Rice Water: ಅಕ್ಕಿ ಬೇಯಿಸಿದ ನೀರನ್ನು ಎಸಿಬೇಡಿ, ಇದು ತೂಕ ನಷ್ಟಕ್ಕೆ ಸಹಕಾರಿ; ಇದನ್ನು ಕುಡಿಯುವ ವಿಧಾನ ಹೀಗಿದೆ ನೋಡಿ
ಅಕ್ಕಿ ತೊಳೆದ ನೀರಿನಿಂದ ಅಂದ ಹೆಚ್ಚುತ್ತೆ, ಕೊರಿಯನ್ನರ ಸೌಂದರ್ಯ ಅಡಗಿರುವುದು ಇದರಲ್ಲೇ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ, ಅಕ್ಕಿ ಬೇಯಿಸಿದ ನೀರು ತೂಕ ಇಳಿಕೆಗೆ ಸಹಕಾರಿ ಎಂಬುದು ಹಲವರಿಗೆ ತಿಳಿದಿಲ್ಲ. ನೀವು ತೂಕ ಇಳಿಸೋಕೆ ಪ್ಲಾನ್ ಮಾಡಿದ್ದರೆ ಅಕ್ಕಿ ಬೇಯಿಸಿದ ನೀರನ್ನು ಹೀಗೆ ಬಳಸಿ.
ಅಕ್ಕಿ ಪ್ರಪಂಚದಾದ್ಯಂತ ಹೆಚ್ಚು ಸೇವಿಸುವ ಪ್ರಮುಖ ಆಹಾರವಾಗಿದೆ. ಅಕ್ಕಿ ತೊಳೆದ ನೀರು ಮತ್ತು ಅಕ್ಕಿ ನೆನೆಸಿಟ್ಟ ನೀರು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತವೆ. ಅದೇ ರೀತಿ ಅಕ್ಕಿ ಬೇಯಿಸಿದ ನೀರು ಅಥವಾ ಅನ್ನ ಬಸಿದ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತೂಕ ನಷ್ಟಕ್ಕೆ ಕೂಡ ಸಹಾಯ ಮಾಡುತ್ತದೆ ಎಂದರೆ ನೀವು ನಂಬಲೇಬೇಕು. ಅಕ್ಕಿ ಬೇಯಿಸಿದ ನೀರಿನಲ್ಲಿ ಏನೆಲ್ಲಾ ಪೋಷಕಾಂಶಗಳಿವೆ, ಇದು ತೂಕ ನಷ್ಟಕ್ಕೆ ಹೇಗೆ ಸಹಕಾರಿ ಹಾಗೂ ತೂಕ ಇಳಿಕೆಯಾಗಬೇಕೆಂದರೆ ಅಕ್ಕಿ ಬೇಯಿಸಿದ ನೀರನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯೋಣ.
ಅಕ್ಕಿ ಬೇಯಿಸಿದ ನೀರು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಅಕ್ಕಿ ಬೆಂದು ಅನ್ನವಾಗುವ ಪ್ರಕ್ರಿಯೆಯಲ್ಲಿ, ಅಕ್ಕಿ ತನ್ನ ಪೋಷಕಾಂಶಗಳನ್ನು ನೀರಿನಲ್ಲಿ ಬಿಡುಗಡೆ ಮಾಡುತ್ತದೆ. ಇದು B1, B2, B6, ಮತ್ತು B9 ವಿಟಮಿನ್‌ಗಳನ್ನು ಹೊಂದಿರುತ್ತದೆ. ಇದು ಚಯಾಪಚಯ ಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳು ಸಹ ಇದ್ದು, ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಅಕ್ಕಿ ನೀರಿನಲ್ಲಿ ಫೆರುಲಿಕ್ ಆಮ್ಲ ಮತ್ತು ಅಲಾಂಟೊಯಿನ್‌ನಂತಹ ಉತ್ಕರ್ಷಣ ನಿರೋಧಕಗಳು ಇವೆ. ಇದು ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಮತ್ತು ಚರ್ಮದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಅಕ್ಕಿ ಬೇಯಿಸಿದ ನೀರು ತೂಕ ನಷ್ಟಕ್ಕೆ ಹೇಗೆ ಸಹಕಾರಿ?
ಹೆಚ್ಚಿನ ಪೋಷಕಾಂಶ ಮತ್ತು ಕಡಿಮೆ ಕ್ಯಾಲೋರಿ: ಅಕ್ಕಿ ಬೇಯಿಸಿದ ನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಹೀಗಾಗಿ ಇದು ತೂಕ ನಷ್ಟಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಇದು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಿ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ.
ಸರಾಗ ಜೀರ್ಣಕ್ರಿಯೆ: ಅಕ್ಕಿ ಬೇಯಿಸಿದ ನೀರಿನಲ್ಲಿ ನಾರಿನಾಂಶವಿದ್ದು, ಇದು ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ಮೂಲಕ ತೂಕ ನಿರ್ವಹಣೆಗೆ ಉಪಕಾರಿಯಾಗಿದೆ.
ಹೈಡ್ರೇಶನ್: ನಿಮ್ಮ ದೇಹ ಹೈಡ್ರೇಟ್ ಆಗಿದ್ದಾಗ ಮಾತ್ರ ತೂಕ ನಷ್ಟಕ್ಕೆ ಸಹಕರಿಸುವ ಚಟುವಟಿಕೆಗಳು ನಡೆಯುತ್ತವೆ. ಅಕ್ಕಿ ಬೇಯಿಸಿದ ನೀರನ್ನು ಕುಡಿಯುವುದರಿಂದ ನಿಮ್ಮ ದೇಹ ಡಿಹೈಡ್ರೇಟ್ ಆಗುವುದಿಲ್ಲ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ಅಕ್ಕಿ ಬೇಯಿಸಿದ ನೀರಿನಲ್ಲಿ ಕಂಡುಬರುವ ಇನೋಸಿಟಾಲ್‌ನಂತಹ ಕೆಲವು ಸಂಯುಕ್ತಗಳು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣಕ್ಕೆ ಕೊಡುಗೆ ನೀಡುತ್ತದೆ. ಈ ಮೂಲಕ ತೂಕ ಹೆಚ್ಚಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ತೂಕ ಇಳಿಕೆಯಾಗಲು ಅಕ್ಕಿ ಬೇಯಿಸಿದ ನೀರನ್ನು ಹೇಗೆ ಬಳಸಬೇಕು?
1. ಅಕ್ಕಿ ಬೇಯಿಸಿದ ನೀರು ಸ್ವಲ್ಪ ತಣ್ಣಗಾದ ಬಳಿಕ ನೇರವಾಗಿ ಕುಡಿಯಬಹುದು
2. ಇಲ್ಲವಾದರೆ ಅದಕ್ಕೆ ಚಿಟಿಕೆ ಉಪ್ಪು, ನಿಂಬೆ ರಸ ಅಥವಾ ದಾಲ್ಚಿನ್ನಿ ಸೇರಿಸಿ ಸುವಾಸನೆಯೊಂದಿಗೆ ಕುಡಿಯಬಹುದು
3. ನೀವು ಸಕ್ಕರೆ ಭರಿತ ಬೇರೆ ಯಾವುದಾದರೂ ಪಾನೀಯವನ್ನು ಕುಡಿಯುತ್ತಿದ್ದರೆ ಅದರ ಬದಲು ಅಕ್ಕಿ ನೀರು ರೂಢಿಸಿಕೊಳ್ಳಿ
4. ಅಕ್ಕಿ ನೀರನ್ನು ಬಳಸಿ ಸೂಪ್ ತಯಾರಿಸಿ ಸೇವಿಸಬಹುದು
5. ಅಕ್ಕಿ ಗಂಜಿ ರೂಪದಲ್ಲಿ ಸೇವಿಸಬಹುದು
6. ಊಟಕ್ಕೆ ಮುಂಚೆ ಒಂದು ಲೋಟ ಅಕ್ಕಿ ನೀರನ್ನು ಸೇವಿಸುವುದರಿಂದ ಹಸಿವನ್ನು ನಿಯಂತ್ರಿಸಬಹುದು.