ವಾಟ್ಸ್‌ಆ್ಯಪ್‌ನಲ್ಲಿ ಬರಲಿದೆ ಮೆಸೇಜ್ ಟ್ರಾನ್ಸ್‌ಲೇಶನ್ ಫೀಚರ್; ಶೀಘ್ರದಲ್ಲೇ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಂದೇಶ ಅನುವಾದ ಆಯ್ಕೆ
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್, ಶೀಘ್ರದಲ್ಲೇ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ಪರಿಚಯಿಸಲಿದೆ. ಅದರ ಮೂಲಕ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಂದೇಶವನ್ನು ಭಾಷಾಂತರಿಸಬಹುದಾಗಿದೆ. ಪ್ರಸ್ತುತ ಈ ಆಯ್ಕೆ ಬೀಟಾ ಟೆಸ್ಟಿಂಗ್‌ನಲ್ಲಿದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ವಾಟ್ಸ್‌ಆ್ಯಪ್ ಶೀಘ್ರದಲ್ಲೇ ಹೊಸ ಫೀಚರ್ ಒಂದನ್ನು ಒದಗಿಸುತ್ತಿದೆ. ಅದರ ಮೂಲಕ ನಿಮ್ಮ ವಾಟ್ಸ್‌ಆ್ಯಪ್‌ನಲ್ಲಿ ಬರುವ ಮೆಸೇಜ್‌ಗಳನ್ನು ನೀವು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾಷಾಂತರಿಸಬಹುದಾಗಿದೆ. ಪ್ರಸ್ತುತ ಈ ಆಯ್ಕೆ ಬೀಟಾ ಟೆಸ್ಟಿಂಗ್‌ನಲ್ಲಿದೆ ಎಂದು ವಾಬೀಟಾ ಇನ್ಫೋ ವರದಿ ಮಾಡಿದೆ. ಈ ಆಯ್ಕೆ ಬಳಕೆದಾರರ ಫೋನ್ ಮೂಲಕವೇ ದೊರೆಯಲಿದೆ, ಅದಕ್ಕಾಗಿ ಅವರು ಲಭ್ಯವಿರುವ ಭಾಷೆಯ ಪ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ.
ವಾಟ್ಸ್‌ಆ್ಯಪ್ ಬಳಕೆದಾರರಿಗೆ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಆಯ್ಕೆ ನೀಡುತ್ತದೆ. ಅದರ ಮೂಲಕ ಸಂದೇಶಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳಲಿದೆ. ಆದರೆ ಮೆಸೇಜ್ ಭಾಷಾಂತರಕ್ಕೆ ಅದು ಮೆಟಾ ಸರ್ವರ್ ಬಳಕೆ ಮಾಡುವುದಿಲ್ಲ, ಬದಲಾಗಿ ಬಳಕೆದಾರರೇ ಭಾಷಾ ಪ್ಯಾಕ್ ಡೌನ್‌ಲೋಡ್ ಮಾಡಿಕೊಂಡು, ಫೋನ್‌ನಲ್ಲಿ ಆಫ್‌ಲೈನ್‌ನಲ್ಲಿಯೇ ಮೆಸೇಜ್ ಟ್ರಾನ್ಸ್‌ಲೇಶನ್ ಫೀಚರ್ ಬಳಸಬಹುದು ಎಂದು ಕಂಪನಿ ಹೇಳಿದೆ.
ಪ್ರಸ್ತುತ ಈ ಆಯ್ಕೆ ಬೀಟಾ ಟೆಸ್ಟಿಂಗ್ ಹಂತದಲ್ಲಿದೆ. ಇದನ್ನು ಕಳೆದ ವರ್ಷದ ಜುಲೈನಿಂದ ವಾಟ್ಸ್‌ಆ್ಯಪ್ ಪರಿಶೀಲಿಸಿ, ಅಭಿವೃದ್ಧಿಪಡಿಸುತ್ತಿದೆ. ಈ ಹೊಸ ಫೀಚರ್, ವಾಟ್ಸ್‌ಆ್ಯಪ್ ಚಾಟ್ ಮತ್ತು ಚಾನೆಲ್ ಮೂಲಕ ಕೆಲಸ ಮಾಡಲಿದೆ. ಹೊಸ ಟ್ರಾನ್ಸ್‌ಲೇಟ್ ಮೆಸೇಜ್ ಫೀಚರ್, ಸೆಟ್ಟಿಂಗ್ಸ್‌ನಲ್ಲಿ ಚಾಟ್ ಲಾಕ್ ಆಯ್ಕೆಯ ಕೆಳಗಡೆ ಕಾಣಿಸಿಕೊಳ್ಳಲಿದೆ. ಇದರ ಅಗತ್ಯವಿರುವ ಬಳಕೆದಾರರು ಅದನ್ನು ಆನ್ ಮಾಡಿಕೊಳ್ಳಬೇಕು, ಅದರ ಹೊರತಾಗಿ ಡಿಫಾಲ್ಟ್ ಸೆಟ್ಟಿಂಗ್ಸ್‌ನಲ್ಲಿ ಅದು ಆಫ್ ಆಗಿರುತ್ತದೆ. ಅದನ್ನು ಆನ್ ಮಾಡಿಕೊಳ್ಳುವ ಜತೆಗೆ, ಲಭ್ಯವಿರುವ ಭಾಷೆಯ ಪ್ಯಾಕ್ ಅನ್ನು ಕೂಡ ಬಳಕೆದಾರರು ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ.
ವಾಟ್ಸ್‌ಆ್ಯಪ್ ಮೆಸೇಜ್ ಭಾಷಾಂತರದ ಪ್ರಯೋಜನವೇನು?
ಈಗ ವಾಟ್ಸ್‌ಆ್ಯಪ್ ಭಾಷೆಗಳ ಪ್ಯಾಕ್‌ನಲ್ಲಿ ಹಿಂದಿ, ಸ್ಪಾನಿಶ್, ಅರೇಬಿಕ್, ಪೋರ್ಚುಗೀಸ್ ಮತ್ತು ರಷ್ಯನ್ ಭಾಷೆ ಮಾತ್ರ ಲಭ್ಯವಿದೆ. ಮುಂದಿನ ಹಂತದಲ್ಲಿ ಕನ್ನಡ ಸಹಿತ ದೇಶದ ಇತರ ಪ್ರಾದೇಶಿಕ ಭಾಷೆಗಳು ದೊರೆಯುವ ಸಾಧ್ಯತೆಯಿದೆ. ಈ ಫೀಚರ್ ಬಳಸಿಕೊಂಡು, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಮೆಸೇಜ್ ಅನುವಾದಿಸಿಕೊಳ್ಳಬಹುದು.
ಬಳಕೆದಾರರು ಈ ಫೀಚರ್ ಆನ್ ಮಾಡಿದ ಬಳಿಕ, ಬೇಕಾದ ಮೆಸೇಜ್ ಮೇಲೆ ಕ್ಲಿಕ್ ಮಾಡಿ, ಟ್ರಾನ್ಸ್‌ಲೇಟ್ ಎಂದು ಕೊಟ್ಟರೆ, ಅದು ನಾವು ಬಯಸಿದ ಭಾಷೆಗೆ ಅನುವಾದವಾಗಲಿದೆ. ಈಗಾಗಲೇ ವಾಟ್ಸ್‌ಆ್ಯಪ್, ವಾಯ್ಸ್‌ನೋಟ್‌ಗಳನ್ನು ಕೂಡ ಸಂದೇಶದ ರೂಪದಲ್ಲಿ ಬದಲಾಯಿಸುವ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಿದೆ. ಹೊಸ ಫೀಚರ್, ಪರೀಕ್ಷಾರ್ಥ ಹಂತಗಳನ್ನು ಮುಗಿಸಿದ ಬಳಿಕ ನೂತನ ಅಪ್‌ಡೇಟ್ ಮೂಲಕ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ.