ಹಳೆಯ ಮನೆ ಕೊಳ್ಳುವುದು ಲಾಭದಾಯಕ ವ್ಯವಹಾರವೇ? ಬೆಲೆ, ಗುಣಮಟ್ಟ, ಬ್ಯಾಂಕ್ ಸಾಲ ಸೇರಿದಂತೆ ಈ ಅಂಶಗಳು ಗಮನದಲ್ಲಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹಳೆಯ ಮನೆ ಕೊಳ್ಳುವುದು ಲಾಭದಾಯಕ ವ್ಯವಹಾರವೇ? ಬೆಲೆ, ಗುಣಮಟ್ಟ, ಬ್ಯಾಂಕ್ ಸಾಲ ಸೇರಿದಂತೆ ಈ ಅಂಶಗಳು ಗಮನದಲ್ಲಿರಲಿ

ಹಳೆಯ ಮನೆ ಕೊಳ್ಳುವುದು ಲಾಭದಾಯಕ ವ್ಯವಹಾರವೇ? ಬೆಲೆ, ಗುಣಮಟ್ಟ, ಬ್ಯಾಂಕ್ ಸಾಲ ಸೇರಿದಂತೆ ಈ ಅಂಶಗಳು ಗಮನದಲ್ಲಿರಲಿ

ಸ್ವಂತದ ಮನೆಯೊಂದನ್ನು ಮಾಡಿಕೊಳ್ಳಬೇಕೆನ್ನುವ ಆಸೆ ಹೊಂದಿರುವವರು, ಹೊಸ ಮನೆಯನ್ನು ಕಟ್ಟಿಸಲು ಸಾಧ್ಯವಾಗದಿದ್ದಾಗ ಅಥವಾ ದುಬಾರಿ ಬೆಲೆಯ ಮನೆಯನ್ನು ಕೊಳ್ಳಲು ಹಣದ ಸಮಸ್ಯೆ ಎದುರಾದಾಗ, ಹಳೆಯ ಮನೆಯೊಂದನ್ನು ಕೊಳ್ಳುವುದು ಒಂದು ಲಾಭದಾಯಕ ಪರ್ಯಾಯ ವಿಧಾನಗಬಹುದೇ? ಈ ಲೇಖನದಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ. (ವರದಿ: ನಾಗೇಶ್, ದೊಡ್ಡಬಳ್ಳಾಪುರ)

ಹಳೆಯ ಮನೆ ಕೊಳ್ಳುವುದು ಲಾಭದಾಯಕ ವ್ಯವಹಾರವೇ? ಪರಿಗಣಿಸಬೇಕಾದ ಅಂಶಗಳಿವು
ಹಳೆಯ ಮನೆ ಕೊಳ್ಳುವುದು ಲಾಭದಾಯಕ ವ್ಯವಹಾರವೇ? ಪರಿಗಣಿಸಬೇಕಾದ ಅಂಶಗಳಿವು (Pexel)

ತಮಗಾಗಿ ಒಂದು ಸ್ವಂತದ ಗೂಡು ಮಾಡಿಕೊಳ್ಳಬೇಕು, ತಮ್ಮ ಪ್ರೀತಿಪಾತ್ರರ ತಲೆಗಳ ಮೇಲೆ ಒಂದು ಸೂರಿನ ರಕ್ಷಣೆ ಇರಬೇಕು ಎಂದು ಜನ ಕನಸು ಕಾಣುತ್ತಾರೆ. ಮಧ್ಯಮವರ್ಗದ ಕುಟುಂಬಗಳಿಗಂತೂ ಇದೊಂದು ಜೀವಮಾನದ ಕನಸಾಗಿರುತ್ತದೆ. ಇದಕ್ಕಾಗಿ ಅವರು ಹಗಲು-ರಾತ್ರಿ ಎನ್ನದೇ ಕಷ್ಟಪಟ್ಟು ದುಡಿಯುತ್ತಾರೆ. ವರ್ಷಗಟ್ಟಲೆ ಹೊಟ್ಟೆ-ಬಟ್ಟೆ ಕಟ್ಟಿ, ಕಾಸಿಗೆ ಕಾಸು ಕೂಡಿಸಿ, ತಮ್ಮ ನಿವೃತ್ತಿಯ ವೇಳೆಗಾದರೂ ತಮ್ಮ ಕನಸನ್ನು ನನಸು ಮಾಡಿಕೊಳ್ಳಲೇಬೇಕೆಂದು ಸತತವಾದ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ಮನೋಹರ್‌ರವರು ಕೂಡಾ ಇದೇ ಕನಸನ್ನು ಹೊಂದಿದ್ದರು. ಅವರು ವೃತ್ತಿಯಲ್ಲಿ ಪ್ರೌಢಶಾಲೆಯೊಂದರ ಶಿಕ್ಷಕರು. ಹೆಂಡತಿ ಮತ್ತು ಇಬ್ಬರು ಮಕ್ಕಳಿರುವ ಪುಟ್ಟ ಕುಟುಂಬ ಅವರದು. ದೊಡ್ಡ ಮಗ ಈ ವರ್ಷವಷ್ಟೇ ಅವರದೇ ಶಾಲೆಗೆ ಸೇರಿದ್ದಾನೆ. ಮಗಳು ಚಿಕ್ಕವಳು, ಈಗ 5ನೇ ತರಗತಿಯಲ್ಲಿದ್ದಾಳೆ. ಸ್ವಂತದ ಮನೆಯೊಂದನ್ನು ಹೊಂದುವ ಬಯಕೆ ಅವರದ್ದಾಗಿದೆ. ಅವರ ಬಳಿ ನಿವೇಶನ ಇರದ ಕಾರಣ ಹಾಗೂ ಮನೆಯೊಂದನ್ನು ಹೊಸದಾಗಿ ಕಟ್ಟಿಸುವಷ್ಟು ಹಣವನ್ನು ಹೊಂದಿಸುವುದೂ ಅವರಿಗೆ ಕಷ್ಟವಾಗಿರುವ ಕಾರಣದಿಂದ, ಅವರು ಮನೆಯೊಂದನ್ನು ಕೊಂಡುಕೊಳ್ಳುವ ಉದ್ದೇಶ ಹೊಂದಿದ್ದಾರೆ. ಇದಕ್ಕಾಗಿ, ಅವರು ಕಳೆದ 5-6 ವರ್ಷಗಳಿಂದಲೂ ಹಣ ಉಳಿಸುತ್ತಿದ್ದಾರೆ. ತಮ್ಮದೇ ಆದ ಕನಸಿನ ಮನೆಯೊಂದನ್ನು ಕೊಳ್ಳುವ ಏಕೈಕ ಉದ್ದೇಶದಿಂದ ಅವರು ಇಷ್ಟೆಲ್ಲಾ ಕಷ್ಟಪಟ್ಟು ಹಣ ಒಟ್ಟುಗೂಡಿಸುತ್ತಿದ್ದಾರೆ. ಈಗ ತಮ್ಮ ಬಳಿ ಡೌನ್‌ ಪೇಮೆಂಟ್‌ಗೆ ಸಾಕಾಗುವಷ್ಟು ಹಣ ಸೇರಿದೆ ಎನಿಸಿದ ನಂತರ ಅವರು ಒಟ್ಟಿಗೇ ಮನೆಯೊಂದರ ಹುಡುಕಾಟಕ್ಕೆ ಮತ್ತು ಬ್ಯಾಂಕ್ ಸಾಲದ ಪ್ರಯತ್ನಕ್ಕೆ ಇಳಿದಿದ್ದಾರೆ.

ಆದರೆ, ಮಾರಾಟಕ್ಕಿರುವ ಹೊಸ ಮನೆಗಳ ಬೆಲೆಗಳನ್ನು ಕೇಳಿದಾಗ ಅವರ ಉತ್ಸಾಹಕ್ಕೆ ತಣ್ಣೀರೆರೆಚಿದಂತಾಗಿದೆ. ಅದು ತಮಗೆ ಸಾಧ್ಯವಿಲ್ಲದ ವಿಷಯ ಎಂದು ಅವರಿಗೆ ಇತ್ತೀಚೆಗೆ ಅನಿಸತೊಡಗಿದೆ. ಇದನ್ನು ಅವರು ತಮ್ಮ ಸಹೋದ್ಯೋಗಿ ವಿಶ್ವನಾಥ್‌ರ ಬಳಿ ಹಂಚಿಕೊಂಡಾಗ, “ನೀವೇಕೆ ಮರು-ಮಾರಾಟಕ್ಕಿರುವ, ಬಹಳ ಹಳೆಯದಲ್ಲದ ಒಂದು ಮನೆಯನ್ನು ಕೊಳ್ಳಬಾರದು?” ಅನ್ನೋ ಸಲಹೆ ಅವರಿಂದ ಬಂದಿತು. ಇದನ್ನು ಕೇಳಿದ ಮನೋಹರ್‌, “ಹೌದಲ್ವಾ? ಇದೊಂದು ಯೋಚಿಸಬಹುದಾದ ಸಲಹೆಯೇ ಆಗಿದೆ, ಈ ಯೋಚನೆ ತಮಗೆ ಏಕೆ ಬರಲಿಲ್ಲ? ಅಂತ ಅಂದುಕೊಂಡರು.

ಆದರೆ, ಹಳೆಯ ಮನೆಯೊಂದನ್ನು ಕೊಳ್ಳುವ ಮೊದಲು ಅದರ ಸೂಕ್ತ ಪರೀಕ್ಷೆ ಮಾಡಿಸಿ, ಅದರ ಗಟ್ಟಿತನ ಹಾಗೂ ಆಯಸ್ಸುಗಳನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಅದನ್ನು ಖರೀದಿಸಬೇಕು ಎನ್ನುವ ಸಲಹೆಯನ್ನೂ ಸಹ ವಿಶ್ವನಾಥ್‌ ನೀಡಿದ್ದರು. ಇದು ಮನೋಹರ್‌ರಿಗೆ ಸ್ವಲ್ಪ ಮಟ್ಟಿನ ಸಮಾಧಾನ ತಂದಿತ್ತು.

ಮನೆಯ ವಯಸ್ಸೆಷ್ಟು ಅಥವಾ ಅದು ಎಷ್ಟು ಹಳೆಯದು?

ಮನೆಯ ವಯಸ್ಸು ಎಂದರೆ, ಅದನ್ನು ಕಟ್ಟಿ ಎಷ್ಟು ವರ್ಷಗಳಾಗಿವೆ? ಹಾಗೂ ಅದು ಇನ್ನೂ ಎಷ್ಟು ವರ್ಷಗಳವರೆಗೆ ಗಟ್ಟಿಮುಟ್ಟಾಗಿರಬಲ್ಲದು ಎಂಬುದರ ಲೆಕ್ಕಾಚಾರವೇ ಆಗಿದೆ. ಕಾಂಕ್ರೀಟ್‌ ಸಂರಚನೆಗಳ ಸರಾಸರಿ ಆಯಸ್ಸು ಸಾಮಾನ್ಯವಾಗಿ 75ರಿಂದ 100 ವರ್ಷಗಳಷ್ಟು ಎಂದು ಪರಿಗಣಿಸಲಾಗುತ್ತದೆ. ಇದು ಕಟ್ಟಡ ನಿರ್ಮಾಣಕ್ಕಾಗಿ ಬಳಕೆಯಾಗಿರುವ ವಸ್ತುಗಳ ಗುಣಮಟ್ಟ ಹಾಗೂ ನಿರ್ಮಾಣದ ಗುಣಮಟ್ಟಗಳನ್ನು ಅವಲಂಬಿಸಿರುತ್ತದೆ. ಹಾಗೆಯೇ, ಅಪಾರ್ಟ್‌ಮೆಂಟ್‌ಗಳ ಆಯಸ್ಸು ಸುಮಾರು 50-60 ವರ್ಷಗಳೆಂದು ಪರಿಗಣಿಸಲಾಗುತ್ತದೆ. ಆದರೆ, ಸುಭದ್ರವಾದ ಅಡಿಪಾಯದ ಮೇಲೆ ಉತ್ತಮವಾಗಿ ನಿರ್ಮಿಸಲಾಗಿರುವ ಬಂಗಲೆಗಳಂತಹ ಕಟ್ಟಡಗಳು ಸುದೀರ್ಘ ಬಾಳಿಕೆ ಬರುತ್ತವೆ. ಇಂತಹ ಕಟ್ಟಡಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಒಂದು ಕಟ್ಟಡದ ಉಳಿದ ಆಯುಷ್ಯ ಎಷ್ಟಿದೆ ಹಾಗೂ ಇನ್ನೂ ಎಷ್ಟು ಕಾಲ ಅದು ದೃಢವಾಗಿ ಸುಸ್ಥಿತಿಯಲ್ಲಿರುತ್ತೆ ಎಂಬುದನ್ನು ತಿಳಿಯಲು ಅನುಭವಿ ಸ್ಟ್ರಕ್ಚರಲ್ (structural engineer) ಇಂಜಿನಿಯರ್‌ ಒಬ್ಬರ ಸಲಹೆಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಬೆಲೆಗಳ ವಿಷಯಕ್ಕೆ ಬಂದರೆ ಯಾವುದು ಅಗ್ಗವಾದುದು? ಯಾವುದು ದುಬಾರಿಯಾದುದು?

ಅನುಭವಿ ರಿಯಲ್‌ ಎಸ್ಟೇಟ್‌ ಪರಿಣತರ ಪ್ರಕಾರ, ಹಳೆಯ ಕಟ್ಟಡಗಳು ಹೊಸ ಕಟ್ಟಡಗಳಿಗಿಂತ ಸ್ವಲ್ಪ ಅಗ್ಗವಾದ ಬೆಲೆಯಲ್ಲಿ ಸಿಗುತ್ತವೆ. ಕಟ್ಟಡ ನಿರ್ಮಾಣದಲ್ಲಿ ಬಳಸಿರುವ ವಸ್ತುಗಳು ಉತ್ತಮ ಗುಣಮಟ್ಟದವಾಗಿದ್ದರೆ ಹಾಗೂ ಕಟ್ಟಡ ನಿರ್ಮಾಣದ ಗುಣಮಟ್ಟವೂ ಉತ್ತಮವಾಗಿದ್ದರೆ, ಸಾಮಾನ್ಯವಾಗಿ, ಕನಿಷ್ಠ 40-50 ವರ್ಷಗಳವರಗೆ ಯಾವುದೇ ತೊಂದರೆ ಇರೋದಿಲ್ಲ. ಹೀಗಾಗಿ, ಉತ್ತಮ ಗುಣಮಟ್ಟದ ಹಳೆಯ ಮನೆಯೊಂದನ್ನು ಕೊಳ್ಳುವುದು ಒಂದು ಲಾಭದಾಯಕ ವ್ಯವಹಾರವೇ ಸರಿ ಎಂದು ಧಾರಾಳವಾಗಿ ಹೇಳಬಹುದು.

ಹಳೆಯ ಕಟ್ಟಡಗಳಿಗೆ ಸಾಲ ನೀಡುವ ಸಮಯದಲ್ಲಿ ಬ್ಯಾಂಕ್‌ಗಳು ಯಾವ ರೀತಿಯ ನೀತಿ-ನಿಯಮಗಳನ್ನು ಅನುಸರಿಸುತ್ತವೆ?

ಸಾಲ ನೀಡುವ ಸಮಯದಲ್ಲಿ, ಬ್ಯಾಂಕ್‌ಗಳು ಕಟ್ಟಡ ನಿರ್ಮಾಣವಾಗಿ ಎಷ್ಟು ವರ್ಷಗಳು ಕಳೆದಿವೆ, ಕಟ್ಟಡದ ನಿರ್ಮಾಣಕ್ಕೆ ಬಳಕೆಯಾಗಿರೋ ವಸ್ತುಗಳ ಗುಣಮಟ್ಟ, ಹಾಗೂ ಕಟ್ಟಡ ನಿರ್ಮಾಣದ ಗುಣಮಟ್ಟಗಳನ್ನು ಪರಿಗಣಿಸಿ ಸಾಲ ನೀಡುತ್ತವೆ. ಒಂದು ವೇಳೆ, ಸಾಲ ಪಡೆದವರು ಸಾಲ ತೀರಿಸಲು ವಿಫಲರಾದಲ್ಲಿ, ಅದನ್ನು ನಾವು ಸ್ವಾಧೀನಪಡಿಸಿಕೊಂಡು ಅದನ್ನು ವಿಲೇವಾರಿ ಮಾಡಿದಾಗ, ನಾವು ನೀಡಿರುವಷ್ಟು ಸಾಲದ ಮೊತ್ತ ನಮಗೆ ಮರುಸಂದಾಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನೂ ಸಹ ಬ್ಯಾಂಕ್‌ಗಳು ಪರಿಗಣಿಸುತ್ತವೆ.

ಹೀಗಾಗಿ, ಮನೆ ಹಳೆಯದೇ ಆದರೂ, ಅದರ ಗುಣಮಟ್ಟ ಹಾಗೂ ದೃಢತೆಗಳು ತೃಪ್ತಿಕರವಾಗಿದ್ದರೆ, ಅದನ್ನು ಕೊಳ್ಳುವುದು ಒಂದು ಲಾಭದಾಯಕವಾದ ವ್ಯವಹಾರವೇ ಆಗಿರುತ್ತದೆ.

ಗಮನಿಸಬೇಕಾದ ಪ್ರಮುಖ ಅಂಶಗಳು:

1. ಮನೆ ಎಷ್ಟು ಹಳೆಯದು ಎಂಬುದರ ಮೇಲೆ ಹಾಗೂ ಅದರ ನಿರ್ಮಾಣದ ಗುಣಮಟ್ಟದ ಮೇಲೆ ಅದರ ಆಯುಷ್ಯ ನಿರ್ಧಾರವಾಗುತ್ತದೆ.

2. ಕಾಂಕ್ರೀಟ್ ರಚನೆಯ ಸರಾಸರಿ ಆಯಸ್ಸು 75 ರಿಂದ 100 ವರ್ಷಗಳು.

3. ಅಪಾರ್ಟ್‌ಮೆಂಟ್‌ಗಳ ಸರಾಸರಿ ಆಯಸ್ಸು 50-60 ವರ್ಷಗಳು.

4. ಕಟ್ಟಡದ ಯೋಜನೆಯು ನಿರ್ಮಾಣದ ಪ್ರಾರಂಭದ ದಿನಾಂಕವನ್ನು ತೋರಿಸುತ್ತದೆ.

5. ಮನೆ ತುಂಬಾ ಹಳೆಯದಾಗಿದ್ದರೆ, ಬ್ಯಾಂಕ್‌ಗಳು ಸಾಲದ ಹಿಂದಿನ ಉದ್ದೇಶವನ್ನು ಪರಿಶೀಲಿಸುತ್ತವೆ.

6. ಸಾಲದ ರೂಪದಲ್ಲಿ ತಾನು ನೀಡೋ ಹಣ ತನಗೆ ಸುರಕ್ಷಿತವಾಗಿ ಮರಳಿ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಬ್ಯಾಂಕ್‌ಗಳು ಪರಿಶೀಲಿಸುತ್ತವೆ.

  • ವರದಿ: ನಾಗೇಶ್, ದೊಡ್ಡಬಳ್ಳಾಪುರ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.