Coconut Uses: ಮೊಳಕೆಯೊಡೆದ ತೆಂಗಿನಕಾಯಿಯಲ್ಲಿ ಅಡಗಿದೆ ಯಾರಿಗೂ ತಿಳಿಯದ ಆರೋಗ್ಯಕರ ಅಂಶಗಳು!
ತೆಂಗಿನಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ತೆಂಗಿನಮರದಲ್ಲಿ ವಿವಿಧ ರೀತಿಯ ಪ್ರಯೋಜನಗಳಿವೆ, ತೆಂಗಿನಮರ ಇರುವಾಗಲೂ ಸತ್ತಮೇಲೂ ವಿವಿಧ ರೀತಿಯಲ್ಲಿ ಬಳಕೆಮಾಡುತ್ತಾರೆ. ಮೊಳಕೆಯೊಡೆದ ತೆಂಗಿನಕಾಯಿಯಲ್ಲಿ ಇರುವ ಆರೋಗ್ಯಕರ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

ತೆಂಗಿನಕಾಯಿಯಲ್ಲಿ ಗರಿಷ್ಠ ಪೌಷ್ಠಿಕತೆ, ನಾರಿನಲ್ಲಿ ಶ್ರೀಮಂತಿಕೆ ಸೇರಿದಂತೆ ಜೀವಸತ್ವಗಳಾದ ಸಿ, ಇ, ಬಿ, ಬಿ3, ಬಿ5, ಬಿ6 ಹಾಗೂ ಖನಿಜಗಳಾದ ಕಬ್ಬಿಣ, ಸೆಲೇನಿಯಂ, ಸೋಡಿಯಂ, ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ, ರಂಜಕಗಳು ಇರುವುದರಿಂದಲೇ ಇಂದು ದಕ್ಷಿಣ ಭಾರತದಲ್ಲಿ ಹೇರಳವಾಗಿ ಅದರಲ್ಲೂ ಆಹಾರದಲ್ಲಿ ನಿತ್ಯ ಬಳಕೆಯಾಗುತ್ತದೆ. ಇದರ ಸೇವನೆ ಆರೋಗ್ಯಕ್ಕೆ ಎಷ್ಟು ಒಳೆಯದೋ ಅಷ್ಟೇ ತೆಂಗಿನಕಾಯಿಯ ಇನ್ನೊಂದು ಭಾಗ ಕೂಡ ನಮ್ಮ ಆರೋಗ್ಯಕ್ಕೆ ಅಮೃತವಿದ್ದಂತೆ. ಇದರ ಪರಿಚಯವಿದ್ದರೂ ಹೆಚ್ಚಿನವರು ಇದರ ಪ್ರಯೋಜನದ ತಿಳಿಯದೇ ಕಸದ ಬುಟ್ಟಿಗೆ ಎಸೆಯುತ್ತಾರೆ. ಅಷ್ಟಕ್ಕೂ ಯಾವುದದು ಭಾಗ? ಇದರ ಮಹತ್ವವೇನು? ಎಂಬಿತ್ಯಾದಿ ಮಾಹಿತಿಗಳನ್ನು ಈ ಲೇಖನದಲ್ಲಿ ಪರಿಚಯಿಸಲಾಗಿದೆ.
ಹೌದು! ತೆಂಗಿನಕಾಯಿಯ ಮಹತ್ವ ಹೆಚ್ಚಿನವರಿಗೆ ಗೊತ್ತು. ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ದತಿಯಲ್ಲಿ ತೆಂಗಿನಕಾಯಿಗೆ ಸುದೀರ್ಘ ಇತಿಹಾಸವಿದೆ. ತೆಂಗಿನಕಾಯಿ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಸಹ ಹೊಂದಿದೆ. ಹಾಗೆಯೇ, ತೆಂಗಿನಕಾಯಿಯಲ್ಲಿ ಮೊಳಕೆಯೊಡೆದ ಭಾಗವು ಕೂಡ ಆರೋಗ್ಯಕ್ಕೆ ತುಂಬಾ ಮುಖ್ಯ.
ಏನಿದು ಮೊಳಕೆಯೊಡೆದ ತೆಂಗಿನಕಾಯಿ? ಅದು ಹೇಗೆ ರೂಪುಗೊಳ್ಳುತ್ತದೆ?
ತೆಂಗಿನಕಾಯಿಯಲ್ಲಿ ಉತ್ಪತ್ತಿಯಾಗುವ ಮೊಳಕೆಯನ್ನು ಪೋಷಿಸಲು ಅದರಲ್ಲಿರುವ ನೀರು ಹೀರಿಕೊಳ್ಳುತ್ತದೆ. ಆಗ, ಅದು ಚಿಪ್ಪಿನೊಳಗೆ ಮೃದುವಾಗಿ, ಮೊಗ್ಗಾಗುತ್ತದೆ. ನೋಡಲು ತೇಟ್ ಸ್ಪಂಜಿನ ಆಕಾರದಲ್ಲಿರುವ ಹೂವಿನ ಹಾಗೆ ಕಾಣುತ್ತದೆ. ಹೊರಗಡೆಯಿಂದ ನೋಡಲು ತೆಂಗಿನಚಿಪ್ಪು ಸಾಮಾನ್ಯವಾಗಿ ಕಂಡರು ಒಳಗಡೆ ಕೆಲ ಕಾಯಿಯೊಳಗೆ ಮೊಳಕೆಯೊಡೆದಿರುತ್ತದೆ. ಪ್ರಾಚೀನ ಕಾಲದಲ್ಲಿ ಶುಭಾರಂಭದಲ್ಲಿ ಅಥವಾ ಪೂಜೆ ಮಾಡುವಾಗ ಕಾಯಿಯನ್ನು ಒಡೆದಾಗ ಈ ರೀತಿಯ ಹೂವು/ ಮೊಳಕೆ ಕಂಡುಬಂದಲ್ಲಿ ಶುಭ ಸೂಚನೆ ಎಂದು ನಂಬಲಾಗುತ್ತಿತ್ತು. ಆದರೆ, ಇದು ಆರೋಗ್ಯಕ್ಕೆ ಒಂದು ದೈವದತ್ತ ವರದಾನವೆಂಬುದು ತುಂಬಾ ಜನಕ್ಕೆ ತಿಳಿದಿಲ್ಲ.
ಮೊಳಕೆಯೊಡೆದ ತೆಂಗಿನಕಾಯಿಗಿದೆ ನಾನಾ ಹೆಸರು!
ತೆಂಗಿನಕಾಯಿ ಹೆಚ್ಚು ಬಲಿತಾಗ ಅದು ಮೊಳಕೆಯೊಡೆಯುತ್ತದೆ. ಈ ಮೊಳಕೆಯೊಡೆದ ತೆಂಗಿನಕಾಯಿಯ ಒಳ ತಿರುಳು ಸ್ಪಂಜಿನಂತೆ ಕಾಣುತ್ತದೆ. ಇದಕ್ಕೆ ತೆಂಗಿನ ಸೇಬು, ತೆಂಗಿನ ಮೊಳಕೆ, ಭ್ರೂಣ ಅಥವಾ ತೆಂಗಿನ ಕೂಬು ಎಂದು ಕನ್ನಡದಲ್ಲಿ ಕರೆಯಲ್ಪಟ್ಟರೆ, ಆಂಗ್ಲ ಭಾಷೆಯಲ್ಲಿ Coconut apple, Coconut embryo or sprouted coconut ಎಂದು ಕರೆಯುತ್ತಾರೆ. ಇದರಲ್ಲೂ ತೆಂಗಿನಕಾಯಿಯೊಳಗೆ ಇರುವ ಎಲ್ಲಾ ವಿಟಮಿನ್, ರಂಜಕ, ಕ್ಯಾಲ್ಸಿಯಂ, ಕಬ್ಬಿಣದ ಅಂಶಗಳೊಂದಿಗೆ ಒಮೆಗಾ 3 ಮತ್ತು ಒಮೆಗಾ 6 ಅಂಶಗಳು ಹೇರಳವಾಗಿ ಸಿಗುತ್ತದೆ.
ಮೊಳಕೆಯೊಡೆದ ತೆಂಗಿನಕಾಯಿಯಲ್ಲಿದೆ ಹಲವು ರೋಗಗಳಿಗೆ ಔಷಧ
ತೆಂಗಿನಕಾಯಿ ಮೊಳಕೆ ಸುಲಭವಾಗಿ ಜೀರ್ಣವಾಗುವುದರಿಂದ ಶಿಶುವಿನಿಂದ ಹಿಡಿದು ವೃದ್ಧರವರೆಗೆ ಯಾರಾದರು ಸೇವಿಸಬಹುದು. ಇದರಲ್ಲಿ ಕೊಬ್ಬಿನ ಅಂಶ ಇರುವುದರಿಂದ ನಮ್ಮ ದೇಹಕ್ಕೆ ಅತ್ಯಗತ್ಯ. ಥೈರಾಯ್ಡ್ ಅಥವಾ ಹೈಪರ್ ಥೈರಾಯ್ಡ್ ಇರುವವರಿಗೆ ಇದು ರಾಮಬಾಣ. ಇನ್ನೂ ಪೌಷ್ಠಿಕಾಂಶದ ಗುಣವು ಮಾನವನ ರಕ್ತದ ಎಲೆಕ್ಟ್ರೋಲೈಟ್ ಮಟ್ಟಗಳಿಗೆ ಸಮಾನವಾಗಿರುವುದರಿಂದ ನಿಶ್ಯಕ್ತಿಯನ್ನು ದೂರಗೊಳಿಸುತ್ತದೆ. ಅಕಾಲಿಕ ಮುಪ್ಪು ಮತ್ತು ಚರ್ಮದ ತೊಂದರೆಯನ್ನು ತಡೆಗಟ್ಟುತ್ತದೆ. ದೇಹದಲ್ಲಿರುವ ನಿರ್ಜಲಿಕರಣ ಸಮಸ್ಯೆ ಹೋಗಲಾಡಿಸಿ, ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಹಾಗೂ ಮಧುಮೇಹಕ್ಕೆ ಇನ್ಸುಲೀನ್ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ. ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ.
ತಜ್ಞರ ಅಭಿಪ್ರಾಯಗಳೇನು?
ಮುಂಬೈನ ಝೈನೋವಾ ಶಾಲ್ಬಿ ಆಸ್ಪತ್ರೆಯ ಆಹಾರ ತಜ್ಞೆ ಜಿನಾಲ್ ಪಟೇಲ್ ಪ್ರಕಾರ, ಇವು ಹೆಚ್ಚಾಗಿ ಸಂಪೂರ್ಣವಾಗಿ ಬೆಳೆದ ತೆಂಗಿನಕಾಯಿಯ ಸಣ್ಣ ಅಥವಾ ಕಿರಿಯ ಆವೃತ್ತಿಯಾಗಿದೆ. ಇನ್ನೂ ಇದರ ಕೆಳಭಾಗದಲ್ಲಿ ಮೂರು ರಂಧ್ರಗಳಿಂದ ಗೋಚರಿಸುವ ತೆಂಗಿನಕಾಯಿಗಳು ತೇವಾಂಶ ಅಥವಾ ಬೆಚ್ಚಗಿನ ವಾತಾವರಣಕ್ಕೆ ಒಡ್ಡಿಕೊಂಡಾಗ ಇದರೊಳಗೆ ಬೀಜಗಳು ಬೆಳೆಯಲು ಕಾರಣವಾಗುತ್ತದೆ ಎಂದು ವಿವರಿಸಿದ್ದಾರೆ.
ಸಮಗ್ರ ಆರೋಗ್ಯ ಮತ್ತು ಅಂತರಾಷ್ಟ್ರೀಯ ವ್ಯಾಪಾರದ ಮುಖ್ಯಸ್ಥರಾದ ಮಾನ್ವಿ ಲೋಹಿಯಾ ಅವರ ಪ್ರಕಾರ, ಪೌಷ್ಟಿಕಾಂಶದ ದೃಷ್ಟಿಯಿಂದ ಮೊಳಕೆಯೊಡೆದ ತೆಂಗಿನಕಾಯಿಗಳು ಸಾಮಾನ್ಯ ತೆಂಗಿನಕಾಯಿಗಳಿಗಿಂತ ಸಾಕಷ್ಟು ಭಿನ್ನವಾಗಿದ್ದು, ಇದರಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುತ್ಯದೆ. ವಿಶೇಷವಾಗಿ ಮಧ್ಯಮ-ಸರಪಳಿ ಟ್ರೈಗ್ಲಿಸರೈಡ್‌ಗಳಿಂದ ಹೃದಯದ ಆರೋಗ್ಯಕ್ಕೆ ಪ್ರಯೋಜನವಿದೆ. ಹಾಗೂ ಅನೇಕ ಉಷ್ಣವಲಯದ ಪ್ರದೇಶಗಳಲ್ಲಿ, ಮೊಳಕೆಯೊಡೆದ ತೆಂಗಿನಕಾಯಿಗಳನ್ನು ರುಚಿಕರ ಪದಾರ್ಥವೆಂದು ಪರಿಗಣಿಸಲ್ಪಟ್ಟಿದೆ. ಅದು ಹಾಳಾಗುವ ಮೊದಲೇ ಅದನ್ನು ಸೇವಿಸುವುದು ಉತ್ತಮ ಎಂದು ತಿಳಿಸಿದ್ದಾರೆ.
