50 ವರ್ಷಗಳಿಂದ ಕಟ್ಟುನಿಟ್ಟಿನ ಉಪವಾಸ ಕ್ರಮ ಪಾಲಿಸುತ್ತಿದ್ದಾರೆ ಪ್ರಧಾನಿ ಮೋದಿ; 74ರ ಹರೆಯದಲ್ಲೂ ಫಿಟ್ ಆಗಿರಲು ಈ ರಹಸ್ಯವೇ ಕಾರಣ
Modi Fitness Secret: 74ರ ಹರೆಯದಲ್ಲೂ ಫಿಟ್ ಅಂಡ್ ಫೈನ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ವರ್ಷದಲ್ಲಿ ಸಾಕಷ್ಟು ಬಾರಿ ಉಪವಾಸಗಳನ್ನು ಮಾಡುತ್ತಾರೆ. ಅವರ ಡಯೆಟ್ ಹಾಗೂ ಫಿಟ್‌ನೆಸ್ ರಹಸ್ಯ ಇಲ್ಲಿದೆ ನೋಡಿ.

PM Narendra Modi Fitness Secret: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ 74 ವರ್ಷ, ಈ ವಯಸ್ಸಿನಲ್ಲೂ ಉತ್ಸಾಹಿ ತರುಣನಂತೆ ಓಡಾಡಿಕೊಂಡಿರುವ ಇವರನ್ನು ಕಂಡು ಯುವಕರು ನಾಚಬೇಕು. ಅವರ ಆರೋಗ್ಯ ಸ್ಥಿತಿ ಹಾಗೂ ಶಕ್ತಿ ಹಲವರಿಗೆ ಮಾದರಿ. ಇದಕ್ಕೆಲ್ಲಾ ಕಾರಣ 50 ವರ್ಷಗಳಿಂದ ಅವರು ಪಾಲಿಸಿಕೊಂಡು ಬರುತ್ತಿರುವ ಅವರ ಶಿಸ್ತಿನ ಉಪವಾಸದ ದಿನಚರಿ. ಅಮೆರಿಕ ಮೂಲದ ಪಾಡ್‌ಕ್ಯಾಸ್ಟರ್ ಮತ್ತು AI ಸಂಶೋಧಕ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ನೇರ ಸಂಭಾಷಣೆಯಲ್ಲಿ ತಮ್ಮ ಉಪವಾಸದ ದಿನಚರಿ ಹಾಗೂ ಜೀವನಶೈಲಿಯ ಬಗ್ಗೆ ಬಿಚ್ಚಿಟ್ಟಿದ್ದಾರೆ.
ಪ್ರಧಾನಿ ಮೋದಿ ಅವರ ಉಪವಾಸದ ದಿನಚರಿ
ಪ್ರಧಾನಿ ಮೋದಿ ಅವರು ಪ್ರತಿ ವರ್ಷ ಚಾರ್ತುಮಾಸ್ಯ ಉಪವಾಸವನ್ನು ಆಚರಿಸುತ್ತಾರೆ. 4 ತಿಂಗಳ ಕಾಲ ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ. ಜೂನ್ ಮಧ್ಯ ಭಾಗದಿಂದ ದೀಪಾವಳಿವರೆಗೆ ಮೋದಿ ಉಪವಾಸ ವ್ರತ ಆಚರಿಸುತ್ತಾರೆ. ಈ ಸಮಯದಲ್ಲಿ ಅವರು ದಿನಕ್ಕೆ ಒಂದು ಹೊತ್ತು ಮಾತ್ರ ಆಹಾರ ಸೇವಿಸುತ್ತಾರೆ. ಮಳೆಗಾಲದಲ್ಲಿ ಜೀರ್ಣಕ್ರಿಯೆ ಕೂಡ ನಿಧಾನವಾಗಿ ಆಗುವ ಕಾರಣ ಈ ಉಪವಾಸ ಉತ್ತಮ ಎನ್ನಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.
ನವರಾತ್ರಿ ಉಪವಾಸದ ದಿನಚರಿಯ ಬಗ್ಗೆಯೂ ಮೋದಿ ಮಾತನಾಡಿದ್ದಾರೆ. ನವರಾತ್ರಿ ಉಪವಾಸದ ಸಮಯದಲ್ಲಿ ಮೋದಿ ಸಂಪೂರ್ಣವಾಗಿ ಆಹಾರವನ್ನು ತ್ಯಜಿಸುತ್ತಾರೆ ಮತ್ತು ಒಂಬತ್ತು ದಿನಗಳವರೆಗೆ ಬಿಸಿನೀರನ್ನು ಮಾತ್ರ ಕುಡಿಯುತ್ತಾರೆ. ‘ಬಿಸಿನೀರು ಕುಡಿಯುವುದು ಯಾವಾಗಲೂ ನನ್ನ ದಿನಚರಿಯ ಭಾಗವಾಗಿದೆ ಮತ್ತು ಕಾಲಾನಂತರದಲ್ಲಿ ನನ್ನ ಜೀವನಶೈಲಿ ಸ್ವಾಭಾವಿಕವಾಗಿ ಈ ಅಭ್ಯಾಸಕ್ಕೆ ಹೊಂದಿಕೊಂಡಿದೆ‘ ಎಂಬ ವಿಚಾರವನ್ನು ಅವರು ಹಂಚಿಕೊಂಡರು.
ಅಲ್ಲದೇ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಮೋದಿ ಚೈತ್ರ ನವರಾತ್ರಿ ಉಪವಾಸವನ್ನು ಅನುಸರಿಸುತ್ತಾರೆ, ಅಲ್ಲಿ ಅವರು ದಿನಕ್ಕೆ ಒಮ್ಮೆ, ಒಂಬತ್ತು ದಿನಗಳವರೆಗೆ ಒಂದೇ ರೀತಿಯ ಹಣ್ಣನ್ನು ತಿನ್ನುತ್ತಾರೆ. ‘ನಾನು ಪಪ್ಪಾಯಿ ಹಣ್ಣನ್ನು ಆರಿಸಿಕೊಂಡರೆ ಎಲ್ಲಾ ಒಂಬತ್ತು ದಿನಗಳವರೆಗೆ, ನಾನು ಪಪ್ಪಾಯಿಯನ್ನು ಮಾತ್ರ ತಿನ್ನುತ್ತೇನೆ, ಬೇರೆ ಯಾವುದನ್ನೂ ಮುಟ್ಟುವುದಿಲ್ಲ‘ ಎಂದು ಅವರು ವಿವರಿಸಿದರು. ಐದು ದಶಕಗಳಿಗೂ ಹೆಚ್ಚು ಕಾಲ ಉಪವಾಸವು ತಮ್ಮ ಜೀವನದಲ್ಲಿ ಆಳವಾಗಿ ಬೇರೂರಿರುವ ಸಂಪ್ರದಾಯವಾಗಿದೆ ಎಂದು ಮೋದಿ ಪ್ರತಿಬಿಂಬಿಸಿದರು.
ಉಪವಾಸದ ಪ್ರಯೋಜನಗಳು
ಉಪವಾಸದ ಪ್ರಯೋಜನಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, ‘ನಾವು ಉಪವಾಸ ಮಾಡುವಾಗ, ವಾಸನೆ, ಸ್ಪರ್ಶ ಮತ್ತು ರುಚಿಯಂತಹ ನಮ್ಮ ಇಂದ್ರಿಯಗಳು ಹೆಚ್ಚು ಸೂಕ್ಷ್ಮವಾಗುತ್ತವೆ ಎಂಬುದನ್ನು ಗಮನಿಸಬೇಕು‘ ಎಂದಿದ್ದಾರೆ. ‘ನನಗೆ, ಉಪವಾಸವು ಸ್ವಯಂ-ಶಿಸ್ತಿನ ಒಂದು ರೂಪವಾಗಿದೆ. ಇದು ಭಕ್ತಿಯ ಕ್ರಿಯೆ. ಅದು ನನ್ನನ್ನು ನಿಧಾನಗೊಳಿಸುವುದಿಲ್ಲ, ಅದು ನನ್ನನ್ನು ಚುರುಕುಗೊಳಿಸುತ್ತದೆ‘ ಎಂದು ಅವರು ಹೇಳಿದರು.
ಉಪವಾಸವು ದೇಹವನ್ನು ದುರ್ಬಲಗೊಳಿಸುತ್ತದೆ ಎಂಬ ಸಾಮಾನ್ಯ ನಂಬಿಕೆಯನ್ನು ಪ್ರಶ್ನಿಸಿಸುವ ಮೋದಿ ಅದನ್ನು ಮನಸ್ಸು ಮತ್ತು ಚೈತನ್ಯ ಎರಡನ್ನೂ ಪುನರ್ಭರ್ತಿ ಮಾಡುವ ಒಂದು ಮಾರ್ಗವೆಂದು ನೋಡುತ್ತಾರೆ. ಉಪವಾಸವು ಕೇವಲ ಊಟವನ್ನು ಬಿಡುವುದಲ್ಲ, ದೇಹವನ್ನು ಮರು ಸಮತೋಲನಗೊಳಿಸುವುದು, ಇಚ್ಛಾಶಕ್ತಿಯನ್ನು ಬಲಪಡಿಸುವುದು ಮತ್ತು ಆಂತರಿಕ ಸಾಮರಸ್ಯವನ್ನು ಸಾಧಿಸುವುದು ಎಂದು ಅವರು ವಿವರಿಸಿದ್ದಾರೆ.
(ಗಮನಕ್ಕೆ: ಈ ಲೇಖನವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಗೆ ಇದು ಪರ್ಯಾಯವಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ)
