Bheemana Amavasya: ಮಲೆನಾಡು ಭಾಗದಲ್ಲಿ ಭೀಮನ ಅಮಾವಾಸ್ಯೆಯನ್ನು ಕೊಡೆ ಅಮಾವಾಸ್ಯೆ ಎಂದು ಕರೆಯೋದು ಏಕೆ ಗೊತ್ತಾ?
ಭೀಮನ ಅಮಾವಾಸ್ಯೆಯನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಮಲೆನಾಡು ಭಾಗದಲ್ಲಿ ಈ ಹಬ್ಬವನ್ನು ಕೊಡೆ ಅಮಾವಾಸ್ಯೆಯೆಂದು, ದಕ್ಷಿಣ ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಕೊಡೆ ಅಮಾವಾಸ್ಯೆ ಎಂದು ಏಕೆ ಕರೆಯುತ್ತಾರೆ ಎಂಬುದನ್ನು ನೋಡೋಣ ಬನ್ನಿ…
ಇಂದು ಭೀಮನ ಅಮಾವಾಸ್ಯೆ. ಪ್ರತಿ ವರ್ಷ ಆಷಾಢ ಮಾಸದ ಕೊನೆಯಲ್ಲಿ ಭೀಮನ ಅಮಾವಾಸ್ಯೆ ಬರುತ್ತದೆ. ಕೇವಲ ವಿವಾಹಿತ ಮಹಿಳೆಯರು ಮಾತ್ರವಲ್ಲ, ಅವಿವಾಹಿತ ಯುವತಿಯರು ಸಹ ಭೀಮನ ಅಮಾವಾಸ್ಯೆಯನ್ನು ಆಚರಿಸಬಹುದು. ಆದರೆ ನವವಿವಾಹಿತರಿಗೆ ಈ ಭೀಮನ ಅಮಾವಾಸ್ಯೆ ಬಹಳ ವಿಶೇಷವಾದುದು.
ಆಷಾಡ ಮಾಸದಲ್ಲಿ ಗಂಡನಿಂದ ದೂರ ಉಳಿದು ತವರಿಗೆ ಹೋದ ನವವಿವಾಹಿತ ಮಹಿಳೆಯರು ಭೀಮನ ಅಮಾವಾಸ್ಯೆ ದಿನದಂದು ಪತಿಯ ಪಾದ ಪೂಜೆ ಮಾಡಿ ಮತ್ತೆ ತಮ್ಮ ಸಂಸಾರ ಪ್ರಾರಂಭಿಸುವ ವಾಡಿಕೆಯಿದೆ. ವಿವಾಹಿತ ಹೆಣ್ಣುಮಕ್ಕಳು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಭೀಮನ ಅಮಾವಾಸ್ಯೆ ಪೂಜೆ ಮಾಡುತ್ತಾರೆ. ಹಾಗೆ ಅವಿವಾಹಿತ ಯುವತಿಯರು ತಮಗೆ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಕೀಚಕನಿಂದ ದ್ರೌಪತಿಯನ್ನು ಧೀರನಂತೆ ಕಾಯ್ದ ಭೀಮನಂತೆ ಇರುವ ಗಂಡ ಸಿಗಲೆಂದು ಶಿವನನ್ನು ಭೀಮನ ಅಮಾವಾಸ್ಯೆಯಂದು ಪೂಜಿಸುತ್ತಾರೆ.
ರುದ್ರದೇವನ ಮತ್ತೊಂದು ಹೆಸರು ಭೀಮ ಎಂದಾಗಿರುವುದರಿಂದ ಈ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ವಿವಾಹಿತ ಮಹಿಳೆಯರು ಭೀಮನ ಅಮಾವಾಸ್ಯೆ ದಿನ ಒಮ್ಮೆ ವ್ರತ ಕೈಗೊಂಡರೆ ಐದು ಅಥವಾ ಒಂಭತ್ತು ಅಥವಾ ಹದಿನಾರು ವರ್ಷಗಳ ವರೆಗೆ ಮಾಡಲೇಬೇಕು. ಈ ದಿನ ಮಹಿಳೆಯರು ಶಿವ-ಪಾರ್ವತಿಯನ್ನು ಆರಾಧಿಸಿದರೆ ಪತಿಗೆ ದೀರ್ಘಾಯುಷ್ಯ, ದೀರ್ಘ ಸುಮಂಗಲೀತನ, ಸಂತಾನ, ಆಯಸ್ಸು, ಯಶಸ್ಸು, ಸಂಪತ್ತು, ಸಂತೋಷವನ್ನು ಶಿಚ-ಪಾರ್ವತಿ ಕರುಣಿಸುತ್ತಾರೆ ಎಂಬ ನಂಬಿಕೆಯಿದೆ.
ಕೊಡೆ ಅಮಾವಾಸ್ಯೆ
ಭೀಮನ ಅಮಾವಾಸ್ಯೆಯನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಮಲೆನಾಡು ಭಾಗದಲ್ಲಿ ಈ ಹಬ್ಬವನ್ನು ಕೊಡೆ ಅಮಾವಾಸ್ಯೆಯೆಂದು, ದಕ್ಷಿಣ ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳು ಆಷಾಢ ಮಾಸದಲ್ಲಿ ತವರು ಮನೆಗೆ ಹೋಗಿರುತ್ತಾಳೆ. ಭೀಮನ ಅಮಾವಾಸ್ಯೆ ದಿನ ಅಳಿಯನನ್ನು ಮನಗೆ ಕರೆಯಿಸಿ, ಬಗೆ-ಬಗೆಯ ಅಡುಗೆ ಮಾಡಿ ಅಳಿಯನಿಗೆ ತಿನ್ನಿಸಿ, ಮಳೆಗಾಲ ಆಗಿರುವುದರಿಂದ ಕೊಡೆ (ಛತ್ರಿ)ಯನ್ನು ಅಳಿಯನ ಕೈಗೆ ಕೊಟ್ಟು, ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಡುತ್ತಾರೆ. ಮಲೆನಾಡಿನ ಕೆಲವಡೆ, ವಿಶೇಷವಾಗಿ ಹಳ್ಳಿಗಳಲ್ಲಿ ಈ ಆಚರಣೆಯನ್ನು ಮಾಡಲಾಗುವುದು. ಹೀಗಾಗಿ ಇದಕ್ಕೆ ಕೊಡೆ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ ಭೀಮನ ಅಮಾವಾಸ್ಯೆ ಮಾಡುವವರು ಸಿಹಿ ಪದಾರ್ಥಗಳನ್ನು ಮಾಡಿ ಗಂಡನಿಗೆ ಉಣಬಡಿಸುತ್ತಾರೆ. ಆದರೆ ಮಲೆನಾಡಿನ ಹಳ್ಳಿಗಳಲ್ಲಿ ಕೊಡೆ ಅಮಾವಾಸ್ಯೆ ಅಥವಾ ಕೊಡೆ ಹಬ್ಬವನ್ನು ಆಚರಿಸುವವರು ಕೋಳಿ ಸಾರು ಹಾಗೂ ಕಜ್ಜಾಯ ಮಾಡಿ, ಜೊತೆಯಲ್ಲಿ ಹೋಳಿಗೆ ಅಥವಾ ಪಾಯಸದಂತಹ ಸಿಹಿ ತಿನಿಸು ಮಾಡಿ ಇಡುಕಲು (ನೀರಿನ ಪಾತ್ರೆ ಇರುವ ಜಾಗ) ಮುಂದೆ ಎಡೆ ಹಾಕಿ, ಬಳಿಕ ಅಳಿಯನಿಗೆ ಉಣಬಡಿಸುತ್ತಾರೆ.
ಇನ್ನು ಮಲೆನಾಡಿದ ಕೆಲಭಾಗಗಳಲ್ಲಿ ವಿವಾಹಿತ ಮಹಿಳೆಯರು ಬೆಳಗ್ಗೆ ಎದ್ದು ಸ್ನಾನ ಮಾಡಿ, ಗಂಡನಿಗೆ ಅರಿಶಿಣ ಎಣ್ಣೆಯಲ್ಲಿ ಸ್ನಾನ ಮಾಡಿಸಿ ಕೈಗೆ ಕಂಕಣ ಕಟ್ಟಿಕೊಳ್ಳುತ್ತಾರೆ. ಪತಿಯ ಪಾದ ತೊಳೆದು ಅರಿಶಿಣ-ಕುಂಕುಮ ಹಚ್ಚಿ, ಹೂಗಳನ್ನಿಟ್ಟು ಪೂಜೆ ಮಾಡುತ್ತಾರೆ. ಗಂಡನಿಗೆ ಸಿಹಿ ಅಡುಗೆ ತಿನ್ನಿಸಿ ಶಿವನ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಶಿವಮೊಗ್ಗದ ಜನರು ಸಾಧ್ಯವಾದರೆ ಈ ದಿನ ಭೀಮೇಶ್ವರನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಶಿವಮೊಗ್ಗದ ಕರ್ಗಲ್ ಪಟ್ಟಣದ ಸಮೀಪವಿರುವ ಭೀಮೇಶ್ವರದಲ್ಲಿ (ಸಾಗರ ಮತ್ತು ಭಟ್ಕಳ ಗಡಿ ನಡುವೆ ) ದಟ್ಟ ಕಾಡಿನ ನಡುವೆ ಈ ದೇಗುಲವಿದೆ. ಇಲ್ಲಿರುವ ಜಲಪಾತವನ್ನು ಭೀಮೇಶ್ವರ ಜಲಪಾತವೆಂದೇ ಕರೆಯಲಾಗುತ್ತದೆ. ಮಹಾಭಾರತದ ಭೀಮನು ಈ ಸ್ಥಳದಲ್ಲಿ ಶಿವಲಿಂಗವನ್ನು ತಂದು ದೇವಾಲಯ ಸ್ಥಾಪಿಸಿದನು ಎಂದು ಹೇಳಲಾಗುತ್ತದೆ.
ಭೀಮನ ಅಮಾವಾಸ್ಯೆಯ ಹಿನ್ನೆಲೆ
ಸುಮಾರು ವರ್ಷಗಳ ಹಿಂದೆ ರಾಜನೊಬ್ಬ ತನ್ನ ಮಗನಿಗೆ ಅದ್ದೂರಿಯಿಂದ ಮದುವೆ ಮಾಡಬೇಕೆಂದು ನಿರ್ಧರಿಸಿ ಸಕಲ ಏರ್ಪಾಡನ್ನು ಮಾಡಿಕೊಂಡಿದ್ದ. ಆದರೆ, ಆ ರಾಜನ ಮಗ ಅಕಾಲಿಕ ಮರಣ ಹೊಂದುತ್ತಾನೆ. ಮಗ ಮೃತಪಟ್ಟಿದ್ದರೂ ಆ ಮಾತ್ರ ಸತ್ತ ಮಗನಿಗೇ ಮದುವೆ ಮಾಡಲು ನಿರ್ಧರಿಸುತ್ತಾನೆ. ಯಾರು ತನ್ನ ಮಗನನ್ನು ಮದುವೆ ಮಾಡಿಕೊಳ್ಳುತ್ತಾರೋ ಅವರಿಗೆ ಅಪಾರ ಹಣ, ಸಂಪತ್ತನ್ನು ಕೊಡುವುದಾಗಿ ಘೋಷಣೆ ಮಾಡಿದ.
ಈ ಘೋಷಣೆ ಕೇಳಿದ ಒಬ್ಬ ಬಡ ಬ್ರಾಹ್ಮಣ ತನ್ನ ಬಡತನ ನೀಗುತ್ತದೆ ಎಂಬ ಆಸೆಯಿಂದ ತನ್ನ ಮಗಳನ್ನು ರಾಜಕುಮಾರನ ಶವದ ಜೊತೆ ಮದುವೆ ಮಾಡುತ್ತಾನೆ. ರಾಜನ ಆಸೆಯಂತೆ ಮಗನ ವಿವಾಹವೇನೋ ಮುಗಿಯುತ್ತದೆ. ಆದರೆ ಅಂತಿಮ ಕ್ರಿಯೆ ನಡೆಸಲು ಭಾಗೀರಥಿ ನದಿ ತೀರದಲ್ಲಿ ಸಿದ್ಧತೆ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಗುಡುಗು-ಸಿಡಿಲು ಸಹಿತ ಕುಂಭದ್ರೋಣ ಮಳೆ ಸುರಿಯಲಾರಂಭಿಸಿತು. ಮಳೆಯ ಆರ್ಭಟಕ್ಕೆ ಹೆದರಿ ನೆರೆದಿದ್ದಾ ಜನರೆಲ್ಲಾ ಓಡಿ ಹೋಗುತ್ತಾರೆ.
ಅಂದು ಆಷಾಢ ಮಾಸದ ಕೊನೆಯಲ್ಲಿ ಬರುವ ಅಮಾವಾಸ್ಯೆಯಾಗಿರುತ್ತದೆ. ಈ ದಿನದಂದು ತನ್ನ ತಾಯಿ ಪತಿಯ ಪೂಜೆ ಮಾಡುವುದು ನೆನಪಾಗಿ ತಾನು ಕೂಡ ತನ್ನ ಗಂಡನ ಮೃತದೇಹದೊಂದಿಗೆ ವ್ರತ ಮಾಡಬೇಕೆಂದು ಆಕೆ ನಿರ್ಧರಿಸುತ್ತಾಳೆ. ಕೂಡಲೇ ಭಾಗೀರಥಿ ನದಿ ನೀರಿನಲ್ಲಿ ಸ್ನಾನ ಮಾಡಿ, ಎರಡು ಮಣ್ಣಿನ ಹಣತೆಯನ್ನು ಮಾಡಿ, ಮರದ ಬೇರನ್ನೇ ಬತ್ತಿಯಾಗಿ ಮಾಡಿಕೊಂಡು ದೀಪ ಹಚ್ಚಿ ಪೂಜೆ ಮಾಡುತ್ತಾಳೆ. ಆಕೆಯ ಭಕ್ತಿಗೆ ಮೆಚ್ಚಿ ಶಿವ-ಪಾರ್ವತಿ ಪ್ರತ್ಯಕ್ಷರಾಗಿ ಏನು ವರಬೇಕೆಂದು ಕೇಳುತ್ತಾರೆ. ಆಗ ಆಕೆ ತನ್ನ ಪತಿಯನ್ನು ಬದುಕಿಸಿಕೊಡಿ ಎಂದು ಬೇಡಿಕೊಳ್ಳುತ್ತಾಳೆ. ಆಕೆಯ ಬೇಡಿಕೆಯಂತೆ ಶಿವ- ಪಾರ್ವತಿ ಆ ರಾಜಕುಮಾರನನ್ನು ಬದುಕಿಸುತ್ತಾರೆ.
ಸೊಸೆಯ ಭಕ್ತಿಯ ಪ್ರಭಾವದಿಂದಾಗಿ ತನ್ನ ಮಗ ಬದುಕಿ ಹಿಂದಿರುಗಿದ್ದನ್ನು ಕಂಡು ಸಂತೋಷಗೊಂಡ ರಾಜನು ಮಗನಿಗೆ ಪಟ್ಟಾಭಿಷೇಕ ಮಾಡುತ್ತಾನೆ. ನಂತರ ಸುಮಾರು ವರ್ಷಗಳ ಕಾಲ ಅವರೆಲ್ಲರೂ ಸುಖವಾಗಿ ಜೀವನ ನಡೆಸಿದರು. ಅಂದಿನಿಂದ ಈ ಜ್ಯೋತಿರ್ಭೀಮೇಶ್ವರನ ವ್ರತ ಮತ್ತಷ್ಟೂ ಪ್ರಸಿದ್ಧಿ ಪಡೆದು ಎಲ್ಲಾ ಹೆಣ್ಣುಮಕ್ಕಳು ಆಷಾಢಮಾಸದ ಅಮಾವಾಸ್ಯೆಯಂದು ಜ್ಯೋತಿರ್ಭೀಮೇಶ್ವರನ ವ್ರತ ಮತ್ತು ಪೂಜೆಯನ್ನು ಆಚರಿಸಲಾರಂಭಿಸಿದರು ಎಂದು ಪುರಾಣ ಹೇಳುತ್ತದೆ.