ಸ್ಟೈಲಿಶ್, ಫ್ಯಾಷನ್ ಮದುಮಗಳಾಗಿ ಮಿಂಚಬೇಕಾ: ಚಳಿಗಾಲದಲ್ಲಿ ಹೀಗಿರಲಿ ವಧು ಧರಿಸುವ ಉಡುಪು
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ಟೈಲಿಶ್, ಫ್ಯಾಷನ್ ಮದುಮಗಳಾಗಿ ಮಿಂಚಬೇಕಾ: ಚಳಿಗಾಲದಲ್ಲಿ ಹೀಗಿರಲಿ ವಧು ಧರಿಸುವ ಉಡುಪು

ಸ್ಟೈಲಿಶ್, ಫ್ಯಾಷನ್ ಮದುಮಗಳಾಗಿ ಮಿಂಚಬೇಕಾ: ಚಳಿಗಾಲದಲ್ಲಿ ಹೀಗಿರಲಿ ವಧು ಧರಿಸುವ ಉಡುಪು

ಹಬ್ಬದ ಋತುವು ಇನ್ನೂ ಮುಗಿದಿಲ್ಲ. ಇದರ ಜತೆಗೆ ಮದುವೆಯ ಋತು ಆರಂಭವಾಗಿದೆ. ನಿಮ್ಮ ಮನೆಯಲ್ಲಿಯೂ ಮದುವೆಯ ಸಿದ್ಧತೆಗಳು ನಡೆಯುತ್ತಿದ್ದರೆ, ಅದಕ್ಕೆ ಸಂಬಂಧಿಸಿದಂತೆ ಫ್ಯಾಷನ್ ಪ್ರವೃತ್ತಿಗಳತ್ತ ಕಣ್ಣಿಡುವುದು ಬಹಳ ಮುಖ್ಯ. ಈ ವರ್ಷ ಯಾವ ಟ್ರೆಂಡ್‌ಗಳು ಜನಪ್ರಿಯವಾಗಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸ್ಟೈಲಿಶ್, ಫ್ಯಾಷನ್ ಮದುಮಗಳಾಗಿ ಮಿಂಚಬೇಕಾ: ಚಳಿಗಾಲದಲ್ಲಿ ಹೀಗಿರಲಿ ವಧು ಧರಿಸುವ ಉಡುಪು
ಸ್ಟೈಲಿಶ್, ಫ್ಯಾಷನ್ ಮದುಮಗಳಾಗಿ ಮಿಂಚಬೇಕಾ: ಚಳಿಗಾಲದಲ್ಲಿ ಹೀಗಿರಲಿ ವಧು ಧರಿಸುವ ಉಡುಪು (PC: Canva)

ಇದೀಗ ಮದುವೆ ಸೀಸನ್ ಶುರುವಾಗಿದ್ದು, ಶಾಪಿಂಗ್ ಇನ್ನೂ ಪೂರ್ಣಗೊಳ್ಳದೆ ಇರಬಹುದು. ಹಬ್ಬಗಳು ಮುಗಿದ ಕೂಡಲೇ, ಈ ತಿಂಗಳಿನಲ್ಲಿ ಮದುವೆಗೆ ಅನೇಕ ಶುಭ ಸಮಯಗಳಿವೆ. ಹೀಗಾಗಿ ಮದುವೆಯ ಶಾಪಿಂಗ್ ಸಹ ಭರದಿಂದ ಸಾಗುವುದು ಸಹಜ. ಮದುವೆ ರಿಸೆಪ್ಶನ್‌ನಲ್ಲಿ ವಧುವಿನ ಉಡುಗೆ ಎಂದರೆ ಲೆಹೆಂಗಾ ಮಾತ್ರ ಎಂಬ ಕಲ್ಪನೆಯಿತ್ತು. ಆದರೆ, ಈಗ ಹಾಗಿಲ್ಲ. ವಿಶೇಷವಾಗಿ ದಕ್ಷಿಣ ಭಾರತೀಯ ಮದುವೆಯಲ್ಲಿ ಸೀರೆ ಉಡುವುದು ಸಾಮಾನ್ಯ. ಆದರೆ, ಮದುವೆ ರಿಸೆಪ್ಶನ್ ಅಂದರೆ ಗೌನ್ ಅಥವಾ ಲೆಹಂಗಾ ಧರಿಸುತ್ತಾರೆ. ಆದರೀಗ, ವಧುವಿನ ಉಡುಪನ್ನು ಹವಾಮಾನಕ್ಕೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ಇದರಿಂದ ವಧು ಶೀತ ಅಥವಾ ಶೆಖೆಯಿಂದ ಪ್ರಭಾವಿತರಾಗದೆ ತಮ್ಮ ವಿಶೇಷ ದಿನವನ್ನು ಆನಂದಿಸಬಹುದು. ಈಗ ಈ ಋತುವಿನಲ್ಲಿ ಸ್ವಲ್ಪ ಚಳಿ ಗಾಳಿ ಬೀಸುತ್ತಿದೆ. ಹೀಗಾಗಿ ಕಾಳಜಿ ವಹಿಸುವುದು ಸಹ ಅಗತ್ಯವಾಗಿರುತ್ತದೆ. ಹೀಗಾಗಿ ಚಳಿಗಾಲದಲ್ಲಿಯೂ ಸ್ಟೈಲಿಶ್ ಮತ್ತು ಫ್ಯಾಶನ್ ವಧುವಾಗಿ ಕಾಣಬಹುದು.

ಸಲ್ವಾರ್ ಸೂಟ್‍ನಲ್ಲಿ ವಧು ಸುಂದರವಾಗಿ ಕಾಣುತ್ತಾರೆ

ಮದುವೆ ರಿಸೆಪ್ಶನ್‌ನಲ್ಲಿ ವಧು ಲೆಹೆಂಗಾ ಅಥವಾ ಸೀರೆಯನ್ನು ಮಾತ್ರ ಧರಿಸಬೇಕು ಎಂದಿಲ್ಲ. ಏಕೆಂದರೆ ವಿಭಿನ್ನ ಪದ್ಧತಿಗಳಲ್ಲಿ ವಿಭಿನ್ನ ಉಡುಪುಗಳನ್ನು ಧರಿಸುವ ಪ್ರವೃತ್ತಿ ಈಗ ಇದೆ. ವಧುಗಳು ಸಲ್ವಾರ್-ಸೂಟ್‌ಗಳನ್ನು ಸಹ ಧರಿಸಬಹುದು. ಅದು ಲೆಹೆಂಗಾದಂತೆ ಸುಂದರವಾಗಿ ಕಾಣುತ್ತದೆ. ಕಠಿಣ ಚಳಿಗಾಲದಲ್ಲಿ ಸೂಟ್‌ಗಿಂತ ಹೆಚ್ಚು ಆರಾಮದಾಯಕ ಮತ್ತು ಐಷಾರಾಮಿ ಉಡುಪು ಯಾವುದು ಇದೆ ಹೇಳಿ? ಇತ್ತೀಚಿನ ದಿನಗಳಲ್ಲಿ, ವೆಲ್ವೆಟ್‌ ಬಟ್ಟೆಯಲ್ಲಿ ಜರ್ದೋಜಿ ಡಿಸೈನ್‍ಗಳ ಸೂಟ್‍ಗಳು ತುಂಬಾ ಟ್ರೆಂಡಿಯಾಗಿವೆ. ಇದಲ್ಲದೆ, ಶಿಮ್ಮರ್ ಫ್ಯಾಬ್ರಿಕ್‌ನಲ್ಲಿ ಸ್ಯಾಟಿನ್ ಲೈನಿಂಗ್ ಹೊಂದಿರುವ ಸೂಟ್‌ಗಳು ಸಹ ಇದೀಗ ಸಖತ್ ಟ್ರೆಂಡಿಯಾಗಿದೆ. ಎಂಬ್ರಾಯಿಡರ್ ಸ್ಕಾರ್ಫ್ ಅಂತಹ ಸೂಟ್‌ಗೆ ಸಾಕಷ್ಟು ಸರಿಹೊಂದುತ್ತದೆ. ನಿಮ್ಮ ವಧುವಿನ ಉಡುಪನ್ನು ಹೆಚ್ಚು ಸ್ಟೈಲಿಶ್ ಮತ್ತು ಆಕರ್ಷಕವಾಗಿಸಲು ನೀವು ಉದ್ದನೆಯ ಜಾಕೆಟ್ ಅನ್ನು ಸಹ ಧರಿಸಬಹುದು.

ರೇಷ್ಮೆ, ವೆಲ್ವೆಟ್ ಲೆಹೆಂಗಾ ಆಯ್ಕೆ ಮಾಡಬಹುದು

ಮದುವೆ ರಿಸೆಪ್ಶನ್‌ನಲ್ಲಿ ವಧುವಿನ ಲೆಹೆಂಗಾ ಅತ್ಯಂತ ಸುಂದರವಾಗಿ ಕಾಣುತ್ತದೆ. ಆದರೆ, ಚಳಿಗಾಲದ ಸಮಯದಲ್ಲಿ ಮದುವೆಯಿದ್ದರೆ ಲೆಹೆಂಗಾ ಧರಿಸುವುದು ಕಿರಿ ಕಿರಿ ಎಂದೆನಿಸಬಹುದು. ಲೆಹೆಂಗಾದೊಂದಿಗೆ ಶಾಲು ಅಥವಾ ಸ್ವೆಟರ್ ಧರಿಸುವುದು ವಿಚಿತ್ರವಾಗಿ ಕಾಣುವುದಲ್ಲದೆ ಇಡೀ ನೋಟವನ್ನೇ ಹಾಳುಮಾಡುತ್ತದೆ. ಸರಿಯಾದ ಬಟ್ಟೆಯನ್ನು ಆಯ್ಕೆ ಮಾಡುವ ಮೂಲಕ ವಧುವಾಗಿ ಸುಂದರವಾಗಿ ಕಾಣಬಹುದು. ಬೇಸಿಗೆಯಲ್ಲಿ ನೆಟ್ ಮತ್ತು ಶಿಫಾನ್ ಲೆಹೆಂಗಾಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಆದರೆ, ಚಳಿಗಾಲದಲ್ಲಿ ಲೆಹಂಗಾಕ್ಕಾಗಿ, ನೀವು ರೇಷ್ಮೆ, ತುಸ್ಸಾರ್ ರೇಷ್ಮೆ, ಸ್ಯಾಟಿನ್ ಅಥವಾ ವೆಲ್ವೆಟ್ ಬಟ್ಟೆಯನ್ನು ಆಯ್ಕೆ ಮಾಡಬಹುದು. ಈ ಬಟ್ಟೆಗಳು ಭಾರವಾಗಿರುತ್ತವೆ ಮತ್ತು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುತ್ತವೆ. ಅಂತಹ ಬಟ್ಟೆಯ ಮೇಲೆ ಜರ್ದೋಜಿ ಇತ್ಯಾದಿಗಳ ಕೆಲಸ ರಾಯಲ್ ನೋಟವನ್ನು ನೀಡುತ್ತದೆ.

ವಿಶೇಷ ಶೈಲಿಯ ದುಪ್ಪಟ್ಟಾ

ಇತ್ತೀಚಿನ ದಿನಗಳಲ್ಲಿ ಲೆಹೆಂಗಾದೊಂದಿಗೆ ಎರಡು ದುಪಟ್ಟಾಗಳನ್ನು ತೆಗೆದುಕೊಳ್ಳುವ ಟ್ರೆಂಡ್ ಶುರುವಾಗುತ್ತಿದೆ. ಇದಕ್ಕಾಗಿ ನೀವು ತಲೆಯ ಮೇಲೆ ನೆಟ್ ಸ್ಕಾರ್ಫ್ ಅನ್ನು ತೆಗೆದುಕೊಳ್ಳಬಹುದು. ಇದನ್ನು ಧರಿಸುವುದರಿಂದ ನಿಮ್ಮ ಕೇಶವಿನ್ಯಾಸವು ಕೂಡ ಗೋಚರಿಸುತ್ತದೆ. ನಿಮಗೆ ಚಳಿಯಾಗುತ್ತಿದ್ದಲ್ಲಿ ಲೆಹೆಂಗಾದ ಮೇಲೆ ಸ್ವಲ್ಪ ದಪ್ಪವಾದ, ಸುಂದರವಾದ ದುಪ್ಟಟ್ಟಾವನ್ನು ಹೊದಿಸಬಹುದು. ಇದಕ್ಕಾಗಿ ಸ್ಕಾರ್ಫ್ ಅನ್ನು ಭುಜದ ಮೇಲೆ ಇರಿಸಿ ಮತ್ತು ಸ್ಕಾರ್ಫ್ ಅನ್ನು ಹಿಂಭಾಗದಿಂದ ಇನ್ನೊಂದು ಬದಿಗೆ ಸುರಕ್ಷತಾ ಪಿನ್‌ನಿಂದ ಫಿಕ್ಸ್ ಮಾಡಬಹುದು. ಈ ಶೈಲಿಯು ನೋಡಲು ಸುಂದರವಾಗಿ ಕಾಣುವುದಲ್ಲದೆ, ಶೀತದಿಂದಲೂ ನಿಮ್ಮನ್ನು ರಕ್ಷಿಸುತ್ತದೆ.

ಸೀರೆಗೆ ಅದ್ಭುತ ಕುಪ್ಪಸವನ್ನು ಆರಿಸಿ

ಉತ್ತರ ಭಾರತದ ಮದುವೆ ಸಂಪ್ರದಾಯದಲ್ಲಿ ಮಾತ್ರ ಲೆಹೆಂಗಾ ತೊಡುವ ಸಂಪ್ರದಾಯ ಇರುವುದು. ಆದರೆ, ದಕ್ಷಿಣ ಭಾರತೀಯ ಮದುವೆ ಸಂಪ್ರದಾಯದಲ್ಲಿ ವಧುಗಳು ಸೀರೆಯುಡುತ್ತಾರೆ. ಸೀರೆಯನ್ನುಟ್ಟಾಗ ಅದಕ್ಕೆ ಕುಪ್ಪಸವನ್ನು ಚೆನ್ನಾಗಿ ಹೊಲಿಯಬೇಕಾಗುತ್ತದೆ. ಇದಕ್ಕಾಗಿ ಚಂದನೆಯ ಎಂಬ್ರಾಯಿಡರಿ ಕೂಡ ಮಾಡಬೇಕಾಗುತ್ತದೆ. ಕೆಲವೊಬ್ಬರು ಮದುವೆಯ ಸೀರೆಯಲ್ಲಿ ಬಂದಿರುವ ಕುಪ್ಪಸದ ಬಟ್ಟೆಯಲ್ಲೇ ಚಂದನೆಯ ಎಂಬ್ರಾಯಿಡರಿ ಮಾಡಿ ಹೊಲಿಸಿದರೆ, ಇನ್ನೂ ಕೆಲವರು ತಮ್ಮ ಸೀರೆಗೆ ಒಪ್ಪುವಂತೆ ಬೇರೆಯದ್ದೇ ಮ್ಯಾಚಿಂಗ್ ರವಿಕೆ ಹುಡುಕಿ ಹೊಲಿಸುತ್ತಾರೆ. ರವಿಕೆಯ ವಿನ್ಯಾಸ ಅಥವಾ ಅದರ ಫಿಟ್ಟಿಂಗ್ ಸರಿಯಾಗಿಲ್ಲದಿದ್ದರೆ, ಅದು ಅಷ್ಟು ಚೆನ್ನಾಗಿ ಕಾಣುವುದಿಲ್ಲ. ಇನ್ನು ಚಳಿಗಾಲದಲ್ಲಿ, ಚೈನೀಸ್ ಕಾಲರ್ ಬ್ಲೌಸ್‌ಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ವೆಲ್ವೆಟ್ ನಲ್ಲಿ ಅಂತಹ ವಿನ್ಯಾಸಗಳನ್ನು ಹೊಂದಿರುವ ರವಿಕೆಗಳು ಅತ್ಯಂತ ಆಕರ್ಷಕವಾಗಿ ಕಾಣುತ್ತವೆ. ಈ ಶೈಲಿಯೊಂದಿಗೆ ಬ್ಯಾಕ್ ಓಪನ್ ಬ್ಲೌಸ್ ಅನ್ನು ತಯಾರಿಸಬಹುದು ಅಥವಾ ನೀವು ಅರ್ಧ ಚೈನೀಸ್ ಕಾಲರ್ ಶೈಲಿಯನ್ನು ಸಹ ಪ್ರಯತ್ನಿಸಬಹುದು.

ತೋಳುಗಳ ಶೈಲಿ

ಲೆಹೆಂಗಾ ಅಥವಾ ಸೀರೆಯನ್ನು ಧರಿಸಿದರೂ, ನಿಮ್ಮ ರವಿಕೆಯ ತೋಳುಗಳನ್ನು ನೀವು ಖಂಡಿತವಾಗಿಯೂ ಆಧುನಿಕವಾಗಿಡಬಹುದು. ಬಿಷಪ್ ತೋಳುಗಳು, ಫ್ರಿಲ್ ತೋಳುಗಳು ಅಥವಾ ರೊಮ್ಯಾಂಟಿಕ್ ಜೂಲಿಯೆಟ್ ತೋಳುಗಳು ಖಂಡಿತಾ ನಿಮಗೆ ಇಷ್ಟವಾಗಬಹುದು. ಈ ಚಳಿಗಾಲದಲ್ಲಿ ನೀವು ಕೇಪ್ ಶೈಲಿಯ ರವಿಕೆ ಸೀರೆ ಚೆನ್ನಾಗಿ ಕಾಣುತ್ತದೆ.

ವಧುವನ್ನು ವಿಭಿನ್ನವಾಗಿ ಕಾಣುವಂತೆ ಮಾಡಲು ಲೆಹೆಂಗಾ, ಸೀರೆ ಮಾತ್ರ ಸಾಕಾಗುವುದಿಲ್ಲ. ಉಡುಗೆಯೊಂದಿಗೆ ವಧು ಧರಿಸುವ ಆಭರಣಗಳಿಂದ ಹಿಡಿದು ಪಾದರಕ್ಷೆಯವರೆಗೂ ಎಲ್ಲವೂ ಚೆನ್ನಾಗಿರಬೇಕು. ಬೇಸಿಗೆಯಲ್ಲಿ ಹಗುರವಾದ ಆಭರಣಗಳನ್ನು ಧರಿಸುವುದು ಆರಾಮದಾಯಕವಾಗಿದ್ದರೂ, ಚಳಿಗಾಲದಲ್ಲಿ ನೀವು ಭಾರವಾದ ಆಭರಣಗಳನ್ನು ಆರಾಮವಾಗಿ ಧರಿಸಬಹುದು. ಇತ್ತೀಚಿನ ದಿನಗಳಲ್ಲಿ ಭಾರವಾದ ಹಾರದ ಬದಲು ವಿವಿಧ ಉದ್ದದ ಅನೇಕ ನೆಕ್ ಪೀಸ್‌ಗಳನ್ನು ಧರಿಸುವ ಪ್ರವೃತ್ತಿ ಇದೆ. ಉದಾಹರಣೆಗೆ, ಕುತ್ತಿಗೆಯ ಸುತ್ತ ಚೋಕರ್‌ನೊಂದಿಗೆ, ಉದ್ದವಾದ ಹಾರವನ್ನು ಧರಿಸಬಹುದು. ಕಿವಿಗಳಲ್ಲಿ ಕಿವಿಯೋಲೆಗಳ ಬದಲು ಕಿವಿ ಕಫ್ಸ್‌ಗಳನ್ನು ಧರಿಸಬಹುದು. ಇತ್ತೀಚಿನ ದಿನಗಳಲ್ಲಿ, ಅನೇಕ ವಧುಗಳು ಅಲಂಕಾರಿಕ ಪಾದರಕ್ಷೆಗಳ ಬದಲು ತಮ್ಮ ಲೆಹೆಂಗಾಗೆ ಹೊಂದಿಕೆಯಾಗುವಂತೆ ಸ್ನೀಕರ್‌ಗಳನ್ನು ಧರಿಸಲು ಬಯಸುತ್ತಾರೆ. ಇದರಿಂದ ಕಾಲುಗಳು ನೋಯುವುದಿಲ್ಲ. ಲೆಹಂಗಾ ಅಥವಾ ಸೀರೆ ಭಾರವಾಗಿದ್ದರೂ, ಆರಾಮವಾಗಿ ನಡೆಯಬಹುದು.

ಸರಿಯಾದ ಬಣ್ಣಗಳನ್ನು ಆರಿಸಿ

ಬಾಲ್ಯದಿಂದಲೂ ಬೇಬಿ ಪಿಂಕ್ ಅಥವಾ ತಿಳಿ ಆಕಾಶ ಬಣ್ಣಗಳನ್ನು ಬಹುತೇಕರು ಇಷ್ಟಪಡುತ್ತಾರೆ. ಆದರೆ, ಮದುವೆಯ ವಿಷಯಕ್ಕೆ ಬಂದಾಗ, ಪ್ರಕಾಶಮಾನವಾದ ಬಣ್ಣಗಳು ಮಾತ್ರ ಉತ್ತಮವಾಗಿ ಕಾಣುತ್ತವೆ. ಚಳಿಗಾಲದಲ್ಲಿ ಮದುವೆ ಇದ್ದರೆ ಗಾಢ ಬಣ್ಣಗಳನ್ನು ಆಯ್ಕೆ ಮಾಡಬಹುದು. ಯಾವುದೇ ಬಟ್ಟೆಯನ್ನು ಆಯ್ಕೆ ಮಾಡುವಾಗ ಹವಾಮಾನ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಕೆಂಪು, ಮರೂನ್, ಗಾಢ ಗುಲಾಬಿ, ಗಾಢ ನೇರಳೆ, ಚಾಕೊಲೇಟ್ ಕಂದು ಮತ್ತು ಗಾಢ ನೀಲಿ ಬಣ್ಣಗಳನ್ನು ಚಳಿಗಾಲದಲ್ಲಿ ಹೆಚ್ಚು ಆದ್ಯತೆ ನೀಡುತ್ತವೆ. ಗಾಢ ಬಣ್ಣಗಳು ಬೆಚ್ಚಗಿನ ಭಾವನೆಯನ್ನು ನೀಡುತ್ತವೆ ಮತ್ತು ವೆಲ್ವೆಟ್ ಅಥವಾ ರೇಷ್ಮೆಯಂತಹ ಬಟ್ಟೆಗಳು ಬಣ್ಣಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತವೆ. ಮದುವೆ ರಿಸೆಪ್ಶನ್ ಹೆಚ್ಚಾಗಿ ರಾತ್ರಿ ವೇಳೆ ಇರುವುದರಿಂದ ಗಾಢ ಮತ್ತು ಪ್ರಕಾಶಮಾನವಾದ ಬಣ್ಣಗಳನ್ನು ಧರಿಸಬಹುದು. ಇವು ಪ್ರಕಾಶಮಾನವಾದ ದೀಪಗಳಲ್ಲಿ ಹೆಚ್ಚು ಹೊರಹೊಮ್ಮುತ್ತವೆ. ಅಂತಹ ಬಣ್ಣಗಳ ಮೇಲೆ ಚಿನ್ನ ಮತ್ತು ಬೆಳ್ಳಿ ಬಣ್ಣದ ಎಂಬ್ರಾಯಿಡರಿ ಇದ್ದರೆ ಭವ್ಯ ನೋಟವನ್ನು ನೀಡುತ್ತದೆ.

Whats_app_banner