ಇಸಿಎಮ್‌ಒ, ವೆಂಟಿಲೇಟರ್‌ ನಡುವಿನ ವ್ಯತ್ಯಾಸ ಏನು; ವೈದ್ಯ ದತ್ತಾತ್ರೇಯ ಪ್ರಭು ಬರಹ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಇಸಿಎಮ್‌ಒ, ವೆಂಟಿಲೇಟರ್‌ ನಡುವಿನ ವ್ಯತ್ಯಾಸ ಏನು; ವೈದ್ಯ ದತ್ತಾತ್ರೇಯ ಪ್ರಭು ಬರಹ ಇಲ್ಲಿದೆ

ಇಸಿಎಮ್‌ಒ, ವೆಂಟಿಲೇಟರ್‌ ನಡುವಿನ ವ್ಯತ್ಯಾಸ ಏನು; ವೈದ್ಯ ದತ್ತಾತ್ರೇಯ ಪ್ರಭು ಬರಹ ಇಲ್ಲಿದೆ

ಆಸ್ಪತ್ರೆಯಲ್ಲಿನ ಐಸಿಯು ವಿಭಾಗ ಅನೇಕ ಜೀವರಕ್ಷಕ ಉಪಕರಣಗಳನ್ನು ಒಳಗೊಂಡಿರುತ್ತವೆ. ಈ ಉಪಕರಣಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಕಡಿಮೆ ಇರುವ ಹಿನ್ನೆಲೆ, ಸಾಕಷ್ಟು ಜನರು ತೀವ್ರ ನಿಗಾ ಘಟಕದ ಬಗ್ಗೆ ಭಯವನ್ನು ಹೊಂದಿದ್ದಾರೆ. ಈ ಬಗ್ಗೆ ಡಾ ದತ್ತಾತ್ರೇಯ ಪ್ರಭು ಅವರ ಬರಹ ಇಲ್ಲಿದೆ.

ಇಸಿಎಮ್‌ಒ, ವೆಂಟಿಲೇಟರ್‌ ನಡುವಿನ ವ್ಯತ್ಯಾಸ ಏನು (ಸಾಂಕೇತಿಕ ಚಿತ್ರ)
ಇಸಿಎಮ್‌ಒ, ವೆಂಟಿಲೇಟರ್‌ ನಡುವಿನ ವ್ಯತ್ಯಾಸ ಏನು (ಸಾಂಕೇತಿಕ ಚಿತ್ರ) (PC: Canva)

ಆಸ್ಪತ್ರೆಯಲ್ಲಿ ವೆಂಟಿಲೇಟರ್ ಏಕೆ ಬಳಸುತ್ತಾರೆ ಎಂಬ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರೇಯ ಪ್ರಭು ವಿವರಿಸಿದ್ದಾರೆ. ಮುಂದಿರುವುದು ಅವರ ಬರಹ. ಆಸ್ಪತ್ರೆಯಲ್ಲಿನ ಐಸಿಯು ವಿಭಾಗ ಅನೇಕ ಜೀವರಕ್ಷಕ ಉಪಕರಣಗಳನ್ನು ಒಳಗೊಂಡಿರುತ್ತವೆ. ಈ ಉಪಕರಣಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಕಡಿಮೆ ಇರುವ ಹಿನ್ನೆಲೆ, ಸಾಕಷ್ಟು ಜನರು ತೀವ್ರ ನಿಗಾ ಘಟಕದ ಬಗ್ಗೆ ಭಯವನ್ನು ಹೊಂದಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ನಡೆದಿದೆ ಎಂದರೆ ಆ ವ್ಯಕ್ತಿ ಬದುಕುಳಿಯುವುದೇ ಇಲ್ಲ ಎಂಬ ಅಪನಂಬಿಕೆ ಇದೆ. ಹೀಗಾಗಿ ಸಾಮಾನ್ಯವಾಗಿ ಗೊಂದಲ ಸೃಷ್ಟಿಸುವ ಇಸಿಎಮ್‌ಒ ( ಎಕ್ಸ್‌ಟ್ರಾಕೊರ್ಪೊರಿಯಲ್‌ ಮೆಂಬ್ರೆನ್‌ ಆಕ್ಸಿಜನೇಟರ್‌) ಮತ್ತು ವೆಂಟಿಲೇಟರ್‌ ಉಪಕರಣಗಳ ಬಳಕೆ, ಉಪಯೋಗವನ್ನು ತಿಳಿಯೋಣ.

ವೆಂಟಿಲೇಟರ್ ಏಕೆ ಬಳಸಲಾಗುತ್ತದೆ?

ವೆಂಟಿಲೇಟರ್‌ ಎನ್ನುವ ಉಪಕರಣ ರೋಗಿಗೆ ತಾತ್ಕಾಲಿಕವಾಗಿ ಉಸಿರಾಟದ ನೆರವನ್ನು ನೀಡುತ್ತದೆ. ನ್ಯುಮೋನಿಯಾ, ಅಸ್ತಮಾ/ಸಿಒಪಿಡಿ, ಶ್ವಾಸನಾಳದ ಸಮಸ್ಯೆ ಮುಂತಾದ ಉಸಿರಾಟದ ವೈಫಲ್ಯಗಳಲ್ಲಿ ರೋಗಿಗಳಿಗೆ ಉಸಿರಾಡಲು ಸಹಾಯ ಮಾಡುತ್ತದೆ. ಜೊತೆಗೆ ಈ ಉಪಕರಣ ರೋಗಿಗೆ ಯಾವುದೇ ರೀತಿಯಲ್ಲಿ ನೋವು ನೀಡುವುದಿಲ್ಲ. ರೋಗಿಯನ್ನು ಶಾಂತವಾಗಿಡಲು ನಿದ್ರಾಜನಕ (ಸೆಡೆಶನ್‌)ನ್ನು ವೈದ್ಯರು ನೀಡುತ್ತಾರೆ. ಸಮಸ್ಯೆ ಪರಿಹಾರವಾದ ಬಳಿಕ ವೆಂಟಿಲೇಟರ್‌ ವ್ಯವಸ್ಥೆಯನ್ನು ಕಡಿತಗೊಳಿಸಲಾಗುತ್ತದೆ. ಜೊತೆಗೆ ಈ ವ್ಯವಸ್ಥೆ ಯಾವುದೇ ದೀರ್ಘಕಾಲದ ಅಡ್ಡಪರಿಣಾಮವನ್ನು ನೀಡುವುದಿಲ್ಲ.

ಹೊಸ ತಂತ್ರಜ್ಞಾನಗಳನ್ನು ಒಳಗೊಂಡಿರುವ ವೆಂಟಿಲೇಟರ್‌ಗಳು ರೋಗಿಯ ಪ್ರಯತ್ನದ ಜೊತೆ ಹೊಂದಿಕೊಳ್ಳುತ್ತಾ ಉತ್ತಮ ಫಲಿತಾಂಶವನ್ನು ನೀಡುತ್ತವೆ. ಆದರೆ ಸ್ನಾಯು ಅಥವಾ ನರ ಸಂಬಂಧಿ ಸಮಸ್ಯೆಗಳಿರುವ ಕೆಲವೇ ರೋಗಿಗಳಿಗೆ ದೀರ್ಘಾವಧಿಯ ವೆಂಟಿಲೇಟರ್‌ ಅಗತ್ಯವಿರುತ್ತದೆ.

ಇಸಿಎಮ್‌ಒ ಉಪಯೋಗಗಳೇನು?

ಎಆರ್‌ಡಿಎಸ್‌ನಂತಹ ಕ್ಲಿಷ್ಟವಾದ ಉಸಿರಾಟ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗೆ ವೆಂಟಿಲೇಟರ್‌ ಬೆಂಬಲದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಇಸಿಎಂಒ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಇದು ಹೃದಯ-ಶ್ವಾಸಕೋಶದ ಯಂತ್ರವಾಗಿದ್ದು, ಹೃದಯ ಮಾಡುವ ಕೆಲಸವನ್ನು ಈ ಮೆಷೀನ್‌ ಮಾಡುತ್ತದೆ. ಅಂದರೆ ಇಲ್ಲಿ ರೋಗಿಯ ದೇಹದಿಂದ ರಕ್ತಚಲನೆಯನ್ನು ಮೆಷೀನ್‌ಗೆ ತಿರುಗಿಸಲಾಗುತ್ತದೆ. ಇಲ್ಲಿ ಮೆಷೀನ್‌ನ ಆಕ್ಸಿಜನ್‌ ಮೆಂಬ್ರೆನ್‌ ರಕ್ತಕ್ಕೆ ಆಮ್ಲಜನಕವನ್ನು ಸೇರಿಸಿ ದೇಹಕ್ಕೆ ಪಂಪ್‌ ಮಾಡುತ್ತದೆ. ರೋಗಿಯ ಶ್ವಾಸಕೋಶಗಳು ಚೇತರಿಸಿಕೊಳ್ಳುವವರೆಗೆ ಈ ವಿಧಾನವನ್ನು ಅನುಸರಿಸಲಾಗುತ್ತದೆ.

ಹೃದಯ ಸ್ತಂಭನ, ಶ್ವಾಸಕೋಶ ಸಮಸ್ಯೆ, ಶ್ವಾಸಕೋಶ ಕಸಿ ಹಾಗೂ ಹೃದಯ ಸ್ತಂಭನ ಸಂದರ್ಭದಲ್ಲಿ ಈ ಇಸಿಎಂಒ ಮೆಷೀನ್‌ನೆರವನ್ನು ನೀಡಲಾಗುತ್ತದೆ. ಇದು ಸಮಸ್ಯೆಗೆ ಪರಿಹಾರವಲ್ಲ. ಆದರೆ, ಆರೋಗ್ಯ ಸಮಸ್ಯೆಯಿಂದ ಗುಣಮುಖವಾಗಲು ನೀಡುವ ನೆರವು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ನವಜಾತ ಶಿಶುಗಳಿಗೂ ಈ ಉಪಕರಣದ ಬೆಂಬಲವನ್ನು ನೀಡಲಾಗುತ್ತದೆ. ಕೋವಿಡ್‌ ತೀವ್ರ ಸ್ವರೂಪ ಪಡೆದಿದ್ದ ಸಂದರ್ಭದಲ್ಲಿ ಮೆಟ್ರೊಪಾಲಿಟನ್‌ ನಗರಗಳು ಚಿಕಿತ್ಸೆಗಾಗಿ ಇಸಿಎಂಒ ವಿಧಾನವನ್ನು ಬಳಸಲಾಗಿತ್ತು. ಆದರೆ ಕೆಲವು ಅರೆ ನಗರ ಪ್ರದೇಶ, ಹಳ್ಳಿ ಪ್ರದೇಶಗಳಲ್ಲಿ ಈ ಸೌಲಭ್ಯದ ಕೊರತೆ ಉಂಟಾಗಿತ್ತು. ಆದರೆ, ಈಗ ಮಂಗಳೂರು ನಗರದಲ್ಲಿ ಈ ವ್ಯವಸ್ಥೆ ಲಭ್ಯವಿದ್ದು, ಸುತ್ತಮುತ್ತಲಿನ ಪ್ರದೇಶಗಳಿಗೂ ಸಹಕಾರಿಯಾಗಿದೆ.

ಎಕ್ಸ್‌ಟ್ರಾಕೊರ್ಪೊರಿಯಲ್‌ ಮೆಂಬ್ರೆನ್‌ ಆಕ್ಸಿಜನೇಟರ್‌ (ಇಸಿಎಂಒ) ಮತ್ತು ವೆಂಟಿಲೇಟರ್‌ ವ್ಯವಸ್ಥೆ ಎರಡೂ ಕೂಡ ರೋಗಿಗೆ ಉಸಿರಾಟದಲ್ಲಿ ತೀವ್ರ ಸಮಸ್ಯೆ ಕಂಡುಬಂದಾಗ ಹೃದಯ, ಶ್ವಾಸನಾಳಗಳು ಚೇತರಿಸಿಕೊಳ್ಳಲು ನೆರವಾಗುತ್ತದೆ. ಆದರೆ, ಯಾವ ಉಪಕರಣವನ್ನು ಬಳಸಬೇಕು ಎಂಬುದನ್ನು ವೈದ್ಯರೇ ರೋಗಿಯ ಆರೋಗ್ಯ ಹಾಗೂ ರೋಗದ ಸ್ಥಿತಿಯನ್ನು ಗಮನಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಈ ಬಗ್ಗೆ ಯಾವುದೇ ಭಯ, ಆತಂಕ ಬೇಡ.

Priyanka Gowda

eMail
Whats_app_banner