ವಿಳಾಸದಲ್ಲಿ ಪಿನ್‌ಕೋಡ್ ಬಳಸಲು ಕಾರಣವೇನು, ನಿಮ್ಮ ಪಿನ್ 5ರಿಂದಲೇ ಆರಂಭವಾಗುವುದೇಕೆ? 6 ಅಂಕಿಗಳ ಅರ್ಥ ತಿಳಿಯಿರಿ-what is pin code in indian postal service 6 digit pin number meaning in kannada pin code zones and sub zones jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ವಿಳಾಸದಲ್ಲಿ ಪಿನ್‌ಕೋಡ್ ಬಳಸಲು ಕಾರಣವೇನು, ನಿಮ್ಮ ಪಿನ್ 5ರಿಂದಲೇ ಆರಂಭವಾಗುವುದೇಕೆ? 6 ಅಂಕಿಗಳ ಅರ್ಥ ತಿಳಿಯಿರಿ

ವಿಳಾಸದಲ್ಲಿ ಪಿನ್‌ಕೋಡ್ ಬಳಸಲು ಕಾರಣವೇನು, ನಿಮ್ಮ ಪಿನ್ 5ರಿಂದಲೇ ಆರಂಭವಾಗುವುದೇಕೆ? 6 ಅಂಕಿಗಳ ಅರ್ಥ ತಿಳಿಯಿರಿ

Pin Code meaning: ವಿಳಾಸ ಬರೆಯುವಾಗ ಪಿನ್‌ಕೋಡ್ ಹಾಕುವುದು ಸಾಮಾನ್ಯ. ಆರು ಅಂಕಿಗಳಿರುವ ಪೋಸ್ಟಲ್‌ ಪಿನ್‌ಕೋಡ್‌ ನಿಮ್ಮ ವಸ್ತುಗಳನ್ನು ಭಾರತದ ಯಾವುದೇ ಮೂಲೆಯಲ್ಲಿದ್ದರೂ ಸೂಕ್ತ ವಿಳಾಸಕ್ಕೆ ಸಾಗಿಸಲು ನೆರವಾಗುತ್ತದೆ. ಪಿನ್‌ಕೋಡ್‌ನಲ್ಲಿರುವ ಎಲ್ಲಾ ಆರು ಅಂಕೆಗಳಿಗೂ ಒಂದೊಂದು ಅರ್ಥವಿದೆ. ಆ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ವಿಳಾಸದಲ್ಲಿ ಬರೆಯುವ ಪಿನ್‌ಕೋಡ್ ಅರ್ಥ ತಿಳಿಯಿರಿ
ವಿಳಾಸದಲ್ಲಿ ಬರೆಯುವ ಪಿನ್‌ಕೋಡ್ ಅರ್ಥ ತಿಳಿಯಿರಿ (pixabay)

ಭಾರತದಲ್ಲಿ ಸಣ್ಣ ಒಂದು ಪತ್ರದಿಂದ ಹಿಡಿದು, ಯಾವುದೇ ವಸ್ತುವು ದೇಶದ ಯಾವುದೇ ಭಾಗಕ್ಕೆ ತಲುಪಬೇಕಾದರೂ ಪಿನ್‌ಕೋಡ್‌ ಬೇಕೇಬೇಕು. ಭಾರತದ ಯಾವುದೇ ಮೂಲೆಗೂ ಕೊರಿಯರ್‌ ಮಾಡಲು ಈ ಪಿನ್‌ಕೋಡ್‌ ನಮೂದಿಸಲಾಗುತ್ತದೆ. ದೇಶದ ಪ್ರತಿ ರಾಜ್ಯಗಳ ಪ್ರತಿಯೊಂದು ಭಾಗಕ್ಕೂ ಪಿನ್‌ಕೋಡ್‌ ಇದೆ. ಪ್ರತಿನಿತ್ಯ ಲಕ್ಷಾಂತರ ವಸ್ತುಗಳು ಸರಿಯಾದ ಸ್ಥಳಕ್ಕೆ ಡೆಲಿವರಿ ಆಗಲು ಈ ಪಿನ್‌ಕೋಡ್ ಕಾರಣ. ಹೆಚ್ಚೆಂದರೆ ಆರು ಅಂಕೆಗಳಿರುವ ಈ ಪಿನ್‌ಕೋಡ್‌ಗೆ ಅಷ್ಟು ಸಾಮರ್ಥ್ಯವಿದೆಯಾ ಎಂದು ನಿಮಗೆ ಅನಿಸಬಹುದು. ಖಂಡಿತಾ ಇದೆ. ಯಾವುದೇ ಪತ್ರ ಅಥವಾ ಕೊರಿಯರ್‌ ವಸ್ತುವಿನಲ್ಲಿ ನೀವು ಬರೆಯುವ ವಿಳಾಸದಲ್ಲಿ ನಮೂದಿಸುವ ಇತರ ಎಲ್ಲಾ ವಿವರಗಳಿಗಿಂತ ಪಿನ್‌ಕೋಡ್‌ ಮೌಲ್ಯ ದುಪ್ಪಟ್ಟು. ಅಂಚೆಕಚೇರಿಗಳಲ್ಲಿ ಪೋಸ್ಟ್‌ಮ್ಯಾನ್‌ ಮೊದಲು ನೋಡುವುದೇ ಈ ಪಿನ್‌ಕೋಡ್‌. ಅದರ ಆಧಾರದಲ್ಲಿ ಆ ಅಂಚೆಯನ್ನು ಸೂಕ್ತ ಅಂಚೆಕಚೇರಿಗೆ ಕಳುಹಿಸುತ್ತಾರೆ.

ಪಿನ್‌ಕೋಡ್‌ ಎಂಬ ಸಂಖ್ಯೆಯು ಭಾರತದಲ್ಲಿ ಪೋಸ್ಟಲ್ ಮತ್ತು ಡೆಲಿವರಿ ಸೇವೆಗಳನ್ನು ಹೇಗೆ ಸುಗಮಗೊಳಿಸುತ್ತದೆ ಎಂಬುದನ್ನು ನೋಡೋಣ. ಇದೇ ವೇಳೆ ಪಿನ್‌ಕೋಡ್‌ನಲ್ಲಿ ಇರುವ ಪ್ರತಿ ಅಂಕಿಯ ಅರ್ಥ ತಿಳಿಯೋಣ.

ಪಿನ್ (PIN) ಎಂದರೇನು?

PIN ಇದರ ಪೂರ್ಣ ರೂಪವೇ ಪೋಸ್ಟಲ್ ಇಂಡೆಕ್ಸ್ ನಂಬರ್. ಅಂದರೆ ಅಂಚೆ ಸೂಚ್ಯಂಕ ಸಂಖ್ಯೆ. ಅದನ್ನೇ ನಾವು ಪಿನ್ ಕೋಡ್ ಎಂದು ಹೇಳುತ್ತೇವೆ. ಭಾರತೀಯ ಅಂಚೆ ವ್ಯವಸ್ಥೆಯಲ್ಲಿ ಈ ಅಂಕಿ ಸಂಖ್ಯೆ ತುಂಬಾ ಮುಖ್ಯ. ಇದರ ಆಧಾರದಲ್ಲೇ ದೂರದ ದೆಹಲಿಯಲ್ಲಿ ಅಂಚೆಪೆಟ್ಟಿಗೆಗೆ ಹಾಕಲಾದ ಪತ್ರವೊಂದು ಪಿನ್‌ ನಂಬರ್‌ ಆಧಾರದಲ್ಲಿ ಕರ್ನಾಟಕದ ಅಂಚೆಕಚೇರಿಗೆ ಬಂದು ತಲುಪುತ್ತದೆ. 1972ರ ಆಗಸ್ಟ್ 15ರಂದು, ಪಿನ್ ಕೋಡ್ ವ್ಯವಸ್ಥೆಯನ್ನು ಪರಿಚಯಿಸಲಾಯಿತು. 2022ರ ವೇಳೆಗೆ ಪಿನ್‌ಕೋಡ್ ವ್ಯವಸ್ಥೆಯು ಐವತ್ತು ವರ್ಷಗಳನ್ನು ಪೂರ್ಣಗೊಳಿಸಿತು.

ಪಿನ್‌ ಕೋಡ್‌ನ ಆರು ಅಂಕೆಗಳು ಏನು ಹೇಳುತ್ತವೆ?

ಉದಾಹರಣೆಗೆ ಪಿನ್ ಕೋಡ್ 123456 ಎಂದು ಭಾವಿಸೋಣ. ಇದರ ಆಧಾರದ ಮೇಲೆ, ಪಿನ್‌ಕೋಡ್‌ನಲ್ಲಿರುವ ಪ್ರತಿ ಅಂಕಿಯ ಬಗ್ಗೆ ತಿಳಿಯೋಣ. ಪಿನ್‌ಕೋಡ್‌ನಲ್ಲಿನ ಮೊದಲ ಸಂಖ್ಯೆ (1) ವಲಯ (Zone)ವನ್ನು ಸೂಚಿಸುತ್ತದೆ. 2ನೇ ಅಂಕೆ ಉಪವಲಯ (sub zone)ವನ್ನು ಸೂಚಿಸುತ್ತದೆ. ಮೊದಲ ಮೂರು ಅಂಕೆಗಳನ್ನು ಸೇರಿಸಿದರೆ (123) ಜಿಲ್ಲಾ ಕೋಡ್ ಆಗುತ್ತದೆ. ಕೊನೆಯಲ್ಲಿರುವ 456 ಜಿಲ್ಲೆಯಲ್ಲಿ ಪೋಸ್ಟ್ ಆಫೀಸ್ ಕೋಡ್ ಅನ್ನು ಸೂಚಿಸುತ್ತದೆ.

ಮೊದಲ ಅಂಕೆ

ಪಿನ್‌ಕೋಡ್‌ನಲ್ಲಿನ ಮೊದಲ ಅಂಕಿಯು ವಲಯವನ್ನು ಸೂಚಿಸುತ್ತದೆ. ನಮ್ಮ ದೇಶದಲ್ಲಿ ಒಟ್ಟು 9 ವಲಯಗಳಿವೆ. 8 ಪ್ರಾದೇಶಿಕ ವಲಯಗಳಾಗಿದ್ದರೆ, ಒಂದು ಕ್ರಿಯಾತ್ಮಕ ವಲಯ (functional zone). ಇದು ಭಾರತೀಯ ಸೇನೆಗೆ ಸಂಬಂಧಿಸಿದ್ದು. ಹೀಗಾಗಿ ಪಿನ್‌ಕೋಡ್‌ನ ಮೊದಲ ಅಂಕೆಯು ವಲಯವನ್ನು ಸೂಚಿಸುತ್ತದೆ.

  • 1,2 -ಉತ್ತರ ವಲಯ
  • 3,4 -ಪಶ್ಚಿಮ ವಲಯ
  • 5,6 -ದಕ್ಷಿಣ ವಲಯ (ಕರ್ನಾಟಕ ಇದರಲ್ಲಿ ಬರುತ್ತದೆ)
  • 7,8 -ಪೂರ್ವ
  • 9 -ಸೇನಾ ಕಾರ್ಯಕಾರಿ ವಲಯ

ಕರ್ನಾಟಕವು ದಕ್ಷಿಣ ವಲಯದಲ್ಲಿ ಬರುತ್ತದೆ. ನಮ್ಮ ರಾಜ್ಯದ ವಲಯ ಸಂಖ್ಯೆ 5. ಹೀಗಾಗಿ ಕರ್ನಾಟಕದ ಎಲ್ಲಾ ಪಿನ್‌ಕೋಡ್‌ 5ರಿಂದ ಪ್ರಾರಂಭವಾಗುತ್ತವೆ.

ಎರಡನೇ ಅಂಕೆ

ರಾಜ್ಯಗಳನ್ನು ಉಪವರ್ಗೀಕರಿಸಿ, ಪಿನ್ ಕೋಡ್‌ನಲ್ಲಿ ಎರಡನೇ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಅದೇ ಉಪ ವಲಯ ಸಂಖ್ಯೆ. ವಲಯದ ಆಧಾರದಲ್ಲಿ ರಾಜ್ಯದ ಪಿನ್‌ಕೋಡ್‌ಗಳು 5ರಿಂದ ಆರಂಭವಾಗುತ್ತದೆ. ಉಪವಲಯಗಳ ಲೆಕ್ಕದಲ್ಲಿ ಕರ್ನಾಟಕಕ್ಕೆ 6ರಿಂದ 9ರವರೆಗಿನ ಅಂಕೆಗಳನ್ನು ನೀಡಲಾಗಿದೆ. ಹೀಗಾಗಿ ಕರ್ನಾಟಕದ ಎಲ್ಲಾ ಪಿನ್‌ಗಳು 56ರಿಂದ 59ರ ಸಂಖ್ಯೆಗಳಿಂದ ಆರಂಭವಾಗುತ್ತವೆ (ಮೊದಲ 2 ಅಂಕೆಗಳು).

ಮೂರನೇ ಅಂಕೆ

ಮೊದಲ ಎರಡು ಅಂಕೆಗಳು ವಲಯ ಮತ್ತು ರಾಜ್ಯವನ್ನು ಸೂಚಿಸುತ್ತವೆ. ಈ ಎರಡು ಅಂಕೆಗಳಿಗೆ ಮೂರನೇ ಅಂಕೆ ಸೇರಿಸಿದರೆ ಯಾವ ಜಿಲ್ಲೆ ಎಂಬುದು ಜಿಲ್ಲೆ ಗೊತ್ತಾಗುತ್ತದೆ.. ಕರ್ನಾಟಕದ ಮೊದಲ ಪಿನ್‌ ಸಂಖ್ಯೆ 560001. ಇದು ರಾಜಧಾನಿ ಬೆಂಗಳೂರಿನದ್ದು. 560002 ಬೆಂಗಳೂರು ನಗರದ ಪಿನ್‌ ಕೋಡ್‌. ಹೀಗೆ ಮುಂದುವರೆಯುತ್ತಾ ಹೋಗುತ್ತದೆ. ಬಾಗಲಕೋಟೆಯ ಪಿನ್‌ 587ರಿಂದ ಆರಂಭವಾದರೆ, ದಕ್ಷಿಣ ಕನ್ನಡ ಜಿಲ್ಲೆಯ ಪಿನ್‌ 574 ಅಥವಾ 575ರಿಂದ ಆರಂಭವಾಗುತ್ತದೆ. ಮೈಸೂರಿನದ್ದು 570ಯಿಂದ ಆರಂಭವಾಗುತ್ತದೆ.

ಕೊನೆಯ ಮೂರು ಅಂಕೆಗಳು

ಪಿನ್‌ಕೋಡ್‌ನ ಕೊನೆಯ ಮೂರು ಅಂಕೆಗಳು ಪೋಸ್ಟ್ ಆಫೀಸ್ ಕೋಡ್‌ಗೆ ಸಂಬಂಧಿಸಿವೆ. ನಾಲ್ಕನೇ ಅಂಕೆಯು ಆ ಜಿಲ್ಲೆಗಳಲ್ಲಿನ ಪೋಸ್ಟ್ ಆಫೀಸ್ ಪ್ರದೇಶ ಅಥವಾ ಸೇವಾ ಕೋಡ್ ಅನ್ನು ಸೂಚಿಸುತ್ತದೆ. ನಾಲ್ಕನೇ ಅಂಕಿಯು ಶೂನ್ಯವಾಗಿದ್ದರೆ, ಅದು ಜಿಲ್ಲಾ ಕೇಂದ್ರವನ್ನು ಸೂಚಿಸುತ್ತದೆ. ಕೊನೆಯ ಎರಡು ಅಂಕೆಗಳು ಆ ಪ್ರದೇಶಗಳಲ್ಲಿನ ಅಂಚೆ ಕಚೇರಿಗಳನ್ನು ಸೂಚಿಸುತ್ತವೆ. ಈ ಸಂಖ್ಯೆಗಳನ್ನು ನೋಡಿಕೊಂಡು, ಪ್ರತಿಯೊಂದು ಅಂಚೆಕಚೇರಿಗೆ ಬಂದಿರುವ ಪತ್ರ ಅಥವಾ ಕೊರಿಯರ್‌ ಅನ್ನು ಡೆಲಿವರಿ ಆಗಬೇಕಿರುವ ವಿಳಾಸದ ಸಮೀಪವಿರುವ ಅಂಚೆ ಕಚೇರಿಗೆ ಕಳುಹಿಸಲಾಗುತ್ತದೆ.