ಹೃದಯಾಘಾತವಾದಾಗ ತುರ್ತು ಚಿಕಿತ್ಸೆ ಎಷ್ಟು ಮುಖ್ಯ; ನಿರ್ಲಕ್ಷ್ಯಕ್ಕೆ ಪ್ರಾಣ ಕಳೆದುಕೊಳ್ಳಬೇಡಿ: ಹೃದ್ರೋಗ ತಜ್ಞರ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  ಹೃದಯಾಘಾತವಾದಾಗ ತುರ್ತು ಚಿಕಿತ್ಸೆ ಎಷ್ಟು ಮುಖ್ಯ; ನಿರ್ಲಕ್ಷ್ಯಕ್ಕೆ ಪ್ರಾಣ ಕಳೆದುಕೊಳ್ಳಬೇಡಿ: ಹೃದ್ರೋಗ ತಜ್ಞರ ಸಲಹೆ

ಹೃದಯಾಘಾತವಾದಾಗ ತುರ್ತು ಚಿಕಿತ್ಸೆ ಎಷ್ಟು ಮುಖ್ಯ; ನಿರ್ಲಕ್ಷ್ಯಕ್ಕೆ ಪ್ರಾಣ ಕಳೆದುಕೊಳ್ಳಬೇಡಿ: ಹೃದ್ರೋಗ ತಜ್ಞರ ಸಲಹೆ

ಹೃದಯಾಘಾತ ಪ್ರಕರಣಗಳು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿದ್ದು, ಯುವಜನತೆ ವಿಶೇಷವಾಗಿ ಅಧಿಕ ಸಂಖ್ಯೆಯಲ್ಲಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ವ್ಯಕ್ತಿಯ ಪ್ರಾಣ ಉಳಿಸಲು ಕೆಲವೊಮ್ಮೆ ಆಯ್ಕೆ ಇರುತ್ತದೆ. ಅಂತಹ ಸಾಧ್ಯತೆ ಬಗ್ಗೆ ವೈದ್ಯರು ವಿವರಿಸಿದ್ದಾರೆ.

ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ವ್ಯಕ್ತಿಯ ಪ್ರಾಣ ಉಳಿಸಲು ಕೆಲವೊಮ್ಮೆ ಆಯ್ಕೆ ಇರುತ್ತದೆ
ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ವ್ಯಕ್ತಿಯ ಪ್ರಾಣ ಉಳಿಸಲು ಕೆಲವೊಮ್ಮೆ ಆಯ್ಕೆ ಇರುತ್ತದೆ (Pixabay)

ಹೃದಯ ಸ್ತಂಭನ ಅಥವಾ ಹೃದಯಾಘಾತವು ಒಂದು ಹಠಾತ್ ಮತ್ತು ಮಾರಣಾಂತಿಕ ಸ್ಥಿತಿಯಾಗಿದ್ದು, ಇದರಲ್ಲಿ ಹೃದಯವು ಅನಿರೀಕ್ಷಿತವಾಗಿ ಬಡಿತವನ್ನು ನಿಲ್ಲಿಸುತ್ತದೆ. ಇದು ಮೆದುಳು ಮತ್ತು ಶ್ವಾಸಕೋಶಗಳು ಸೇರಿದಂತೆ ಪ್ರಮುಖ ಅಂಗಗಳಿಗೆ ರಕ್ತದ ಹರಿವನ್ನು ತಕ್ಷಣ ನಿಲ್ಲಿಸಲು ಕಾರಣವಾಗುತ್ತದೆ. ತ್ವರಿತ ಚಿಕಿತ್ಸೆ ಸಿಗದಿದ್ದರೆ, ಹೃದಯ ಸ್ತಂಭನವು ಕೆಲವೇ ನಿಮಿಷಗಳಲ್ಲಿ ವ್ಯಕ್ತಿಯ ಸಾವಿಗೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಯುವಜನತೆಯೇ ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾಗಿರೋದು ಆತಂಕಕಾರಿ ವಿಷಯವೇ. ಶಾಲೆಯಲ್ಲಿ, ಡ್ರೈವಿಂಗ್ ಸಮಯದಲ್ಲಿ, ಜಿಮ್‌‌‌‌ನಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇದೆ. ಈ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಪ್ರಾಣವನ್ನು ಕಳೆದುಕೊಂಡವರೇ ಅಧಿಕ. ಇದಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಹೃದ್ರೋಗ ತಜ್ಞ ಡಾ.ಮುಖರ್ಜಿ ಮಡಿವಾಳ ಅವರು ಒಂದು ಆಸಕ್ತಿಕಾರಿ ಮಾಹಿತಿಯನ್ನು ನೀಡಿದ್ದಾರೆ. ಇಂತಹ ಸಮಯದಲ್ಲಿ ಸಮಯೋಚಿತ ವೈದ್ಯಕೀಯ ಚಿಕಿತ್ಸೆ ಎಷ್ಟು ಮುಖ್ಯ ಮತ್ತು ಮಾಹಿತಿಯಿಲ್ಲದ ಸಲಹೆಗಳು ಯಾಕೆ ಅಪಾಯಕಾರಿ ಎನ್ನುವುದನ್ನು ಅವರು ವಿವರಿಸಿದ್ದಾರೆ.

ಇತ್ತೀಚಿಗೆ ಜಿಮ್‌‌‌‌ನಲ್ಲಿ ವ್ಯಾಯಾಮ ಮಾಡುವಾಗ ಯುವಕನೊಬ್ಬ ಇದ್ದಕ್ಕಿದ್ದಂತೆ ಅತಿಯಾದ ಬೆವರುವಿಕೆಯನ್ನು ಅನುಭವಿಸಿದನು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯಾಗಿರಬಹುದು ಎಂದು ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದನು. ಸ್ವಲ್ಪ ಸಮಯದ ಬಳಿಕ ಅಸ್ವಸ್ಥನಾಗಿ ಕುಸಿದಾಗ ಆತನನ್ನು ಜೊತೆಯಲ್ಲಿದ್ದವರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ವೈದ್ಯರು ಅವರಿಗೆ ಪ್ರಮುಖ ಅಪಧಮನಿಯ ಸಂಪೂರ್ಣ ತಡೆಯಿಂದ ಉಂಟಾದ ಭಾರಿ ಹೃದಯಾಘಾತವನ್ನು ಪತ್ತೆಹಚ್ಚಿದರು. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಆ ಯುವಕ ಪ್ರಾಣವನ್ನು ಕಳೆದುಕೊಂಡನು. ನೋವು ಬಂದಾಗಲೇ ಅಥವಾ ರೋಗಲಕ್ಷಣಗಳು ಕಂಡುಬಂದಾಗಲೇ ಈ ಬಗ್ಗೆ ಎಚ್ಛೆತ್ತು ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದರೆ ಆತನ ಪ್ರಾಣವನ್ನು ಉಳಿಸಬಹುದಿತ್ತು ಎನ್ನುವುದು ವೈದ್ಯರ ಅಭಿಪ್ರಾಯ.

ಮತ್ತೊಂದು ಘಟನೆಯಲ್ಲಿ ಅಗತ್ಯ ತುರ್ತು ಚಿಕಿತ್ಸೆಯೊಂದಿಗೆ ಮುಂದುವರಿಯುವ ಮೊದಲು, ಆ ಯುವಕ ತನ್ನ ಕುಟುಂಬ ವೈದ್ಯರಿಂದ ಸಲಹೆಯನ್ನು ಪಡೆದಿದ್ದರು. ಪರಿಸ್ಥಿತಿಯ ತೀವ್ರತೆಯನ್ನು ನೇರವಾಗಿ ನಿರ್ಣಯಿಸದೆ ಅಥವಾ ಚಿಕಿತ್ಸೆ ನೀಡುವ ಹೃದ್ರೋಗ ತಜ್ಞರನ್ನು ಸಂಪರ್ಕಿಸದೆ, ಕುಟುಂಬ ವೈದ್ಯರು ಅವರನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಲು ಶಿಫಾರಸು ಮಾಡಿದರು. ಇದರಿಂದ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಮತ್ತೊಂದು ಪ್ರಕರಣದಲ್ಲಿ, ರೋಗಿಗೆ ಹಠಾತ್ ಹೃದಯ ಸ್ತಂಭನವಾಯಿತು. ಅದೃಷ್ಟವಶಾತ್, ಪ್ರಥಮ ಚಿಕಿತ್ಸೆ ನೀಡಿ ಸಮಯಕ್ಕೆ ಸರಿಯಾಗಿ ವೈದ್ಯರ ಬಳಿ ಕರೆದೊಯ್ಯಲಾಯಿತು. ತುರ್ತು ಚಿಕಿತ್ಸೆಗಾಗಿ ಕ್ಯಾಥ್ ಲ್ಯಾಬ್‌‌‌‌ಗೆ ಕರೆದೊಯ್ಯಲಾಯಿತು. ವೈದ್ಯರು ಯಶಸ್ವಿಯಾಗಿ ಅಪಧಮನಿಯನ್ನು ತೆರೆದರು ಮತ್ತು ಸ್ಟೆಂಟ್ ಅನ್ನು ಸೇರಿಸಿದರು, ರಕ್ತದ ಹರಿವನ್ನು ಪುನಃಸ್ಥಾಪಿಸಿದರು.

ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಕೆಲವೊಂದು ಆಸ್ಪತ್ರೆಗಳಲ್ಲಿ ಬೇಕಾದ ಸೌಲಭ್ಯ ಸಿಗದೇ ಇರಬಹುದು. ಆದರೆ ಸೂಕ್ತ ಸಮಯಕ್ಕೆ ವೈದ್ಯರು ಅವರನ್ನು ಒಳ್ಳೆ ಸೌಕರ್ಯಗಳಿರುವ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸುವ ಮೂಲಕ ಎಷ್ಟೋ ಪ್ರಾಣಗಳನ್ನು ಕಾಪಾಡುವಲ್ಲಿ ವೈದ್ಯರೂ ಪ್ರಮುಖ ಪಾತ್ರ ವಹಿಸುತ್ತಾರೆ.

ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಅರಿವಿನ ಕೊರತೆಗಳು ಸಾಕಷ್ಟು ಪ್ರಾಣಹಾನಿಗಳಿಗೆ ಕಾರಣವಾಗುತ್ತಿವೆ. ಎಷ್ಟೋ ಕಡೆ ಹೃದಯಕ್ಕೆ ಸಂಬಂಧಿಸಿದ ನೋವನ್ನು ಗ್ಯಾಸ್ಟ್ರಿಕ್‌‌‌‌ನೊಂದಿಗೆ ಹೋಲಿಸಿಕೊಂಡು, ಮನೆ ಮದ್ದುಗಳನ್ನು ಮಾಡಿಕೊಂಡು ಕೊನೆಗೆ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರೂ ಏನೂ ಮಾಡಲಾಗದ ಸ್ಥಿತಿ ತಲೆದೋರುತ್ತೆ. ಹಾಗಾಗಿ ಹೃದಯಾಘಾತದ ಬಗ್ಗೆ ನಿರ್ಲ್ಯಕ್ಷ ಖಂಡಿತಾ ಬೇಡ. ಪ್ರಥಮ ಚಿಕಿತ್ಸೆ ಮತ್ತು ತುರ್ತು ಔಷಧಿಯ ಬಗ್ಗೆ ನಿಮ್ಮ ಕುಟುಂಬದ ವೈದ್ಯರೊಂದಿಗೆ ಚರ್ಚಿಸಿ ಅರಿತುಕೊಳ್ಳಿ. ಈ ಮೂಲಕ ಹೃದಯಾಘಾತವಾದಾಗ ಧೈರ್ಯಗೆಡದೆ ಸೂಕ್ತ ಚಿಕಿತ್ಸೆ ಪಡೆಯಿರಿ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner