Weight Loss Tips: ಮಹಿಳೆಯರು ತೂಕ ಇಳಿಸಿಕೊಂಡು, ಮತ್ತೆ ಹೆಚ್ಚಿಸಿಕೊಳ್ಳದಿರುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss Tips: ಮಹಿಳೆಯರು ತೂಕ ಇಳಿಸಿಕೊಂಡು, ಮತ್ತೆ ಹೆಚ್ಚಿಸಿಕೊಳ್ಳದಿರುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್

Weight Loss Tips: ಮಹಿಳೆಯರು ತೂಕ ಇಳಿಸಿಕೊಂಡು, ಮತ್ತೆ ಹೆಚ್ಚಿಸಿಕೊಳ್ಳದಿರುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್

ತೂಕ ಇಳಿಸುವುದು ಹೇಗೆ ಒಂದು ಸವಾಲಿನ ಕೆಲಸವೋ, ತೂಕ ಇಳಿಸಿದ ಬಳಿಕ ಅದನ್ನು ಅದೇ ಮಟ್ಟದಲ್ಲಿ ನಿರ್ವಹಿಸುವುದು ಕೂಡ ಒಂದು ಸವಾಲಿನ ಕೆಲಸವೇ ಸರಿ. ತೂಕ ಇಳಿಸಿಕೊಂಡು ಮತ್ತೆ ಹೆಚ್ಚಿಸಿಕೊಳ್ಳದಿರುವುದು ಹೇಗೆ? ಇಲ್ಲಿದೆ ನೋಡಿ ಕೆಲವು ಸಿಂಪಲ್ ಟಿಪ್ಸ್..

ತೂಕ ಇಳಿಸಿಕೊಂಡು ಮತ್ತೆ ಹೆಚ್ಚಿಸಿಕೊಳ್ಳದಿರುವುದು ಹೇಗೆ? ಇಲ್ಲಿದೆ ನೋಡಿ ಕೆಲವು ಸಿಂಪಲ್ ಟಿಪ್ಸ್..
ತೂಕ ಇಳಿಸಿಕೊಂಡು ಮತ್ತೆ ಹೆಚ್ಚಿಸಿಕೊಳ್ಳದಿರುವುದು ಹೇಗೆ? ಇಲ್ಲಿದೆ ನೋಡಿ ಕೆಲವು ಸಿಂಪಲ್ ಟಿಪ್ಸ್.. (Pixabay)

ಸುಂದರವಾಗಿ ಕಾಣಿಸಬೇಕು, ತೂಕ ಹೆಚ್ಚಾಗಬಾರದು ಎನ್ನುವುದು ಈಗಿನ ಮಹಿಳೆಯರ ಅಭಿಲಾಷೆ. ತೂಕ ಸ್ವಲ್ಪ ಹೆಚ್ಚಾದರೂ ಅವರಿಗೆ ಚಿಂತೆ ಶುರುವಾಗುತ್ತದೆ. ಅಲ್ಲದೆ, ಒಮ್ಮೆ ತೂಕ ಇಳಿಸಿದರೆ ಸಾಕು ಎಂದು ಅವರು ಅಂದುಕೊಳ್ಳುತ್ತಾರೆ. ಆದರೂ ಕೆಲವೊಮ್ಮೆ ಇಷ್ಟದ ತಿಂಡಿ-ತಿನಿಸು ತಿಂದಾಗ, ವ್ಯಾಯಾಮ ಮರೆತಾಗ ತೂಕ ಏರಿಕೆಯಾಗುವುದು ಸಹಜ. ಹಾಗೆ ಏರಿಕೆಯಾದ ತೂಕವನ್ನು ಮನೆಯಲ್ಲೇ ಕೆಲವೊಂದು ಸರಳ ವ್ಯಾಯಾಮ, ಆಹಾರ ಕ್ರಮದಲ್ಲಿ ಬದಲಾವಣೆ ಮಾಡುವ ಮೂಲಕ ಸರಿಪಡಿಸಿಕೊಳ್ಳಬಹುದು. ಜತೆಗೆ, ತೂಕ ಏರಿಕೆಯಾದ ಬಳಿಕ, ಅದನ್ನು ಇಳಿಸಿಕೊಂಡರೆ, ಹಾಗೆಯೇ ಉಳಿಸಿಕೊಳ್ಳುವುದು ಕೂಡ ಸವಾಲಿನ ಕೆಲಸ, ಅದಕ್ಕಾಗಿ ನೀವು ಪ್ರತಿದಿನ ಸ್ವಲ್ಪ ಸಮಯ ಮೀಸಲಿರಿಸಿದರೆ ಸಾಕು. ಸುಲಭದಲ್ಲೇ ತೂಕ ಇಳಿಸಿಕೊಂಡು, ಸುಂದರವಾಗಿ ಕಾಣಿಸಬಹುದು.

ಮಹ್ತಾಬ್ ಎಕೇ ಎಂಬವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಕಾರ, ಅವರು 3 ತಿಂಗಳಲ್ಲಿ 9 ಕಿಲೋ ತೂಕ ಇಳಿಸಿಕೊಂಡಿದ್ದಾರೆ. ಮಹ್ತಾಬ್ ಅವರು ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ನಿಯಮಿತವಾಗಿ ತನ್ನ ತೂಕ ಇಳಿಸುವ ಪ್ರಯಾಣದ ವಿಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ, ಜನರಿಗೆ ಅಗತ್ಯ ಸಲಹೆ ಸೂಚನೆ ನೀಡುತ್ತಾರೆ. ಮಹ್ತಾಬ್ ಅವರು, ತೂಕ ಇಳಿಸುವ ಆಹಾರ ಮತ್ತು ವ್ಯಾಯಾಮ ದಿನಚರಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿ ಮತ್ತು ಹೆಚ್ಚುವರಿ ತೂಕವನ್ನು ಕಡಿಮೆ ಸಮಯದಲ್ಲಿ ಕಳೆದುಕೊಳ್ಳಲು ಒಬ್ಬರು ಬೆಳೆಸಿಕೊಳ್ಳಬೇಕಾದ ಆರೋಗ್ಯಕರ ಅಭ್ಯಾಸಗಳ ಟಿಪ್ಸ್ ನೀಡುತ್ತಾರೆ. ಮಹ್ತಾಬ್ ನೀಡಿರುವ ಕೆಲವೊಂದು ಸರಳ ಟಿಪ್ಸ್ ಇಲ್ಲಿದ್ದು, ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯಕರ ತೂಕ ನಿರ್ವಹಿಸಲು ನಿಮಗೆ ಸಹಕಾರಿಯಾಗಬಹುದು.

ತರಕಾರಿಗಳೊಂದಿಗೆ ನಿಮ್ಮ ಊಟ ಪ್ರಾರಂಭಿಸಿ

ತರಕಾರಿಗಳೊಂದಿಗೆ ನಿಮ್ಮ ಊಟವನ್ನು ದಿನವೂ ಪ್ರಾರಂಭಿಸಿ. ಇದರಿಂದ ನಿಮ್ಮ ಹೊಟ್ಟೆ ತುಂಬುವುದು ಮಾತ್ರವಲ್ಲದೆ, ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ನಂತರದಲ್ಲಿ ಅತಿಯಾಗಿ ತಿನ್ನುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಖಾಲಿ ಹೊಟ್ಟೆಯಲ್ಲಿ ಕಾರ್ಬೋಹೈಡ್ರೇಟ್‌ಗಳ ಸೇವಿಸಬೇಡಿ

ನೀವು ಸಿಹಿ ಅಥವಾ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರವನ್ನು ತಿನ್ನಬೇಕೆಂದು ಆಸೆಪಟ್ಟರೆ, ಪ್ರೋಟೀನ್ ಮತ್ತು ಕೊಬ್ಬಿನಂಶವೂ ಇರುವ ತಿನಿಸನ್ನು ಊಟದ ನಂತರ ಸಿಹಿತಿಂಡಿಯಾಗಿ ಸೇವಿಸಿ. ಕಾರ್ಬೋಹೈಡ್ರೇಟ್‌ಗಳನ್ನು ಮಾತ್ರ ತಿನ್ನುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸಬಹುದು ಮತ್ತು ಕಡುಬಯಕೆಗಳಿಗೆ ಕಾರಣವಾಗಬಹುದು.

ಹೆಚ್ಚು ನಡೆಯಿರಿ, ಕ್ಯಾಲೋರಿಯನ್ನು ಕರಗಿಸಿ

ನಡಿಗೆಯು ನಿಮ್ಮ ದೇಹದ ಕೊಬ್ಬನ್ನು ಕರಗಿಸುವ ಉತ್ತಮ ವ್ಯಾಯಾಮವಾಗಿದೆ. ಪ್ರತಿದಿನ 8 ರಿಂದ 12 ಸಾವಿರ ಹೆಜ್ಜೆಗಳನ್ನು ನಡೆಯುವ ಗುರಿಯಾಗಿಟ್ಟುಕೊಳ್ಳಿ. ಅದು ಹೆಚ್ಚು ಎಂದೆನಿಸಿದರೆ, ನೀವು ನಿಮ್ಮ ಗುರಿಯನ್ನು ತಲುಪುವವರೆಗೆ ನಿಮ್ಮ ಹೆಜ್ಜೆಗಳನ್ನು ವಾರಕ್ಕೆ 1 ರಿಂದ 2 ಸಾವಿರಗಳಷ್ಟು ಹೆಚ್ಚಿಸಿಕೊಳ್ಳುತ್ತಾ ಹೋಗಿ. ಬೆಳಿಗ್ಗೆ 10 ನಿಮಿಷಗಳ ನಡಿಗೆ, ದಿನಕ್ಕೆ ಎರಡು ಬಾರಿ ಊಟದ ನಂತರ 15 ರಿಂದ 30 ನಿಮಿಷಗಳ ನಡಿಗೆ, ಸ್ನೇಹಿತರೊಂದಿಗೆ ಸಣ್ಣ ಸುತ್ತಾಟದಿಂದ 8 ರಿಂದ 12 ಸಾವಿರ ಹೆಜ್ಜೆಗಳನ್ನು ನೀವು ಒಂದು ದಿನದಲ್ಲಿ ಸುಲಭವಾಗಿ ಪೂರ್ಣಗೊಳಿಸಬಹುದು.

ಹೆಚ್ಚು ನೀರು ಕುಡಿಯಿರಿ

ನಿಮ್ಮ ದಿನವನ್ನು ಒಂದು ಲೋಟ ನೀರಿನಿಂದ ಪ್ರಾರಂಭಿಸಿ, ಹಾಗೆಯೇ, ನಿಮ್ಮ ಊಟಕ್ಕೂ ಮೊದಲು ಒಂದು ಲೋಟ ನೀರು ಕುಡಿಯಿರಿ ಮತ್ತು ನಿಮ್ಮ ವ್ಯಾಯಾಮದ ಸಮಯದಲ್ಲಿ ನೀವು ಸಾಕಷ್ಟು ನೀರು ಕುಡಿಯುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಉತ್ತಮ ನಿದ್ರೆಯ ಅಭ್ಯಾಸವನ್ನು ರೂಢಿಸಿಕೊಳ್ಳಿ

ಗುಣಮಟ್ಟದ ನಿದ್ರೆಯ ಕೊರತೆಯು ಮರುದಿನ ಹೆಚ್ಚಿನ ಹಸಿವು ಮತ್ತು ತಿನ್ನುವ ಬಯಕೆಗೆ ಕಾರಣವಾಗುತ್ತದೆ. ಒಂದು ದಿನಕ್ಕೆ ಸರಾಸರಿ 7 ಗಂಟೆಗಳ ಗುಣಮಟ್ಟದ ನಿದ್ರೆಯನ್ನು ಗುರಿಯಾಗಿಸಿಕೊಳ್ಳಿ. ಹೆಚ್ಚಿನ ಕೆಲಸದ ಕಾರಣದಿಂದ ಸತತವಾಗಿ 7 ಗಂಟೆಗಳ ಸಂಪೂರ್ಣ ನಿದ್ದೆಯನ್ನು ಮಾಡಲು ಸಾಧ್ಯವಾಗದಿದ್ದರೆ, 20 ರಿಂದ 30 ನಿಮಿಷಗಳ ಕಿರು ನಿದ್ರೆಯನ್ನು ಮಾಡುವುದರಿಂದ ನೀವು ಅದನ್ನು ಸರಿದೂಗಿಸಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner