vampire facial: ಏನಿದು ಪಿಆರ್‌ಪಿ ಅಥವಾ ವಾಂಪೈರ್‌ ಫೇಶಿಯಲ್‌? ಇದರ ಸಾಧಕ-ಬಾಧಕಗಳೇನು?
ಕನ್ನಡ ಸುದ್ದಿ  /  ಜೀವನಶೈಲಿ  /  Vampire Facial: ಏನಿದು ಪಿಆರ್‌ಪಿ ಅಥವಾ ವಾಂಪೈರ್‌ ಫೇಶಿಯಲ್‌? ಇದರ ಸಾಧಕ-ಬಾಧಕಗಳೇನು?

vampire facial: ಏನಿದು ಪಿಆರ್‌ಪಿ ಅಥವಾ ವಾಂಪೈರ್‌ ಫೇಶಿಯಲ್‌? ಇದರ ಸಾಧಕ-ಬಾಧಕಗಳೇನು?

vampire facial: ವಾಂಪೈರ್‌ ಅಥವಾ ಪಿಆರ್‌ಪಿ ಫೇಶಿಯಲ್‌ ಎಂದರೇನು? ಇದನ್ನು ಮಾಡಿಸಿಕೊಳ್ಳುವುದರಿಂದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ? ಇದರಿಂದ ಅಡ್ಡ ಪರಿಣಾಮಗಳಿವೆಯೇ? ಈ ಬಗ್ಗೆ ಸೌಂದರ್ಯ ತಜ್ಞರು ಏನಂತಾರೆ ನೋಡಿ.

ಫೇಶಿಯಲ್‌ ವಿಧಾನ
ಫೇಶಿಯಲ್‌ ವಿಧಾನ

ವಾಂಪೈರ್‌ ಫೇಶಿಯಲ್‌ ಅನ್ನು ಪಿಆರ್‌ಪಿ ಫೇಶಿಯಲ್‌ ಎಂದೂ ಕರೆಯುತ್ತಾರೆ. ಪಿಆರ್‌ಪಿ ಎಂದರೆ ಪ್ಲೇಟ್ಲೆಟ್ ರಿಚ್‌ ಪ್ಲಾಸ್ಲಾ ಎಂಬುದಾಗಿದ್ದು, ಇದು ಪ್ರಾಥಮಿಕ ಹಂತವಾಗಿದೆ. ಇದರಲ್ಲಿ ಮೊದಲಿಗೆ ದೇಹದಿಂದ ರಕ್ತವನ್ನು ಹೊರತೆಗೆದು ಪ್ಲಾಸ್ಮಾವನ್ನು ಪ್ರತ್ಯೇಕಿಸಿ ಸಂಸ್ಕರಿಸಲಾಗುತ್ತದೆ. ಇದು ಜೀವಕೋಶಗಳ ಬೆಳವಣಿಗೆ ಮತ್ತು ಪುನರುಜ್ಜೀವನವನ್ನು ಉತ್ತೇಜಿಸಲು ಪ್ಲಾಸ್ಮಾವನ್ನು ಪುನಃ ವ್ಯಕ್ತಿಯ ಚರ್ಮಕ್ಕೆ ಇಂಜೆಕ್ಷನ್‌ ಮೂಲಕ ಸೇರಿಸುವ ಸೌಂದರ್ಯವರ್ಧಕ ವಿಧಾನವಾಗಿದೆ.

ಪಿಆರ್‌ಪಿ ಮೂಲಕ ಸಾಮಾನ್ಯ ಸಾಂಧ್ರತೆಗಿಂತ 4 ರಿಂದ 5 ಪಟ್ಟು ಹೆಚ್ಚು ಪ್ಲೇಟ್ಲೆಟ್‌ಗಳ ಸಾಂಧ್ರತೆ ಹೊಂದಿರುವ ಪ್ಲಾಸ್ಮಾವನ್ನು ಚರ್ಮಕ್ಕೆ ಸೇರಿಸಲಾಗುತ್ತದೆ. ಇದು ಕೆಂಪುರಕ್ತಕಣಗಳಲ್ಲಿನ ಗುಣಮಟ್ಟವನ್ನು ಸುಧಾರಿಸುವ ಜೊತೆಗೆ ಕಳಪೆ ಪ್ಲಾಸ್ಮಾಗಳನ್ನು ಪ್ರತ್ಯೇಕಿಸುತ್ತದೆ. ಸೌಂದರ್ಯ ತಜ್ಞರ ಪ್ರಕಾರ ಪ್ಲೇಟ್ಲೆಟ್‌ಗಳಿಂದ ಸಮೃದ್ಧವಾಗಿರುವ ಪ್ಲಾಸ್ಮಾವನ್ನು ಬೇರ್ಪಡಿಸಿ, ಚರ್ಮದಲ್ಲಿ ಇಂಜೆಕ್ಟ್‌ ಮಾಡಿದಾಗ ಕೊಲಾಜನ್‌ ಉತ್ಪಾದನೆಯ ಪ್ರಮಾಣ ಹೆಚ್ಚುತ್ತದೆ. ಇದು ವಯಸ್ಸಾಗುವ ಲಕ್ಷಣಗಳನ್ನು ತಡೆ ಹಿಡಿಯುತ್ತದೆ. ವಯಸ್ಸಾದಂತೆ ಕಾಣುವ ನೆರಿಗೆ, ಸುಕ್ಕು ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಚರ್ಮ ಸದಾ ಕಾಂತಿಯಿಂದ ಕೂಡಿರುತ್ತದೆ. ಕೊಲಾಜನ್‌ ಪ್ರಮಾಣ ಹೆಚ್ಚಿದರೆ ಮೊಡವೆ ಕಲೆ, ಗಾಯಗಳಿಂದ ಉಂಟಾದ ಕಲೆಗಳನ್ನು ತೊಡೆದು ಹಾಕಿ ಚರ್ಮವು ಪುನರುಜ್ಜೀವನಗೊಳ್ಳುತ್ತದೆ.

ಗುರುಗ್ರಾಮದ ಸ್ಕ್ವೇರ್‌ ರೂಟ್ಸ್‌ ಕ್ಲಿನಿಕ್‌ನ ಸಂಸ್ಥಾಪಕಿ, ಡಾ. ಜೋರ್ತಿಮಯಿ ಭಾರ್ತಿ ಹಿಂದೂಸ್ತಾನ್‌ ಟೈಮ್ಸ್‌ ಲೈಫ್‌ಸ್ಟೈಲ್‌ ವಿಭಾಗಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ʼಪಿಆರ್‌ಪಿ ಚಿಕಿತ್ಸೆಯು ಕೊಲಾಜನ್‌ ಅನ್ನು ಉತ್ತೇಜಿಸಲು ಪ್ಲಾಸ್ಮಾದಲ್ಲಿ ಇರುವ ಬೆಳವಣಿಗೆಯ ಅಂಶಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ ಹಾಗೂ ಎಲಾಸ್ಟಿನ್‌ ಉತ್ಪಾದನೆಯು, ಚರ್ಮದ ವಿನ್ಯಾಸ ಹಾಗೂ ಕಾಂತಿಯನ್ನು ಸುಧಾರಿಸುತ್ತದೆ. ಈ ಕಾರ್ಯವಿಧಾನದ ಸಮಯದಲ್ಲಿ ವ್ಯಕ್ತಿಯ ದೇಹದಿಂದ ಸ್ವಲ್ಪ ಪ್ರಮಾಣದ ರಕ್ತವನ್ನು ತೆಗೆದುಕೊಳ್ಳಲಾಗುತ್ತದೆ. ಸೆಂಟ್ರಾಪ್ಯುಗೇಷನ್‌ ಎಂಬ ವಿಧಾನ ಮೂಲಕ ಪ್ಲಾಸ್ಮಾವನ್ನು ಉಳಿದ ರಕ್ತದ ಕಣಗಳಿಂದ ಬೇರ್ಪಡಿಸಲಾಗುತ್ತದೆ. ನಂತರ ಆ ಪ್ಲಾಸ್ಮಾವನ್ನು ಸೂಜಿ ಅಥವಾ ಇತರ ವಿಧಾನಗಳ ಮೂಲಕ ವ್ಯಕ್ತಿಯ ಚರ್ಮಕ್ಕೆ ಸೇರಿಸಲಾಗುತ್ತದೆʼ ಎಂದು ವಿವರಣೆ ನೀಡುತ್ತಾರೆ.

ನೋವು ರಹಿತ ಚಿಕಿತ್ಸೆ

ʼಪಿಆರ್‌ಪಿಗಾಗಿ ರಕ್ತವನ್ನು ತೆಗೆಯುವಾಗ ಮುಖ ಅಥವಾ ಚರ್ಮದ ಭಾಗಕ್ಕೆ ಮರಗಟ್ಟುವ ಕ್ರೀಮ್‌ ಅನ್ನು ಹಚ್ಚಿಕೊಳ್ಳಲಾಗುತ್ತದೆ. ರಕ್ತದಿಂದ ಪ್ಲಾಸ್ಮಾವನ್ನು ಬೇರ್ಪಡಿಸುವ ಹಂತವು 30 ರಿಂದ 45 ನಿಮಿಷ ತೆಗೆದುಕೊಳ್ಳುತ್ತದೆ. ನಂತರ ಮುಖವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಮೈಕ್ರೊನೀಡ್ಲಿಂಗ್‌ ವಿಧಾನದ ಮೂಲಕ ಪ್ಲಾಸ್ಮಾವನ್ನು ಸೇರಿಸಲಾಗುತ್ತದೆ. ಚರ್ಮ ಮರಗಟ್ಟಿರುವ ಕಾರಣ ಈ ಚಿಕಿತ್ಸೆ ನೋವಿನಿಂದ ಕೂಡಿರುವುದಿಲ್ಲ. ಚಿಕಿತ್ಸೆ ಸಂಪೂರ್ಣವಾದ ಬಳಿಕ ಚರ್ಮ ಸ್ವಲ್ಪ ಕೆಂಪಾಗಿರುತ್ತದೆ, ಆದರೆ 24 ಗಂಟೆಗಳ ನಂತರ ಸಹಜ ಸ್ಥಿತಿಗೆ ಮರಳುತ್ತದೆ. ಇದನ್ನು ಮಾಡಿಸಿಕೊಂಡ 24 ಗಂಟೆಗಳ ಬಳಿಕ ಮೇಕಪ್‌ ಮಾಡಲು ತೊಂದರೆಯಿಲ್ಲʼ ಎನ್ನುತ್ತಾರೆ ಚರ್ಮ ವೈದ್ಯೆ ಡಾ. ಅನುಪಮಾ ಬಿಸಾರಿಯಾ.

ಅಡ್ಡ ಪರಿಣಾಮಗಳಿಲ್ಲವೇ?

ʼಇದರಿಂದ ದೇಹಕ್ಕಾಗಲಿ, ಚರ್ಮಕ್ಕಾಗಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ. ಈ ಚಿಕಿತ್ಸೆ ಮಾಡಿಸಿಕೊಂಡ 4 ರಿಂದ 6 ವಾರಗಳ ನಂತರ ಫಲಿತಾಂಶ ನಿಮಗೆ ಗೋಚರವಾಗುತ್ತದೆ. ಉತ್ತಮ ಫಲಿತಾಂಶಕ್ಕಾಗಿ 2 ರಿಂದ 3 ತಿಂಗಳಿಗೊಮ್ಮೆ ಇದನ್ನು ಮಾಡಿಸುತ್ತಿರಬೇಕು. ಇದನ್ನು ಮಾಡಿಸಿಕೊಂಡ ನಂತರ ಸನ್‌ಸ್ಕ್ರೀನ್‌ ಬಳಕೆ ಕಡ್ಡಾಯ. ಚಿಕಿತ್ಸಕರು ಹೇಳಿದ ವಿಧಾನಗಳನ್ನು ಕಡ್ಡಾಯವಾಗಿ ಪಾಲಿಸುವುದು ಅವಶ್ಯವಾಗುತ್ತದೆʼ ಎನ್ನುತ್ತಾರೆ ಡಾ. ಅನುಪಮಾ

ಇದು ಸುರಕ್ಷಿತವೇ?

ಪಿಆರ್‌ಪಿ ಥೆರಪಿಯಲ್ಲಿ ವ್ಯಕ್ತಿಯ ರಕ್ತವನ್ನು ತೆಗೆದು ಅವರಿಗೆ ಪುನಃ ನೀಡುವುದರಿಂದ ಸಾಮಾನ್ಯವಾಗಿ ಈ ಥೆರಪಿ ಸುರಕ್ಷಿತ ಎಂದು ಹೇಳಲಾಗುತ್ತದೆ. ಅವರ ದೇಹದ ರಕ್ತವನ್ನೇ ಅವರಿಗೆ ನೀಡುವುದರಿಂದ ಅಲರ್ಜಿ ಪ್ರಕ್ರಿಯೆ ಸೋಂಕು ಉಂಟಾಗುವ ಸಂಭವ ಕಡಿಮೆ. ಅದಾಗ್ಯೂ, ಯಾವುದೇ ವೈದ್ಯಕೀಯ ವಿಧಾನವಿರಲಿ ಅದರಲ್ಲಿ ಸಂಭಾವ್ಯ ತೊಂದರೆಗಳಿರುತ್ತವೆ. ಆ ಕಾರಣಕ್ಕೆ ಇದನ್ನು ಮಾಡಿಸಿಕೊಳ್ಳಲು ಬಯಸುವವರು ಸೂಕ್ತ, ನುರಿತ ತಜ್ಞರನ್ನು ಭೇಟಿ ಮಾಡಿ, ಸಲಹೆ ಪಡೆದು ನಂತರ ಮುಂದುವರಿಯುವುದು ಉತ್ತಮ. 

Whats_app_banner