Weight Loss Tips: ತೂಕ ಇಳಿಸಲು ಕಷ್ಟಪಡುತ್ತಿದ್ದರೆ ರಾತ್ರಿ ಮಲಗುವ ಮುನ್ನ ಈ 4 ಕೆಲಸಗಳನ್ನು ತಪ್ಪದೇ ಮಾಡಿ
ಸರಿಯಾದ ಆಹಾರ ಕ್ರಮ ಮತ್ತು ದೈಹಿಕ ವ್ಯಾಯಾಮದ ಜೊತೆಗೆ, ರಾತ್ರಿ ಮಲಗುವ ಮೊದಲು ಈ ಕೆಲಸಗಳನ್ನು ಮಾಡುವುದರಿಂದ ಬೊಜ್ಜು ಬಹು ಬೇಗನೆ ಕರಗಲು ಸಹಾಯ ಮಾಡುತ್ತದೆ. ತೂಕ ಇಳಿಸುವ ಪ್ರಯತ್ನದಲ್ಲಿರುವವರು ಈ ಅಭ್ಯಾಸಗಳನ್ನು ಖಂಡಿತ ರೂಢಿಸಿಕೊಳ್ಳಿ.

ನಮ್ಮ ದೇಶದಲ್ಲಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಬಹಳಷ್ಟು ಜನರಿದ್ದಾರೆ. ಕಳಪೆ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯ ಕೊರತೆಯು ಬೊಜ್ಜು ಬರುವುದಕ್ಕೆ ಪ್ರಮುಖ ಕಾರಣಗಳಾಗಿವೆ. ವಿಶ್ವದಾದ್ಯಂತ ತೂಕ ಹೆಚ್ಚಳದಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ತೂಕ ಇಳಿಸುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ತಲೆಕೆಡಿಸಿಕೊಂಡವರ ಸಂಖ್ಯೆ ಬಹಳಷ್ಟಿದೆ. ತೂಕ ಇಳಿಸಿಕೊಳ್ಳಲು ಹರಸಾಹಸ ಪಡುವವರು ಇದ್ದಾರೆ. ಆದರೆ ಬಹಳಷ್ಟು ಜನರಿಗೆ ಫಲಿತಾಂಶ ಮಾತ್ರ ಶೂನ್ಯವಾಗಿರುತ್ತದೆ.
ತೂಕ ಇಳಿಸಿಕೊಳ್ಳಲು ಪ್ರತಿದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ಅದಕ್ಕೆ ಸರಿಯಾದ ಆಹಾರ ಪದ್ಧತಿ ಮತ್ತು ನಿಯತ ವ್ಯಾಯಾಮವು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಇವಿಷ್ಟು ಮಾಡಿದರೆ ಕೆಲವೊಮ್ಮೆ ತೂಕ ಇಳಿಯುವುದಿಲ್ಲ. ಅದಕ್ಕೆ ನಿಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ಸಣ್ಣ ಬದಲಾವಣೆಗಳು ಹಾಗೂ ಅಭ್ಯಾಸಗಳನ್ನು ಸೇರಿಸಿಕೊಳ್ಳುವ ಮೂಲಕ, ನಿಮ್ಮ ತೂಕ ಇಳಿಸುವ ಪ್ರಯಾಣವನ್ನು ವೇಗಗೊಳಿಸಬಹುದು. ಅದೇನೆಂದರೆ, ರಾತ್ರಿ ಮಲಗುವ ಮೊದಲು ಕೆಲವು ಅಭ್ಯಾಸಗಳನ್ನು ಅನುಸರಿಸುವ ಮೂಲಕ, ನಿಮ್ಮ ತೂಕ ಇಳಿಸುವ ಪ್ರಯಾಣವನ್ನು ಸುಲಭವಾಗಿ ಪೂರ್ಣಗೊಳಿಸಬಹುದು.
ತೂಕ ಇಳಿಸಲು ರಾತ್ರಿ ಮಲಗುವ ಮುನ್ನ ಮಾಡಬೇಕಾದ ಕೆಲಸಗಳು
ಭೋಜನ: ಯಾವಾಗಲೂ ರಾತ್ರಿಯ ಊಟವನ್ನು ಬೇಗ ಮಾಡಬೇಕು. ಕೆಲವರು ರಾತ್ರಿ 9 ಗಂಟೆಯ ನಂತರ ಊಟ ಮಾಡುತ್ತಾರೆ. ರಾತ್ರಿ ಏಳು ಗಂಟೆಯೊಳಗೆ ಊಟ ಮುಗಿಸುವುದು ಸರಿಯಾದ ಕ್ರಮವಾಗಿದೆ. ಇದು ಒಟ್ಟಾರೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಆಯುರ್ವೇದದಿಂದ ಆಧುನಿಕ ವಿಜ್ಞಾನದವರೆಗೆ, ಜನರು ಸಾಧ್ಯವಾದಷ್ಟು ಬೇಗ ರಾತ್ರಿ ಊಟಕ್ಕೆ ಆದ್ಯತೆ ನೀಡುತ್ತಾರೆ. ಹಾಗಾಗಿ, ಸಂಜೆ 7 ಗಂಟೆಯೊಳಗೆ ಭೋಜನ ಮುಗಿಸಿ. ಆನಂತರ ಏನನ್ನೂ ತಿನ್ನಬೇಡಿ. ನಿದ್ದೆ ಮತ್ತು ಊಟದ ನಡುವೆ ಸುಮಾರು ಮೂರು ಗಂಟೆಗಳ ಅಂತರವಿರಬೇಕೆಂದು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಇದು ಆಹಾರವನ್ನು ಚೆನ್ನಾಗಿ ಜೀರ್ಣಿಸಿಕೊಳ್ಳುತ್ತದೆ. ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.
ಲಘು ಆಹಾರ: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿಮ್ಮ ಭೋಜನವನ್ನು ತುಂಬಾ ಹಗುರವಾದ ಆಹಾರದೊಂದಿಗೆ ಮುಗಿಸಬೇಕು. ರಾತ್ರಿ ಊಟದಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಇರುವ ಆಹಾರಗಳನ್ನು ಸೇವಿಸಿ. ಇದು ನಿಮ್ಮ ಹೊಟ್ಟೆಯನ್ನು ಬೇಗನೆ ತುಂಬಿಸುತ್ತದೆ. ತೂಕ ಹೆಚ್ಚಾಗುವ ಚಿಂತೆಯೂ ಇರುವುದಿಲ್ಲ. ರಾತ್ರಿ ಊಟದಲ್ಲಿ ತರಕಾರಿ ಸೂಪ್, ಬೇಯಿಸಿದ ತರಕಾರಿಗಳು, ಸಲಾಡ್, ಬೇಳೆ, ಖಿಚಡಿ ಮತ್ತು ಗಂಜಿ ಸೇರಿಸಿಕೊಳ್ಳಬಹುದು. ಒಟ್ಟಾರೆಯಾಗಿ, ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ರಾಜನಂತೆ ಉಪಾಹಾರ ಮತ್ತು ರಾತ್ರಿ ಊಟವನ್ನು ಭಿಕ್ಷುಕನಂತೆ ಸೇವಿಸಬೇಕು. ಅಂದರೆ ಬಹಳ ಕಡಿಮೆ ಪ್ರಮಾಣದಲ್ಲಿ ತಿನ್ನುವ ನಿಯಮವನ್ನು ನೆನಪಿನಲ್ಲಿಟ್ಟುಕೊಂಡು ಪಾಲಿಸಬೇಕು.
ಬೆಚ್ಚಗಿನ ಹಾಲು: ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲಿಗೆ ಸ್ವಲ್ಪ ಅರಿಶಿನ ಬೆರೆಸಿ ಕುಡಿಯಿರಿ. ಇದು ಉತ್ತಮ ನಿದ್ದೆ ಮತ್ತು ಉತ್ತಮ ಆರೋಗ್ಯವನ್ನು ನೀಡುತ್ತದೆ. ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ಅರಿಶಿನದ ಹಾಲು ಕೊಬ್ಬನ್ನು ಕರಗಿಸಲು ಸಹಾಯ ಮಾಡುವ ಥರ್ಮೋಜೆನಿಕ್ ಗುಣಗಳನ್ನು ಹೊಂದಿದೆ. ಇದು ಚಯಾಪಚಯ ಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀವು ಮಲಬದ್ಧತೆಯಿಂದ ಬಳಲುತ್ತಿದ್ದರೆ, ಅರಿಶಿನ ಹಾಲು ಕುಡಿಯುವುದು ನಿಮಗೆ ತುಂಬಾ ಒಳ್ಳೆಯದು. ನೀವು ಹಾಲು ಕುಡಿಯಲು ಬಯಸದಿದ್ದರೆ, ಅರ್ಧ ಚಮಚ ಅರಿಶಿನವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದು ಸಹ ತೂಕ ಇಳಿಸಿಕೊಳ್ಳಲು ತುಂಬಾ ಪ್ರಯೋಜನಕಾರಿ.
ನಿದ್ದೆ: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿದ್ದೆಗೂ ಪ್ರಾಮುಖ್ಯತೆಯನ್ನೂ ನೀಡಿ. ನಿದ್ದೆಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸುವುದು ಬಹಳ ಮುಖ್ಯ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಕ್ಲಿನಿಕಲ್ ಸೆಂಟರ್‌ನ ಸಂಶೋಧನೆಯ ಪ್ರಕಾರ, ಕಡಿಮೆ ತಾಪಮಾನವಿರುವ ಕೋಣೆಗಳಲ್ಲಿ ಮಲಗುವ ಜನರು, ಹೆಚ್ಚಿನ ತಾಪಮಾನದಲ್ಲಿ ಮಲಗುವವರಿಗಿಂತ ಹೆಚ್ಚಿನ ಕ್ಯಾಲೊರಿಗಳನ್ನು ಕಳೆದುಕೊಳ್ಳುತ್ತಾರೆ. ಅಂದರೆ ಕೋಣೆಯ ಉಷ್ಣತೆಯು ತಂಪಾಗಿರುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಕೆಲವು ಸಂಶೋಧನೆಗಳು ಕತ್ತಲೆಯಲ್ಲಿ ಮಲಗುವುದರಿಂದ ಹೆಚ್ಚಿನ ಕ್ಯಾಲೊರಿಗಳು ಸುಡುತ್ತವೆ ಎಂದೂ ಹೇಳುತ್ತವೆ. ಆರೋಗ್ಯ ತಜ್ಞರ ಪ್ರಕಾರ, ತೂಕ ಇಳಿಸಿಕೊಳ್ಳಲು, ಸಾಕಷ್ಟು ಒಳ್ಳೆಯ ಹಾಗೂ ಆಳವಾದ ನಿದ್ದೆ ಮಾಡುವುದು ಬಹಳ ಮುಖ್ಯವಾಗಿದೆ. ಕನಿಷ್ಠ 7 ಗಂಟೆಗಳ ಕಾಲ ನಿದ್ದೆ ಮಾಡಲು ಪ್ರಯತ್ನಿಸಿ. ವಾಸ್ತವವಾಗಿ, ಬೊಜ್ಜು ಮತ್ತು ನಿದ್ದೆಯ ನಡುವೆ ನೇರ ಸಂಬಂಧವಿದೆ. ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ನಿಮ್ಮ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಇದು ಆಹಾರವನ್ನು ಕೊಬ್ಬಾಗಿ ಪರಿವರ್ತಿಸಲು ಕಾರಣವಾಗುತ್ತದೆ. ಆದ್ದರಿಂದ ಚೆನ್ನಾಗಿ ನಿದ್ರೆ ಮಾಡಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ).
