ಕನ್ನಡ ಸುದ್ದಿ  /  Lifestyle  /  What Is The Reason And Home Remedy For Premature Grey Hair

Home Remedy for Premature grey Hair: ಬಾಲನೆರೆಗೆ ಕಾರಣಗಳೇನು...ಈ ಸಮಸ್ಯೆಗೆ ಮನೆಮದ್ದು ಇಲ್ಲಿದೆ ನೋಡಿ..!

ಜೆನೆಟಿಕ್‌, ದೇಹದಲ್ಲಿ ಹಾರ್ಮೋನ್ಸ್‌ ಅಸಮತೋಲನ, ಜಂಕ್‌ ಫುಡ್‌, ಹೆಚ್ಚು ಮಾಂಸಾಹಾರ ಸೇವನೆ, ಹೆಚ್ಚು ರಾಸಾಯನಿಕಯುಕ್ತ ಶಾಂಪೂ, ಎಣ್ಣೆ ಬಳಸುವುದು, ಬಿಸಿಲಿನಲ್ಲಿ ಹೆಚ್ಚು ಓಡಾಡುವುದು. ಕಲುಷಿತ ನೀರಿನಲ್ಲಿ ಸ್ನಾನ, ಅತಿಯಾದ ಒತ್ತಡ, ನಿದ್ರಾಹೀನತೆ ಸೇರಿದಂತೆ ನಾನಾ ಕಾರಣಗಳಿಂದ ಕೂದಲು ಬಹಳ ಚಿಕ್ಕ ವಯಸ್ಸಿಗೆ ಬಿಳಿಯಾಗುತ್ತದೆ.

ಬಾಲನೆರೆಗೆ ಕಾರಣಗಳು ಹಾಗೂ ಪರಿಹಾರಗಳು
ಬಾಲನೆರೆಗೆ ಕಾರಣಗಳು ಹಾಗೂ ಪರಿಹಾರಗಳು (PC: Freepik.com)

ಬಹುತೇಕರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ಕೂಡಾ ಒಂದು. ಸಾಮಾನ್ಯವಾಗಿ ವಯಸ್ಸು 40 ದಾಟುತ್ತಿದ್ದಂತೆ ತಲೆಯಲ್ಲಿ ಒಂದೊಂದೇ ಬಿಳಿ ಕೂದಲು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಚಿಕ್ಕ ಮಕ್ಕಳಿಗೂ ಬಿಳಿ ಕೂದಲ ಸಮಸ್ಯೆ ಕಾಡುತ್ತದೆ. ಇದಕ್ಕೆ ಬಾಲನೆರೆ ಎನ್ನುತ್ತಾರೆ.

ಸ್ಕೂಲ್‌, ಕಾಲೇಜಿಗೆ ಹೋಗುವ ಮಕ್ಕಳಿಗೂ ಇಂದಿನ ದಿನಗಳಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಇದು ಅವರಿಗೆ ಬಹಳ ಮುಜುಗರ ತರುವ ವಿಚಾರ. ನೆರೆ ಕೂದಲಿನಿಂದ ಮಕ್ಕಳು ಇತರರೊಂದಿಗೆ ಸುಲಭವಾಗಿ ಬೆರೆಯಲು ಕೂಡಾ ಹಿಂಜರಿಯುತ್ತಾರೆ. ಕೆಲವೊಮ್ಮೆ ಅವರು ಸ್ನೇಹಿತರು, ನೆರೆ ಹೊರೆಯವರು ಪದೇ ಪದೆ ಕೇಳುವ ಪ್ರಶ್ನೆಯಿಂದ ಖಿನ್ನತೆಗೆ ಕೂಡಾ ಒಳಗಾಗಬಹುದು. ತಂದೆ ತಾಯಿಗಳಿಗೂ ಇದು ಬೇಸರದ ವಿಚಾರವಾಗಿದೆ. ಆದರೆ ಇದೆಲ್ಲದಕ್ಕೂ ಪರಿಹಾರವಿದೆ.

ಅದಕ್ಕೂ ಮುನ್ನ ಬಾಲನೆರೆಗೆ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳಿ. ಜೆನೆಟಿಕ್‌, ದೇಹದಲ್ಲಿ ಹಾರ್ಮೋನ್ಸ್‌ ಅಸಮತೋಲನ, ಜಂಕ್‌ ಫುಡ್‌, ಹೆಚ್ಚು ಮಾಂಸಾಹಾರ ಸೇವನೆ, ಹೆಚ್ಚು ರಾಸಾಯನಿಕಯುಕ್ತ ಶಾಂಪೂ, ಎಣ್ಣೆ ಬಳಸುವುದು, ಬಿಸಿಲಿನಲ್ಲಿ ಹೆಚ್ಚು ಓಡಾಡುವುದು. ಕಲುಷಿತ ನೀರಿನಲ್ಲಿ ಸ್ನಾನ, ಅತಿಯಾದ ಒತ್ತಡ, ನಿದ್ರಾಹೀನತೆ ಸೇರಿದಂತೆ ನಾನಾ ಕಾರಣಗಳಿಂದ ಕೂದಲು ಬಹಳ ಚಿಕ್ಕ ವಯಸ್ಸಿಗೆ ಬಿಳಿಯಾಗುತ್ತದೆ.

ಬಾಲನೆರೆ ಸಮಸ್ಯೆಗೆ ಮನೆಮದ್ದು ಇಲ್ಲಿದೆ

ಮನೆಮದ್ದು 1

5 ಚಮಚ ಮೆಹಂದಿ ಪುಡಿಗೆ ಸ್ವಲ್ಪ ನೀರು ಬೆರೆಸಿ ರಾತ್ರಿಯಿಡೀ ನೆನೆಯಲು ಬಿಡಿ. ಇದನ್ನು ಕಬ್ಬಿಣದ ಪಾತ್ರೆಯಲ್ಲಿ ಇಟ್ಟರೆ ಒಳ್ಳೆಯದು. ಮರುದಿನ ಮಿಶ್ರಣವನ್ನು ಒಮ್ಮೆ ಮಿಕ್ಸ್‌ ಮಾಡಿ. ಈ ಪಾತ್ರೆಯನ್ನು ಸ್ಟೋವ್‌ ಮೇಲಿಟ್ಟು ಕಡಿಮೆ ಉರಿ ಇಡಿ. ಇದರೊಂದಿಗೆ 3 ಚಮಚ ಕಾಫಿಪುಡಿ, 2 ಚಮಚ ನೆಲ್ಲಿಕಾಯಿ ಪುಡಿ, 1/2 ಹೋಳು ನಿಂಬೆರಸ ಸೇರಿಸಿ ಸ್ವಲ್ಪ ಹೊತ್ತು ಬಿಸಿ ಮಾಡಿ ಪೇಸ್ಟ್‌ ರೀತಿ ಮಾಡಿಕೊಳ್ಳಿ.

ಈ ಪೇಸ್ಟನ್ನು ಸ್ಕಾಲ್ಪ್‌ ಸಹಿತ ಇಡೀ ಕೂದಲು ಮುಚ್ಚುವಂತೆ ಹಚ್ಚಿಕೊಳ್ಳಿ. 1 ಗಂಟೆ ಬಿಟ್ಟು ಕೂದಲನ್ನು ತೊಳೆಯಿರಿ. ಆದರೆ ಕೂದಲು ತೊಳೆಯುವಾಗ ಶ್ಯಾಂಪೂ, ಸೋಪು ಅಥವಾ ಬೇರಾವುದೇ ಕೆಮಿಕಲ್‌ ಬಳಸಬೇಡಿ. ಮರುದಿನ ನೀವು ಎಣ್ಣೆ ಹಚ್ಚಬಹುದು. ಆದರೆ ಕೂದಲು ತೊಳೆದ ದಿನ ಮಾತ್ರ ಏನೂ ಹಚ್ಚಬಾರದು. ಹೀಗೆ ವಾರಕ್ಕೆ ಒಂದು ಬಾರಿ ಮಾಡಿದರೆ 3 ತಿಂಗಳಲ್ಲೇ ನಿಮಗೆ ಫಲಿತಾಂಶ ಕಾಣಲಿದೆ. ಕೂದಲು ಕ್ರಮೇಣ ಕಂದು ಬಣ್ಣಕ್ಕೆ ತಿರುಗಿ ನಂತರ ಕಪ್ಪಾಗುತ್ತದೆ.

ಮನೆ ಮದ್ದು 2

ಒಂದು ಕಪ್‌ ಮೆಂತ್ಯೆಯನ್ನು ನೀರಿನಲ್ಲಿ ನೆನೆಸಿ ರಾತ್ರಿಯಿಡೀ ಬಿಡಿ. ಮರುದಿನ 2 ಕಪ್‌ ಕರಿಬೇವು ಸೇರಿಸಿ ಮೆಂತ್ಯವನ್ನು ಪೇಸ್ಟ್‌ ಮಾಡಿ, ಅದನ್ನು ತಲೆಗೆ ಹಚ್ಚಿ. 1 ಗಂಟೆ ನಂತರ ಕೂದಲು ತೊಳೆಯಿರಿ. ಶಾಂಪೂ ಹಾಗೂ ಸಾಬೂನು ಬಳಸಬೇಡಿ.

ಮನೆ ಮದ್ದು 3

4 ಸ್ಪೂನ್‌ ಕಲೋಂಜಿ ಬೀಜ, 4 ಸ್ಪೂನ್‌ ಮೆಂತ್ಯ ಕಾಳು ಎರಡನ್ನೂ ಪ್ರತ್ಯೇಕವಾಗಿ ಪುಡಿ ಮಾಡಿಕೊಳ್ಳಿ ( ನೀರು ಸೇರಿಸಬೇಡಿ). ಒಂದು ಗಾಜಿನ ಬಾಟಲಿಗೆ ಪುಡಿ ಮಾಡಿಕೊಂಡ ಕಲೋಂಜಿ, ಮೆಂತ್ಯ ಪುಡಿ ಸೇರಿಸಿ ಮಿಕ್ಸ್‌ ಮಾಡಿ. ಇದರೊಂದಿಗೆ 200 ಮಿಲಿ ಶುದ್ಧವಾದ ಕೊಬ್ಬರಿ ಎಣ್ಣೆ, 50 ಮಿಲಿ ಶುದ್ಧವಾದ ಹರಳೆಣ್ಣೆ ಸೇರಿಸಿ ಮಿಕ್ಸ್‌ ಮಾಡಿ. ಒಂದು ಪಾತ್ರೆಯಲ್ಲಿ ಬಿಸಿ ನೀರು ಸೇರಿಸಿ ಅದರಲ್ಲಿ ಎಣ್ಣೆ ಸೇರಿಸಿದ ಬಾಟಲಿ ಇಡಿ. ( ಡಬಲ್‌ ಬಾಯ್ಲ್‌) ನೀರು ತಣ್ಣಗಾದ ನಂತರ ಈ ಎಣ್ಣೆಯನ್ನು ಸುಮಾರು 7-8 ದಿನಗಳ ಕಾಲ ಸೂರ್ಯನ ಶಾಖ ತಗುಲುವ ಸ್ಥಳದಲ್ಲಿಡಿ. ನಂತರ, ನಿಮ್ಮ ಕೂದಲಿಗೆ ಎಷ್ಟು ಅಗತ್ಯವೋ ಅಷ್ಟು ಎಣ್ಣೆ ತೆಗೆದುಕೊಂಡು ಸ್ಕಾಲ್ಪ್‌ ಹಾಗೂ ಕೂದಲಿಗೆ ಹಚ್ಚಿ ಮಸಾಜ್‌ ಮಾಡಿ. ರಾತ್ರಿ ಎಣ್ಣೆ ಹಚ್ಚಿ ಬೆಳಗ್ಗೆ ಸೀಗೆಪುಡಿ, ಅಂಟುವಾಳ ಅಥವಾ ಹರ್ಬಲ್‌ ಶ್ಯಾಂಪೂನಿಂದ ಕೂದಲನ್ನು ತೊಳೆಯಿರಿ. ವಾರಕ್ಕೆ 2 ಅಥವಾ ಮೂರು ಬಾರಿ ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಫಲಿತಾಂಶ ದೊರೆಯುತ್ತದೆ.

ಇದರೊಂದಿಗೆ ಪೌಷ್ಠಿಕ ಆಹಾರ, ಹಣ್ಣು, ತರಕಾರಿ, ಪ್ರೋಟೀನ್‌ಯುಕ್ತ ಆಹಾರ ಸೇವಿಸಿ. ಕೆಮಿಕಲ್‌ ಇಲ್ಲದ ಎಣ್ಣೆ ಬಳಸುವುದು, ರಾಸಾಯನಿಕ ಶಾಂಪೂ ಬಿಟ್ಟು, ನೈಸರ್ಗಿಕವಾದ ಸೀಗೆಕಾಯಿ, ಅಂಟುವಾಳ ಕಾಯಿ ಅಥವಾ ಮನೆಯಲ್ಲೇ ತಯಾರಿಸಿದ ಶಾಂಪೂ, ಹೇರ್‌ ವಾಶ್‌ ಪೌಡರ್‌ ಬಳಸುವುದು ಸೂಕ್ತ. ಜೊತೆಗೆ ಅತಿಯಾದ ಒತ್ತಡವನ್ನು ಬದಿಗೆ ಇಡಿ. ಬಿಸಿಲಿಗೆ ಹೋಗುವಾಗ ಛತ್ರಿ ಬಳಸಿ, ಧೂಳಿನ ಸ್ಥಳಗಳಲ್ಲಿ ತಲೆಗೆ ಬಟ್ಟೆ ಕಟ್ಟಿಕೊಳ್ಳಿ. ವಾರಕ್ಕೆ ಕನಿಷ್ಠ 2 ಬಾರಿಯಾದರೂ ತಲೆಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡಿ.

ವಿಭಾಗ