ಕನ್ನಡ ಸುದ್ದಿ  /  ಜೀವನಶೈಲಿ  /  Keto Diet: ತೂಕ ಇಳಿಸಿಕೊಳ್ಳಲು ಕಿಟೋ ಡಯೆಟ್ ಉತ್ತಮ ಆಯ್ಕೆ; ನಿಮ್ಮ ಊಟದ ತಟ್ಟೆ ಹೀಗಿರಲಿ

Keto Diet: ತೂಕ ಇಳಿಸಿಕೊಳ್ಳಲು ಕಿಟೋ ಡಯೆಟ್ ಉತ್ತಮ ಆಯ್ಕೆ; ನಿಮ್ಮ ಊಟದ ತಟ್ಟೆ ಹೀಗಿರಲಿ

ಕಿಟೋ ಡಯೆಟ್ ತೂಕ ಇಳಿಕೆಗೆ ಅನುಸರಿಸಲಾಗುವ ಜನಪ್ರಿಯ ವಿಧಾನ. ಆರೋಗ್ಯಕರ ಕೊಬ್ಬಿನಾಂಶವಿರುವ ಆಹಾರ ಹೆಚ್ಚು ಸೇವಿಸಿ, ಕಾರ್ಬೋಹೈಡ್ರೇಟ್‌ ಆಹಾರ ಕಡಿಮೆ ಸೇವಿಸಬೇಕು. ಈ ಡಯೆಟ್‌ಗೆ ಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ತೂಕ ಇಳಿಸಿಕೊಳ್ಳಲು ಕಿಟೋ ಡಯೆಟ್ ಉತ್ತಮ ಆಯ್ಕೆ; ನಿಮ್ಮ ಊಟದ ತಟ್ಟೆ ಹೀಗಿರಲಿ
ತೂಕ ಇಳಿಸಿಕೊಳ್ಳಲು ಕಿಟೋ ಡಯೆಟ್ ಉತ್ತಮ ಆಯ್ಕೆ; ನಿಮ್ಮ ಊಟದ ತಟ್ಟೆ ಹೀಗಿರಲಿ

ಅಧಿಕ ತೂಕ ಮತ್ತು ಬೊಜ್ಜು ಅನೇಕರನ್ನು ಕಾಡುತ್ತಿರುವ ಸಮಸ್ಯೆ. ತೂಕ ಇಳಿಸಿಕೊಳ್ಳಲು ಏನೆಲ್ಲಾ ಪ್ರಯತ್ನ ಮಾಡಿದರೂ ಕಡಿಮೆ ಆಗ್ತಿಲ್ಲ. ಇದಕ್ಕಾಗಿ ಉಪವಾಸ ಮಾಡಿದವರಿದ್ದಾರೆ, ಕಡಿಮೆ ಊಟ ಮಾಡಿದವರಿದ್ದಾರೆ, ಯೋಗ-ವ್ಯಾಯಾಮ, ವಾಕಿಂಗ್-ಜಾಗಿಂಗ್ ಮಾಡಿದವರಿದ್ದಾರೆ, ಜಿಮ್‌ಗೆ ಹೋದವರಿದ್ದಾರೆ. ಆದರೆ ಯಾವುದೂ ಫಲ ಕೊಡದೆ ಹತಾಶೆಗೆ ಒಳಗಾದವರಿದ್ದಾರೆ. ಆದರೆ ಕಿಟೋ ಡಯೆಟ್ (Keto Diet) ಅನ್ನು ಫಾಲೋ ಮಾಡಿದ್ದೀರಾ? ಕಿಟೋ ಡಯೆಟ್ ಎಂದರೇನು? ತೂಕ ಇಳಿಸಿಕೊಳ್ಳಲು ಎಷ್ಟು ದಿನಗಳ ಕಾಲ ಇದನ್ನು ಫಾಲೋ ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ.

ಕಿಟೋ ಡಯೆಟ್ ಅಥವಾ ಕಿಟೋಜೆನಿಕ್ ಡಯೆಟ್ ಇದು ತೂಕ ಇಳಿಕೆಗೆ ಇರುವ ಪ್ರಪಂಚದ ಅತ್ಯಂತ ಜನಪ್ರಿಯ ವಿಧಾನಗಳಲ್ಲಿ ಒಂದಾಗಿದೆ. ಕಿಟೋ ಡಯೆಟ್ ಅಂದ್ರೆ ಬೇರೇನೂ ಅಲ್ಲ. ಇಲ್ಲಿ ನೀವು ಆರೋಗ್ಯಕರ ಕೊಬ್ಬಿನಾಂಶವಿರುವ ಆಹಾರ ಹೆಚ್ಚು ಸೇವಿಸಬೇಕು ಮತ್ತು ಕಾರ್ಬೋಹೈಡ್ರೇಟ್‌ ಆಹಾರ ಕಡಿಮೆ ಸೇವಿಸಬೇಕು. ನಿಮ್ಮ ದೇಹಕ್ಕೆ ಕೊಬ್ಬಿನಾಂಶದ ಆಹಾರ ಮತ್ತು ಪ್ರೋಟೀನ್‌ನಿಂದ ಹೆಚ್ಚಿಗೆ ಕ್ಯಾಲೊರಿ ಸಿಗುವಂತಿರಬೇಕು ಮತ್ತು ಕಾರ್ಬೋಹೈಡ್ರೇಟ್‌ ಆಹಾರದಿಂದ ಕಡಿಮೆ ಕ್ಯಾಲೊರಿ ಸಿಗುವಂತಿರಬೇಕು.

ನಿಮ್ಮ ಡಯೆಟ್ ಪ್ಲಾನ್ ಸರಿ ಇಲ್ಲದಿದ್ದಾಗ ನೀವು ಜಿಮ್‌ಗೆ ಹೋಗಿ 500 ಕ್ಯಾಲೊರಿ ಕರಗಿಸಿದರೂ ಕೂಡ ನೀವು ತೆಗೆದುಕೊಳ್ಳುವ ಆಹಾರದಿಂದ ಅದರ ದುಪ್ಪಟ್ಟು ಕ್ಯಾಲೊರಿ ಮತ್ತೆ ಪಡೆಯುತ್ತೀರಿ. ಕಾರ್ಬೋಹೈಡ್ರೇಟ್‌ ಅಂಶವಿರುವ ಆಹಾರದಿಂದ ಕ್ಯಾಲೊರಿ ಪಡೆಯುವ ಬದಲು ಕೊಬ್ಬಿನಾಂಶವಿರುವ ಆಹಾರದಿಂದ ಕ್ಯಾಲೊರಿ ಪಡೆಯುವುದು ಉತ್ತಮವಾಗಿದೆ. ಕಾರ್ಬೋಹೈಡ್ರೇಟ್‌ ಹೆಚ್ಚಿನ ಸೇವನೆಯಿಂದ ರಕ್ತದಲ್ಲಿ ಗ್ಲುಕೋಸ್ ಅಂಶ ಹೆಚ್ಚಾಗುತ್ತದೆ. ಹೆಚ್ಚಿನ ಗ್ಲೈಕೋಜೆನ್ ಸಂಗ್ರಹವು ತೂಕ ಹೆಚ್ಚಳ ಮತ್ತು ಬೊಜ್ಜಿಗೆ ಕಾರಣವಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಸಾಮಾನ್ಯವಾಗಿ ನಾವು ತೆಗೆದುಕೊಳ್ಳುವ ಆಹಾರದಲ್ಲಿ ಶೇಕಡಾ 70ರಷ್ಟು ಕಾರ್ಬೋಹೈಡ್ರೇಟ್‌ ಇರುತ್ತೆ. ಹೀಗಾಗಿ ನಮ್ಮ ದೇಹಕ್ಕೆ ಬಹುತೇಕ ಕ್ಯಾಲೊರಿ ಕಾರ್ಬೋಹೈಡ್ರೇಟ್‌ನಿಂದ ಸಿಗ್ತಾ ಇದೆ. ಇದನ್ನ ನಾವು ಕಂಟ್ರೋಲ್ ಮಾಡಬೇಕು. ಶೇಕಡಾ 75ರಷ್ಟು ಕ್ಯಾಲೊರಿ ಫ್ಯಾಟಿ ಫುಡ್ ಅಥವಾ ಕೊಬ್ಬಿನಾಂಶವಿರುವ ಆಹಾರದಿಂದ ಬರಬೇಕು, ಶೇಕಡಾ 20 ರಷ್ಟು ಪ್ರೋಟೀನ್‌ನಿಂದ ಬರಬೇಕು ಹಾಗೂ ಕೇವಲ ಶೇಕಡಾ 5ರಷ್ಟು ಕ್ಯಾಲೊರಿಯು ಕಾರ್ಬೋಹೈಡ್ರೇಟ್‌ನಿಂದ ಬರಬೇಕು.

ಕೊಬ್ಬಿನಾಂಶವಿರುವ ಆಹಾರ

ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಕಡಿಮೆ ಕೊಬ್ಬಿನಾಂಶ ಇರುವ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಆದರೆ ಕಿಟೋ ಡಯೆಟ್‌ನಲ್ಲಿ ಹೆಚ್ಚು ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸಬೇಕು. ಇದರ ಇದರ ಉದ್ದೇಶವೇನೆಂದರೆ ಸಕ್ಕರೆಯುಕ್ತ ತಿನಿಸು, ಸೋಡಾ, ಪೇಸ್ಟ್ರಿಗಳು, ಕರಿದ ಪದಾರ್ಥಗಳು, ಬೇಕರಿ ತಿನಿಸುಗಳು ಮತ್ತು ಬಿಳಿ ಬ್ರೆಡ್‌ ಸೇರಿದಂತೆ ಇತರ ಪದಾರ್ಥಗಳನ್ನು ತಿನ್ನುವುದರಿಂದ ಹೆಚ್ಚು ಕಾರ್ಬೋಹೈಡ್ರೇಟ್‌ ಅನ್ನು ನೀವು ಸೇವಿಸಿದಂತಾಗುತ್ತದೆ.

ಸಕ್ಕರೆ ಅಂಶ ಹೆಚ್ಚಿರುವ ಚಾಕೋಲೇಟ್ ತಿಂದರೆ ನಮಗೆ ಮತ್ತೆ ಮತ್ತೆ ಏನನ್ನಾದರೂ ತಿನ್ನಬೇಕೆನಿಸುತ್ತದೆ. ಸುಮ್ಮನೆ ಒಂದೆರಡು ಚಿಪ್ಸ್ ತಿನ್ನೋಣ ಎಂದು ಹೋಗಿ ಪೂರ್ತಿ ಪ್ಯಾಕೆಟ್ ಖಾಲಿ ಮಾಡುತ್ತೇವೆ.

ಹೀಗೆ ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರಗಳನ್ನು ತಿಂದಷ್ಟೂ ನಮ್ಮ ತಿನ್ನುವ ಬಯಕೆ ಹೆಚ್ಚಾಗುತ್ತದೆ. ಈ ಆಹಾರ ಪದಾರ್ಥಗಳನ್ನು ತಿನ್ನುತ್ತಿದ್ದೀರೆಂದರೆ ನೀವು ಕಾರ್ಬೋಹೈಡ್ರೇಟ್ ಜೊತೆಗೆ ಹೆಚ್ಚಿನ ಕ್ಯಾಲೊರಿ ಪಡೆಯುತ್ತಿದ್ದೀರಿ ಎಂದರ್ಥ. ಆದರೆ ಕಿಟೋ ಡಯೆಟ್‌ನಲ್ಲಿ ಕೊಬ್ಬಿನಾಂಶ ಇರುವ ಆಹಾರ ಸೇವನೆಗೆ ಸಲಹೆ ನೀಡಲಾಗುತ್ತದೆ. ಕೊಬ್ಬಿನಾಂಶ ಹೆಚ್ಚಿಗೆ ಇರುವ ಆಹಾರ ತಿಂದಾಗ ನಮಗೆ ಹೊಟ್ಟೆ ತುಂಬಿದಂತೆ ಆಗುತ್ತದೆ. ಹಸಿವು ಕಡಿಮೆ ಆಗುತ್ತದೆ. ಆಗ ನೀವು ನಿಮ್ಮ ಬಾಯಿ ಚಪಲಕ್ಕೆ ಬ್ರೇಕ್ ಹಾಕುತ್ತೀರಿ.

ನೀವು ಹೆಚ್ಚು ಕೊಬ್ಬು ಮತ್ತು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದಾಗ, ನಿಮ್ಮ ದೇಹವು ಶಕ್ತಿ ಉತ್ಪಾದಿಸಲು ಕೊಬ್ಬು ಮತ್ತು ಪ್ರೋಟೀನ್ ಅನ್ನು ಬಳಸಿಕೊಳ್ಳುತ್ತದೆ. ಕೊಬ್ಬನ್ನು ಶಕ್ತಿಯನ್ನಾಗಿ ಬದಲಾಯಿಸಲು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ಗ್ಲೈಕೋಜೆನ್ ಸಂಗ್ರಹ ಕೂಡ ಕಡಿಮೆಯಾಗುತ್ತದೆ. ಇದನ್ನೇ ಕೆಟೋಸಿಸ್ (ketosis) ಎಂದು ಕರೆಯಲಾಗುತ್ತದೆ.

ಕಿಟೋ ಡಯೆಟ್ ಎಷ್ಟು ದಿನ ಫಾಲೋ ಮಾಡಬೇಕು?

ಕಿಟೋ ಡಯೆಟ್ ಅನ್ನು ದೀರ್ಘಕಾಲ ಮಾಡುವುದು ಅಪಾಯಕಾರಿಯಾಗಿದೆ. ಪ್ರತಿನಿತ್ಯದ ವ್ಯಾಯಾಮದ ಜೊತೆ ಕೇವಲ 40 ರಿಂದ 50 ದಿನಗಳ ಕಾಲ ಮಾತ್ರ ಅಚ್ಚುಕಟ್ಟಾಗಿ ಫಾಲೋ ಮಾಡಿದರೆ ಅದರ ಫಲಿತಾಂಶ ನಿಮಗೆ ಸಿಗುತ್ತದೆ. 2 ತಿಂಗಳಿಗಿಂತ ಹೆಚ್ಚಿಗೆ ಕಿಟೋ ಡಯೆಟ್ ಅನುಸರಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮಧುಮೇಹ ಹಾಗೂ ಇತರ ಆರೋಗ್ಯ ಸಮಸ್ಯೆ ಇರುವವರು ಕಿಟೋ ಡಯೆಟ್ ಫಾಲೋ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

ಕಿಟೋ ಡಯೆಟ್ ಮೆನ್ಯೂ

ಮೊಟ್ಟೆ, ಬಾದಾಮಿ, ನಟ್ಸ್, ಚಿಯಾ ಬೀಜ, ಕುಂಬಳಕಾಯಿ ಬೀಜ, ಯಾವುದಾದರೂ ಒಂದು ಬಗೆಯ ಹಣ್ಣು, ಪನೀರ್, ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆ, ಮೊಸರು, ಕೋಳಿ, ಮೀನು, ನಾರಿನಾಂಶವಿರುವ ತರಕಾರಿಗಳು, ಸೊಪ್ಪು, ತುಪ್ಪ… ಈ ಆಹಾರ ಪದಾರ್ಥಗಳು ನಿಮ್ಮ ಊಟದ ತಟ್ಟೆಯಲ್ಲಿ ಇರಬೇಕು. ಚೀಸ್, ಸಾಸ್, ಆಲೂಗಡ್ಡೆ, ಕ್ಯಾರೆಟ್ ಬಳಸಬೇಡಿ. ಡಯೆಟ್ ಜೊತೆ ವ್ಯಾಯಾಮ ಮಾಡುವುದನ್ನು ಮರೆಯದಿರಿ.

(ಮೇಘನಾ ಬಿ)