Divorce Problem: ಮದುವೆಯಾಗಿ ದಶಕಗಳ ನಂತರವೂ ನಡೆಯುತ್ತಿದೆ ವಿಚ್ಛೇದನ: ಇಲ್ಲಿವೆ ನೋಡಿ ಡಿವೋರ್ಸ್‌ಗೆ ಕಾರಣಗಳು
ಕನ್ನಡ ಸುದ್ದಿ  /  ಜೀವನಶೈಲಿ  /  Divorce Problem: ಮದುವೆಯಾಗಿ ದಶಕಗಳ ನಂತರವೂ ನಡೆಯುತ್ತಿದೆ ವಿಚ್ಛೇದನ: ಇಲ್ಲಿವೆ ನೋಡಿ ಡಿವೋರ್ಸ್‌ಗೆ ಕಾರಣಗಳು

Divorce Problem: ಮದುವೆಯಾಗಿ ದಶಕಗಳ ನಂತರವೂ ನಡೆಯುತ್ತಿದೆ ವಿಚ್ಛೇದನ: ಇಲ್ಲಿವೆ ನೋಡಿ ಡಿವೋರ್ಸ್‌ಗೆ ಕಾರಣಗಳು

ದಶಕಗಳ ವೈವಾಹಿಕ ಜೀವನದ ನಂತರವೂ ವಿಚ್ಛೇದನ ಪಡೆಯುವುದು ಎಂದಿಗೂ ಸುಲಭದ ನಿರ್ಧಾರವಲ್ಲ, ಆದರೆ ವರ್ಷಗಳಿಂದ ಆಳವಾಗಿ ಬೇರೂರಿರುವ ಸಮಸ್ಯೆಗಳಿಗೆ ಪರಿಹಾರ ಕಾಣದೆ ದಂಪತಿಗಳು ತೆಗೆದುಕೊಳ್ಳುವ ನಿರ್ಧಾರವಾಗಿರಬಹುದು.

 ಇಲ್ಲಿವೆ ನೋಡಿ ಡಿವೋರ್ಸ್‌ಗೆ ಕಾರಣಗಳು
ಇಲ್ಲಿವೆ ನೋಡಿ ಡಿವೋರ್ಸ್‌ಗೆ ಕಾರಣಗಳು (Pixabay)

ಒಂದು ಕಾಲದಲ್ಲಿ ತೀರಾ ಅಪರೂಪ ಮತ್ತು ಡಿವೋರ್ಸ್ ಎಂಬ ಪದವನ್ನು ಕೇಳಿದರೆ ಸಾಕು, ಜನರು ಬೆಚ್ಚಿಬೀಳುತ್ತಿದ್ದರು. ಆದರೆ ಈಗ ಹಾಗಿಲ್ಲ, ಮದುವೆಯಾಗಿ ಒಂದೆರಡು ತಿಂಗಳಿಗೆಲ್ಲಾ ವಿಚ್ಚೇದನ ಎನ್ನುವುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಬದಲಾದ ಕುಟುಂಬ ವ್ಯವಸ್ಥೆ ಮತ್ತು ಪದ್ಧತಿಗಳು, ಜನರ ಆದ್ಯತೆಗಳು ಇಂದು ವಿವಾಹ ವಿಚ್ಚೇದನ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ. ಹಿಂದಿನ ಕಾಲದಲ್ಲಿ ಇದ್ದಂತಹ ಹೊಂದಾಣಿಕೆ, ತ್ಯಾಗ ಎನ್ನುವ ಪರಿಕಲ್ಪನೆಗಳು ಇಂದು ದಂಪತಿಯಲ್ಲಿ ಕಾಣುತ್ತಿಲ್ಲ. ಶಿಕ್ಷಣ, ಉದ್ಯೋಗ ಮತ್ತು ಹಣಕಾಸಿನ ಸ್ವಾತಂತ್ರ್ಯದಿಂದಾಗಿ ಇಂದು ಜನರು ಬೇಗನೇ ನಿರ್ಧಾರ ಕೈಗೊಳ್ಳುತ್ತಾರೆ ಮತ್ತು ಇಷ್ಟವಿಲ್ಲದ ಕಡೆ ಮತ್ತೆ ಹೊಂದಿಕೊಂಡು ಇರಲು ಇಷ್ಟಪಡುವುದಿಲ್ಲ.

ಸಾಮಾನ್ಯವಾಗಿ ಮದುವೆಯನ್ನು ಜೀವನಪರ್ಯಂತದ ಬದ್ಧತೆಯಾಗಿ ನೋಡಲಾಗುತ್ತದೆ. ಆದರೆ ದಶಕಗಳನ್ನು ಜೊತೆಯಾಗಿ ಕಳೆದ ದಂಪತಿಗಳು, ನೋವು ನಲಿವನ್ನು ಪರಸ್ಪರ ಹಂಚಿಕೊಂಡ ಸಂಗಾತಿಗಳು ಸಹ ವಿಚ್ಛೇದನ ಪಡೆಯುತ್ತಿರುವುದು ಈ ದಿನಗಳಲ್ಲಿ ಹೆಚ್ಚಾಗಿದೆ. ಇದು ಸ್ವಲ್ಪ ಆಶ್ಚರ್ಯಕರವಾಗಿ ತೋರಿದರೂ, ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಸುದ್ದಿ ಸಾಮಾನ್ಯವಾಗಿಬಿಟ್ಟಿದೆ. ಕಾಲಕ್ಕೆ ತಕ್ಕ ಹಾಗೆ ಜನರು ಬದಲಾಗುತ್ತಾರೆ, ಎಲ್ಲರ ಆದ್ಯತೆಗಳು ಬದಲಾಗುತ್ತವೆ. ವರ್ಷಗಳ ಕಾಲ ಹೊಂದಾಣಿಕೆ ಮಾಡಿಕೊಂಡು ಬಂದ ಎಷ್ಟೋ ವಿಷಯಗಳು ನಂತರದಲ್ಲಿ ತಾಳ್ಮೆಗೆಡಿಸಬಹುದು. ಸಂಘರ್ಷಗಳು ಪರಿಹರಿಸಲಾಗದ ಮಟ್ಟಕ್ಕೆ ಬಂದು ಬಿಡಬಹುದು. ಕೊನೆಗೆ ಬೇರೆ ದಾರಿಯಿಲ್ಲದೆ ದಶಕದ ದಾಂಪತ್ಯವನ್ನೇ ಮುರಿಯಬೇಕಾಗಬಹುದು. ಹಾಗಾದರೆ ಅಷ್ಟು ವರ್ಷಗಳ ಕಾಲ ಜೊತೆಯಾಗಿದ್ದ ದಂಪತಿಗಳು ನಂತರ ವಿಚ್ಛೇದನಕ್ಕೆ ಒಲವು ತೋರುವುದೇಕೆ? ಕೆಲವೊಂದು ಕಾರಣಗಳು ಇಲ್ಲಿವೆ.

ಪ್ರತ್ಯೇಕ ಬೆಳವಣಿಗೆ

ಪರಸ್ಪರರ ವೈಯಕ್ತಿಕ ಬೆಳವಣಿಗೆಯು ವಿಭಿನ್ನ ಮೌಲ್ಯಗಳು, ಆಸಕ್ತಿಗಳು ಮತ್ತು ಗುರಿಗಳಿಗೆ ಕಾರಣವಾಗಬಹುದು. ಪ್ರಾರಂಭದಲ್ಲೇ ಜೊತೆಯಾಗಿ ಬದುಕುವುದು ಕಷ್ಟವೆನಿಸಿದ್ದರೂ ಮಕ್ಕಳು ದೊಡ್ಡವರಾಗುವವರೆಗೆ ಹೊಂದಾಣಿಕೆಯಲ್ಲಿದ್ದುಕೊಂಡು ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತ ನಂತರ ಈ ವಿಚ್ಛೇದನದ ನಿರ್ಧಾರಕ್ಕೆ ಬರಬಹುದು.

ಭಾವನಾತ್ಮಕ ಸಂಪರ್ಕದ ಕೊರತೆ

ವರ್ಷಗಳ ಬಗೆಹರಿಯದ ಸಂಘರ್ಷಗಳು ಅಥವಾ ಭಾವನಾತ್ಮಕ ನಿರ್ಲಕ್ಷ್ಯವು ಅಂತರವನ್ನು ಸೃಷ್ಟಿಸಬಹುದು. ಎಷ್ಟೋ ಕಡೆ ಸಂಗಾತಿಗಳ ಮಧ್ಯೆ ಭಾವನಾತ್ಮಕ ಸಂಬಂಧಗಳ ಕೊರತೆ ಎದ್ದು ಕಾಣುತ್ತದೆ. ಹೆಚ್ಚಿನ ಕಡೆ ತಮ್ಮ ಪಾಡಿಗೆ ತಾವು ರೂಮ್‌‌‌‌ಮೇಟ್‌‌‌‌ಗಳಂತೆ ಬದುಕುವುದು ಇದೇ ಕಾರಣಕ್ಕೆ ಇರಬಹುದು.

ದಾಂಪತ್ಯ ದ್ರೋಹ ಅಥವಾ ಅವಿಶ್ವಾಸ

ಬೇರೆ ಸಂಬಂಧ ಅಥವಾ ವಿಶ್ವಾಸ ದ್ರೋಹವು ವಿವಾಹವನ್ನು ಮುರಿಯಬಹುದು. ತಮ್ಮ ಸಂಗಾತಿಯಿಂದ ಸಿಗದ ಪ್ರೀತಿಗಾಗಿ, ನಿರೀಕ್ಷಿತ ಕಾಳಜಿಗಾಗಿ ಅದನ್ನು ಬೇರೆಡೆ ಹುಡುಕಿ ಮುಂದೆ ಅಲ್ಲೇ ಸಂತೋಷ ಕಂಡುಕೊಂಡು ಹಿಂದಿನ ಮದುವೆಯನ್ನು ಮುರಿದುಕೊಂಡವರೇ ಅಧಿಕ.

ನಿವೃತ್ತಿ ಮತ್ತು ಜೀವನಶೈಲಿಯಲ್ಲಿ ವ್ಯತ್ಯಾಸಗಳು

ಒಬ್ಬ ಸಂಗಾತಿಯು ಸಕ್ರಿಯ ನಿವೃತ್ತಿಯನ್ನು ಬಯಸಬಹುದು, ಇನ್ನೊಬ್ಬರು ಶಾಂತ ಜೀವನವನ್ನು ಬಯಸಬಹುದು. ನಿವೃತ್ತಿಯ ನಂತರ 24/7 ಜೊತೆಯಾಗಿ ಇರುವುದು ಅವರವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಹುದು. ಹೀಗಾಗಿ ಬೇರೆಯಾಗುವ ನಿರ್ಧಾರ ತೆಗೆದುಕೊಳ್ಳಬಹುದು.

ಹಣಕಾಸಿನ ಜಂಜಾಟ

ಹಣ, ಸಾಲ ಅಥವಾ ನಿವೃತ್ತಿ ಯೋಜನೆಗಳ ಬಗ್ಗೆ ಭಿನ್ನಾಭಿಪ್ರಾಯಗಳು ಒತ್ತಡವನ್ನು ಉಂಟುಮಾಡಬಹುದು. ಒಬ್ಬ ಸಂಗಾತಿಗೆ ಆರ್ಥಿಕವಾಗಿ ಹೊರೆ ಹೆಚ್ಚಾದಾಗ ಅಸಮಾಧಾನಗಳು ಉಂಟಾಗಿ ಮುಂದೆ ಅದುವೇ ದೊಡ್ಡ ಕಲಹಕ್ಕೆ ಕಾರಣವಾಗಿ ವಿಚ್ಛೇದನ ಪಡೆಯುವಂತಾಗಬಹುದು.

ಆರೋಗ್ಯ ಸಮಸ್ಯೆಗಳು ಮತ್ತು ಆರೈಕೆಯ ಒತ್ತಡ

ಒಬ್ಬ ಸಂಗಾತಿಗೆ ದೀರ್ಘಕಾಲದ ಆರೈಕೆಯ ಅಗತ್ಯವಿದ್ದರೆ, ಅದು ಸಂಬಂಧವನ್ನು ಹದಗೆಡಿಸುತ್ತದೆ. ಆರೋಗ್ಯಕರವಾಗಿರುವ ಸಂಗಾತಿಯು ಸ್ವಲ್ಪ ಸಮಯದ ಬಳಿಕ ಅತಿಯಾದ ಒತ್ತಡವನ್ನು ಅನುಭವಿಸಬಹುದು ಮತ್ತು ಎಲ್ಲವನ್ನೂ ಬಿಟ್ಟು ಹೊರಬರಬಹುದು.

ಕುಟುಂಬದ ಪ್ರಭಾವ

ಮಕ್ಕಳು, ಅತ್ತೆ ಮಾವಂದಿರು ಅಥವಾ ಸಂಬಂಧಿಕರ ಹಸ್ತಕ್ಷೇಪವು ದಂಪತಿಯ ಮಧ್ಯೆ ಕಲಹವನ್ನು ಹೆಚ್ಚಿಸಬಹುದು. ಇದುವೇ ಮುಂದೆ ದೊಡ್ಡದಾಗಿ ವಿಚ್ಛೇದನಕ್ಕೆ ಕಾರಣವಾಗಬಹುದು.

ಅನ್ಯೋನ್ಯತೆ ಮತ್ತು ಕಾಳಜಿಯಲ್ಲಿ ಬದಲಾವಣೆ

ದೈಹಿಕ ಅಥವಾ ಭಾವನಾತ್ಮಕ ಅನ್ಯೋನ್ಯತೆಯಲ್ಲಿನ ಬದಲಾವಣೆಯು ಅತೃಪ್ತಿಗೆ ಕಾರಣವಾಗಬಹುದು. ಈ ಕಾರಣಕ್ಕಾಗಿ ಒಬ್ಬ ಸಂಗಾತಿಯು ಬೇರೆಡೆ ಪ್ರೀತಿಯನ್ನು ಬಯಸಿ ಹೋಗಿ ಮುಂದೆ ದಾಂಪತ್ಯ ಮುರಿದುಬೀಳಲು ಅದೇ ಕಾರಣವಾಗಬಹುದು.

ಭಾವನಾತ್ಮಕ ಸಂಪರ್ಕಕಡಿತ, ಜೀವನಶೈಲಿಯಲ್ಲಿನ ಬದಲಾವಣೆಗಳು ಅಥವಾ ಪರಿಹರಿಸಲಾಗದ ಸಂಘರ್ಷಗಳಿಂದಾಗಿ ಮದುವೆಯಾಗಿ ದಶಕಗಳ ಬಳಿಕವೂ ದಂಪತಿಗಳು ವಿಚ್ಛೇದನ ತೆಗೆದುಕೊಳ್ಳಲು ಪ್ರಮುಖ ಕಾರಣವಾಗಿರಬಹುದು. ಪ್ರತ್ಯೇಕವಾಗುವುದು ಸವಾಲಿನದ್ದಾಗಿದ್ದರೂ, ವ್ಯಕ್ತಿಗಳು ತಮ್ಮನ್ನು ತಾವು ಮರುಶೋಧಿಸಲು ಮತ್ತು ಹೆಚ್ಚು ತೃಪ್ತಿಕರ ಜೀವನವನ್ನು ನಡೆಸಲು ಇದು ಅವರಿಗೆ ಅವಕಾಶವನ್ನು ನೀಡುವುದರಿಂದ ಆ ನಿರ್ಧಾರವನ್ನು ಅವರು ತೆಗೆದುಕೊಳ್ಳಬಹುದು.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner