಳಿಸಿಕೊಳ್ಳೋದು ಇತ್ತೀಚೆಗೆ ಹಲವರಿಗೆ ಸವಾಲಾಗಿದೆ. ಇದಕ್ಕಾಗಿ ಕಟ್ಟುನಿಟ್ಟಿನ ಡಯೆಟ್ ಪಾಲಿಸೋದು, ವರ್ಕೌಟ್ ಮಾಡಿ ಬೆವರಿಳಿಸೋದು ಮಾಡುತ್ತಾರೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ತೂಕ ಮಾತ್ರ ಕಡಿಮೆ ಆಗುವುದಿಲ್ಲ. ಇದಕ್ಕೆ ಕಾರಣ ಏನು ಎಂದು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ಅದರ ಬದಲು ನಿಮ್ಮ ಬೆಳಗಿನ ದಿನಚರಿಯನ್ನು ಸೂಕ್ಷ್ಮವಾಗಿ ಗಮನಿಸಿ. ಬೆಳಿಗ್ಗೆ ಎದ್ದಾಕ್ಷಣ ನಿಮ್ಮ ಕೆಲವು ಹೊತ್ತನ್ನು ಈ ಕೆಲವು ಕ್ರಮಗಳನ್ನು ಅನುಸರಿಸುವ ಸಲುವಾಗಿ ಮೀಸಲಿರಿಸಿ. ಇದರಿಂದ ವೇಗವಾಗಿ ತೂಕ ಇಳಿಕೆಯಾಗುತ್ತದೆ.
ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ಸಮತೋಲನ, ಚಯಾಪಚಯ ಮತ್ತು ಮೈಂಡ್ ಫ್ರೆಶ್ ಆಗಲು ಆದ್ಯತೆ ನೀಡುವ ಕೆಲವು ಸುಸ್ಥಿರ ಅಭ್ಯಾಸಗಳನ್ನು ರೂಪಿಸಿಕೊಳ್ಳುವುದು ಮುಖ್ಯ. ಸಣ್ಣ ಸಣ್ಣ, ದೈನಂದಿನ ಅಭ್ಯಾಸಗಳು ಕೂಡ ಬಹಳ ಮುಖ್ಯವಾಗುತ್ತವೆ ಎನ್ನುತ್ತಾರೆ ಬೆಂಗಳೂರಿನ ಕ್ಲೌಡ್ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ನ್ಯೂಟ್ರಿಷನ್ ವಿಭಾಗದ ಮುಖ್ಯಸ್ಥೆ ಶೋಭಾ.
ಪ್ರತಿದಿನ ನಮ್ಮ ಬೆಳಗನ್ನು ದೇಹದ ಕೊಬ್ಬು ಕರಗಿಸುವುದು, ಒತ್ತಡ ನಿರ್ವಹಣೆ, ಕಾಲಾನಂತರದಲ್ಲಿ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ವಿಧಾನವನ್ನು ಅನುಸರಿಸುವ ಮೂಲಕ ತೂಕ ಇಳಿಕೆಯ ಮೇಲೆ ಹೆಚ್ಚು ಗಮನ ಹರಿಸಬೇಕು ಎನ್ನುತ್ತಾರೆ ಕ್ಲೌಡ್ನೈನ್ ಆಸ್ಪತ್ರೆಯ ಪಿಸಿಯೋಥೆರಪಿಸ್ಟ್ ಶಾಜಿಯಾ ಶದಬ್. ಇವರಿಬ್ಬರು ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ದೇಹದಲ್ಲಿನ ಕೊಬ್ಬು ಕರಗಲು ಬೆಳಿಗ್ಗೆ ಎದ್ದಾಕ್ಷಣ ಏನು ಮಾಡಬೇಕು ಎಂಬುದನ್ನು ಹೇಳಿದ್ದಾರೆ.
ನೀರು ಕುಡಿಯಿರಿ–ನಂತರ ದಿನಚರಿ ಪ್ಲಾನ್ ಮಾಡಿ
ಬೆಳಿಗ್ಗೆ ಎದ್ದಾಕ್ಷಣ ಚಹಾ ಅಥವಾ ಕಾಫಿ ಕಪ್ ಹಿಡಿಯುವ ಮೊದಲು ನೀರು ಕುಡಿಯುವ ಅಭ್ಯಾಸ ಮಾಡಿ. ಜೀರ್ಣಕ್ರಿಯೆಯನ್ನು ಪ್ರಾರಂಭಿಸಲು ಮತ್ತು ರಾತ್ರಿಯಿಡೀ ದೇಹದಲ್ಲಿ ಸಂಗ್ರಹವಾದ ವಿಷಾಂಶವನ್ನು ಹೊರಹಾಕಲು ದೇಹ ಹೈಡ್ರೇಟ್ ಆಗುವುದು ಅತ್ಯಗತ್ಯ. ಖಾಲಿ ನೀರು ಕುಡಿಯುವುದಕ್ಕಿಂತ ಅದಕ್ಕೆ ನಿಂಬೆರಸ ಹಾಗೂ ಪುದಿನಾ ಎಲೆ ಸೇರಿಸಿಕೊಂಡು ಕುಡಿಯುವುದು ಉತ್ತಮ. ಇದರಿಂದ ಚಯಾಪಚಯ ಕ್ರಿಯೆ ವೃದ್ಧಿಯಾಗುತ್ತದೆ ಎಂದು ಅವರು ಸಲಹೆ ನೀಡುತ್ತಾರೆ. ನೀರು ಕುಡಿಯುವ ಅವಧಿಯಲ್ಲೇ ದಿನದಲ್ಲಿ ಏನೆಲ್ಲಾ ಸೇವಿಸಬೇಕು ಎಂಬ ಊಟದ ಮೆನುವನ್ನು ಪ್ಲಾನ್ ಮಾಡಿ. ಇದರಿಂದ ಸಿಕ್ಕಿದ್ದನ್ನೆಲ್ಲಾ ತಿನ್ನುವುದಕ್ಕೆ ಕಡಿವಾಣ ಹಾಕಬಹುದು.
5–10 ನಿಮಿಷಗಳ ಕಾಲ ಆಳವಾದ ಉಸಿರಾಟ ಅಥವಾ ಪ್ರಾಣಾಯಾಮ ಮಾಡಿ
ವ್ಯಾಯಾಮ ಮಾಡಲು ಪ್ರಾರಂಭಿಸುವ ಮೊದಲು 5 ರಿಂದ 10 ನಿಮಿಷಗಳ ಕಾಲ ಪ್ರಾಣಾಯಾಮ ಮಾಡಿ. ಇದು ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯ ಮಾಡುವುದು ಮಾತ್ರವಲ್ಲ, ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ.
ನಂತರ, ರಕ್ತ ಪರಿಚಲನೆ ಮತ್ತು ನಮ್ಯತೆಯನ್ನು ಜಾಗೃತಗೊಳಿಸಲು ಸೌಮ್ಯವಾದ ಸ್ಟ್ರೆಚಿಂಗ್ ಅಥವಾ ಲಘು ಯೋಗಗಳನ್ನು ಮಾಡಬೇಕು. ಇದು ನಿಮ್ಮ ದೇಹವನ್ನು ದಿನವಿಡೀ ಉತ್ತಮವಾಗಿ ಚಲಿಸಲು ಸಿದ್ಧಪಡಿಸುತ್ತದೆ. ವ್ಯಾಯಾಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂದು ಶೋಭಾ ಹೇಳುತ್ತಾರೆ.
ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಅಥವಾ ಲಘು ಕಾರ್ಡಿಯೋ ವ್ಯಾಯಾಮ
ಬೆಳಗಿನ ಹೊತ್ತು ನಿಮಗೆ ಸಮಯ ಇರುವುದಿಲ್ಲ ಗಡಿಬಿಡಿ ಇರುತ್ತದೆ ಎಂದಾದರೆ ನಿಮಗೆ ಇದು ಬೆಸ್ಟ್ ಆಯ್ಕೆ. ಉಪಾಹಾರಕ್ಕೂ ಮೊದಲು 20 ನಿಮಿಷಗಳ ಕಾಲ ವಾಕ್ ಮಾಡಿ. ಖಾಲಿ ಹೊಟ್ಟೆ ಇರುವಾಗ ವಾಕ್ ಮಾಡುವುದು ಅಥವಾ ಲಘು ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಸಂಗ್ರಹವಾದ ಕೊಬ್ಬು ಕಡಿಮೆಯಾಗುತ್ತದೆ ಮತ್ತು ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.
ಇದರಿಂದ ಸಾಕಷ್ಟು ಕ್ಯಾಲೊರಿ ಬರ್ನ್ ಆಗುತ್ತದೆ ಎಂದಲ್ಲ. ಆದರೆ ಇದು ಚಯಾಪಚಯ ಕ್ರಮ ಸರಿಯಾದ ರೀತಿಯಲ್ಲಾಗಲು ಪ್ರೋತ್ಸಾಹಿಸುತ್ತದೆ. ಜೊತೆಗೆ ಇದು ನೈಸರ್ಗಿಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ.
ಇದರೊಂದಿಗೆ ಬೆಳಗಿನ ಹೊತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ. ಹೊರಗಡೆ ವಾಕಿಂಗ್ ಅಥವಾ ಜಾಗಿಂಗ್ ಹೋಗುವಾಗ ನಿಂಬೆರಸ ಸೇರಿಸಿದ ನೀರಿನ ಬಾಟಲಿಯನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಬೆಳಗಿನ ಹೊತ್ತು ಸೂರ್ಯನ ಬಿಸಿಲಿಗೆ ಮೈ ಒಡ್ಡುವುದರಿಂದ ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಚಯಾಪಚಯ, ಶಕ್ತಿಯ ಮಟ್ಟಗಳು ಮತ್ತು ಜೀರ್ಣಕ್ರಿಯೆಯನ್ನು ಸಹ ಬೆಂಬಲಿಸುತ್ತದೆ.
ಪ್ರೊಟೀನ್ ಸಮೃದ್ಧ, ಸಕ್ಕರೆ ಅಂಶ ಕಡಿಮೆ ಇರುವ ಆಹಾರ, ಪಾನೀಯ ಸೇವಿಸಿ
ಬೆಳಗಿನ ಹೊತ್ತು ತಪ್ಪಿಯು ಸಕ್ಕರೆ ಅಂಶ ಹೆಚ್ಚಿರುವ, ಧಾನ್ಯಗಳು, ಹಣ್ಣಿನ ರಸಗಳನ್ನು ಕುಡಿಯಬೇಡಿ. ಅವು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಬಹಳ ವೇಗವಾಗಿ ಹೆಚ್ಚುವಂತೆ ಮಾಡಬಹುದು. ಇದು ಬೆಳಗಿನ ಹೊತ್ತು ಹಸಿವು ಹೆಚ್ಚುವಂತೆ ಮಾಡಬಹುದು.
ಅದರ ಬದಲಾಗಿ ಪ್ರೊಟೀನ್, ಫೈಬರ್ (ನಾರಿನಾಂಶ) ಮತ್ತು ಆರೋಗ್ಯಕರ ಕೊಬ್ಬಿನಾಂಶ ಇರುವ ಉಪಾಹಾರಗಳನ್ನು ಆರಿಸಿಕೊಳ್ಳಿ. ಧಾನ್ಯದ ಟೋಸ್ಟ್, ಅವಕಾಡೊ, ಮೊಟ್ಟೆ, ಡ್ರೈ ಫ್ರೂಟ್ಸ್, ಗ್ರೀಕ್ ಯೋಗರ್ಟ್ ಮುಂತಾದುವನ್ನು ಹೆಚ್ಚು ಸೇವಿಸಿ. ಪ್ರೊಟೀನ್ ಜೀರ್ಣಿಸಿಕೊಳ್ಳಲು ಹೆಚ್ಚಿನ ಶಕ್ತಿಯನ್ನು ತೆಗೆದುಕೊಳ್ಳುತ್ತದೆ, ಇದರಿಂದ ಹೆಚ್ಚು ಸಮಯ ಹೊಟ್ಟೆ ತುಂಬಿದಂತೆ ಇರುತ್ತದೆ. ಇದು ಸ್ನಾಯುಗಳ ನಿರ್ವಹಣೆಗೆ ಸಹ ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳುವ ಜೊತೆಗೆ ಕೊಬ್ಬನ್ನು ಕಡಿಮೆ ಮಾಡಿಕೊಳ್ಳುವ ಮೇಲೂ ಗಮನ ಹರಿಸಬೇಕು.
ತಿಂಡಿ ಮಾಡಿದ ತಕ್ಷಣ ಈ ಅಭ್ಯಾಸ ಬೇಡ
ಬೆಳಗಿನ ಹೊತ್ತು ತಿಂಡಿ ತಿಂದ ನಂತರ ಸೋಫಾ ಮೇಲೆ ಒರಗುವುದು, ಮಲಗುವುದು ಇಂತಹ ಅಭ್ಯಾಸವಿದ್ದರೆ ಕೂಡಲೇ ನಿಲ್ಲಿಸಿ. ಜೀರ್ಣಕ್ರಿಯೆಯನ್ನು ಬೆಂಬಲಿಸಲು ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಬೆಳಿಗ್ಗೆ ತಿಂಡಿ ತಿಂದ ನಂತರ 10 ರಿಂದ 15 ನಿಮಿಷಗಳ ಕಾಲ ನಿಂತಿರುವುದು ಅಥವಾ ನಿಧಾನವಾಗಿ ವಾಕ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು.
ನಿಧಾನವಾಗಿ ವಾಕ್ ಮಾಡುವುದು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ ಮತ್ತು ನಮ್ಮ ಚಯಾಪಚಯ ದರವು ದಿನದಲ್ಲಿ ಬೇಗನೆ ಕುಸಿಯದಂತೆ ತಡೆಯುತ್ತದೆ ಎನ್ನುತ್ತಾರೆ ಶಾಜಿಯಾ.
ವ್ಯಾಯಾಮ, ಡಯೆಟ್ ಪಾಲನೆ ಜೊತೆ ಈ ಕೆಲವು ಬೆಳಗಿನ ಅಭ್ಯಾಸವನ್ನು ತಪ್ಪದೇ ಪಾಲಿಸಬೇಕು. ಇದರಿಂದ ವೇಗವಾಗಿ ತೂಕ ಇಳಿಯವುದರ ಜೊತೆಗೆ ಪರಿಣಾಮಕಾರಿಯಾಗಿ ದೇಹದ ಕೊಬ್ಬು ಕರಗಿಸಲು ಕೂಡ ಸಹಕಾರಿಯಾಗಿದೆ. ಅಲ್ಲದೇ ಇವು ಸುಲಭವಾಗಿ ಪಾಲಿಸಲು ಸಾಧ್ಯವಾಗುವ ಕ್ರಮಗಳಾಗಿವೆ.