ಜಿಮ್‍ಗೆ ಹೋಗಿಲ್ಲ, ವ್ಯಾಯಾಮ ಮಾಡಿಲ್ಲ: ವರ್ಕೌಟ್ ಮಾಡದೆ ಮೂರು ತಿಂಗಳಲ್ಲಿ 14 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ ಈ ವ್ಯಕ್ತಿ
ಕೇವಲ ಮೂರು ತಿಂಗಳಿನಲ್ಲಿ ವ್ಯಕ್ತಿಯೊಬ್ಬರು 14 ಕೆಜಿ ತೂಕ ಕಳೆದುಕೊಂಡಿದ್ದಾರೆ. ಅದರಲ್ಲೇನು ವಿಶೇಷ ಅಂತಾ ಆಶ್ಚರ್ಯ ಪಡುತ್ತಿದ್ದೀರಾ?ಕಠಿಣ ತಾಲೀಮು ಮಾಡದೆ ಕೇವಲ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ತೂಕ ಇಳಿಸಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಸ್ಟೋರಿ.
ಇಂದು ಬಹುತೇಕ ಮಂದಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಡಯೆಟ್, ವ್ಯಾಯಾಮ ಮುಂತಾದವುಗಳ ಮೊರೆ ಹೋಗುವ ಅನೇಕರು ದೇಹದ ಫಿಟ್ನೆಸ್‍ನತ್ತ ಗಮನಹರಿಸುತ್ತಾರೆ. 40 ಕೆ.ಜಿ ತೂಕ ಇಳಿಸಿಕೊಂಡಿರುವವರು, 60 ಕೆಜಿ ತೂಕ ಇಳಿಸಿಕೊಂಡಿರುವವರು ಮುಂತಾದವರ ಕಥೆಗಳನ್ನು ನೀವು ಕೇಳಿರುವಿರಿ. ಇಲ್ಲೊಬ್ಬ ವ್ಯಕ್ತಿ ಕೇವಲ ಮೂರು ತಿಂಗಳಿನಲ್ಲಿ 14 ಕೆಜಿ ತೂಕ ಕಳೆದುಕೊಂಡಿದ್ದಾರೆ. ಅದರಲ್ಲೇನು ವಿಶೇಷ ಅಂತಾ ಆಶ್ಚರ್ಯ ಪಡುತ್ತಿದ್ದೀರಾ? ಕಠಿಣ ತಾಲೀಮು ಮಾಡದೆ ಕೇವಲ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ತೂಕ ಇಳಿಸಿಕೊಂಡಿರುವುದು ವಿಶೇಷ.
ಹೌದು, ಅಧಿಕ ತೂಕ ಹೊಂದಿದ್ದ ಹಸನ್ ಸೋನಿ ಎಂಬುವವರು ಮೂರು ತಿಂಗಳಿನಲ್ಲಿ 14 ಕೆ.ಜಿಯಷ್ಟು ತೂಕವನ್ನು ಇಳಿಸಿಕೊಂಡಿದ್ದಾರೆ. ಪ್ರತಿದಿನ ಸಕ್ಕರೆ ಅಥವಾ ಕಾರ್ಬೊನೇಟೆಡ್ ಪಾನೀಯ ಸೇವಿಸುವ ಬದಲು ಆರೋಗ್ಯಕರ ಹಾಗೂ ಸಮತೋಲಿತ ಆಹಾರ ಸೇವಿಸುವುದರತ್ತ ಒತ್ತು ನೀಡುತ್ತಿದ್ದರು.
ದೈನಂದಿನ ಆಹಾರ ಕ್ರಮ ಹೀಗಿತ್ತು
ಉಪಹಾರ: ಹಸನ್ ಅವರು ಎರಡು ಮೊಟ್ಟೆ, ಎರಡು ಚಪಾತಿ ಅಥವಾ ರೋಸ್ಟ್ ಮಾಡಿದ ಬ್ರೆಡ್ ಮತ್ತು ಒಂದು ಕಪ್ ಗ್ರೀನ್ ಟೀ ಸೇವಿಸುತ್ತಾರೆ.
ಮಧ್ಯಾಹ್ನದ ಊಟ: ಮೂರು ಚಪಾತಿ ಅದಕ್ಕೆ ಗ್ರೇವಿ ಅಥವಾ ದಾಲ್ ಹಾಗೂ ಸಲಾಡ್ ಅನ್ನು ಸೇವಿಸುತ್ತಾರೆ. ಈ ಆಹಾರವು ಫೈಬರ್, ಪ್ರೊಟೀನ್ ಮತ್ತು ಪೋಷಕಾಂಶಗಳಿಂದ ತುಂಬಿವೆ.
ರಾತ್ರಿ ಊಟ: ಎಂದಿನಂತೆ ರಾತ್ರಿ ಊಟವನ್ನು ಸೇವಿಸುತ್ತಿದ್ದರು. ಇದಕ್ಕೆ ಗ್ರೇವಿ ಅಥವಾ ದಾಲ್ ಹಾಗೂ ಸಲಾಡ್‍ನೊಂದಿಗೆ ಊಟ ಮಾಡುತ್ತಿದ್ದರು. ಯಾವಾಗಲೂ ಲಘುವಾಗಿ ಊಟ ಮಾಡುತ್ತಾರೆ. ಆದರೆ, ಯಾವುದನ್ನೂ ಅತಿಯಾಗಿ ಸೇವಿಸುವುದಿಲ್ಲ. ಸಂಜೆಯ ಸಮಯಕ್ಕೂ ತಿಂಡಿಯನ್ನು ಅತಿಯಾಗಿ ತಿನ್ನುತ್ತಿರಲಿಲ್ಲ.
ತೂಕ ನಷ್ಟದ ರಹಸ್ಯ
ಪ್ರತಿಯೊಬ್ಬರೂ ತೂಕ ಇಳಿಕೆ ವಿಭಿನ್ನ ಪ್ರಯತ್ನ ಮಾಡುತ್ತಾರೆ. ತನ್ನ ಈ ಪ್ರಯತ್ನವು ಯಶ ಕಂಡಿದೆ. ಆದರೆ, ಎಲ್ಲರೂ ಇದೇ ರೀತಿಯ ತಂತ್ರಗಳನ್ನು ಬಳಸಿದರೆ ಯಶಸ್ಸು ದೊರೆಯುತ್ತದೆ ಎಂದು ಹೇಳಲಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಚಯಾಪಚಯ ಕ್ರಿಯೆ ಒಂದೇ ರೀತಿ ಇರುವುದಿಲ್ಲ. ಹೀಗಾಗಿ ಆರೋಗ್ಯಕ್ಕಾಗಿ ಸುರಕ್ಷಿತ ಆಹಾರ ಸೇವನೆ ಬಹಳ ಮುಖ್ಯ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಸಿಹಿತಿಂಡಿಗಳು (ಮುಖ್ಯವಾಗಿ ಸಕ್ಕರೆ ಅಂಶ ಇರುವ) ಹಾಗೂ ಕಾರ್ಬೊನೇಟೆಡ್ ಪಾನೀಯಗಳ ಸೇವನೆ ಮಾಡಲೇಬಾರದು ಎಂದು ಹಸನ್ ಹೇಳುತ್ತಾರೆ. ಸಮತೋಲಿತ ಆಹಾರಕ್ಕೆ ಒತ್ತು ನೀಡಬೇಕು. ಜೊತೆಗೆ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ತೂಕ ಇಳಿಸಿಕೊಳ್ಳಬಹುದು ಎಂಬುದು ಹಸನ್ ಅವರ ಅಭಿಪ್ರಾಯವಾಗಿದೆ.
ತೂಕ ಇಳಿಕೆಯ ಪ್ರಯಾಣ ಒಬ್ಬೊಬ್ಬರದ್ದು ಒಂದೊಂದು ರೀತಿಯಿರುತ್ತದೆ. 35 ವರ್ಷದ ವ್ಯಕ್ತಿಯೊಬ್ಬರು 120 ಕೆಜಿ ತೂಕ ಹೊಂದಿದ್ದರು. ಕಠಿಣ ಪ್ರಯತ್ನದಿಂದ ಹೇಮಂತ್ ಎಂಬುವವರು ಬರೋಬ್ಬರಿ 40 ಕೆ.ಜಿ ತೂಕ ಇಳಿಸಿಕೊಂಡಿರುವುದು ಸುದ್ದಿಯಾಗಿತ್ತು. ತ್ಯಾಗ, ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವನೆ, ಶಿಸ್ತು ಇದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂಬುದು ಅವರ ಅಭಿಪ್ರಾಯ. ಅಲ್ಲದೆ, ತೂಕ ಇಳಿಕೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿಯೇ ಪ್ರೇರಣೆ ಎಂಬುದಾಗಿ ತಿಳಿಸಿದ್ದಾರೆ. ತೂಕ ಇಳಿಸಿಕೊಂಡಿದ್ದು ಮಾತ್ರವಲ್ಲದೆ, ಹೇಮಂತ್ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಇದೇ ರೀತಿ ಹಲವಾರು ಮಂದಿ ತಮ್ಮ ವಿಭಿನ್ನ ಪ್ರಯತ್ನಗಳಿಂದ ತೂಕ ಇಳಿಸಿಕೊಂಡಿದ್ದಾರೆ. ಆದರೆ ಹಸನ್ ಅವರ ತೂಕ ಇಳಿಕೆ ಮಾತ್ರ ಎಲ್ಲರಿಗಿಂತ ವಿಶಿಷ್ಟವಾಗಿದೆ. ಯಾವುದೇ ಕಠಿಣ ಪರಿಶ್ರಮ ಹಾಕದೆ, ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ತಮ್ಮ ತೂಕವನ್ನು ಕಳೆದುಕೊಂಡಿದ್ದಾರೆ.