Weight Loss Tips: 9 ತಿಂಗಳಲ್ಲಿ 22 ಕಿಲೋ ತೂಕ ಇಳಿಸಿಕೊಂಡ ಆಹಾರ ಪತ್ರಕರ್ತೆ; ಸಣ್ಣಗಾಗಬೇಕು ಅಂದುಕೊಳ್ಳೋರಿಗೆ ಇವರೇ ಸ್ಫೂರ್ತಿ
Weight Loss Tips: ದೇಹದ ಆರೋಗ್ಯಕ್ಕಾಗಿ ಪ್ರತಿನಿತ್ಯ 7 ಕಿ.ಮೀ ದೂರ ನಡೆಯುವುದರಿಂದ ತೊಡಗಿ, ಕರುಳಿನ ಆರೋಗ್ಯವನ್ನು ಕಾಪಾಡುವ ಸಲುವಾಗಿ ಮನೆಯಲ್ಲೇ ತಯಾರಿಸಿದ ಆಹಾರವನ್ನು ಸೇವಿಸಿ ಮಹಿಳೆಯೊಬ್ಬರು ಕೇವಲ 9 ತಿಂಗಳ ಅವಧಿಯಲ್ಲಿ 22 ಕೆಜಿ ತೂಕವನ್ನು ಕಳೆದುಕೊಂಡ ಸ್ಪೂರ್ತಿದಾಯಕ ಸ್ಟೋರಿ ಇಲ್ಲಿದೆ.
Weight Loss Tips: ತೂಕ ಕಳೆದುಕೊಳ್ಳುವುದು ಎಂದಿಗೂ ಸುಲಭವಲ್ಲ. ಅದರಲ್ಲೂ ನಿಮ್ಮ ವೃತ್ತಿಯೇ ಮೆನುವಿನಲ್ಲಿರುವ ಆಹಾರದ ರುಚಿಯನ್ನು ಕುರಿತು ಮಾಹಿತಿ ನೀಡುವುದಾದಾಗ, ತೂಕ ಇಳಿಕೆಯಂತೂ ಕನಸಿನ ಮಾತಾಗಿಬಿಡುತ್ತದೆ. ಹೌದು, ಆಹಾರ ಪತ್ರಕರ್ತೆಯಾಗಿದ್ದ ದೀಕ್ಷಾ ಸರಿನ್ 2023ರ ಮೇ ತಿಂಗಳವರೆಗೆ 84 ಕೆಜಿ ತೂಕವನ್ನು ಹೊಂದಿದ್ದರು. ಅವರು ತೂಕ ಇಳಿಸಲು ನಿರ್ಧರಿಸಿ 9 ತಿಂಗಳ ಅವಧಿಯಲ್ಲಿ 22 ಕೆಜಿಯನ್ನು ಕಳೆದುಕೊಂಡಿದ್ದಾರೆ.
ಪತ್ರಕರ್ತೆ ಹೇಳುವ ಪ್ರಕಾರ, " ಇಷ್ಟು ದಿನ ಜಿಮ್‌ಗೆ ಹೋಗಿರಲಿಲ್ಲ. ಯಾವುದೇ ಆಹಾರವನ್ನೂ ಬೇಡವೆಂದು ತಳ್ಳಿಹಾಕಿಲ್ಲ. ಪ್ರತಿದಿನ 6 ರಿಂದ 8 ಕಿಮೀ ನಡೆಯುವುದು ಮತ್ತು ಮಿತವಾಗಿ ತಿನ್ನುವುದನ್ನು ರೂಢಿಸಿಕೊಂಡು ತೂಕ ನಷ್ಟ ಸಾಧ್ಯವಾಯಿತು”.
ತೂಕ ನಷ್ಟದೊಂದಿಗೆ ಪ್ರೀತಿ-ದ್ವೇಷ ಸಂಬಂಧ
" ಪ್ರತಿ ಬಾರಿ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸಿದಾಗ ಹೆಚ್ಚಾಗಿ ನಿರಾಶೆಗೊಂಡಿದ್ದೆ.. ತುಂಬಾ ಕಷ್ಟಪಟ್ಟು ಅನೇಕ ಕಿಲೋಗಳನ್ನು ಕಳೆದುಕೊಂಡ ಕೆಲವೇ ದಿನಗಳಲ್ಲಿ ಆಹಾರ ಕ್ರಮ ತಪ್ಪಿಸಿದರೆ ಸಾಕು ಮತ್ತೆ ತೂಕ ಹೆಚ್ಚಿಗೆಯಾಗಿಬಿಡುತ್ತಿತ್ತು. ಇದು ನನಗೇ ಬಹಳ ಕಿರಿಕಿರಿ ಉಂಟುಮಾಡುತ್ತದೆ," ಎಂದು ದೀಕ್ಷಾ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ತೂಕ ಕಡಿಮೆ ಮಾಡಲು ಪ್ರೇರಣೆ ಏನು
ಮೊದಲ ಮಹಡಿಯಲ್ಲಿರುವ ತನ್ನ ಮನೆಯನ್ನು ತಲುಪಲು ಮೆಟ್ಟಿಲುಗಳನ್ನು ಹತ್ತಿದ ನಂತರ ತಾನು ಹೇಗೆ ಕಷ್ಟಪಡಬೇಕಾಯ್ತು ಎಂದು ದೀಕ್ಷಾ ಹಂಚಿಕೊಂಡಿದ್ದಾರೆ. "ನನ್ನ ಜೀವನದ ಬಹುಪಾಲು ಭಾಗದಲ್ಲಿ, ನಾನು ಅಧಿಕ ತೂಕ ಹೊಂದಿದ್ದೇನೆ. ಎರಡು ವರ್ಷಗಳ ಹಿಂದೆ ನನಗೆ ಥೈರಾಯ್ಡ್ ಇರುವುದು ಖಚಿತವಾಯಿತು. 30 ವರ್ಷ ವಯಸ್ಸಿನಲ್ಲೇ, ನನ್ನ ತೂಕವು 84 ಕೆಜಿಯನ್ನು ಮುಟ್ಟಿದಾಗ ಅದು ನನಗೆ ಕಷ್ಟಕರವಾಗಿತ್ತು. ಉತ್ತಮ ಆರೋಗ್ಯ ಹೊಂದಲು ಏನಾದರೂ ಮಾಡಲೇ ಬೇಕೆಂದು ನಿರ್ಧರಿಸಿದೆ.
ತೂಕ ಇಳಿಸಲು ಅನುಸರಿಸಿದ ಆಹಾರ ಕ್ರಮ
ದೀಕ್ಷಾ ಸರಿನ್ ಹೇಳುವ ಪ್ರಕಾರ, 80% ಆಹಾರ ಮತ್ತು 20% ವ್ಯಾಯಾಮವು ಆರೋಗ್ಯವಂತ ಶರೀರವನ್ನು ಸೂಚಿಸುತ್ತದೆ.. ಆಹಾರ ತಜ್ಞರು ನನ್ನ ಅವಶ್ಯಕತೆಗಳನ್ನು ಅರ್ಥಮಾಡಿಕೊಂಡು ಆಹಾರ ಪದ್ಧತಿಯನ್ನೇ ಬದಲಿಸಿದರು. ಮನೆಯಲ್ಲೇ ತಯಾರಿಸಿದ ಪೌಷ್ಟಿಕಾಂಶ ಮತ್ತು ಆರೋಗ್ಯಕರ ಆಹಾರವನ್ನು 8 ಭಾಗವಾಗಿ ವಿಭಜಿಸಿ ತಿನ್ನಲು ಸೂಚಿಸಿದರು. ದೈನಂದಿನ ದಿನಚರಿಯಲ್ಲಿ ಡಿಟಾಕ್ಸ್ ನೀರನ್ನು ಕುಡಿಯುವಂತೆ ಸಲಹೆ ನೀಡಿದರು.
ಸಂಜೆ 6 ಗಂಟೆಯ ನಂತರ ಆಹಾರಕ್ಕೆ ಬ್ರೇಕ್!
ಸಂಜೆ 6 ಗಂಟೆಗೆ ದಿನದ ಕೊನೆಯ ಊಟವನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆಗೆ ಉತ್ತಮ ರೀತಿಯಲ್ಲಿ ಅನುವು ಮಾಡಿಕೊಡಲಾಯಿತು. ಈ ಮೂಲಕ ಶರೀರಕ್ಕೆ ಹೊಸ ಚೈತನ್ಯದ ಜೊತೆಗೆ ರಾತ್ರಿ ಸುಖ ನಿದ್ರೆಗೂ ಕಾಲಾವಕಾಶ ಸಿಕ್ಕಿದಂತಾಗಿತ್ತು. ಆದರೂ ಮಧ್ಯರಾತ್ರಿ ಹಸಿವಾಗುತ್ತಿದ್ದರಿಂದ ನಿಧಾನವಾಗಿ ಜೀರ್ಣವಾಗುವಂತಹ ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.
ತೂಕ ನಷ್ಟ ಪ್ರಯಾಣದಲ್ಲಿ ವ್ಯಾಯಾಮಕ್ಕೂ ಸಮಯ ನಿಗದಿ
ಜಿಮ್‌ಗೆ ಸೇರಿ ಪ್ರಯೋಜನ ಕಾಣದ ನಿಟ್ಟಿನಲ್ಲಿ ವಾಕಿಂಗ್ ಹಾಗೂ ಜಾಗಿಂಗ್ ಮೊರೆ ಹೋದ ದೀಕ್ಷಾ, ಪ್ರತಿದಿನ 6 ರಿಂದ 8 ಕಿಮೀ ಕ್ರಮಿಸುವ ರೂಢಿ ಮಾಡಿಕೊಂಡರು.
ತೂಕ ಇಳಿಸುವ ಪ್ರಯಾಣದಲ್ಲಿ ಅವರು ಮಾಡಿದ ತಪ್ಪೇನು?
ದೀಕ್ಷಾ, ಆರಂಭದ ಕೆಲವು ತಿಂಗಳುಗಳಲ್ಲಿ ತಡವಾಗಿ ನಿದ್ರೆ ಮಾಡುತ್ತಿದ್ದ ಕಾರಣ ತೂಕ ಇನ್ನಷ್ಟು ಹೆಚ್ಚಾಗತೊಡಗಿತು. ಆಹಾರ ತಜ್ಞರ ಸಲಹೆಯ ಮೇರೆಗೆ ನಿಗದಿತ ಸಮಯದಲ್ಲಿ 7 ರಿಂದ 8 ಗಂಟೆಗಳ ಕಾಲ ಸಾಕಷ್ಟು ನಿದ್ರೆ ಪಡೆಯಲು ಪ್ರಾರಂಭಿಸಿದರು. ಮೊದಲ ತಿಂಗಳಲ್ಲಿ ದೀಕ್ಷಾ 5 ಕೆಜಿ ತೂಕವನ್ನು ಸುಲಭವಾಗಿ ಕಳೆದುಕೊಂಡರು. ತೂಕ ಕಳೆದುಕೊಳ್ಳಲು ಇದ್ದ ಆಸಕ್ತಿ, ಶಿಸ್ತು ಅವರಿಗೆ ಇನ್ನಷ್ಟು ಪ್ರೇರಣೆ ನೀಡಿತು.
ವೀಕೆಂಡ್ ಬಿಂಜ್‌ಗೆ ಕತ್ತರಿ
ವಾರವೆಲ್ಲಾ ಡಯಟ್ ಮಾಡಿ, ವಾರಾಂತ್ಯದಲ್ಲಿ ಇಷ್ಟವಾದ ಊಟ ತಿಂದು ಸಂಭ್ರಮಿಸುವ ಜನರ ನಡುವೆ, ನಿತ್ಯವೂ ಆರೋಗ್ಯಕರ ಊಟ, ತಿಂಡಿಯನ್ನು ಸಮಯಕ್ಕೆ ಸರಿಯಾಗಿ ಮಾಡುವ ಮೂಲಕವೇ ಅಧಿಕ ಬೊಜ್ಜನ್ನು ದೀಕ್ಷಾ ಕರಗಿಸಿಕೊಂಡರು.
ಚರ್ಮದ ಆರೋಗ್ಯದಲ್ಲಿ ಸುಧಾರಣೆ
ತೂಕ ಇಳಿಸುವ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ದೀಕ್ಷಾ ಅವರ ಕೆನ್ನೆಯಲ್ಲಿ ಮೊಡವೆಗಳಿದ್ದವು. ಆದರೆ ತೂಕ ಇಳಿಕೆಯಿಂದ ಮೊಡವೆ ಹಾಗೂ ಪಿಗ್ಮೆಂಟೇಶನ್ ಕೂಡ ಕಡಿಮೆಯಾಗಿದೆ.
ಪಾರ್ಟಿಗಳು ಮತ್ತು ಔಟಿಂಗ್‌ಗಳಿಗೆ ತಮಗೆ ತಾವೇ ಮಿತಿ ವಿಧಿಸಿಕೊಳ್ಳುತ್ತಿದ್ದರು. ಸ್ನೇಹಿತರು ತಮಗೆ ಜಂಕ್ ಫುಡ್ ತಿನ್ನಲು ಒತ್ತಾಯಿಸಿದಾಗ ಯಾವುದೇ ಆಸೆಗೆ ಒಳಗಾಗದೆ ಇಲ್ಲ ಎಂದು ಹೇಳುವುದನ್ನು ಕಲಿಯುವುದು ಮುಖ್ಯ. ಮನೆಯ ಆಹಾರಕ್ಕೆ ಸರಿಸಾಟಿ ಬೇರೊಂದಿಲ್ಲ ಎಂಬುದನ್ನು ತಿಳಿದುಕೊಳ್ಳಲೇಬೇಕು. ಒಂದು ವೇಳೆ ಅನಿವಾರ್ಯವಾಗಿ ಹೊರಗಿನ ಊಟ ತಿನ್ನುವ ಪರಿಸ್ಥಿತಿ ಬಂದರೆ ಆರೋಗ್ಯಕರ ಆಯ್ಕೆಗಳನ್ನು ಮಾಡಿಕೊಳ್ಳುವಂತೆ ದೀಕ್ಷಾ, ತಮ್ಮಂತೆ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಟಿಪ್ಸ್ ನೀಡಿದ್ದಾರೆ.
9 ತಿಂಗಳಲ್ಲಿ 22 ಕೆಜಿ ತೂಕ ಇಳಿಸಿಕೊಳ್ಳಲು ದೀಕ್ಷಾ ಅನುಸರಿಸಿದ ಸಂಪೂರ್ಣ ಆಹಾರ ಕ್ರಮ ಇಲ್ಲಿದೆ:
ಉಪಾಹಾರದ ಮೊದಲು: 8AM
ನೆನೆಸಿದ ಅಂಜೂರ/ನೆನೆಸಿದ ಬಾದಾಮಿಯೊಂದಿಗೆ ಜೀರಾ ನೀರು/ಕೊತ್ತಂಬರಿ ಸೊಪ್ಪಿನ ನೀರು
ಬೆಳಗಿನ ಉಪಾಹಾರ: 9:30AM
ರಾಜ್ಮಾ ಚಾಟ್/ಹಂಗ್ ಕರ್ಡ್ ಸ್ಯಾಂಡ್‌ವಿಚ್
ಬೆಳಗಿನ ತಿಂಡಿ: 12PM
ಹಣ್ಣುಗಳು-ಕಿತ್ತಳೆ/ಬಾಳೆಹಣ್ಣು/ಕಲ್ಲಂಗಡಿ/ಮಾವು
ಊಟ: 1:30PM
ಯಾವುದೇ ಸಬ್ಜಿ/ದಾಲ್ + 2 ರೊಟ್ಟಿಗಳು + ಸಲಾಡ್
ಮಧ್ಯಾಹ್ನ ತಿಂಡಿ: 3PM
ಮೊಸರು + ಮಿಶ್ರ ಬೀಜಗಳು
ಸಂಜೆ ತಿಂಡಿ: 4:30PM
ನೀರಿನಲ್ಲಿ ನೆನೆಸಿದ ಚಿಯಾ ಬೀಜಗಳು + ನೆನೆಸಿದ ವಾಲ್‌ನಟ್
ಊಟ:
6-6:30PM
ಹಣ್ಣಿನ ಕಸ್ಟರ್ಡ್/ಮೂಂಗ್ ದಾಲ್ ಚಿಲ್ಲಾ/ಟೊಮೇಟೊ ಸೂಪ್
ಮಲಗುವ ಮುನ್ನ: 9PM
ಕ್ಯಾಮೊಮೈಲ್ ಟೀ / ಬಿಸಿ ನಿಂಬೆ ನೀರು