ಅನ್ನ ತಿಂದ್ರೆ ತೂಕ ಹೆಚ್ಚುತ್ತೆ ಅನ್ನೋ ಭಯ ಬಿಡಿ; ಈ ರೀತಿ ಅನ್ನ ಬೇಯಿಸಿದ್ರೆ ತೂಕ ಏರಿಕೆಯಾಗುತ್ತೆ ಅನ್ನೋ ಚಿಂತೆನೇ ಇರೊಲ್ಲ
ಭಾರತದಲ್ಲಿ ಬಹುತೇಕರು ಅನ್ನ ತಿನ್ನುತ್ತಾರೆ. ಅನ್ನ ಇಲ್ಲದೇ ಬೇರೆ ಯಾವ ಆಹಾರ ತಿಂದರೂ ನಮಗೆ ಊಟ ಪರಿಪೂರ್ಣ ಎಂದು ಅನ್ನಿಸುವುದಿಲ್ಲ. ಆದರೆ ಅನ್ನ ತಿಂದರೆ ತೂಕ ಹೆಚ್ಚಾಗುತ್ತದೆ ಎಂಬ ಭಯ ಹಲವರನ್ನು ಕಾಡುತ್ತಿದೆ. ಈ ಭಯ ಹೋಗಬೇಕು ಎಂದರೆ ಅನ್ನವನ್ನು ಈ ರೀತಿ ಬೇಯಿಸಬೇಕು. ಇದರಿಂದ ತೂಕ ಹೆಚ್ಚುತ್ತೆ ಎನ್ನುವ ಭಯವು ಇರುವುದಿಲ್ಲ, ನೆಮ್ಮದಿಯಿಂದ ಊಟ ಮಾಡಬಹುದು.
ಭಾರತೀಯರು ರೈಸ್ ಪ್ರಿಯರು. ನಮಗೆ ಊಟ ಅಂದ್ರೆ ರೈಸ್ ಇರಲೇಬೇಕು. ಬಿರಿಯಾನಿ, ಪಲಾವ್, ಪುಳಿಯೋಗರೆ, ಬಿಸಿಬೇಳೆಬಾತ್ ಈ ಎಲ್ಲವನ್ನೂ ಅಕ್ಕಿಯಿಂದಲೇ ಮಾಡಲಾಗುತ್ತದೆ. ಅವುಗಳನ್ನು ತಿಂದರೆ ಹೊಟ್ಟೆ ತುಂಬಿದಂತಿರುತ್ತದೆ, ಆ ಕಾರಣಕ್ಕೆ ಇದು ನಮಗೆ ಪರಿಪೂರ್ಣ ಊಟವಾಗುತ್ತದೆ. ಆದರೆ ಈಗ ಅನ್ನ ತಿನ್ನಲು ಹೆದರುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣ ತೂಕ ಹೆಚ್ಚಾಗುತ್ತದೆ ಎನ್ನುವ ಭಯ.
ಅದರಲ್ಲೂ ವೈಟ್ ರೈಸ್ ತಿಂದರೆ ತೂಕ ಇನ್ನೂ ಹೆಚ್ಚಾಗುತ್ತೆ ಎನ್ನುವ ಭಯ ಹಲವರಲ್ಲಿದೆ. ಆ ಕಾರಣಕ್ಕೆ ಹಲವರು ರೋತಿ, ಚಪಾತಿ ತಿನ್ನಲು ಆರಂಭಿಸಿದ್ದಾರೆ. ಆದರೆ ಊಟ ತಿಂದಷ್ಟು ತೃಪ್ತಿ ಇದರಿಂದ ಸಿಗುತ್ತಿಲ್ಲ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಅನ್ನ ತಿಂದರೂ ತೂಕ ಹೆಚ್ಚಾಗಬಾರದು ಅಂದ್ರೆ ಅನ್ನವನ್ನ ಬೇಯಿಸುವ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು.
ಬಾಲ್ಯದಿಂದಲೂ ಅನ್ನ ತಿಂದು ಬೆಳೆದ ದೇಹ ಥಟ್ಟನೆ ಅನ್ನ ತಿನ್ನುವುದನ್ನು ಬಿಟ್ಟರೆ ವಿಚಿತ್ರ ಅನ್ನಿಸುತ್ತದೆ. ಇದಲ್ಲದೆ, ಅಕ್ಕಿಯಲ್ಲಿ ಕೆಲವು ರೀತಿಯ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಹಾಗಾಗಿ ಅನ್ನ ತಿನ್ನುವುದು ಅವಶ್ಯವಾಗುತ್ತದೆ. ಅನ್ನ ತಿಂದರೂ ತೂಕ ಹೆಚ್ಚಾಗದಂತೆ ಎಚ್ಚರಿಕೆ ವಹಿಸಬಹುದು, ಅನ್ನ ತಿನ್ನುವ ಮೂಲಕವೂ ತೂಕ ಇಳಿಸಿಕೊಳ್ಳಬಹುದು ಎಂಬುದು ಹಲವರಿಗೆ ತಿಳಿದಿಲ್ಲ. ಹಾಗಾದರೆ ಅನ್ನ ತಿಂದ ಮೇಲೂ ತೂಕ ಏರಿಕೆಯಾಗಬಾರದು ಅಂದ್ರೆ ಅನ್ನವನ್ನು ಹೇಗೆ ಬೇಯಿಸಬೇಕು ನೋಡಿ.
ಅಕ್ಕಿ ಬೇಯಿಸುವ ವಿಧಾನ
ವೈಟ್ ರೈಸ್ ಅಥವಾ ಬಿಳಿ ಅಕ್ಕಿಯನ್ನು ಬೇಯಿಸುವ ಸಂದರ್ಭ, ಅರ್ಧ ಬೆಂದಿದೆ ಎನ್ನಿಸಿದಾಗ ಒಂದು ಚಮಚ ತೆಂಗಿನೆಣ್ಣೆಯನ್ನು ಸೇರಿಸಿ. ಒಂದು ಚಮಚದಿಂದ ಚೆನ್ನಾಗಿ ಮಿಶ್ರಣ ಮಾಡಿ. ಅದರ ನಂತರ ಅದನ್ನು ಸಂಪೂರ್ಣವಾಗಿ ಕುದಿಯಲು ಬಿಡಿ. ಹೀಗೆ ಕೊಬ್ಬರಿ ಎಣ್ಣೆಯನ್ನು ಸೇರಿಸುವುದರಿಂದ ಅಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್ ಅರ್ಧದಷ್ಟು ಕಡಿಮೆಯಾಗುತ್ತದೆ. ಆಗ ಅನ್ನ ತಿಂದರೂ ತೂಕ ಹೆಚ್ಚಾಗುವುದಿಲ್ಲ. ತೂಕ ಕಡಿಮೆಯಾಗುವ ಸಾಧ್ಯತೆಯೂ ಇದೆ. ಪ್ರತಿದಿನ ಒಂದು ಚಮಚ ತೆಂಗಿನೆಣ್ಣೆ ಸೇರಿಸಿ ಅನ್ನ ಬೇಯಿಸುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಮಧುಮೇಹಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ತೆಂಗಿನೆಣ್ಣೆಯೊಂದಿಗೆ ಬೇಯಿಸಿದ ಅನ್ನ ತಿನ್ನುವುದರಿಂದ ದೇಹದಲ್ಲಿ ಕಾರ್ಬೋಹೈಡ್ರೇಟ್ ಸಂಗ್ರಹವಾಗುವುದಿಲ್ಲ. ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆ ಇದ್ದರೆ ದಪ್ಪವಾಗುವ ಸಾಧ್ಯತೆ ಕಡಿಮೆ.
ಅಕ್ಕಿ ಮತ್ತು ಬೇಳೆ
ಬರಿ ವೈಟ್‌ರೈಸ್ ಅನ್ನು ಅತಿಯಾಗಿ ತಿಂದರೆ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಸೇರಿ ತೊಂದರೆಯಾಗುವ ಸಂಭವವಿದೆ. ಅದಕ್ಕಾಗಿ ಅಕ್ಕಿ ಜೊತೆಗೆ ಬೇಳೆ ಸೇರಿಸಿ ಬೇಯಿಸಬೇಕು. ಇದನ್ನು ತಿಂದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ದೇಹಕ್ಕೆ ಶಕ್ತಿ ಕೂಡ ಒದಗುತ್ತದೆ. ಇದನ್ನು ಯಾವುದೇ ಕರಿ ಜೊತೆ ತಿನ್ನಬಹುದು. ಆದರೆ ಬೇಳೆಯನ್ನು ಮೊದಲೇ ನೀರಿನಲ್ಲಿ ನೆನೆಸಬಾರದು. ನೇರವಾಗಿ ಅಕ್ಕಿಯೊಂದಿಗೆ ಸೇರಿಸಿ ಮತ್ತು ಬೇಯಿಸಿ. ಆಗ ಬೇಳೆ ಮುದ್ದೆಯಾಗುವುದಿಲ್ಲ. ಅಕ್ಕಿ ಮತ್ತು ಬೇಳೆಯನ್ನು ಒಟ್ಟಿಗೆ ಬೇಯಿಸಿ ತಿಂದರೆ ಬೇಗ ಹೊಟ್ಟೆ ತುಂಬುತ್ತದೆ. ಆದ್ದರಿಂದ ಇತರ ಆಹಾರಗಳನ್ನು ಹೆಚ್ಚು ತಿನ್ನಲು ಸಾಧ್ಯವಿಲ್ಲ. ತೂಕ ಇಳಿಸಿಕೊಳ್ಳಲು ಇದೊಂದು ಉತ್ತಮ ಉಪಾಯ.
ಅಕ್ಕಿ ಮತ್ತು ತರಕಾರಿ
ವೈಟ್‌ರೈಸ್ ತಿಂದರೆ ತೂಕ ಹೆಚ್ಚುತ್ತೆ ಎನ್ನುವ ಭಯ ಇರುವವರು ಅಕ್ಕಿ ಜೊತೆಯ ಕೆಲವು ಬಗೆಯ ತರಕಾರಿಗಳನ್ನು ಸೇರಿಸಿ ಒಟ್ಟಿಗೆ ಬೇಯಿಸುವುದು ಉತ್ತಮ. ಆಗ ಅದರಲ್ಲಿ ಅನ್ನದ ಪ್ರಮಾಣ ಕಡಿಮೆಯಾಗುತ್ತದೆ. ಈ ತರಕಾರಿಗಳಲ್ಲಿ ನಾರಿನಂಶವೂ ಅಧಿಕವಾಗಿರುತ್ತದೆ. ಸ್ವಲ್ಪ ಉಪ್ಪು ಹಾಕಿದರೆ ನೇರವಾಗಿ ತರಕಾರಿ ಅನ್ನದಂತೆ ತಿನ್ನಬಹುದು. ಈ ಅನ್ನದಲ್ಲಿ ಬೇಯಿಸಬಹುದಾದ ತರಕಾರಿಗಳೆಂದರೆ ಕ್ಯಾರೆಟ್, ಬೀನ್ಸ್, ರಾಜ್ಮಾ. ಇದು ಅನ್ನದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಇತರ ಆಹಾರಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಅರಿವಿಲ್ಲದೆ ಕಡಿಮೆ ಅನ್ನ ತಿನ್ನುವಿರಿ. ಆಗ ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಕಡಿಮೆಯಾಗುತ್ತವೆ. ನೀವು ತೂಕವನ್ನು ಸಹ ಕಳೆದುಕೊಳ್ಳಬಹುದು. ನಾರಿನಾಂಶ ಕೂಡ ತೂಕ ಕಡಿಮೆಯಾಗಲು ಸಹಕಾರಿ.
ನೋಡಿದ್ರಲ್ಲ ತೂಕ ಕಡಿಮೆ ಆಗಬೇಕು ಅಂದ್ರೆ ಅನ್ನವನ್ನು ಈ ರೀತಿ ಬೇಯಿಸಬೇಕು. ಇದರಿಂದ ಅನ್ನದಿಂದ ತೂಕ ಹೆಚ್ಚುತ್ತೆ ಅನ್ನುವ ಭಯ ಇರುವುದಿಲ್ಲ. ಜೊತೆಗೆ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ದೊರೆಯುತ್ತವೆ. ಈ ರೀತಿ ತಿನ್ನುವುದು ಆರಂಭದಲ್ಲಿ ಇಷ್ಟವಾಗದೇ ಇರಬಹುದು. ಆದರೆ ದಿನ ಹೋದ ಹಾಗೂ ನಿಮಗೆ ಅಭ್ಯಾಸವಾಗುತ್ತದೆ, ಜೊತೆಗೆ ತೂಕವು ನಿಯಂತ್ರಣದಲ್ಲಿ ಇರುತ್ತದೆ.