ಸಣ್ಣ-ಪುಟ್ಟ ವಿಚಾರಕ್ಕೂ ಮಕ್ಕಳೊಂದಿಗೆ ಪೋಷಕರು ಕೋಪ ಮಾಡಿಕೊಳ್ಳುವುದರಿಂದ ಉಂಟಾಗುವ ಅಡ್ಡಪರಿಣಾಮಗಳು ಯಾವುವು? ಇಲ್ಲಿದೆ ಮಾಹಿತಿ
ಮಕ್ಕಳು ಚೇಷ್ಟೆ ಮಾಡುವುದು ಸಾಮಾನ್ಯ. ಅದು ಅತಿಯಾಗಲೂಬಾರದು. ಹಾಗಂತ ಅವರನ್ನು ಹೊಡೆಯುವುದು, ಮನಬಂದಂತೆ ಬೈಯುವುದು ಸರಿಯಲ್ಲ. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೋಪಗೊಳ್ಳುವುದರ ಪರಿಣಾಗಳೇನು ಹಾಗೂ ಮಕ್ಕಳ ಚೇಷ್ಟೆಯನ್ನು ನಿಯಂತ್ರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ನಮ್ಮ ದೈನಂದಿನ ಜೀವನದಲ್ಲಿ ನಾವು ಅನೇಕ ಒತ್ತಡಗಳನ್ನು ಎದುರಿಸುತ್ತೇವೆ. ಕಚೇರಿಯಿಂದ ಸುಸ್ತಾಗಿ ಮನೆಗೆ ಬಂದಾಗ ಮಕ್ಕಳು ಓಡೋಡಿ ಬಂದು ಅಪ್ಪಿಕೊಳ್ಳುತ್ತಾರೆ. ಅಥವಾ ಮನೆಯಲ್ಲಿ ವಸ್ತುಗಳು, ಆಟಿಕೆ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿಬಿದ್ದಿರುತ್ತವೆ. ಇದರಿಂದ ಕೆಲವೊಮ್ಮೆ ಪೋಷಕರು ನಿಯಂತ್ರಣ ಕಳೆದುಕೊಂಡು ಮಕ್ಕಳಿಗೆ ಬೈಯ್ಯುವುದು, ಹೊಡೆಯುವುದು ಮಾಡಬಹುದು. ಸಣ್ಣ-ಪುಟ್ಟ ವಿಚಾರಕ್ಕೂ ಕೋಪಗೊಳ್ಳಬಹುದು. ಈ ರೀತಿ ಮಾಡುವುದು ಸರಿಯೇ? ಯಾವಾಗ ಕೋಪಗೊಳ್ಳಬೇಕು ಮತ್ತು ಆಗಾಗ ಕೋಪಗೊಳ್ಳುವುದರಿಂದ ಉಂಟಾಗುವ ಪರಿಣಾಮಗಳು ಏನು ಎಂಬುದು ನಿಮಗೆ ತಿಳಿದಿದೆಯೇ?
ಮಕ್ಕಳ ಮೇಲೆ ಕೋಪ ಮಾಡಿಕೊಳ್ಳುವುದು ಸರಿಯಲ್ಲ. ಹಲವು ಅಧ್ಯಯನಗಳು, ಮನೋವೈದ್ಯರ ಪ್ರಕಾರ ಹೀಗೆ ಮಾಡುವುದರಿಂದ ಅವರ ಸೂಕ್ಷ್ಮ ಮನಸ್ಸಿನ ಮೇಲೆ ಬಲವಾದ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾನಸಿಕ ಬೆಳವಣಿಗೆ ಕುಂಠಿತವಾಗುವುದು ಕೆಲವರಲ್ಲಿ ಗೋಚರ ದೋಷವಾದರೆ, ಇನ್ನು ಕೆಲವರಲ್ಲಿ ಮಾನಸಿಕವಾಗಿ ಹೊಸ ವಿಷಯಗಳನ್ನು ಕಲಿಯಲು ಅಡ್ಡಿಯಾಗುತ್ತದೆ. ಇವುಗಳ ಹೊರತಾಗಿ, ಮಕ್ಕಳೊಂದಿಗೆ ಕೋಪಗೊಳ್ಳುವುದರಿಂದ ಇತರ ಅಡ್ಡಪರಿಣಾಮಗಳಿವೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಮಕ್ಕಳೊಂದಿಗೆ ಕೋಪಗೊಳ್ಳುವುದರ ಅಡ್ಡಪರಿಣಾಮಗಳು
ಭಯಭೀತರಾಗುವುದು: ಮಕ್ಕಳಲ್ಲಿ ಕೋಪೋದ್ರೇಕವನ್ನು ತೋರಿಸಿದರೆ, ಅವರು ಕೆಲವು ದಿನಗಳ ನಂತರ ಭಯಭೀತರಾಗಬಹುದು, ಹಾಗೂ ಒಂಟಿಯಾಗಿ ಇರಲು ಬಯಸಬಹುದು. ಹೇಳಿದ ಕೆಲಸವನ್ನು ಮಾಡಲಾಗದೆ ಅವಮಾನಿತರಾಗುವುದು ಮತ್ತು ಅಸಮರ್ಥರಾಗುತ್ತಾರೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಕುಂದುತ್ತದೆ.
ಸಂಬಂಧಗಳಲ್ಲಿ ಇಷ್ಟವಿಲ್ಲದಿರುವಿಕೆ: ಇದು ಸಾಮಾನ್ಯ ಸಂಗತಿಯಾದರೂ ಪರಿಣಾಮ ಮಾತ್ರ ಹೆಚ್ಚು ಪರಿಣಾಮ ಬೀರುತ್ತದೆ. ಮಗುವಿನ ಜತೆ ಕೋಪಗೊಳ್ಳುತ್ತಲೇ ಇದ್ದರೆ, ನಿಮ್ಮೊಂದಿಗೆ ಇರಲು ಬಯಸದೆ ಇರಬಹುದು. ಸಿಟ್ಟು ತೋರಿಸಿದ ಮೇಲೆ ಎಷ್ಟೇ ಮುದ್ದು ಮಾಡಿದರೂ ಕೋಪದ ಕ್ಷಣಗಳು ಅವರ ಮನಸ್ಸಿನಲ್ಲಿ ಆಳವಾಗಿ ನೆಲೆಯೂರುತ್ತವೆ ಎಂಬುದನ್ನು ಮರೆಯಬೇಡಿ.
ಕಲಿಕೆಯಲ್ಲಿ ಅಸಮರ್ಥತೆ: ಮಕ್ಕಳನ್ನು ಅವಮಾನಿಸುವುದು, ಚುಡಾಯಿಸುವುದು, ವ್ಯಂಗ್ಯ ಮಾಡುವುದರಿಂದ ನೀವು ಹೇಳಿದ್ದನ್ನು ಕಲಿಯುವ ಮನಸ್ಸು ಮಾಡದಿರಬಹುದು. ಇದರಿಂದ ಕಲಿಕೆಯಲ್ಲಿ ಹಿಂದುಳಿಯುವ ಸಾಧ್ಯತೆಯೂ ಇಲ್ಲದಿಲ್ಲ.
ಭಾವನಾತ್ಮಕ ಪರಿಣಾಮ: ಕೋಪವು ಮಗುವಿನ ಮೇಲೆ ಭಾವನಾತ್ಮಕ ಪ್ರಭಾವವನ್ನು ಬೀರಬಹುದು. ಅವರಲ್ಲಿ ಆತಂಕ, ಒತ್ತಡ ಮತ್ತು ಖಿನ್ನತೆಯಂತಹ ಭಾವನಾತ್ಮಕ ಭಾವನೆಗಳು ಬೆಳೆಯಬಹುದು.
ಮಗುವಿನ ವರ್ತನೆಯಲ್ಲಿ ಬದಲಾವಣೆ: ಚಿಕ್ಕ ಮಕ್ಕಳು ಹೆಚ್ಚಾಗಿ ತಮ್ಮ ಸುತ್ತಮುತ್ತಲಿನಿಂದಲೇ ಕಲಿಯುತ್ತಾರೆ. ನಿತ್ಯವೂ ಕೋಪಿಸಿಕೊಳ್ಳುತ್ತಿದ್ದರೆ, ಮಕ್ಕಳ ನಡವಳಿಕೆಯು ಸಂಪೂರ್ಣವಾಗಿ ಬದಲಾಗಬಹುದು. ಹೀಗಾಗಿ, ಮಕ್ಕಳನ್ನು ತಾಳ್ಮೆ ಮತ್ತು ಪ್ರೀತಿಯಿಂದ ನೋಡಿಕೊಳ್ಳುವುದು ಮುಖ್ಯ. ಅವರ ತಪ್ಪುಗಳನ್ನು ಸರಿಪಡಿಸಲು ಕೆಲವು ಸಲಹೆಗಳನ್ನು ಅನುಸರಿಸಿ. ನಿಮ್ಮ ಮಕ್ಕಳನ್ನು ಭವಿಷ್ಯದ ಮುಂಗೋಪಿಗಳಾಗಿ ಪರಿವರ್ತಿಸಬೇಡಿ.
ಚೇಷ್ಟೆಯ ಮಕ್ಕಳನ್ನು ನಿಯಂತ್ರಿಸುವುದು ಹೇಗೆ?
ಶಾಂತವಾಗಿರಿ: ಕೆಲವು ಮಕ್ಕಳು ತುಂಬಾ ಚೇಷ್ಟೆ ಹೊಂದಿರುತ್ತಾರೆ. ಅಂತಹ ಮಕ್ಕಳ ಮುಂದೆ ಕೋಪಗೊಳ್ಳದೆ ಶಾಂತವಾಗಿರಲು ಪ್ರಯತ್ನಿಸಿ. ವಯಸ್ಸಿಗನುಗುಣವಾಗಿ ಮಕ್ಕಳ ಚಟುವಟಿಕೆಯು ಕ್ರಮೇಣ ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತೆ ಅವರಿಗೆ ಚಟುವಟಿಕೆಗಳನ್ನು ಹೆಚ್ಚಿಸಿ. ಹಾಗೆಯೇ, ಕೋಪದಿಂದ ಮಕ್ಕಳೊಂದಿಗೆ ಪ್ರತಿಕ್ರಿಯಿಸುವುದರಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗುವುದಿಲ್ಲ.
ನೈತಿಕವಾಗಿ ವರ್ತಿಸಿ: ಮಕ್ಕಳು ಚೆನ್ನಾಗಿ ವರ್ತಿಸಿದಾಗ ಅವರನ್ನು ಹೊಗಳಿ. ಹೀಗೆ ಮಾಡುವುದರಿಂದ ಒಳ್ಳೆಯ ನಡತೆಯ ಕಡೆಗೆ ಅವರ ಆಕರ್ಷಣೆ ಹೆಚ್ಚಾಗುತ್ತದೆ. ಕ್ರಮೇಣ ಕೆಟ್ಟ ಅಥವಾ ಗಲಭೆಯ ಕೆಲಸಗಳನ್ನು ಮಾಡುವುದು ತಪ್ಪು ಎಂದು ತಿಳಿದುಕೊಳ್ಳುವರು.
ತಾಳ್ಮೆ ಇರಲಿ: ಮಕ್ಕಳು ಚೇಷ್ಟೆ ಮಾಡುವುದು ಜಾಸ್ತಿಯಾದರೆ ಅವರ ಮೇಲೆ ಕೈಗೊಳ್ಳುವ ಕ್ರಮಗಳು ಸೌಮ್ಯವಾಗಿರಬೇಕು. ಮಕ್ಕಳೊಂದಿಗೆ ತಾಳ್ಮೆಯಿಂದಿರಿ ಮತ್ತು ನಿಧಾನವಾಗಿ ಕಲಿಸಿದರೆ, ಅವರು ತಮ್ಮ ಕೋಪವನ್ನು ಕಡಿಮೆ ಮಾಡುತ್ತಾರೆ.
ವಿಭಾಗ