Weight Loss: ಒಂದೇ ತಿಂಗಳಲ್ಲಿ ತೂಕ ಇಳಿಸಬೇಕಾ, ಹಾಗಿದ್ರೆ ಸ್ಪೀಡ್ ಸ್ಲಿಮ್ ಡಯೆಟ್ ಫಾಲೋ ಮಾಡಿ
ತೂಕ ಕಡಿಮೆ ಆಗಬೇಕು ಏನ್ ಮಾಡ್ಲಿ ಅಂತ ಪ್ರಶ್ನೆ ಕೇಳೋರ ಲಿಸ್ಟ್‌ನಲ್ಲಿ ನೀವೂ ಇದ್ದೀರಾ. ದೇಹ ದಂಡಿಸದೇ ತೂಕ ಇಳಿಯಬೇಕು ಅಂದ್ರೆ ಇಲ್ಲೊಂದು ಬೆಸ್ಟ್ ಐಡಿಯಾ ಇದೆ. ಈ ಸ್ಪೀಡ್ ಸ್ಲಿಮ್ ಡಯೆಟ್ ನೀವು ಫಾಲೋ ಮಾಡಿದ್ರೆ ಒಂದೇ ತಿಂಗಳಲ್ಲಿ ತೂಕ ಕಡಿಮೆ ಆಗುತ್ತಂತೆ, ಟ್ರೈ ಮಾಡಿ ನೋಡಿ.
ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳೋದು ಟ್ರೆಂಡ್ ಆಗಿದೆ. ಪ್ರತಿನಿತ್ಯ ಎಲ್ಲಿ ಕೇಳಿದ್ರು ತೂಕ ಕಡಿಮೆ ಮಾಡಿಕೊಳ್ಳಬೇಕು ಐಡಿಯಾ ಹೇಳಿ ಎನ್ನುವ ಮಾತೇ ಕೇಳಿ ಬರುತ್ತದೆ. ಅಧಿಕ ತೂಕದಿಂದ ಅಂದ ಕಡಿಮೆ ಆಗೋದು ಮಾತ್ರವಲ್ಲ, ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಅಧಿಕ ತೂಕದಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್, ಸೇರಿದಂತೆ ಹಲವು ರೀತಿಯ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು.
ಅಸಮರ್ಪಕ ಆಹಾರ ಪದ್ಧತಿ ಹಾಗೂ ಜಡ ಜೀವನಶೈಲಿಯು ತೂಕ ಹೆಚ್ಚಲು ಕಾರಣವಾಗುತ್ತದೆ. ಬೊಜ್ಜಿನ ಸಮಸ್ಯೆ ಒಮ್ಮೆ ಬಂದರೇ ಸುಲಭವಾಗಿ ಕಡಿಮೆಯಾಗುವುದಿಲ್ಲ. ಅಂತಹವರು ಬಹಳ ಬೇಗ ತೂಕ ಇಳಿಸಬೇಕು ಅಂತ ಟ್ರೈ ಮಾಡ್ತಾ ಇರ್ತಾರೆ ಆದರೆ ಅದು ಸಾಧ್ಯವಾಗುವುದಿಲ್ಲ. ನೀವು ತ್ವರಿತವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದರೆ ಸ್ಪೀಡ್ ಸ್ಲಿಮ್ ಡಯೆಟ್ ಫಾಲೋ ಮಾಡಬಹುದು. ಇದರಿಂದ ಒಂದೇ ತಿಂಗಳಲ್ಲಿ ತೂಕ ಕಡಿಮೆ ಆಗುತ್ತಂತೆ. ಹಾಗಾದ್ರೆ ಏನಿದು ಸ್ಪೀಡ್ ಸ್ಲಿಮ್ ಡಯೆಟ್ ಇದನ್ನು ಫಾಲೋ ಮಾಡೋದು ಹೇಗೆ ನೋಡಿ.
ಈ ಆಹಾರಗಳನ್ನು ಸೇವಿಸಿ
ಮೊದಲನೇಯದಾಗಿ ವೇಗವಾಗಿ ತೂಕ ಕಡಿಮೆ ಆಗಬೇಕು ಅಂದ್ರೆ ನಾವು ಪೌಷ್ಟಿಕ ಆಹಾರಗಳ ಸೇವನೆಯ ಮೇಲೆ ಗಮನ ಹರಿಸಬೇಕು. ಪೋಷಕಾಂಶಗಳಿಂದ ತುಂಬಿರುವ ಈ ಆಹಾರವು ಬೇಗನೆ ಹೊಟ್ಟೆ ತುಂಬುವಂತೆ ಮಾಡುತ್ತದೆ. ಓಟ್ಸ್, ಬಾರ್ಲಿ ಮತ್ತು ತರಕಾರಿಯಂತಹ ನಾರಿನಾಂಶ ಸಮೃದ್ಧ ಆಹಾರಗಳನ್ನು ಸೇವಿಸಿ. ಇವುಗಳಿಂದ ಹೊಟ್ಟೆ ಬೇಗ ತುಂಬುತ್ತದೆ. ಇದರಿಂದ ನೀವು ಪದೇ ಪದೇ ತಿನ್ನುವುದು ತಪ್ಪುತ್ತದೆ. ಈ ರೀತಿ ಮಾಡುವುದರಿಂದ ಬೇಗ ತೂಕ ಕಡಿಮೆಯಾಗುತ್ತದೆ.
ತೂಕ ನಷ್ಟದ ವಿಚಾರಕ್ಕೆ ಬಂದಾಗ ನಾರಿನಾಂಶಕ್ಕೆ ಅಗ್ರಸ್ಥಾನ. ನಾರಿನಾಂಶ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ತೂಕ ಬೇಗನೆ ಕಡಿಮೆಯಾಗುತ್ತದೆ. ನಾರಿನಾಂಶ ಸಮೃದ್ಧ ಆಹಾರಗಳು ದೇಹದಲ್ಲಿ ಕ್ಯಾಲೊರಿ ಕಡಿಮೆ ಮಾಡಲು ನೆರವಾಗುತ್ತವೆ. ಒಟ್ಟಾರೆ ನಾರಿನಾಂಶ ಸಮೃದ್ಧ ಆಹಾರವು ಪ್ರತ್ಯಕ್ಷವಾಗಿ ತೂಕ ಕಡಿಮೆಯಾಗಲು ಸಹಕರಿಸುತ್ತದೆ.
ಕಡಿಮೆ ತಿನ್ನುವುದೇ ಅಪಾಯ
ತೂಕ ಇಳಿಸಿಕೊಳ್ಳುವ ವಿಚಾರಕ್ಕೆ ಬಂದಾಗ ಹಲವರು ಕಡಿಮೆ ತಿನ್ನುವ ಅಭ್ಯಾಸ ರೂಢಿಸಿಕೊಳ್ಳುತ್ತಾರೆ. ಆದರೆ ಕಡಿಮೆ ತಿಂದರೆ ಖಂಡಿತ ತೂಕ ಕಡಿಮೆ ಆಗೊಲ್ಲ, ಇದ್ರಿಂದ ತೂಕ ಇನ್ನಷ್ಟು ಹೆಚ್ಚಾಗುತ್ತೆ. ನೀವು ಎಷ್ಟು ತಿನ್ನುತ್ತೀರಿ ಎನ್ನುವುದಕ್ಕಿಂತ ಹೇಗೆ ತಿನ್ನುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಬೆಳಗಿನ ಉಪಾಹಾರಕ್ಕೆ ನೀವು ಎರಡು ಮೊಟ್ಟೆ ತಿನ್ನಿ. ಎರಡು ಬೇಯಿಸಿದ ಮೊಟ್ಟೆ ತಿಂದರೆ ಮಧ್ಯಾಹ್ನದವರೆಗೂ ನಿಮಗೆ ಹಸಿವಾಗುವ ಸಾಧ್ಯತೆ ಕಡಿಮೆ. ಪೋಷಕಾಂಶ ಸಮೃದ್ಧ ಆಹಾರ ಸೇವಿಸಿ ಹೊರತು ಯಾವುದೇ ಕಾರಣಕ್ಕೂ ತಿನ್ನುವುದು ಬಿಡುವುದು, ಕಡಿಮೆ ತಿನ್ನುವುದು ಮಾಡದಿರಿ.
ಬೆಳಗಿನ ಉಪಾಹಾರ ಹೀಗಿರಲಿ
ಬೆಳಗಿನ ಹೊತ್ತು ನೀವು ಸೇವಿಸುವ ಉಪಾಹಾರವು ಒಮೆಗಾ 3 ಕೊಬ್ಬಿನಾಮ್ಲ, ಸತು, ಮೆಗ್ನೀಸಿಯಮ್ ಮತ್ತು ಫೈಬರ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವಂತೆ ನೋಡಿಕೊಳ್ಳಿ. ಸಿಹಿತಿಂಡಿಗಳು ಮತ್ತು ಕರಿದ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿ. ತಂಪು ಪಾನೀಯಗಳು ಮತ್ತು ಸೋಡಾದಂತಹ ಪಾನೀಯಗಳ ಸೇವನೆ ಸಲ್ಲ. ಇದರೊಂದಿಗೆ ಧೂಮಪಾನ ಮತ್ತು ಮದ್ಯಪಾನವನ್ನು ಸಹ ನಿಲ್ಲಿಸಿ. ಇವೆಲ್ಲವೂ ನಿಮ್ಮ ತೂಕವನ್ನು ಹೆಚ್ಚಿಸಬಹುದು.
ನಿಮ್ಮ ಊಟ ಹೀಗಿರಲಿ
ಊಟಕ್ಕೆ ಒಂದು ಕಪ್ ಅನ್ನ, ಸ್ವಲ್ಪ ಸಾರು, ಒಂದು ಕಪ್ ಬೇಯಿಸಿದ ತರಕಾರಿಗಳು ಹಾಗೂ ಒಂದು ಮೊಸರು ಇಷ್ಟೇ ನಿಮ್ಮ ಊಟದಲ್ಲಿ ಇರಬೇಕು. ರಾತ್ರಿ ಊಟಕ್ಕೆ ಚಪಾತಿ ಅಥವಾ ಮುದ್ದೆ ತಿನ್ನಿ. ಸಂಜೆ ಸ್ನ್ಯಾಕ್ಸ್‌ರೂಪದಲ್ಲಿ ನಟ್ಸ್ ಸೇವಿಸಬೇಕು. ಬೀಜಗಳಲ್ಲೂ ಪೋಷಕಾಂಶ ಸಮೃದ್ಧವಾಗಿದ್ದು ಕಡಿಮೆ ಕ್ಯಾಲೊರಿಯನ್ನು ಹೊಂದಿರುತ್ತದೆ. ಊಟ ಮಾಡಿದ ತಕ್ಷಣ ಕುಳಿತುಕೊಳ್ಳುವ ಅಭ್ಯಾಸ ಬೇಡ. ಪ್ರತಿದಿನ ಒಂದು ಗಂಟೆ ನಡೆಯುವುದು ಅಥವಾ ಓಡುವುದು ಅಭ್ಯಾಸ ಮಾಡಿಕೊಳ್ಳಿ. ತಿಂಗಳೊಳಗೆ ನೀವು ಉತ್ತಮ ಬದಲಾವಣೆಯನ್ನು ನೋಡುತ್ತೀರಿ. ಒಂದು ತಿಂಗಳಲ್ಲಿ ಕನಿಷ್ಠ ಮೂರರಿಂದ ನಾಲ್ಕು ಕಿಲೋಗಳನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಇದು ಆರೋಗ್ಯಕರ ವಿಧಾನದಲ್ಲಿ ತೂಕ ಇಳಿಸಿಕೊಳ್ಳುವ ಸುಲಭ ಮಾರ್ಗವಾಗಿದೆ.