Weight Loss: ಪ್ರತಿದಿನ ಈ 4 ಮನೆಗೆಲಸ ಮಾಡಿದ್ರೆ ಸಾಕು, ಯಾವುದೇ ವ್ಯಾಯಾಮದ ಹಂಗಿಲ್ಲದೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ಪ್ರತಿದಿನ ಈ 4 ಮನೆಗೆಲಸ ಮಾಡಿದ್ರೆ ಸಾಕು, ಯಾವುದೇ ವ್ಯಾಯಾಮದ ಹಂಗಿಲ್ಲದೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು

Weight Loss: ಪ್ರತಿದಿನ ಈ 4 ಮನೆಗೆಲಸ ಮಾಡಿದ್ರೆ ಸಾಕು, ಯಾವುದೇ ವ್ಯಾಯಾಮದ ಹಂಗಿಲ್ಲದೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು

ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರ ಪಟ್ಟಿಯಲ್ಲಿ ನೀವೂ ಇದ್ದರೆ ಗಮನಿಸಿ. ತೂಕ ಕಡಿಮೆಯಾಗಲು ವ್ಯಾಯಾಮ ಮಾಡಲೇಬೇಕು ಅಂತಿಲ್ಲ. ಪ್ರತಿದಿನ ಈ 4 ಮನೆಕೆಲಸಗಳನ್ನು ಮಾಡಿದ್ರೆ ಸಾಕು.

ತೂಕ ಇಳಿಕೆಗೆ ಸಹಾಯ ಮಾಡುವ ಮನೆಕೆಲಸಗಳು
ತೂಕ ಇಳಿಕೆಗೆ ಸಹಾಯ ಮಾಡುವ ಮನೆಕೆಲಸಗಳು (PC: Canva)

ಇತ್ತೀಚೆಗೆ ಹಲವರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಟ್ಟ ಆಹಾರ ಪದ್ಧತಿ ಹಾಗೂ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣ. ಪ್ರಸ್ತುತ, ನಮ್ಮ ದಿನಚರಿಯಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಆಹಾರ ಪದ್ಧತಿಯಲ್ಲಿ ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಹೆಚ್ಚು ಪ್ರಚಲಿತವಾಗುತ್ತಿವೆ. ಇದರಿಂದಾಗಿ ಬೊಜ್ಜು ಮಾತ್ರವಲ್ಲ, ಇತರ ಹಲವು ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ನೀವು ಕೂಡ ಬೊಜ್ಜಿನಿಂದ ಬಳಲುತ್ತಿದ್ದರೆ ಮತ್ತು ತೂಕ ಇಳಿಸಿಕೊಳ್ಳಲು ಬಯಸಿದರೆ ಮೊದಲು ಮಾಡಬೇಕಾದ ಕೆಲಸವೆಂದರೆ ಆಹಾರ ಮತ್ತು ಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರುವುದು.

ತೂಕ ಇಳಿಸಿಕೊಳ್ಳಲು ಪ್ರತಿದಿನ ಭಾರಿ ವ್ಯಾಯಾಮ ಮಾಡುವ ಅಗತ್ಯವಿಲ್ಲ. ಜಿಮ್‌ಗೆ ಹೋಗುವ ಅಗತ್ಯವೂ ಇಲ್ಲ. ಕೆಲವು ಮನೆಕೆಲಸಗಳನ್ನು ಮಾಡುವ ಮೂಲಕ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

ನೀವು ಪ್ರತಿದಿನ ಸ್ವಲ್ಪ ಸಮಯ ಈ ಕೆಲಸಗಳನ್ನು ಮಾಡಿದರೆ ತೂಕ ಕಡಿಮೆಯಾಗುತ್ತದೆ, ಜೊತೆಗೆ ನಿಮ್ಮ ಮನೆಯೂ ಸ್ವಚ್ಛವಾಗಿರುತ್ತದೆ. ಹಾಗಾದರೆ ತೂಕ ಇಳಿಸುವ ಪ್ರಯಾಣದಲ್ಲಿ ಯಾವ ಮನೆಕೆಲಸಗಳು ನಿಮಗೆ ಸಹಾಯ ಮಾಡುತ್ತವೆ ಎಂಬ ಬಗ್ಗೆ ಇಲ್ಲಿದೆ ವಿವರ.

ತೂಕ ಇಳಿಸುವ ಮನೆಕೆಲಸಗಳು

ಪೊರಕೆಯಿಂದ ಮನೆ ಗುಡಿಸುವುದು

ಪ್ರತಿದಿನ ಪೊರಕೆಯಿಂದ ಮನೆ ಗುಡಿಸುವ ಅಭ್ಯಾಸ ಬೆಳೆಸಿಕೊಳ್ಳಿ. ನೀವು ತೂಕ ಇಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಈ ದೈನಂದಿನ ಕೆಲಸವನ್ನು ನೀವೇ ಮಾಡಿ. ಅರ್ಧ ಗಂಟೆ ಮನೆ ಗುಡಿಸುವುದರಿಂದ 145 ಕ್ಯಾಲೊರಿಗಳು ಕರಗುತ್ತವೆ. ಇದು ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ 15 ನಿಮಿಷಗಳ ಕಾಲ ಓಡುವುದಕ್ಕೆ ಸಮಾನ. ಇದು ತೋಳುಗಳು, ಕಾಲುಗಳು ಮತ್ತು ಪೃಷ್ಠದ ಸ್ನಾಯುಗಳಿಗೆ ಉತ್ತಮ ವ್ಯಾಯಾಮವಾಗಿದೆ.

ಕೈಯಿಂದ ಬಟ್ಟೆ ಒಗೆಯಿರಿ

ಬಟ್ಟೆ ಒಗೆಯಲು ಈಗ ವಾಷಿಂಗ್ ಮಷಿನ್ ಬಳಕೆ ಹೆಚ್ಚು. ಇದರಿಂದಾಗಿ ಕೈಯಿಂದ ಬಟ್ಟೆ ಒಗೆಯುವುದು ಮರೆತೇ ಹೋಗಿದೆ ಎನ್ನುವಂತಹ ಸ್ಥಿತಿ ಎದುರಾಗಿದೆ. ನೀವು ಮನೆಯಲ್ಲಿಯೇ ತೂಕ ಇಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಕೈಯಿಂದ ಬಟ್ಟೆ ಒಗೆಯಲು ಪ್ರಾರಂಭಿಸಿ. ಬಟ್ಟೆಗಳನ್ನು ನೀರಿನಿಂದ ತೆಗೆದು, ಹಿಸುಕಿ, ಒಣಗಿಸುವ ಮೂಲಕ ದೇಹದ ಚಲನೆಗಳು ಉತ್ತಮವಾಗಿರುತ್ತವೆ. ಇದು ತೋಳುಗಳು, ಪಾದಗಳು, ಸೊಂಟ, ಮಧ್ಯಭಾಗ, ಬೆನ್ನು ಮತ್ತು ಭುಜಗಳಂತಹ ಪ್ರದೇಶಗಳಲ್ಲಿನ ಸ್ನಾಯುಗಳಿಗೆ ಉತ್ತಮ ವ್ಯಾಯಾಮವಾಗಿದೆ. ಆದ್ದರಿಂದ ನಿಮ್ಮ ಬಟ್ಟೆಗಳನ್ನು ನೀವೇ ಕೈಯಿಂದ ಒಗೆಯುವ ಅಭ್ಯಾಸ ಮಾಡಿ.

ಪಾತ್ರೆ ತೊಳೆಯುವುದು

ಪಾತ್ರೆ ತೊಳೆಯುವುದು ಹಲವರಿಗೆ ಸ್ವಲ್ಪ ಬೇಸರದ ಕೆಲಸ. ಇದು ನಿಮ್ಮ ದೇಹಕ್ಕೆ ಸುಲಭ, ಒಳ್ಳೆಯ ದೈಹಿಕ ಚಟುವಟಿಕೆ. ವಾಸ್ತವವಾಗಿ, ಪಾತ್ರೆಗಳನ್ನು ತೊಳೆಯುವಾಗ ಕೈಗಳು ಮತ್ತು ಮಣಿಕಟ್ಟುಗಳ ಸ್ನಾಯುಗಳು ತುಂಬಾ ಸಕ್ರಿಯವಾಗಿರುತ್ತವೆ. ಇದಲ್ಲದೆ, ಪಾತ್ರೆಗಳನ್ನು ತೊಳೆಯುವಾಗ ನಿಂತುಕೊಳ್ಳುತ್ತೀರಿ. ಇದು ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ. ನಿಮಗೆ ಭಾರೀ ದೈಹಿಕ ಶ್ರಮ ಹಾಕಲು ಇಷ್ಟವಿಲ್ಲದಿದ್ದರೆ, ಎಲ್ಲಾ ಪಾತ್ರೆಗಳನ್ನು ಸಿಂಕ್‌ನಲ್ಲಿ ತೊಳೆಯುವುದು ಉತ್ತಮ.

ಅಡುಗೆ ಮಾಡುವುದು

ಅಡುಗೆ ಮಾಡುವುದು ಕೂಡ ವ್ಯಾಯಾಮದ ಒಂದು ಭಾಗ. ಪ್ರತಿದಿನ ಅಡುಗೆ ಮಾಡುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿ. ತರಕಾರಿಗಳನ್ನು ಕತ್ತರಿಸುವಾಗ, ಹುರಿಯುವಾಗ ಮತ್ತು ಬೇಯಿಸುವಾಗ ನಿಂತುಕೊಳ್ಳುವುದರಿಂದ ಕೈಗಳು, ಪಾದಗಳು, ಮಣಿಕಟ್ಟುಗಳು ಮತ್ತು ಸೊಂಟದ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಇದಲ್ಲದೆ, ಅಡುಗೆ ಮಾಡುವುದು ಅನೇಕ ಜನರಿಗೆ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಿದೆ. ಕೈಗಳಿಂದ ಅಡುಗೆ ಮಾಡುವುದರ ಒಂದು ಪ್ರಯೋಜನವೆಂದರೆ ನೀವು ಸ್ವಂತವಾಗಿ ಯೋಚಿಸಿ ಆರೋಗ್ಯಕರ ಊಟವನ್ನು ತಯಾರಿಸಬಹುದು, ಇದು ನಿಮ್ಮ ತೂಕ ಇಳಿಸುವ ಪ್ರಯಾಣದಲ್ಲಿ ಬಹಳ ಮುಖ್ಯವಾಗಿದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner