ಕನ್ನಡ ಸುದ್ದಿ  /  Lifestyle  /  Weight Loss Tips 5 Powerful Recipes To Reduce Weight In Health Way Ragi Ball Ragi Malt Ragi Laddu Rsa

Weight Loss Tips: ತೂಕ ಇಳಿಸಲು ಅತ್ಯುತ್ತಮ ಆಯ್ಕೆ ರಾಗಿ; ಈ ಸೂಪರ್‌ಫುಡ್‌ನಿಂದ ತಯಾರಿಸಬಹುದಾದ 5 ರೆಸಿಪಿಗಳಿವು

Weight Loss: ತೂಕ ಇಳಿಸಬೇಕು ಎಂದುಕೊಂಡಿರುವವರು ರಾಗಿ ಸೇವನೆ ಮಾಡುವುದು ಒಳ್ಳೆಯದು. ರಾಗಿ ಹಿಟ್ಟನ್ನು ಬಳಸಿ ಯಾವೆಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ತೂಕ ಇಳಿಸಲು ಬೆಸ್ಟ್‌ ಆಯ್ಕೆ ರಾಗಿಹಿಟ್ಟು
ತೂಕ ಇಳಿಸಲು ಬೆಸ್ಟ್‌ ಆಯ್ಕೆ ರಾಗಿಹಿಟ್ಟು

Weight Loss Tips: ಈಗಿನ ಆಧುನಿಕ ಯುಗದಲ್ಲಿ , ಸಂಸ್ಕರಿತ ಆಹಾರಗಳ ಹಾವಳಿಯಿಂದಾಗಿ ತೂಕ ಏರಿಕೆ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಅಗಾಧವಾಗಿದೆ. ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೂಕ ಇಳಿಕೆ ಮಾಡಲು ಬಳಕೆಯಾಗುವ ಧಾನ್ಯಗಳ ಪೈಕಿ ರಾಗಿ ಕೂಡ ಒಂದು. ವಾರ್ಷಿಕವಾಗಿ ಬೆಳೆಯುವ ಏಕದಳ ಧಾನ್ಯ ಇದಾಗಿದ್ದು ಇಥಿಯೋಪಿಯಾ, ಭಾರತ, ಶ್ರೀಲಂಕಾ ಸೇರಿದಂತೆ ಏಷ್ಯಾದ ಉಷ್ಣ ವಲಯದ ಪ್ರದೇಶಗಳಲ್ಲಿ ಇದು ವ್ಯಾಪಕವಾಗಿ ಬೆಳೆಯುತ್ತದೆ. ಭಾರತದಲ್ಲಿ ಅದರಲ್ಲೂ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ರಾಗಿಯನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಕರ್ನಾಟಕದಲ್ಲಿ ಇದನ್ನು ರಾಗಿ ಎಂದರೆ ಕರೆದರೆ ಮಹಾರಾಷ್ಟ್ತ ಭಾಗದಲ್ಲಿ ಇದನ್ನು ನಾಚ್ನಿ ಎಂದು ಕರೆಯುತ್ತಾರೆ.

ರಾಗಿಯಲ್ಲಿರುವ ಸತ್ವಗಳು

ರಾಗಿಯು ಅಪರೂಪವಾದ ಏಕದಳ ಧಾನ್ಯವಾಗಿದ್ದು ಇದರ ಸಂಪೂರ್ಣ ಲಾಭ ಪಡೆಯಬೇಕು ಎಂದರೆ ನೀವು ಯಾವುದೇ ರೀತಿ ಪಾಲಿಶ್‌ ಮಾಡದ ಶುದ್ಧ ರಾಗಿಯನ್ನು ಸೇವಿಸಬೇಕು. ರಾಗಿ ಸಾಕಷ್ಟು ಪ್ರಯೋಜನಕಾರಿ ಪೋಷಕಾಂಶಗಳನ್ನು ಹೊಂದಿರುವ ಪವರ್‌ ಹೌಸ್ ಆಗಿದ್ದು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಸಹಕಾರಿಯಾಗಿದೆ. ರಾಗಿಯಲ್ಲಿ ಪ್ರೋಟಿನ್ ಅಗಾಧ ಪ್ರಮಾಣದಲ್ಲಿದೆ ಅಲ್ಲದೇ ಫೈಬರ್‌ಗಳು ವಿಟಮಿನ್ ಬಿ, ಅಮಿನೋ ಆ್ಯಸಿಡ್‌ಗಳು ಸೇರಿದಂತೆ ಇನ್ನೂ ಸಾಕಷ್ಟು ಅಂಶಗಳು ರಾಗಿಯಲ್ಲಿ ಅಡಕವಾಗಿದೆ. ತೂಕ ಇಳಿಕೆ ಮಾಡಬೇಕು ಎಂದುಕೊಳ್ಳುವವರು ರಾಗಿಯಿಂದ ತಯಾರಾದ ಯಾವೆಲ್ಲಾ ಆಹಾರ ಪದಾರ್ಥಗಳನ್ನು ಸೇವಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.

ರಾಗಿ ಮಾಲ್ಟ್

ನಿಮ್ಮ ಬಾಯಿ ರುಚಿಗೂ ಯಾವುದೇ ರೀತಿ ಮೋಸ ಮಾಡಿಕೊಳ್ಳದೇ ಇತ್ತ ತೂಕ ಇಳಿಕೆಗೂ ಯಾವುದೇ ತೊಂದರೆಯಾಗದಂತೆ ಇರಬೇಕು ಎಂದರೆ ನೀವು ರುಚಿ ರುಚಿಯಾದ ರಾಗಿ ಮಾಲ್ಟ್ ಸೇವಿಸಬೇಕು. 1 ಟೇಬಲ್ ಚಮಚ ರಾಗಿಯನ್ನು ಅರ್ಧ ಲೋಟ ನೀರಿನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಒಂದು ಚೂರು ಗಂಟು ಬಾರದಂತೆ ರಾಗಿಯನ್ನು ಮಿಶ್ರಣ ಮಾಡಿಕೊಂಡ ಬಳಿಕ ಇದನ್ನು ಬಿಸಿ ಮಾಡಿ ಬಳಿಕ ತಣ್ಣಗಾಗಲು ಬಿಡಬೇಕು. ಇದಕ್ಕೆ ಮಸಾಲಾ ಮಜ್ಜಿಗೆಯನ್ನು ಸೇರಿಸಬೇಕು. ಕೊತ್ತಂಬರಿ ಸೊಪ್ಪು ಹಾಗೂ 2 ಹಸಿ ಮೆಣಸು ಕತ್ತರಿಸಿ ಬಳಿಕ ಇದಕ್ಕೆ ಸ್ವಲ್ಪ ಹುರಿದ ಜೀರಿಗೆ ಮತ್ತು ಉಪ್ಪನ್ನು ಸೇರಿಸಿ ಸವಿದರೆ ತುಂಬಾನೇ ಚೆನ್ನಾಗಿ ಇರುತ್ತದೆ.

ರಾಗಿ ರೊಟ್ಟಿ

ರಾಗಿ ಮಾಲ್ಟ್ ಬದಲಾಗಿ ನೀವು ಇನ್ನೇನಾದರೂ ತಿನಿಸನ್ನು ಪ್ರಯತ್ನಿಸಬೇಕು ಎಂದುಕೊಂಡಿದ್ದರೆ ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಸಿದಂತೆ ರಾಗಿ ಹಿಟ್ಟಿನಿಂದಲೂ ಚಪಾತಿ ತಯಾರಿಸಬಹುದು. ರಾಗಿ ಹಿಟ್ಟಿಗೆ ನೀವು ಕ್ಯಾರೆಟ್, ಜೀರಿಗೆ ಹಾಗೂ ವಿವಿಧ ಮಸಾಲೆಗಳನ್ನು ಸೇರಿಸಿದರೆ ರಾಗಿ ರೊಟ್ಟಿ ಇನ್ನಷ್ಟು ರುಚಿಕರವಾಗಿರುತ್ತದೆ.

ರಾಗಿ ಲಾಡು

ರಾಗಿ ಹಿಟ್ಟಿನಿಂದ ತಯಾರಿಸುವ ಅತ್ಯಂತ ರುಚಿಕರವಾದ ತಿನಿಸು ಎಂದರೆ ರಾಗಿ ಲಾಡು. ಇದನ್ನು ತಯಾರಿಸುವುದು ಕೂಡ ಬಲು ಸುಲಭ. ರಾಗಿ ಹಿಟ್ಟನ್ನು ಹುರಿದುಕೊಳ್ಳಿ. ಬಳಿಕ 1 ಕಪ್ ಬೀಜ ತೆಗೆದ ಖರ್ಜೂರ, 1 ಕಪ್ ಒಣದ್ರಾಕ್ಷಿ, 1 ಕಪ್ ಶೇಂಗಾ ಹಾಗೂ 1 ಕಪ್ ಹುರಿದ ಬಾದಾಮಿಯನ್ನು ತೆಗೆದುಕೊಂಡು ಚೆನ್ನಾಗಿ ಗ್ರೈಂಡ್ ಮಾಡಿ. ಇದನ್ನು ರಾಗಿ ಹಿಟ್ಟಿನೊಂದಿಗೆ ಮಿಶ್ರಣ ಮಾಡಿ . ಕೈಗೆ ತುಪ್ಪವನ್ನು ಸವರಿಕೊಂಡು ರಾಗಿ ಲಾಡುವನ್ನು ತಯಾರಿಸಿ.

ರಾಗಿ ಉಪ್ಪಿಟ್ಟು

ರವೆ ಉಪ್ಪಿಟ್ಟು ತಿಂದು ತಿಂದು ಬೇಜಾರಾಗಿದ್ದರೆ ರಾಗಿ ಉಪ್ಪಿಟ್ಟನ್ನು ಸೇವಿಸಬಹುದು. ಒಂದು ಕಪ್ ರಾಗಿ ಹಿಟ್ಟು ತೆಗೆದುಕೊಳ್ಳಿ. ಇನ್ನೊಂದೆಡೆ ಈರುಳ್ಳಿ, ಕ್ಯಾರೆಟ್ ಹಾಗೂ ಬೀನ್ಸನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಮಧ್ಯಮ ಉರಿಯಲ್ಲಿ ಪಾತ್ರೆಯನ್ನಿಟ್ಟು ಇದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ. ಬಳಿಕ ಕರಿಬೇವಿನ ಸೊಪ್ಪು ಹಾಗೂ ಸಾಸಿವೆ, ಒಣ ಮೆಣಸು ಹಾಕಿ ಹುರಿದುಕೊಳ್ಳಿ. ಬಳಿಕ 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ . ಇದಾದ ಬಳಿಕ ಕತ್ತರಿಸಿದ ತರಕಾರಿಯನ್ನು ಇದಕ್ಕೆ ಸೇರಿಸಿ. ನೀರನ್ನು ಸೇರಿಸಿ. ತರಕಾರಿ ಬಹುತೇಕ ಬೆಂದ ಬಳಿಕ ರಾಗಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಉಪ್ಪಿಟ್ಟಿನ ಹದಕ್ಕೆ ಬಂದ ಬಳಿಕ ಗ್ಯಾಸ್ ಆಫ್ ಮಾಡಿ.

ರಾಗಿ ಮುದ್ದೆ

ಕರ್ನಾಟಕದ ಅತ್ಯಂತ ಜನಪ್ರಿಯ ತಿನಿಸುಗಳ ಪೈಕಿ ರಾಗಿ ಮುದ್ದೆ ಕೂಡ ಒಂದು. ತೂಕ ಇಳಿಕೆಗೆ ಇದು ಹೇಳಿ ಮಾಡಿಸಿದಂತಹ ತಿನಿಸಾಗಿದೆ. ಮಧುಮೇಹ ಕಾಯಿಲೆವುಳ್ಳವರು, ಪುಟಾಣಿ ಮಕ್ಕಳು ಸೇರಿದಂತೆ ಯಾರು ಬೇಕಿದ್ದರೂ ರಾಗಿ ಮುದ್ದೆಯನ್ನು ಸೇವಿಸಬಹುದಾಗಿದೆ.

ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ. ಇದಕ್ಕೆ ರಾಗಿ ಹಿಟ್ಟನ್ನು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಮತ್ತೊಂದು ಬಾಣಲೆ ತೆಗೆದುಕೊಂಡು ಸ್ವಲ್ಪ ಸ್ವಲ್ಪ ಹಿಟ್ಟನ್ನು ಸೇರಿಸುತ್ತಾ ಅದನ್ನು ಕುದಿಯಲು ಬಿಡಿ. ಒಮ್ಮೆ ಕುದಿಯುವುದು ಆರಂಭವಾಗುತ್ತಿದ್ದಂತೆಯೇ ಶಾಖವನ್ನು ಕಡಿಮೆ ಮಾಡಿ. ಕಡಿಮೆ ಉರಿಯಲ್ಲಿ 3-4 ನಿಮಿಷಗಳ ಕಾಲ ನೀವು ಬೇಯಿಸಬಹುದು. ಒಣ ಹಿಟ್ಟಿನ ಸಣ್ಣ ಗಂಟೂ ಕಾಣದಂತೆ ನೀವು ರಾಗಿ ಹಿಟ್ಟನ್ನು ಚೆನ್ನಾಗಿ ಬೇಯಿಸಬೇಕು. ಬಳಿಕ ಪಾತ್ರೆಯನ್ನು ಕೆಳಗಿಳಿಸಿ. ಮರದ ಕೋಲಿನಿಂದ ರಾಗಿ ಹಿಟ್ಟಿನ ಮಿಶ್ರಣವನ್ನು ಚೆನ್ನಾಗಿ ಕಲಸಿ. ಐದು ನಿಮಿಷಗಳ ಅದನ್ನು ಹಾಗೆಯೇ ಬಿಡಿ. ಬಳಿಕ ಪ್ಲೇಟ್‌ಗೆ ವರ್ಗಾಯಿಸಿ. ಮಧ್ಯಮ ಗಾತ್ರದ ಉಂಡೆ ತಯಾರಿಸಿ.